ಸುಧಾ ಬಳಿ ಕಾಫಿ ಕೇಳಿದ ಅಪೇಕ್ಷಾಳಿಗೆ ಮುಖಭಂಗ, ದಿವಾನ್ ಮನೆಯಲ್ಲಿ ನಿಗೂಢ ಸಂಚಿನ ಕಾರ್ಮೋಡ - ಅಮೃತಧಾರೆ ಗುರುವಾರದ ಸಂಚಿಕೆ
ಅಮೃತಧಾರೆ ಧಾರಾವಾಹಿಯ ಗುರುವಾರದ ಸಂಚಿಕೆಯಲ್ಲಿ (ನವೆಂಬರ್ 21) ಎಂದಿನಂತೆ ಕೆಲವೊಂದು ಘಟನೆಗಳು ನಡೆದಿವೆ. ಆದರೆ, ಮಹತ್ವದ ಯಾವುದೇ ಘಟನೆ ನಡೆದಿಲ್ಲ. ಗೌತಮ್ ಮನೆಯಲ್ಲಿ ಸುಧಾ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಆದರೆ, ಆಕೆ ನಿಗೂಢ ವ್ಯಕ್ತಿಯ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾಳೆ.
ಅಮೃತಧಾರೆ ನವೆಂಬರ್ 21ರ ಸಂಚಿಕೆ: ಗೌತಮ್ ದೇವರ ಮನೆಯಲ್ಲಿದ್ದಾಗ ಯಾರೋ ಸುಳಿದಾಡಿದಂತೆ ಆಗುತ್ತದೆ. ಅಲ್ಲಿ ಸುಧಾ ಇರುತ್ತಾಳೆ. ಯಾಕಮ್ಮ ಅಡಗಿದ್ದೀ ಎಂದು ಕೇಳುತ್ತಾರೆ ಗೌತಮ್. "ಬೆಳಗ್ಗೆ ನೀವು ದೇವರಲ್ಲಿ ಬೇಡಿಕೊಳ್ತಾ ಇದ್ರಿ. ನಾನು ಎದುರಿಗೆ ಬಂದೆ. ಆದರೆ, ನಾನು ನೋಡಿದ್ರೆ ವಿಧವೆ. ಅಪಶಕುನ. ಒಳ್ಳೆಯದಲ್ಲ ಎಂದು ಈ ಕಡೆ ಬಂದು ಬಚ್ಚಿಕೊಂಡೆ" ಎಂದು ಸುಧಾ ಹೇಳುತ್ತಾಳೆ. "ನೀನು ವಿಧವೆ ಅನ್ನುವ ಕಾರಣಕ್ಕೆ ನನಗೆ ಕೆಟ್ಟದಾಗುತ್ತ? ನಾನು ಇಲ್ಲಿಂದ ಹೊರಗೆ ಹೋದ ಬಳಿಕ ಯಾರೂ ವಿಧವೆಯರು ನನಗೆ ಕಾಣಿಸೋದಿಲ್ವ. ಯಾವ ಕಾಲದಲ್ಲಿ ಇದ್ದಿಯಮ್ಮ. ಮನುಷ್ಯನಿಗೆ ಭಯದಿಂದ ಹೊರಬರಲು ಗೊತ್ತಾಗದೇ ಇದ್ದಾಗ ಈ ರೀತಿ ಮೂಢ ನಂಬಿಕೆಯ ಮೊರೆ ಹೋಗುತ್ತಾರೆ. ಬೆಕ್ಕು ಅಡ್ಡ ಬಂದರೆ ಅಪಶಕುನ, ಅದು ಇದು ಎಲ್ಲಾ ಹೇಳ್ತಾರೆ. ಭಯ ಅನ್ನೋದು ಒಂದು ರೋಗ. ಭಯ ಅನ್ನೋದು ಬೋನಿನ ರೀತಿ. ಆ ಭಯದಿಂದ ನಾವು ಹೊರಗೆ ಬಂದರೆ ನಾವು ನಾವಾಗಿರ್ತಿವಿ. ನಂಬಿಕೆ ಇರಬೇಕು. ಮೂಢನಂಬಿಕೆ ಇರಬೇಕು. ಇನ್ನು ಮುಂದೆ ಆ ರೀತಿ ಯೋಚನೆ ಮಾಡಬೇಡ" ಎಂದು ಗೌತಮ್ ಹೇಳುತ್ತಾರೆ. "ಸರಿ ಅಣ್ಣಾ" ಎಂದು ಹೇಳಿ ಸುಧಾ ಹೋಗುತ್ತಾರೆ.
