ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರಧಾರಿ ಬದಲಾಗುವ ಸಾಧ್ಯತೆ; ವೀಕ್ಷಕರಲ್ಲಿ ಹೀಗೊಂದು ಸಂಶಯ, ಅಸಲಿ ಕಾರಣ ಇಲ್ಲಿದೆ
ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಪಾತ್ರದಾರಿ ಬದಲಾಗಿದ್ದಾನೆ. ಮಹಿಮಾ ಪಾತ್ರದಾರಿಯೂ ಬದಲಾಗಿ ಆಗಿದೆ. ಇನ್ನೀಗ ಮಲ್ಲಿ ಪಾತ್ರದಾರಿ ರಾಧಾ ಭಗವತಿ ಅವರನ್ನೂ ಸೀರಿಯಲ್ ತಂಡ ಬದಲಾಯಿಸುತ್ತ? ವೀಕ್ಷಕರಲ್ಲಿ ಇಂತಹ ಒಂದು ಅನುಮಾನ ಹುಟ್ಟಲು ಕಾರಣವೇನೆಂದು ತಿಳಿಯೋಣ.

ಅಮೃತಧಾರೆ ಧಾರಾವಾಹಿ ಹೊಸ ತಿರುವುಗಳನ್ನು, ಹೊಸ ಅಧ್ಯಾಯಗಳನ್ನು ಸೇರಿಸಿಕೊಂಡು ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ದಿನಕಳೆದಂತೆ ಈ ಸೀರಿಯಲ್‌ನ ಚಿತ್ರಣವೇ ಬದಲಾಗುತ್ತ ಇರುವುದು ಪ್ರೇಕ್ಷಕರ ಗಮನಕ್ಕೆ ಬಂದಿದೆ. ಹೊಸ ಪಾತ್ರದಾರಿಗಳ ಎಂಟ್ರಿ, ಕಥೆ ಹೊಸ ದಿಕ್ಕಿನತ್ತ ಸಾಗುವ ಸೂಚನೆಗಳು ಇವೆ. ಇದೀಗ ಅಕ್ಕೋರೆ ಅಕ್ಕೋರೆ ಎಂದು ಮುದ್ದಾಗಿ ನಟಿಸುತ್ತಿದ್ದ ರಾಧಾ ಭಗವತಿ ಈ ಸೀರಿಯಲ್ ಬಿಡಲಿದ್ದಾರೆಯೇ ಎಂಬ ಅನುಮಾನವೊಂದು ವೀಕ್ಷಕರ ಮನದಲ್ಲಿ ಮೂಡಿದೆ. ಇಂತಹ ಅನುಮಾನ ಹುಟ್ಟಲು ಏನು ಕಾರಣ ಎನ್ನುವಿರಾ?
ಮಲ್ಲಿ ಪಾತ್ರದಲ್ಲಿ ರಾಧಾ ಭಗವತಿ
ರಾಧಾ ಭಗವತಿ ಎಂಬ ಸುಂದರ ನಟಿ, ಗಾಯಕಿ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯಾಗಿ ನಟಿಸುತ್ತಿದ್ದಾರೆ. ಆರಂಭದಲ್ಲಿ ಮನೆ ಕೆಲಸದಾಕೆಯ ಪಾತ್ರವಿತ್ತು. ರಾಧಾ ಭಗವತಿ ಮೂಲತಃ ಬಿಜಾಪುರದವರು. ಇವರು ಸ್ಯಾಂಡಲ್‌ವುಡ್ ನಟಿಯೂ ಹೌದು. ಅಪಾಯವಿದೆ ಎಚ್ಚರಿಕೆ, ವಸಂತ ಕಾಲದ ಹೂಗಳು ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಎಸ್ ನಾರಾಯಣ್ ನಿರ್ದೇಶನದ ಒಂದ್ಸಲ ಮೀಟ್ ಮಾಡೋಣ ಸಿನಿಮಾದಲ್ಲಿ ನಾಯಕಿಯ ತಂಗಿಯಾಗಿ ನಟಿಸಿದ್ದಾರೆ. ಅಮೃತಧಾರೆಯಲ್ಲಿ ಮನೆಕೆಲಸದಾಕೆಯಾಗಿದ್ದ ಮಲ್ಲಿ ನಿಜಜೀವನದಲ್ಲಿ ಸ್ಯಾಂಡಲ್‌ವುಡ್ ನಟಿ ಮಾತ್ರವಲ್ಲ, ಇವರು ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಎರಡು ಸಿನಿಮಾಗಳಲ್ಲಿ ಇವರು ಹಾಡಿದ್ದಾರೆ. ಮದುಮಗಳು ಸೀರಿಯಲ್‌ನಲ್ಲಿ ನಾಯಕಿಯ ಪಾತ್ರಕ್ಕೆ ಇವರು ಧ್ವನಿಯಾಗಿದ್ದಾರೆ.
