ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿ; 2 ವರ್ಷಕ್ಕೆ 6.20 ಕೋಟಿ, ಕನ್ನಡ ನಟಿಯರು ಇಲ್ವಾ? ನೆಟ್ಟಿಗರ ಪ್ರಶ್ನೆ
ಮೈಸೂರು ಸ್ಯಾಂಡಲ್ ಸೋಪ್‌ಗೆ ನೂತನ ರಾಯಭಾರಿ ನೇಮಕವಾಗಿದ್ದು, ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ನೇಮಕ ಮಾಡಲಾಗಿದೆ. ಇವರನ್ನು 2 ವರ್ಷ 2 ದಿನಗಳ ಅವಧಿಗೆ 6.20 ಕೋಟಿ ರೂಪಾಯಿ ವೆಚ್ಚದಲ್ಲಿ ನೇಮಕ ಮಾಡಿರುವುದು ಸಾಕಷ್ಟು ಜನರ ಹುಬ್ಬೇರಿಸಿದೆ.

ಮೈಸೂರು ಸ್ಯಾಂಡಲ್ ಸೋಪ್‌ಗೆ ನೂತನ ರಾಯಭಾರಿ ನೇಮಕವಾಗಿದ್ದು, ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ನೇಮಕ ಮಾಡಲಾಗಿದೆ. ತಮನ್ನ ಅಭಿಮಾನಿಗಳು ಈ ನಿರ್ಧಾರವನ್ನ ಸ್ವಾಗತಿಸಿದ್ದು, ನಾವಿನ್ನು ಮೈಸೂರು ಸ್ಯಾಂಡಲ್ ಸೋಪ್ ಅನ್ನೇ ಬಳಸ್ತೀವಿ ಅಂದಿದ್ದಾರೆ. ಆದರೆ, ಕರ್ನಾಟಕದ ಜನಪ್ರಿಯ ಬ್ರ್ಯಾಂಡ್‌ಗೆ ಬಹುಭಾಷಾ ನಟಿಯನ್ನು ಆಯ್ಕೆ ಮಾಡುವ ಬದಲು ಕರ್ನಾಟಕ ಮೂಲದ ನಟಿಯರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತಲ್ವ? ಎಂದು ಸಾಕಷ್ಟು ಕನ್ನಡಿಗರು ಟೀಕಿಸಿದ್ದಾರೆ. ಎರಡು ವರ್ಷಕ್ಕೆ ತಮನ್ನಾ ಭಾಟಿಯಾರಿಗೆ ನೀಡುವ ಸಂಭಾವನೆಯೂ ಸಾಕಷ್ಟು ಜನರನ್ನು ಅಚ್ಚರಿಗೆ ದೂಡಿದೆ.
ಕರ್ನಾಟಕ ಸರಕಾರದ ಅಧಿಸೂಚನೆಯಲ್ಲಿ ಏನಿದೆ?
"ಕರ್ನಾಟ ಸೋಪ್ಸ್ ಆಂಡ್ ಡಿಟರ್ಜೆಂಟ್ ಲಿಮಿಟೆಡ್‌ನ ಅಧಿಕೃತ ರಾಯಭಾರಿಯಾಗಿ ಕು. ತಮ್ನ ಭಾಟಿಯಾ ಇವರನ್ನು 2 ವರ್ಷ 2 ದಿನಗಳ ಅವಧಿಗೆ 6.20 ಕೋಟಿ ರೂಪಾಯಿ ವೆಚ್ಚದಲ್ಲಿ ನೇಮಕ ಮಾಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಳಲ್ಲಿ ಪಾರದರ್ಶಕ ಅಧಿನಿಯಮದಲ್ಲಿ ಅಧಿಕಾರ ಚಲಾಯಿಸಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಪಾರದರ್ಶಕ ಕಾಯಿದೆಯಿಂದ ವಿನಾಯಿತಿ ನೀಡಲಾಗಿದೆ. ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ದೃಢಪಡಿಸಿಕೊಳ್ಳುವುದು" ಎಂದು ರಾಜ್ಯಪಾಲರ ಆಜ್ಞಾನುಸಾರ ಅವರ ಹೆಸರಿನಲ್ಲಿ ಸರಕಾರ ಅಧೀನ ಕಾರ್ಯದರ್ಶಿ ಕಾಂತಮ್ಮ ಎನ್‌ಎಂ ಅಧಿಸೂಚನೆ ಹೊರಡಿಸಿದ್ದಾರೆ.
ಕನ್ನಡ ನಟಿಯರು ಇಲ್ವಾ? ನೆಟ್ಟಿಗರ ಪ್ರಶ್ನೆ
ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿಕೊಂಡಿರುವ ಸರಕಾರದ ನಿರ್ಧಾರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಜನರು ಥರೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. "ಈ ಸೋಪ್ ಉಜ್ಜಿಕೊಂಡರೆ ತ್ವಚೆ ತಮನ್ನಾನಂತಾಗುವುದು ! 2 ವರ್ಷದ 2 ದಿನಕ್ಕೆ 6.20 ಕೋಟಿ ಮಾತ್ರ. ಮಿಲ್ಕಿ ಬ್ಯೂಟಿ, ನೋಡೋಕೆ ಚೂಟಿ" ಎಂದು ರಾಘವೇಂದ್ರ ಭಟ್ ಪೋಸ್ಟ್ ಮಾಡಿದ್ದಾರೆ.
"ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸ್ಕ್ಯಾಂಡಲ್ ಸೋಪ್" ಎಂದು ಶಿವಕುಮಾರ್ ಮೆಣಸಿನಕಾಯಿ ಅಭಿಪ್ರಾಯಪಟ್ಟಿದ್ದಾರೆ.
ಇದು ಕರ್ನಾಟಕ ಸರಕಾರದ ತಮನ್ನಾ ಗ್ಯಾರಂಟಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
"ದಿನಕ್ಕೆ ಹೆಚ್ಚು ಕಡಿಮೆ ರೂ.84,000 !!!
ಮನಸೂರೆಗೊಂಡಳು
ಮೈಸೂರ ಸ್ಯಾಂಡಲು...
ನಮ್ಮ ಕರ್ನಾಟಕದಲ್ಲಿ ಯಾರೂ ಇಲ್ಲವೇ?
ತಮನ್ನ ಭಾಟಿಯಾ...
ಅವರಿಗಿಲ್ಲ ಸಾ.ಟಿಯ?
ಯಾರ ಡೀಲಿದು ಕಂದಾ
ಅಯ್ಯೋ ಅಯ್ಯೋ ಗೋವಿಂದಾ..." ಎಂದು ಸೋಮಶೇಖರ್ ಪಡುಕೆರೆ ವ್ಯಂಗ್ಯವಾಡಿದ್ದಾರೆ.