ಆನಂದ್‌ಗೆ ವೈಷ್ಣವಿ ಬ್ಯಾಂಕ್‌ನಿಂದ ಕಾಲ್ ಬರುತ್ತದೆ. ಸಾಲ ಬೇಡಮ್ಮ ಎಂದು ಮಾತನಾಡುತ್ತಾರೆ. ಒಂದಿಷ್ಟು ತಮಾಷೆಯಿಂದಲೇ ಆ ಸೇಲ್ಸ್ ಕಾಲ್‌ಗೆ ಉತ್ತರಿಸುತ್ತಾರೆ. ಹುಡುಗಿಯ ಜತೆ ಈ ರೀತಿ ಮಾತನಾಡುವುದನ್ನು ಅಪರ್ಣಾ ಕೇಳಿಸಿಕೊಳ್ಳುತ್ತಾರೆ. "ಏನು ವಾಯ್ಸ್ ಈ ಹುಡುಗಿದು" ಎಂದು ಕಾಲ್ ಕಟ್ ಮಾಡುತ್ತಾರೆ. "ಯಾರದು, ಯಾರ ಜತೆ ಕಿಸಿದುಕೊಂಡು ಮಾತನಾಡಿಕೊಂಡಿದ್ದೆ" ಎಂದು ಆನಂದ್‌ಗೆ ಎಂದಿನಂತೆ ಅಪರ್ಣಾಳ ಬೈಗುಳ ಇರುತ್ತದೆ.
ಪಾರ್ಥ ಮತ್ತು ಅಪೇಕ್ಷಾಗೆ ಮುಗಿಯದ ಮುನಿಸು
ಭೂಮಿಕಾ ಎದ್ದಾಗ ಸುಧಾ ಬರುತ್ತಾಳೆ. ಎಂದಿನಂತೆ ಉಪಚಾರ ಮಾಡುತ್ತಾಳೆ. ಇನ್ನೊಂದೆಡೆ ಅಪೇಕ್ಷಾಳಿಗೆ ಬಾಯ್ ಹೇಳಿ ಪಾರ್ಥ ಹೊರಡುತ್ತಾನೆ. "ನಿಮ್ಮಲ್ಲಿ ಏನೋ ಹೇಳಬೇಕು" ಎಂದು ಪಾರ್ಥ ಹೇಳುತ್ತಾನೆ. "ನನಗೆ ಗೊತ್ತಾಯ್ತು, ಸಂಜೆ ಹೊರಗೆ ಕರೆದುಕೊಂಡು ಹೋಗ್ತಿನಿ ಅಂತ ಹೇಳಿದ್ರಿ ಅಲ್ವಾ" ಎಂದು ಅಪೇಕ್ಷಾ ಹೇಳುತ್ತಾಳೆ. "ಅದಲ್ಲ, ಸ್ವಲ್ಪ ಪೇಷೆನ್ಸ್‌ನಿಂದ ಯೋಚನೆ ಮಾಡಿ, ಭೂಮಿಕಾಳ ಯೋಗಕ್ಷೇಮ ವಿಚಾರಿಸಿ" ಎಂದು ಹೇಳುತ್ತಾನೆ. "ನಾನಾಗಿ ನಾನೇ ಹೋಗುವುದು ಕಷ್ಟ. ನೋಡುವ ಯಾವತ್ತಾದರೂ" ಎಂದು ಅಪೇಕ್ಷಾ ಹೇಳುತ್ತಾಳೆ. "ಮೊದಲಿನ ಅಪೇಕ್ಷಾ ಆಗಿ ಪ್ಲೀಸ್" ಎಂದು ಹೇಳುತ್ತಾನೆ. "ನೀವು ಮೊದಲಿನ ಪಾರ್ಥ ಆಗಿದ್ದೀರ, ಅವಳು ಮೊದಲ ಭೂಮಿಕಾ ಆಗಿದ್ದಾಳ, ಯಾಕೆ ನಾನು ಮೊದಲಿನ ಅಪೇಕ್ಷಾ ಆಗಬೇಕು" ಎಂದು ಕೇಳುತ್ತಾಳೆ. ಎಂದಿನಂತೆ ಕಿರಿಕಿರಿ ಇರುತ್ತದೆ. "ನಿಮಗೆ ಅನಿಸಿದ್ದನ್ನೇ ಮಾಡಿ" ಎಂದು ಪಾರ್ಥ ಹೋಗುತ್ತಾನೆ.
