ಮೇಘ ಕರಗುವ ಸಮಯ.. ಬಾಳ ಸಂಗಾತಿಯನ್ನು ಪರಿಚಯಿಸಿದ ಸೀತಾ ರಾಮ ಸೀರಿಯಲ್ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ; ಹುಡುಗನ ಹೆಸ್ರು ಜಯಂತ್!
Meghana Shankarappa: ಬಣ್ಣದ ಲೋಕದ ನಂಟಿನ ಜತೆಗೆ ವೈಯಕ್ತಿಕ ಜೀವನದ ಕಡೆಗೂ ಸೀತಾ ರಾಮ ಸೀರಿಯಲ್ ಪ್ರಿಯಾ ಎಂದೇ ಖ್ಯಾತರಾದ ಮೇಘನಾ ಶಂಕರಪ್ಪ ಇದೀಗ ಗಮನ ಹರಿಸಿದ್ದಾರೆ. ಅಂದರೆ, ಸಿಂಗಲ್ ಆಗಿದ್ದ ಮೇಘನಾ ಮಿಂಗಲ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡು, "ಹತ್ತಿರವಾಗಲು ಒಂದು ಹೆಜ್ಜೆ ಮುಂದೆ" ಎಂದಿದ್ದಾರೆ.
Seetha Rama serial Priya: ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ ರಾಮ ಜೋಡಿ ಒಂದು ಕಡೆ ವೀಕ್ಷಕರ ಮನ ಸೆಳೆಯುತ್ತಿದ್ದರೆ, ಸ್ನೇಹಿತರೆಂದರೆ ಹೀಗಿರಬೇಕು ಎಂದು ತೋರಿಸಿದವರು ಅಶೋಕ್ ಮತ್ತು ಪ್ರಿಯಾ. ರಾಮ್‌ಗೆ ಜೀವದ ಗೆಳೆಯನಾಗಿ ಅಶೋಕ್ ಕಾಣಿಸಿಕೊಂಡರೆ, ಸೀತಾಳ ಕಷ್ಟ ಸುಖದಲ್ಲಿ ಭಾಗಿಯಾದವಳು ಪ್ರಿಯಾ. ಕೊನೆಗೆ ಇದೇ ಸೀರಿಯಲ್‌ನಲ್ಲಿ ಪ್ರಿಯಾಗೂ ಮತ್ತು ಅಶೋಕ್ ನಡುವೆ ಪ್ರೀತಿ ಚಿಗುರಿ, ಮದುವೆಯೂ ಆಗಿದೆ. ವೀಕ್ಷಕರೂ ಈ ಜೋಡಿ ನೋಡಿ ಖುಷಿಪಟ್ಟಿದ್ದಾರೆ. ಇದು ಸೀರಿಯಲ್ ಕಥೆಯಾದರೆ, ಈಗ ರಿಯಲ್ ಲೈಫ್‌ನಲ್ಲಿ ಜಂಟಿಯಾಗಲು ತಯಾರಾಗಿದ್ದಾರೆ ಪ್ರಿಯಾ ಅಲಿಯಾಸ್ ಮೇಘನಾ ಶಂಕರಪ್ಪ.
ಸೀರಿಯಲ್‌ನಲ್ಲಿ ಪಟ ಪಟ ಅಂತ ಮಾತನಾಡುತ್ತ ಎಷ್ಟೋ ವೀಕ್ಷಕರ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ ಮೇಘನಾ ಶಂಕರಪ್ಪ. ಈ ನಡುವೆ ರಿಯಾಲಿಟಿ ಶೋಗಳಾದ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿಯೂ ಭಾಗವಹಿಸಿ, ಡಾನ್ಸ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಬಣ್ಣದ ಲೋಕದ ನಂಟಿನ ಜತೆಗೆ ವೈಯಕ್ತಿಕ ಜೀವನದ ಕಡೆಗೂ ಮೇಘನಾ ಗಮನ ಹರಿಸಿದ್ದಾರೆ. ಅಂದರೆ, ಸಿಂಗಲ್ ಆಗಿದ್ದ ಮೇಘನಾ ಇದೀಗ ಮಿಂಗಲ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡು, "ಹತ್ತಿರವಾಗಲು ಒಂದು ಹೆಜ್ಜೆ ಮುಂದೆ" ಎಂದು ಬರೆದುಕೊಂಡು, 2025 ಫೆಬ್ರವರಿ ಎಂದಿದ್ದಾರೆ.
