Amruthadhaare serial: ಪ್ರೀತಿಗೆ ಇನ್ನೊಂದು ಹೆಸರೇ ಗೌತಮ್-ಭೂಮಿಕಾ, ಆನಂದನಿಂದ ಗೆಳೆಯನ ಗುಣಗಾನ; ಅಮೃತಧಾರೆ ಧಾರಾವಾಹಿ ಮುಗಿಯುತ್ತಾ?
Amruthadhaare serial Yesterday Episode: ರೋಮಿಯೋ ಜ್ಯೂಲಿಯೆಟ್ ಹಳೆಯದಾಯ್ತು, ಪ್ರೀತಿಗೆ ಇನ್ನೊಂದು ಹೆಸರೇ ಗೌತಮ್-ಭೂಮಿಕಾ ಎಂದು ಆನಂದ್ ಹೇಳುತ್ತಾನೆ. ತನ್ನ ಗೆಳೆಯನ ಗುಣಗಾನ ಮಾಡುತ್ತಾನೆ. ಅಮೃತಧಾರೆಯ ಈ ಮದುವೆ ಸಂಭ್ರಮದ ಕ್ಷಣಗಳು "ಈ ಸೀರಿಯಲ್ ಸದ್ಯದಲ್ಲಿಯೇ ಮುಗಿಯುತ್ತಾ?" ಎಂಬ ಅನುಮಾನವನ್ನೂ ಹುಟ್ಟಿಸಿದೆ.

Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ಸಂಭ್ರಮ ಮನೆ ಮಾಡಿದೆ. ಗೌತಮ್ ಭೂಮಿಕಾಳಿಗೆ ತಾಳಿ ಕಟ್ಟಿದ ಬಳಿಕ ಶಕುಂತಲಾ ಟೀಮ್ ಹೊರತುಪಡಿಸಿ ಎಲ್ಲರ ಮುಖದಲ್ಲಿ ಹಬ್ಬದ ವಾತಾವರಣ ಇದೆ. "ಈ ವಿಷಯದಲ್ಲಿ ನಮ್ಮೆಲ್ಲರ ಕಣ್ಣು ತೆರೆಸಿಬಿಟ್ಟೆ ಕಣೋ" ಎಂದು ಅಜ್ಜಿ ಹೇಳುತ್ತಾರೆ. "ವಯಸ್ಸಿನಲ್ಲಿ ಚಿಕ್ಕವನಾದರೂ ಎಲ್ಲರೂ ನಿನಗೆ ಕೈ ಮುಗಿಯುವಂತೆ ಮಾಡಿದೆ. ತುಂಬಾ ಎತ್ತರದ ವ್ಯಕ್ತಿತ್ವ ನಿನ್ನದು. ನೀನು ನಮ್ಮ ವಂಶದಲ್ಲಿ ಹುಟ್ಟಿದೆಯಲ್ವ ಅದೇ ಹೆಮ್ಮೆ ಕಣೋ. ತುಂಬಾ ಒಳ್ಳೆ ಕೆಲಸ ಮಾಡಿದೆ" ಎಂದು ಅಜ್ಜಮ್ಮ ಗುಣಗಾನ ಮುಂದುವರೆಸುತ್ತಾರೆ. "ನೀನು ಭೂಮಿಕಾಳನ್ನು ಎಷ್ಟು ಪ್ರೀತಿಸ್ತಿ ಅಂತ ಇಡೀ ಜಗತ್ತಿಗೆ ಇವತ್ತು ಸಾಬೀತಾಯಿತು. ಪರಿಶುದ್ಧ ಪ್ರೀತಿಗೆ, ಗಂಡ ಹೆಂಡತಿ ಹೇಗೆ ಇರಬೇಕು ಎನ್ನುವುದಕ್ಕೆ ನೀನೇ ಉದಾಹರಣೆ" ಎಂದು ಅಜ್ಜಮ್ಮ ಹೇಳುತ್ತಾರೆ. "ಹೌದು ಅಜ್ಜಿ" ಎಂದು ಆನಂದ್ ಹೇಳುತ್ತಾರೆ. ಬಳಿಕ ಆನಂದ್ ತನ್ನ ಗೆಳೆಯನ ಗುಣಗಾನ ಮಾಡುತ್ತಾನೆ.