ಸುಧಾ ಯೋಚಿಸುತ್ತಿದ್ದಾಳೆ. "ನಾನು ಮಾಡುವುದು ಸರಿಯಾ ತಪ್ಪಾ ಗೊತ್ತಾಗ್ತಾ ಇಲ್ಲ. ಒಂದು ಕಡೆ ಅಮ್ಮ, ಇನ್ನೊಂದು ಕಡೆ ಇವರು" ಎಂದು ಸುಧಾ ಯೋಚಿಸುತ್ತಾಳೆ. ಆಗ ಭೂಮಿಕಾ "ಯಾಕೆ ಹೀಗೆ ಇದ್ದೀರಿ" ಎಂದು ಕೇಳುತ್ತಾಳೆ. "ಏನು ಪ್ರಾಬ್ಲಂ ಎಂದು ಹೇಳಿ" ಎನ್ನುತ್ತಾರೆ. "ಸಂಕೋಚ ಪಡಬೇಡಿ, ನಿಮ್ಮ ಜತೆ ನಾವಿದ್ದೇವೆ" ಎಂದು ಭರವಸೆ ಹೇಳಲಿ. ಅದೇ ಸಮಯದಲ್ಲಿ ಗೌತಮ್ ಬರುತ್ತಾರೆ. ಕಾಫಿ ತಾ, ನೀನು ಚೆನ್ನಾಗಿ ಕಾಫಿ ಮಾಡುತ್ತೀ ಅಂತೆ ಎಂದು ಗೌತಮ್ ಹೇಳುತ್ತಾರೆ. ಸುಧಾ ಹೋದ ಬಳಿಕ ಗೌತಮ್ ಮತ್ತು ಭೂಮಿಕಾ ಎಂದಿನ ಲಹರಿಯಲ್ಲಿ ಮಾತನಾಡುತ್ತಾರೆ.
ಸುಧಾ ಕಾಫಿ ಮಾಡುತ್ತಿದ್ದಾಳೆ. ಆಗ ಅಲ್ಲಿಗೆ ಮಲ್ಲಿ ಬರುತ್ತಾಳೆ. "ನಾನೇ ಕಾಫಿ ಮಾಡ್ತಿನಿ, ಯಾವಾಗಲೂ ನಾನೇ ಕಾಫಿ ಮಾಡೋದು" ಎಂದು ಮಲ್ಲಿ ಹೇಳುತ್ತಾರೆ. "ಅಣ್ಣಾ ನನ್ನಲ್ಲಿಯೇ ಕಾಫಿ ಮಾಡಲು ಹೇಳಿದ್ರು" ಎಂದು ಸುಧಾ ಹೇಳುತ್ತಾಳೆ. "ಹೌದ, ಹಾಗಂದ್ರ" ಎಂದು ಮಲ್ಲಿ ಬೇಜಾರು ಮಾಡಿಕೊಳ್ಳುತ್ತಾಳೆ. ಇವರು ಬಂದದ್ದೇ ಬಂದದ್ದು ನನಗೂ ಅಕ್ಕಾವ್ರಿಗೂ ಕನೆಕ್ಷನೇ ಕಟ್ಟ ಆಗಿದೆ ಎಂದು ಮಲ್ಲಿ ಬೇಸರದಲ್ಲಿ ಯೋಚಿಸುತ್ತಾಳೆ.
ಸುಧಾ ಕಾಫಿ ರೆಡಿ ಮಾಡಿ ಕೊಂಡೊಗ್ತಾ ಇದ್ದಾಳೆ. ಆಗ ದಾರಿಯಲ್ಲಿ ಅಪೇಕ್ಷಾ ಇರುತ್ತಾಳೆ. "ಕರೆಕ್ಟ್ ಟೈಮ್‌ಗೆ ಕಾಫಿ ತಂದಿದ್ಯ. ನನಗೆ ಆಗಾಗ ಕಾಫಿ ಕುಡೀತಾ ಇರಬೇಕು. ಕೊಡು ಇಲ್ಲಿ" ಎಂದು ಅಪೇಕ್ಷಾ ಧಿಮಾಕಿನಿಂದ ಹೇಳುತ್ತಾಳೆ. "ಮೇಡಂ ಒಂದು ನಿಮಿಷ, ಇದು ಅಣ್ಣಾ ಅತ್ತಿಗೆಗೆ. ನಿಮಗೆ ಅಮೇಲೆ ಕೊಡ್ತಿನಿ" ಎಂದು ಸುಧಾ ಹೇಳುತ್ತಾಳೆ. "ಮೇಡಂ ಕ್ಷಮಿಸಿ, ಇದು ಅಣ್ಣಾ ಅತ್ತಿಗೆಗೆ ಅಂತ ಸ್ಪೆಷಲ್ ಆಗಿ ಮಾಡಿದ ಕಾಫಿ. ಐದು ನಿಮಿಷ, ನಿಮಗೂ ಮಾಡಿ ಕೊಡ್ತಿನಿ" ಎಂದು ಸುಧಾ ಹೇಳುತ್ತಾಳೆ. ಕ್ಷಮಿಸಿ ಎಂದು ಹೋಗುತ್ತಾಳೆ. "ಕೆಲಸದವಳು ನನ್ನ ಮಾತು ಕೇಳುತ್ತಿಲ್ಲ. ಅಷ್ಟು ಕೇವಲವಾಗಿ ಹೋದೆನ" ಎಂದು ಅಪೇಕ್ಷಾ ಯೋಚಿಸುತ್ತಾಳೆ.