ಜಯಂತ್‌ನನ್ನು ವರಿಸಲಿರುವ ಮೇಘನಾ
ವಿಡಿಯೋದಲ್ಲಿ ಏನಿದೆ? ಹಸಿರು ಉಡುಗೆಯಲ್ಲಿ ರೆಸ್ಟೊರಂಟ್‌ಗೆ ಆಗಮಿಸಿದ ಮೇಘನಾ, ಕಾಫಿ ಆರ್ಡರ್ ಮಾಡಿದ್ದಾರೆ. ಹಿನ್ನೆಲೆಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಒಲವೇ ಒಲವೇ ಹಾಡು ರಿಂಗಣಿಸುತ್ತಿದೆ. ಇತ್ತ ಇನ್ನಾರಾದೋ ಬರುವಿಕೆಯ ನಿರೀಕ್ಷೆಯಲ್ಲಿ ಕಾದು ಕೂತಿದ್ದಾರೆ. ಆ ಕಡೆ ಈ ಕಡೆ ನೋಡುತ್ತಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಅಂತ ಒಂದಷ್ಟು ಸೆಲ್ಫಿಗೂ ಮುಖವೊಡ್ಡಿದ್ದಾರೆ. ಇತ್ತ ಕೋಲ್ಡ್ ಫಿಲ್ಟರ್ ಕಾಫಿ ರೆಡಿಯಾಗುತ್ತಿದೆ. ಅತ್ತ ಕಾರ್‌ನಿಂದ ಮೇಘನಾ ಮನದ ಇನಿಯನ ಆಗಮನವಾಗಿದೆ.
ಇನ್ನೇನು ಕಾಫಿ ಹೀರಬೇಕು ಎನ್ನುವಷ್ಟರಲ್ಲಿ, ಇನ್ನೊಂದು ಬಿಸಿ ಬಿಸಿ ಕಾಫಿಯನ್ನು ಕೈಯಲ್ಲಿ ಹಿಡಿದು ಸವಿದಿದ್ದಾರೆ ಜಯಂತ್ ಕುಮಾರಸ್ವಾಮಿ. ಅಲ್ಲಿಗೆ ಪ್ರಿಯಾ ಮೊಗದಲ್ಲಿ ನಗು ಅರಳಿದೆ. ಇಬ್ಬರ ನಡುವೆ ಮಾತುಕತೆ ನಡೆದಿದೆ. ಕೈ ಮೇಲೆ ಕೈ ಇಟ್ಟು ಕಿರು ನಗೆ ಬೀರಿದ್ದಾರೆ. ಕಣ್ಣಲ್ಲಿಯೇ ಮಾತುಕತೆ ಮುಂದುವರಿದಿದೆ. ಬಳಿಕ ಕೈ ಕೈ ಹಿಡಿದುಕೊಂಡೇ ಹೊರ ನಡೆದಿದ್ದಾರೆ. ಮೇಘ ಕರಗುವ ಸಮಯ.. ಹನಿ ನಾನು ಧ್ವನಿ ನೀನು.. ಎಂಬ ಬರಹವೂ ಕಾಣಿಸಿದೆ. One step closer to Forever ಎಂದೂ ಆ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.
ಫೆಬ್ರವರಿಯಲ್ಲಿ ಮದುವೆ
ಹೌದು ಮೇಘನಾ ಶಂಕರಪ್ಪ ವರಿಸಲಿರುವ ಹುಡುಗನ ಹೆಸರು ಜಯಂತ್ ಕುಮಾರಸ್ವಾಮಿ. ಸದ್ಯ ಇವರು ಎಲ್ಲಿಯವರು, ಏನು ಕೆಲಸ, ಹಿನ್ನೆಲೆ ಏನು ಎಂಬಿತ್ಯಾದಿ ಮಾಹಿತಿಯನ್ನು ಮೇಘನಾ ಹಂಚಿಕೊಂಡಿಲ್ಲ. ಬದಲಿಗೆ ತಾನು ಕೈ ಹಿಡಿಯಲಿರುವ ಹುಡುಗ ಯಾರು ಎಂಬುದನ್ನು ವಿಡಿಯೋ ಮೂಲಕ ರಿವೀಲ್ ಮಾಡಿದ್ದಾರೆ. ಜತೆಗೆ 2025ರ ಫೆಬ್ರವರಿಯಲ್ಲಿ ಈ ಜೋಡಿ ಹಸಮಣೆ ಏರಲಿದೆ. ಹೀಗೆ ಶೇರ್ ಮಾಡಿದ ವಿಡಿಯೋಕ್ಕೆ ನೆಟ್ಟಿಗರಿಂದಲೂ ಶುಭಾಶಯಗಳ ಕಾಮೆಂಟ್‌ಗಳ ರಾಶಿಯೇ ಬಂದಿದೆ. ಇಬ್ಬರಿಗೂ ಕಂಗ್ರಾಜುಲೇಶನ್ಸ್ ಎಂದು ಶುಭಕೋರುತ್ತಿದ್ದಾರೆ. ಇನ್ನು ಕೆಲವರು ಬೇಕು ಅಂತಲೇ ಅಶೋಕ್ ಬೇಡ್ವಾ ಪ್ರಿಯಾ ಎಂದೂ ಟೀಸ್ ಮಾಡುತ್ತಿದ್ದಾರೆ.
ಈ ಹಿಂದೆ ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ವೀಕ್ಷಕರ ಮನೆ ಮನ ತಲುಪಿರುವ ಮೇಘನಾ, ನಮ್ಮನೆ ಯುವರಾಣಿ, ಕಿನ್ನರಿ, ಕೃಷ್ಣ ತುಳಸಿ, ರತ್ನಗಿರಿ ರಹಸ್ಯ, ದೇವಯಾನಿ, ಸಿಂಧೂರ ಸೇರಿ ಇನ್ನೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಸೀತಾ ರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ವಿಭಾಗ