ರೋಮಿಯೋ ಜ್ಯೂಲಿಯೆಟ್ ಹಳೆಯದಾಯ್ತು, ಪ್ರೀತಿಗೆ ಇನ್ನೊಂದು ಹೆಸರೇ ಗೌತಮ್-ಭೂಮಿಕಾ ಎಂದು ಆನಂದ್ ಹೇಳುತ್ತಾನೆ. "ಇವರಿಬ್ಬರ ಮಧ್ಯೆ ಅಮೃತದಷ್ಟೇ ಮಧುರವಾದ ಪ್ರೀತಿ ಇದೆ. ಇವರಿಬ್ಬರ ನಡುವೆ ಅಮೃತಧಾರೆಯೇ ಹರಿಯುತ್ತಿದೆ" ಹೀಗೆ ಗೆಳೆಯನ ಗುಣಗಾನ ಮಾಡುತ್ತಿರುವಾಗ ಎಲ್ಲರೂ ಖುಷಿಗೊಳ್ಳುತ್ತಾರೆ. ಶಕುಂತಲಾದೇವಿ ಮುಖ ನೋಡಲಾಗುವುದಿಲ್ಲ. ಈ ಸಮಯದಲ್ಲಿ ಭಾಗ್ಯಮ್ಮನ ಮುಖದಲ್ಲಿಯೂ ಖುಷಿ ಮೂಡುತ್ತದೆ. "ಈ ಅಮೃತಧಾರೆ ನಿಮ್ಮಲ್ಲಿ ಸದಾ ಸೋನೆಮಳೆಯ ರೀತಿ ಸುರಿಯುತ್ತಿರಲಿ ಎನ್ನುವುದೇ ನಮ್ಮ ಹಾರೈಕೆ" ಎಂದು ಗೆಳೆಯ ಆನಂದ್ ಹೇಳುತ್ತಾ ಅಕ್ಷತೆ ಹಾಕುತ್ತಾನೆ. "ಏನೂ ಎಲ್ಲರೂ ನೋಡುತ್ತಿದ್ದೀರಿ. ಹಾಕಿ ಅಕ್ಷತೆ" ಅನ್ನುತ್ತಾನೆ. ಎಲ್ಲರೂ ಅಕ್ಷತೆ ಹಾಕುತ್ತಾರೆ. ಖುಷಿಯ ವಾತಾವರಣ ಕಾಣಿಸುತ್ತದೆ. ಗೌತಮ್ ಮತ್ತು ಭೂಮಿಕಾ ಪ್ರೀತಿಯಿಂದ ತಬ್ಬಿಕೊಳ್ಳುತ್ತಾರೆ.
ಈ ಸಂದರ್ಭದಲ್ಲಿ ಹಿನ್ನೆಲೆಯಲ್ಲಿ "ಉಸಿರಿಗೇ ಉಸಿರಾದೆ ನೀ.. ಬೆಳಕೇ ಮೂಡಿತು ಇನಿತು.. ಇನಿತು.. ಮೋಹದ ಕಿಡಿ ತಾಕಿದೆ, ಈ ಕನಸೇ ಈಗ ಹೊಸತು.. ಹೊಸತು... ಒಲುಮೆ ಬೆಳಕಲೇ.. ಒಂದಾಗಿ ಸಾಗುವೇ... ಕಣ್ಣಾ.. ರೆಪ್ಪೆಯಾಗಿ ಕನಸಲ್ಲೂ, ಕಾಯುವೇ..ಏ.ಏ ಒಲವ ಅಮೃತಧಾರೆ... ನನ್ನೊಲವ ಅಮೃತಧಾರೆ... ಒಲವ ಅಮೃತಧಾರೆ...ನನ್ನೊಲವ ಅಮೃತಧಾರೆ... ಹಾಡು ಕೇಳಿಸುತ್ತದೆ.
