ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ; ವಿಜಯ್ ಮಕ್ಕಳ್ ಇಯಕ್ಕಮ್ ಸಂಘದ ಅಧ್ಯಕ್ಷರಾಗಿ ಆಯ್ಕೆ
ಲೋಕಸಭೆ ಚುನಾವಣೆಗೂ ಮುನ್ನವೇ ಖ್ಯಾತ ತಮಿಳು ನಟ ದಳಪತಿ ವಿಜಯ್ ರಾಜಕೀಯ ಪ್ರವೇಶ ಖಚಿತವಾಗಿದ್ದು, ಇದರ ಪ್ರಕ್ರಿಯೆಗಳು ಆರಂಭವಾಗಿದೆ.
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರಿ ಬೆಳೆವಣಿಗೆಗಳು ನಡೆಯುತ್ತಿದ್ದು,2024ರ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ದಕ್ಷಿಣ ಭಾರತದ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ನಟ ವಿಜಯ್ ಈ ಬಗ್ಗೆ ತಮ್ಮ ಅಭಿಮಾನಿಗಳ ಪ್ರಮುಖ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅಂತಿಮವಾಗಿ ರಾಜಕೀಯದಲ್ಲಿ ಸಕ್ರಿಯವಾಗಲು ನಿರ್ಧಾರ ಮಾಡಿದ್ದಾರೆ.
ಗುರುವಾರ (ಜನವರಿ 25) ಔಪಚಾರಿಕವಾಗಿ ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ. ಅಖಿಲ ಭಾರತ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ, ಅಭಿಮಾನಿಗಳ ಸಂಘ ಕಂ ವೆಲ್ಫೇರ್ ಅಸೋಸಿಯೇಷನ್‌ನ ಪದಾಧಿಕಾರಿಗಳು ತಮಿಳುನಾಡಿನ ಪೂರ್ವ ಕರಾವಳಿಯ ಪನೈಯೂರಿನಲ್ಲಿರುವ ನಟನ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಮೂರು ಗಂಟೆಗಳ ನಡೆದ ಸಭೆಯಲ್ಲಿ ವಿಜಯ್ ಅವರು ಉಪಸ್ಥಿತರಿದ್ದರು. ತಮ್ಮ ನೆಚ್ಚಿನ ನಟ ರಾಜಕೀಯ ಪ್ರವೇಶಿಸಲು ಎಲ್ಲಾ ಪದಾಧಿಕಾರಿಗಳು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ರಾಜಕೀಯ ಸಂಘಟನೆಯ ಸಾಮಾನ್ಯ ಮಂಡಳಿಯ ಸದಸ್ಯರು ವಿಜಯ್ ಅವರನ್ನು ವಿಜಯ್ ಮಕ್ಕಳ್ ಇಯಕ್ಕಮ್ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಬೆಂಬಲಿಗರು ಕೂಡ ಇದನ್ನೇ ಬಯಸುತ್ತಿದ್ದಾರೆ.
2026 ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಗುರಿಯಾಗಬೇಕು. ಈ ಬಗ್ಗೆ ಸೂಕ್ತ ಸಮಯದಲ್ಲಿ ಪದಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ವಿಜಯ್ ಅವರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ದಳಪತಿ ವಿಜಯ್ ಅವರ ರಾಜಕೀಯ ಪಕ್ಷದ ಹೆಸರು 'ಕಳಗಂ' ಪದದಿಂದಲೇ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳಾದ ಡಿಎಂಕೆ, ಎಐಡಿಎಂಕೆ ಕೂಡ ಇದೇ ಪದಗಳನ್ನು ಇಟ್ಟುಕೊಂಡಿವೆ.
ನಟ ವಿಜಯ್ ಅವರು ಕಳೆದೊಂದು ದಶಕದಿಂದ ರಾಜಕೀಯಕ್ಕೆ ಪ್ರವೇಶಿಸುವ ಕನಸು ಕಾಣುತ್ತಿದ್ದರು. ತಮ್ಮ ಅಭಿಮಾನಿಗಳ ಸಂಘ ಹಾಗೂ ವೆಲ್‌ಫೇರ್ ಸಂಸ್ಥೆಯನ್ನು ಕಟ್ಟಿ ಉಚಿತ ಊಟ, ನೇತ್ರದಾನ, ನೈಟ್ ಸ್ಟಡೀ ಸೆಂಟರ್‌ಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಭಾರಿಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದ ತಮಿಳುನಾಡಿನ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಹಾರವನ್ನು ನೀಡಿದ್ದರು.
ಬೋರ್ಡ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳನ್ನು ಕಳೆದ ವರ್ಷದ ಜೂನ್‌ನಲ್ಲಿ ಸನ್ಮಾನಿಸಿದ್ದರು. ಅಲ್ಲದೆ, ನಾಯಕರಾದ ಡಾ ಬಿಆರ್ ಅಂಬೇಡ್ಕರ್, ಪೆರಿಯಾರ್ ಇವಿ ರಾಮಸ್ವಾಮಿ ಹಾಗೂ ಕೆ ರಾಮರಾಜ್ ಅವರ ಪುಸ್ತಕಗಳನ್ನು ಓದುವಂತೆ ಸೂಚಿಸಿದ್ದರು.
ಸೂಪರ್ ಡೂಪರ್ ಹಿಟ್ ಚಿತ್ರಗಳು ಮೂಲಕ 3 ದಶಕಗಳಿಗೂ ಅಧಿಕಾಲ ತಮಿಳುನಾಡು ಸಿನಿಮಾ ಕ್ಷೇತ್ರಕ್ಕೆ ತಮ್ಮ ಆದ ಕೊಡುಗೆಯನ್ನು ನೀಡಿರುವ ವಿಜಯ್ ಅವರು ಮುಂದಿನ ಸಿನಿಮಾ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾ 2024ರ ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇವರ ಇತ್ತೀಚಿನ ಲಿಯೊ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಬಾರಿ ಸದ್ದು ಮಾಡಿತ್ತು. (This copy first appeared in Hindustan Times Kannada website. To read more like this please logon to kannada.hindustantime.com)