ಶಕುಂತಲಾ ಮತ್ತು ಲಕ್ಷ್ಮಿಕಾಂತ್ ಎಂದಿನಂತೆ ಅದೇ ಚಿಂತೆಯಲ್ಲಿದ್ದಾರೆ. "ಈಗ ಮನೆಯಲ್ಲಿ ಎಲ್ಲರೂ ಬಾಂಬ್ ಬ್ಲಾಸ್ಟ್ ಬಗ್ಗೆ ಯೋಚಿಸ್ತಾ ಇದ್ದಾರೆ. ನಾವು ಈ ಕಡೆಗೆ ಅವನ ತಂಗಿ ಮತ್ತು ಅಮ್ಮನ ಹುಡುಕುವ ಕೆಲಸ ಮಾಡೋಣ" ಎಂದು ಹೇಳುತ್ತಾನೆ. "ಈ ಕೆಲಸ ಆದಷ್ಟು ಬೇಗ ಮಾಡಿ ಮುಗಿಸಬೇಕು" ಎಂದು ಶಕುಂತಲಾ ಹೇಳುತ್ತಾರೆ. "ನಮ್ಮ ಹುಡುಗರಿಗೆ ಹೇಳು, ಅವಳನ್ನು ಹುಡುಕಿ ಮುಗಿಸಬೇಕು" ಎಂದು ಹೇಳುತ್ತಾರೆ.
ಸುಧಾ ಕಾಫಿ ತರುತ್ತಾಳೆ. ಕಾಫಿ ಕುಡಿದು ಗೌತಮ್ ಖುಷಿ ಪಡುತ್ತಾರೆ. "ಇದು ಅದ್ಭುತ ಕಾಫಿ, ನಿಮಗೆ ಬಂಗಾರದ ಬಳೆ ಕೊಡಿಸಬೇಕು" ಎಂದು ಗೌತಮ್ ಹೇಳುತ್ತಾರೆ. ಆಗ ಸುಧಾ ಭೂಮಿಕಾಳಿಗೆ ಸಜ್ಜಪ್ಪದ ಕಥೆ ಹೇಳುತ್ತಾರೆ. "ಬಂಗಾರದ ಬೆಲೆ ಗೊತ್ತೇ ಇಲ್ಲ, ಕಬ್ಬಿಣದ ರೀತಿ ಕೊಡ್ತಿರಿ" ಎಂದು ಸುಧಾ ತಮಾಷೆಗೆ ಹೇಳುತ್ತಾಳೆ. ಅದಕ್ಕೆ ಭೂಮಿಕಾ "ಬಂಗಾರಕ್ಕೆ ಬೆಲೆ ಇಲ್ಲ ಎಂದಲ್ಲ, ನೀವು ಕೊಡುವ ಪ್ರೀತಿ, ಕಾಳಜಿ, ಖುಷಿ ಅದಕ್ಕಿಂತಲೂ ಮೀರಿದ್ದು ಎಂದರ್ಥ" ಎನ್ನುತ್ತಾರೆ. ಇದೇ ಸಮಯದಲ್ಲಿ ಸುಧಾಳಿಗೆ ಕಾಲ್ ಬರುತ್ತದೆ. "ನಿನ್ನ ಮೇಲೆ ಎಲ್ಲರಿಗೂ ನಂಬಿಕೆ ಬರಬೇಕು. ಆ ರೀತಿ ನೀನು ನಡೆದುಕೊಳ್ಳಬೇಕು" ಎಂದು ಕರೆ ಮಾಡಿದ ವ್ಯಕ್ತಿ ಹೇಳುತ್ತಾರೆ. ಸುಧಾಳನ್ನು ಈ ಮನೆಗೆ ಕಳುಹಿಸಿದ ವ್ಯಕ್ತಿ ಯಾರು? ಗೌತಮ್ ಮನೆಯಲ್ಲಿ ನಿಗೂಢ ಸಂಚು ನಡೆಸಲು ಯಾರು ಯೋಜಿಸಿದ್ದಾರೆ. ಅದಕ್ಕೂ ಮೊದಲು ಗೌತಮ್‌ಗೆ ತನ್ನ ತಂಗಿ, ಅಮ್ಮನ ಪರಿಚಯವಾಗುತ್ತ? ಕಾದು ನೋಡಬೇಕಿದೆ.
ಧಾರಾವಾಹಿ ಹೆಸರು: ಅಮೃತಧಾರೆ
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಧಾರಾವಾಹಿ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