Amruthadhaare Serial: ಮನೆಯಲ್ಲಿರುವ ಇನ್‌ಫಾರ್ಮರ್ ಸುಧಾ ಎಂಬ ಸಂಗತಿ ಶಕುಂತಲಾ ಗ್ಯಾಂಗ್‌ಗೆ ಗೊತ್ತಾಯ್ತು, ಭೂಪತಿ ಬಲೆಯಲ್ಲಿ ಸುಧಾ ವಿಲವಿಲ
Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸುಧಾ ಇನ್‌ಫಾರ್ಮರ್ ಎಂಬ ಸಂಗತಿಯನ್ನು ಜೈದೇವ್ ಖುದ್ದಾಗಿ ತಿಳಿದುಕೊಳ್ಳುತ್ತಾನೆ. ಸಾಕ್ಷಿ ಸಮೇತ ಈ ವಿಚಾರವನ್ನು ಶಕುಂತಲಾಗೆ ತಿಳಿಸುತ್ತಾನೆ.
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಕೆಲವೊಂದು ಬೆಳವಣಿಗೆಗಳು ನಡೆದಿವೆ. ಸುಧಾಳ ವಿರುದ್ಧ ಹಲವು ಘಟನೆಗಳು ನಡೆದಿವೆ. ಬನ್ನಿ ನಿನ್ನೆಯ ಸೀರಿಯಲ್ ಕಥೆಯಲ್ಲಿ ಏನೆಲ್ಲ ಆಯ್ತು ತಿಳಿದುಕೊಳ್ಳೋಣ. ಗೌತಮ್ ಮತ್ತು ಭೂಮಿಕಾ ಮಾತನಾಡುತ್ತಿದ್ದಾರೆ. ಟೆಂಡರ್ ಕೈತಪ್ಪಿ ಹೋಗಿರುವ ಕುರಿತು ಗೌತಮ್‌ಗೆ ಚಿಂತೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪಾರ್ಥ ಮತ್ತು ಜೈದೇವ್‌ನ ಪ್ರಶ್ನಿಸಬಾರದಿತ್ತು ಎನ್ನುತ್ತಾನೆ. ಇನ್ನೊಂದೆಡೆ ಅಪೇಕ್ಷಾ ಮತ್ತು ಪಾರ್ಥ ಮಾತನಾಡುತ್ತಿದ್ದಾರೆ. ‘ನೀವು ಈ ಕಂಪನಿಯ ಪಾಲುದಾರ. ನಿಮಗೂ ಅಷ್ಟೇ ಹಕ್ಕು ಇದೆ‘ ಎಂದು ಅಪೇಕ್ಷಾ ಹೇಳುತ್ತಾಳೆ. ‘ನಮ್ಮ ಅಣ್ಣ ತಮ್ಮಂದಿರ ನಡುವೆ ಈ ವಿಷಯ ತರಬೇಡಿ. ಇದನ್ನು ಕೊಶ್ಚನ್ ಮಾಡುವ ಅಗತ್ಯವಿಲ್ಲ‘ ಎಂದು ಪಾರ್ಥ ಹೇಳುತ್ತಾನೆ. ಈ ವಿಷಯದಲ್ಲಿ ಇಬ್ಬರ ನಡುವೆ ಚರ್ಚೆ ಜಗಳ ನಡೆಯುತ್ತದೆ.
ಜೈದೇವ್ ರಾತ್ರಿ ಹೊತ್ತಲ್ಲಿ ಭೂಪತಿಗೆ ಕಾಲ್ ಮಾಡುತ್ತಾನೆ. ‘ಈ ಮನೆಯಲ್ಲೇ ನನಗೆ ಅವಮಾನವಾಗಿದೆ. ನನ್ನ ಇಮೇಜ್ ಮತ್ತೆ ಬದಲಾಗಬೇಕು. ಯಾವುದಾದರೂ ದೊಡ್ಡ ಕೆಲಸ ಮಾಡಬೇಕು‘ ಎಂದು ಜೈದೇವ್ ಹೇಳುತ್ತಾನೆ. ‘ಅದಕ್ಕೆ ನಾನು ಏನು ಸಹಾಯ ಮಾಡಬೇಕು‘ ಎಂದು ಭೂಪತಿ ಕೇಳುತ್ತಾನೆ. ‘ನಮ್ಮ ಮನೆಯಲ್ಲಿ ನಿಮ್ಮ ಇನ್‌ಫಾರ್ಮರ್ ಇದ್ದಾರೆ ಎಂದು ಹೇಳಿದ್ರಲ್ಲ. ಅವರು ಯಾರು ಎಂದು ನನಗೆ ಹೇಳಬೇಕು. ಆ ಇನ್‌ಫಾರ್ಮರ್ ಯಾರು ಎಂದು ನಾನು ಮನೆಯವರಿಗೆ ತಿಳಿಸಿದ್ರೆ ನನ್ನ ಮೇಲೆ ಎಲ್ಲರಿಗೂ ನಂಬಿಕೆ ವಾಪಸ್ ಬರುತ್ತದೆ‘ ಎಂದು ಜೈದೇವ್ ಹೇಳುತ್ತಾನೆ. ‘ನಿಮಗೆ ನನ್ನಿಂದ ಲಾಭನಾ? ಅವರಿಂದ ಲಾಭನಾ? ನಮಗೆ ಹಬ್ಬ ಮಾಡಬೇಕು ಎಂದರೆ ಕುರಿಗಳನ್ನು ಸಾಯಿಸಲೇಬೇಕಾಗುತ್ತದೆ. ಅಯ್ಯೋ ಪಾಪ ಕುರಿ ಎಂದುಕೊಂಡರೆ ಹಬ್ಬ ಮಾಡಲಾಗದು. ಯೋಚನೆ ಮಾಡಿ, ಹಬ್ಬ ಮಾಡ್ತೀರ, ಕುರಿ ಉಳಿಸ್ಕೋತ್ತೀರ‘ ಎನ್ನುತ್ತಾನೆ.