"ಅದಕ್ಕೆ ಹೇಳೋದು, ದೇವರೊಬ್ಬನಿದ್ದಾನೆ. ಅವನು ಯಾವತ್ತೂ ಯಾರ ಕೈಬಿಡೋದಿಲ್ಲ ಅಂತ. ದೇವರೇ, ಇವತ್ತು ನೀನು ಮತ್ತೆ ಇದ್ದಿ ಅಂತ ಪ್ರೂವ್ ಮಾಡಿದೆ. ಥ್ಯಾಂಕ್ಸ್ ಕನಪ್ಪ" ಎಂದು ದೂರದಿಂದಲೇ ದೇವರಿಗೆ ಥ್ಯಾಂಕ್ಸ್ ಹೇಳುತ್ತಾನೆ. "ನಿಜಕಣೋ ಆಪ್ತಮಿತ್ರ, ಇದು ದೇವರ ದಯೆ ಅಲ್ಲದೆ, ಬೇರೆ ಏನೂ ಅಲ್ಲ. ದೇವರು ಅವರಿಬ್ಬರನ್ನು ಒಂದು ಮಾಡಿಬಿಟ್ಟ. ಇನ್ನು ಮುಂದೆ ಯಾವುದೇ ಸಮಸ್ಯೆ ಬಾರದೆ ಜೀವನ ನಡೆದುಕೊಂಡು ಹೋಗಲಿ" ಎಂದು ಅಜ್ಜಿ ಹೇಳುತ್ತಾರೆ. "ಇನ್ನು ನಡೆದುಕೊಂಡು ಹೋಗೋದಲ್ಲ, ಓಡಿಕೊಂಡು ಹೋಗುತ್ತದೆ" ಎಂದು ಆನಂದ್ ಹೇಳುತ್ತಾರೆ.
ಈ ಸಮಯದಲ್ಲಿ ಭೂಮಿಕಾ ತಲೆತಿರುಗಿ ಬೀಳುವಂತೆ ವಾಲುತ್ತಾರೆ. ಖುಷಿಯಲ್ಲಿದ್ದ ವಾತಾವರಣದಲ್ಲಿ ಆತಂಕ ಕಾಣಿಸುತ್ತದೆ. "ಯಾರೂ ಟೆನ್ಷನ್ ಮಾಡಿಕೊಳ್ಳಬೇಡಿ. ನನ್ನಮ್ಮ ಡಾಕ್ಟರ್ ಎಂದು ಮಧುರಾ ಹೇಳುತ್ತಾಳೆ. "ಅಮ್ಮ ಚೆಕ್ ಮಾಡು" ಎಂದು ಮಧುರಾ ಹೇಳಿದಾಗ ಆಕೆಯ ತಾಯಿ ಪರೀಕ್ಷಿಸುತ್ತಾರೆ. ಶಕುಂತಲಾದೇವಿ, ಲಕ್ಷ್ಮಿಕಾಂತ್, ಜೈದೇವ್ ಆತಂಕದಿಂದ ನೋಡುತ್ತಾರೆ. "ಕಂಗ್ರಾಟ್ಸ್ ಅಪ್ಪಾ ಆಗ್ತಾ ಇದ್ದೀರ ನೀವು" ಎಂದು ಡಾಕ್ಟರ್ ಹೇಳುತ್ತಾರೆ. ಎಲ್ಲರ ಮುಖದಲ್ಲಿಯೂ ಆತಂಕ, ಖುಷಿ ಕಾಣಿಸುತ್ತದೆ. "ಇಲ್ಲ, ಇನ್ನೊಂದು ಬಾರಿ ಚೆಕ್ ಮಾಡಿ" ಎಂದು ಭೂಮಿಕಾ ಹೇಳುತ್ತಾಳೆ. ಡಾಕ್ಟರ್ ಕಿವಿಯಲ್ಲಿ ಏನೋ ಹೇಳುತ್ತಾರೆ. ಒಂದಿಷ್ಟು ಮಾತು ಹೇಳುತ್ತಾರೆ. "ಮತ್ತೆ ಇನ್ಯಾಕೆ ಅನುಮಾನ, ಹಂಡ್ರೆಡ್ ಪರ್ಸೆಂಟ್ ನೀನು ತಾಯಿಯಾಗ್ತ ಇದ್ದೀ" ಎಂದು ಹೇಳುತ್ತಾರೆ.