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯಾಗಿ ಇವರು ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ತಾತಾನ ಜತೆ ಕ್ವಾಟ್ರಸ್‌ನಲ್ಲಿದ್ದ ಇವಳ ಮೇಲೆ ಕೇಡಿ ಜೈದೇವ್ ಕಣ್ಣು ಬಿದ್ದಿತ್ತು. ಪ್ರೀತಿಯ ನಾಟಕವಾಡಿದ್ದ ಜೈದೇವ್‌ನಿಂದ ಈಕೆ ಬಸುರಿಯಾಗಿದ್ದಳು. ಮಲ್ಲಿ ಬಸುರಿಯಾದ ಬಳಿಕ ಜೈದೇವ್ ಅಪೇಕ್ಷಾಳನ್ನು ಮದುವೆಯಾಗಲು ಮುಂದಾಗಿದ್ದ. ಈ ಸಮಯದಲ್ಲಿ ಭೂಮಿಕಾ ಮಧ್ಯಪ್ರವೇಶಿಸಿದ ಕಾರಣ ಮಲ್ಲಿಗೂ ಜೈದೇವ್‌ಗೂ ಮದುವೆಯಾಗಿತ್ತು. ಮನೆಯಲ್ಲಿ ಈಕೆಯನ್ನು ಕೊಲ್ಲುವ ಪ್ರಯತ್ನವನ್ನು ಜೈದೇವ್ ಮತ್ತು ಶಕುಂತಲಾದೇವಿ ಮಾಡುತ್ತಿದ್ದರೂ ಅದು ಸಫಲವಾಗಿಲ್ಲ. ಈಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಜೈದೇವ್‌ಗೆ ದಿಯಾ ಎಂಬ ಯುವತಿಯ ಜತೆ ಅಕ್ರಮ ಸಂಬಂಧವೂ ಇದೆ.
ಮಲ್ಲಿ ಪಾತ್ರ ಬದಲಾಗುತ್ತ?
ಇತ್ತೀಚೆಗೆ ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಭೂಮಿಕಾ ಮಲ್ಲಿ ಜತೆ ಫೋನ್‌ನಲ್ಲಿ ಮಾತನಾಡುತ್ತ ಇದ್ದಾರೆ. ಅಜ್ಜನ ಜತೆ ಸ್ವಲ್ಪ ದಿನ ಆರಾಮವಾಗಿರು, ಇಲ್ಲಿನ ಕುರಿತು ಏನೂ ಚಿಂತೆ ಮಾಡಬೇಡ ಎಂದು ಮಾತನಾಡುತ್ತ ಇದ್ದಾರೆ. ಈ ಪ್ರೊಮೊಗೆ ಸಾಕಷ್ಟು ಪ್ರೇಕ್ಷಕರು ಮಲ್ಲಿ ಪಾತ್ರವನ್ನೂ ಬದಲಾಯಿಸಬಹುದು ಎಂಬ ಅನುಮಾನದ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಯಾರಾದರೂ ನಟ ಅಥವಾ ನಟಿಯನ್ನು ಒಂದಿಷ್ಟು ದಿನ ಹೊರಗೆ ಇಡುವ ಪ್ರಯತ್ನ ಇದಾಗಿರಬಹುದು ಎನ್ನುವುದು ವೀಕ್ಷಕರ ಅಭಿಪ್ರಾಯ. ಈಗಾಗಲೇ ಮಹಿಮಾ, ಜೀವನ್ ಮುಂತಾದವರು ಒಂದಿಷ್ಟು ದಿನ ಅಮೃತಧಾರೆಯಲ್ಲಿ ಕಾಣೆಯಾಗಿದ್ದರು. ಈಗ ಅವರ ಪಾತ್ರ ವಾಪಸ್ ಬಂದಿದ್ದಾರೆ. ಆದರೆ, ಇವರಿಬ್ಬರ ಪಾತ್ರದಾರಿಗಳು ಬದಲಾಗಿದ್ದಾರೆ.
ಅಪಾಯವಿದೆ ಎಚ್ಚರಿಕೆ ಕಾರಣವೇ?
ಮಲ್ಲಿ ಪಾತ್ರದಾರಿ ರಾಧಾ ಭಗವತಿ ಸದ್ಯ ಅಜ್ಜನ ಮನೆಗೆ ಹೋಗಲು ಕಾರಣ "ಅಪಾಯವಿದೆ ಎಚ್ಚರಿಕೆ" ಸಿನಿಮಾ ಎನ್ನಬಹುದು. ರಾಧಾ ಭಗವತಿ ನಟಿಸಿರುವ ಅಪಾಯವಿದೆ ಎಚ್ಚರಿಕೆ ಸಿನಿಮಾ ಇದೇ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮೋಷನ್ ಮತ್ತು ಇತರೆ ಕೆಲಸಗಳಿಗೆ ರಾಧಾ ಭಗವತಿ ಅವರು ಸಮಯ ನೀಡಬೇಕಾಗುತ್ತದೆ. ಈ ಸಿನಿಮಾದ ಪ್ರಮೋಷನ್ ಕೆಲಸಗಳನ್ನು ಮಾಡಬೇಕು. ಮೂಲಗಳ ಪ್ರಕಾರ ಇದೇ ಅಸಲಿ ಕಾರಣ. ಹೀಗಾಗಿ, ಮಲ್ಲಿ ಕೆಲವು ದಿನಗಳು ಅಥವಾ ಒಂದೆರಡು ತಿಂಗಳು ಅಮೃತಧಾರೆ ಧಾರಾವಾಹಿಯಿಂದ ದೂರ ಇರುವ ಸೂಚನೆ ಇದೆ. ಬಳಿಕ ಅವರು ಸೀರಿಯಲ್‌ಗೆ ವಾಪಸ್ ಬರಬಹುದು.

ವಿಭಾಗ