‘ಮಾಡೋದೆಲ್ಲ ಹಲ್ಕಾ ಕೆಲಸ. ಹೀಗಾಗಿ, ಪಾಪ ಪುಣ್ಯದ ಬಗ್ಗೆ ಯೋಚನೆ ಮಾಡಬಾರದು. ಅವರು ಯಾರು ಎಂದು ಹೇಳುವುದಿಲ್ಲ. ಡೈರೆಕ್ಟಾಗಿ ತೋರಿಸ್ತೀನಿ. ಬೆಳಗ್ಗೆ ಮನೆಯ ಹತ್ತಿರ ಬನ್ನಿ, ಕಣ್ಣಾರೆ ನೋಡುವಿರಂತೆ‘ ಎಂದು ಹೇಳುತ್ತಾನೆ ಭೂಪತಿ.
ಸುಧಾಳಿಗೆ ಭೂಪತಿ ಕಾಲ್ ಮಾಡುತ್ತಾನೆ. ‘ನನಗೆ ಯಾಕೆ ಕಾಲ್ ಮಾಡಿದ್ರಿ. ನಾನು ಇನ್ನು ಸಹಾಯ ಮಾಡೋದಿಲ್ಲ. ಗೌತಮ್ ಅಣ್ಣನಿಗೆ ಮೋಸ ಮಾಡೋದಿಲ್ಲ‘ ಎಂದು ಸುಧಾ ಹೇಳುತ್ತಾಳೆ. ‘ನಾನು ನಿನಗೆ ಥ್ಯಾಂಕ್ಸ್ ಹೇಳೋಣ ಅಂತ ಕಾಲ್ ಮಾಡಿದೆ. ನೀನು ಮಾಡಿದ ಸಹಾಯದಿಂದ ನನಗೆ ದೊಡ್ಡ ಲಾಭವಾಗಿದೆ. ನೀನು ನನ್ನ ವಿರುದ್ಧ ತಿರುಗಿ ಬಿದ್ದರೂ ನಾನು ಅದಕ್ಕೆ ಸುಮ್ಮನಿದ್ದೇನೆ. ಒಮ್ಮೆ ನೀನು ನನ್ನ ಮನೆಯತ್ರ ಬಂದು ಹೋಗು' ಎನ್ನುತ್ತಾನೆ. ‘ನನ್ನ ಹತ್ತಿರ ಮಾತನಾಡಲು ಏನಿದೆ’ ಎಂದು ಸುಧಾ ಕೇಳುತ್ತಾಳೆ. ‘ನಾನು ನಿನ್ನ ಅಮ್ಮನ ಆಪರೇಷನ್‌ಗೆ ಹಣ ಸಹಾಯ ಮಾಡುತ್ತೇನೆ. ನಿನಗೆ ದುಡ್ಡಿನ ಅವಶ್ಯಕತೆ ತುಂಬಾ ಇದೆ. ಬಂದು ಹಣ ತೆಗೆದುಕೊಂಡು ಹೋಗು. ನಿನ್ನ ತಾಯಿಯ ವಿಷಯದಲ್ಲಿ ನನಗೆ ಅನುಕಂಪ ಇದೆ. ಅದನ್ನು ತೆಗೆದುಕೊಂಡು ಹೋಗುವ ತನಕ ಬಿಡೋದಿಲ್ಲ. ನೀನೇ ಇಲ್ಲಿಗೆ ಬಂದಿಲ್ಲದ್ರೆ ನಾನೇ ಬರ್ತಿನಿ’ಎಂದು ಹೇಳುತ್ತಾನೆ. ‘ಇಲ್ಲ ನಾನೇ ಬರ್ತಿನಿ’ ಎಂದು ಸುಧಾ ಹೇಳುತ್ತಾಳೆ. ಫೋನ್ ಇಟ್ಟ ಮೇಲೆ ‘ಇನ್ಮುಂದೆ ಗೌತಮ್ ಅಣ್ಣ ನಿನ್ನನ್ನು ಹೇಗೆ ನೋಡ್ತಿನಿ’ ಎಂದು ಭೂಪತಿಯ ಸ್ವಗತ ಇರುತ್ತದೆ.