ಆನಂದ್ ಖುಷಿಯಿಂದ ಸಿಳ್ಳೆ ಹೊಡೆಯುತ್ತಾನೆ. ಗೌತಮ್ ಟೀಮ್‌ನ ಖುಷಿ ಹೇಳತೀರದು. ಗೌತಮ್ ಖುಷಿಯೋ, ಅನುಮಾನವೋ.. ಆತಂಕವೋ, ಕಾಣಿಸುತ್ತದೆ. ಬಳಿಕ ಖುಷಿಯಿಂದ ಅಪ್ಪಿಕೊಳ್ಳುತ್ತಾನೆ. "ಅಪ್ಪ ಅಮ್ಮ ದೂರ ಆಗ್ತಾ ಇದ್ದಾರೆ ಅಂತ ನಾನು ಬರ್ತಾ ಇದ್ದೀನಿ ಅಂತ ಮಗು ಎಚ್ಚರಿಕೆ ನೀಡ್ತಾ ಇದೆ" ಎಂದು ಅಜ್ಜಿ ಡೈಲಾಗ್ ಹೊಡೆಯುತ್ತಾರೆ.
ಅಮೃತಧಾರೆ ಧಾರಾವಾಹಿ ಮುಗಿಯುತ್ತಾ?
ಹೀಗೆ, ಅಮೃತಧಾರೆ ಧಾರಾವಾಹಿಯಲ್ಲಿ ಅತ್ಯಂತ ಸಂಭ್ರಮ ಕಾಣಿಸಿಕೊಂಡಿದೆ. ಇನ್ನು ಏನಿದ್ದರೂ ವಿಲನ್‌ಗಳಿಗೆ ಶಿಕ್ಷೆಯಾಗುವುದಷ್ಟೇ ಬಾಕಿ ಉಳಿದಿರುವುದು. ಅಂದಹಾಗೆ ಅಮೃತಧಾರೆ ಧಾರಾವಾಹಿ ಸದ್ಯದಲ್ಲಿಯೇ ಮುಗಿಯಬಹುದೇ? ಕರ್ಣ ಸೀರಿಯಲ್‌ಗೆ ಈ ಸೀರಿಯಲ್ ದಾರಿ ಮಾಡಿಕೊಡಬಹುದೇ? ಎಂದೆಲ್ಲ ವೀಕ್ಷಕರು ಸೋಷಿಯಲ್ ಮೀಡಿಯಾಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. "ಶಕುಂತಲಾ ಆಟ ಬೇಗ ಮುಗಿಯದು, ಇನ್ನಷ್ಟು ದಿನಗಳ ಕಾಲ ಸೀರಿಯಲ್ ಮುಂದುವರೆಯಬಹುದು. ಇದರಲ್ಲಿ ಬೆಳಸಲು ಬೇಕಾದಷ್ಟು ಕಥೆಗಳಿವೆ" ಎಂದು ಇನ್ನು ಕೆಲವು ಪ್ರೇಕ್ಷಕರು ಅಂದಾಜಿಸಿದ್ದಾರೆ.

ವಿಭಾಗ