ಸುಧಾಳ ಬಗ್ಗೆ ತಿಳಿದುಕೊಂಡ ಜೈದೇವ್
ಭೂಪತಿಯ ಮನೆಯಲ್ಲಿ ಜೈದೇವ್ ಕಾಯುತ್ತಿದ್ದಾನೆ. ನನ್ನ ಮನೆಯಲ್ಲಿರುವ ಇನ್‌ಫಾರ್ಮರ್ ಯಾರು ಎಂಬ ಕುತೂಹಲ ಆತನಿಗೆ. ಆತನನ್ನು ಮರೆಯಲ್ಲಿ ಅಡಗಿಕೊಳ್ಳುವಂತೆ ಭೂಪತಿ ಹೇಳುತ್ತಾನೆ. ಮನೆಗೆ ಸುಧಾ ಬರುತ್ತಾಳೆ. ಅಯ್ಯೋ ಇವಳ ಎಂದು ಜೈದೇವ್‌ಗೆ ಅಚ್ಚರಿಯಾಗುತ್ತದೆ. 'ಮಳ್ಳಿ ತರಹ ಇದ್ದುಕೊಂಡು ಕಳ್ಳಿ ಕೆಲಸ ಮಾಡ್ತಾ ಇದ್ದೀಯ‘ ಎಂದು ಜೈದೇವ್‌ನ ಸ್ವಗತ ಇರುತ್ತದೆ. ಯಾವುದಕ್ಕೂ ಪ್ರೂಫ್‌ಗೆ ಫೋಟೋ ತೆಗೆದುಕೊಳ್ಳೋಣ ಎಂದುಕೊಳ್ಳುತ್ತಾನೆ. ಭೂಪತಿಯು ಬಲವಂತವಾಗಿ ಆಕೆಗೆ ಹಣ ನೀಡುತ್ತಾನೆ. ಆಕೆಯ ಕೈಯಲ್ಲಿ ಹಣ ಇರುವಾಗ ಆ ಫೋಟೋವನ್ನು ಜೈದೇವ್ ತೆಗೆದುಕೊಳ್ಳುತ್ತಾನೆ. ತನ್ನ ಕೈಗಿಟ್ಟ ಹಣವನ್ನು ವಾಪಸ್ ನೀಡುತ್ತಾಳೆ. ಜೈದೇವ್‌ಗೆ ಖುಷಿಯಾಗುತ್ತದೆ. ಎಂತಹ ಒಳ್ಳೆಯ ಎವಿಡೆನ್ಸ್ ಸಿಗ್ತು ಎಂದು ಖುಷಿ ಪಡುತ್ತಾನೆ.
ಶಕುಂತಲಾ ಟೆನ್ಷನ್‌ನಲ್ಲಿದ್ದಾರೆ. ಸುಧಾಳನ್ನು ಮನೆಯಿಂದ ಹೇಗೆ ಓಡಿಸುವುದು ಎಂಬ ಚಿಂತೆಯಲ್ಲಿ ಇದ್ದಾರೆ. ಆಗ ಜೈದೇವ್ ಕಾಲ್ ಮಾಡುತ್ತಾನೆ. ‘ನಮ್ಮ ಮನೆಯಲ್ಲಿರುವ ಇನ್‌ಫಾರ್ಮರ್ ಯಾರು ಎಂದು ಗೊತ್ತಾಯ್ತು. ಅದು ಬೇರೆ ಯಾರೂ ಅಲ್ಲ, ಸುಧಾ‘ ಎನ್ನುತ್ತಾನೆ. ಇದಕ್ಕೆ ಸಾಕ್ಷಿ ಎಂದು ಫೋಟೋವನ್ನೂ ಕಳುಹಿಸುತ್ತಾನೆ. ‘ಜೈದೇವ್ ವೆಲ್‌ಡನ್, ತುಂಬಾ ಒಳ್ಳೆಯ ಕೆಲಸ ಮಾಡಿದ್ದಿ‘ ಎಂದು ಹೊಗಳುತ್ತಾರೆ ಶಕುಂತಲಾ. ‘ಫೌಂಡೇಷನ್ ಹಾಕಿದ್ದೇನೆ, ಅದರ ಮೇಲೆ ಬಿಲ್ಡಿಂಗ್ ಕಟ್ಟುವ ಕೆಲಸ ಮಾಡು‘ ಎನ್ನುತ್ತಾನೆ. ‘ಇನ್ನು ಗೌತಮ್ ಅವಳ ಮುಖ ಯಾವತ್ತೂ ನೋಡಬಾರದು‘ ಎಂದು ಶಕುಂತಲಾ ಹೇಳುತ್ತಾಳೆ. ಹೀಗೆ ಅಮೃತಧಾರೆ ಧಾರಾವಾಹಿಯಲ್ಲಿ ಪರಿಸ್ಥಿತಿ ಸುಧಾಳ ವಿರುದ್ಧ ತಿರುಗಿದೆ. ಸೀರಿಯಲ್ ಮುಂದುವರೆದಿದೆ.
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
ವಿಭಾಗ