Kannada New Serial: ಮುದ್ದು ಸೊಸೆ ಧಾರಾವಾಹಿಗೆ ಕಾಯುತ್ತಿದ್ದವರಿಗೆ ಶುಭಸುದ್ದಿ ನೀಡಿದ ಕಲರ್ಸ್ ಕನ್ನಡ; ತ್ರಿವಿಕ್ರಮ್ ನಟನೆಯ ಸೀರಿಯಲ್
Muddusose Kannada Serial: ಕಲರ್ಸ್ ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಮುಕ್ತಾಯದೊಂದಿಗೆ ಹೊಸ ಸೀರಿಯಲ್ ಆರಂಭವಾಗುತ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ಆಗಿದ್ದ ನಟ ತ್ರಿವಿಕ್ರಮ್ ನಟನೆಯ ಮುದ್ದುಸೊಸೆ ಸೀರಿಯಲ್ ಇದೇ ಏಪ್ರಿಲ್ 14ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

Muddusose Kannada Serial: ಕಲರ್ಸ್ ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಮುಕ್ತಾಯದೊಂದಿಗೆ ಹೊಸ ಸೀರಿಯಲ್ ಆರಂಭವಾಗುತ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ಆಗಿದ್ದ ನಟ ತ್ರಿವಿಕ್ರಮ್ ನಟನೆಯ ಮುದ್ದುಸೊಸೆ ಸೀರಿಯಲ್ ಇದೇ ಏಪ್ರಿಲ್ 14ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯು ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಮುದ್ದುಸೊಸೆಯ ಪ್ರೊಮೊ ಬಿಡುಗಡೆ ಮಾಡಿದೆ. ಅಪ್ರಾಪ್ತೆ ಯುವತಿಯೊಬ್ಬಳನ್ನು ಮದುವೆಯಾಗುವ ನಾಯಕ ಮತ್ತು ಇತರೆ ಅನೇಕ ಕೌಟುಂಬಿಕ, ಸಾಮಾಜಿಕ ಅಂಶಗಳನ್ನು ಈ ಸೀರಿಯಲ್ ಹೊಂದಿದೆ ಎಂದು ಪ್ರೊಮೊದ ಮೂಲಕ ಬಹಿರಂಗಪಡಿಸಲಾಗಿದೆ.
ಮುದ್ದುಸೊಸೆ ಪ್ರಸಾರ ದಿನಾಂಕ ಪ್ರಕಟ
ಮುದ್ದುಸೊಸೆ ಎಂಬ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ ಎಂಬ ಮಾಹಿತಿಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಈ ಹಿಂದೆಯೇ ಪ್ರಕಟಿಸಿತ್ತು. ಆದರೆ, ಈ ಸೀರಿಯಲ್ ಪ್ರಸಾರ ಆರಂಭವಾಗುವ ದಿನಾಂಕ ಯಾವಾಗ ಎಂಬ ಮಾಹಿತಿ ಆಗ ಲಭ್ಯವಿರಲಿಲ್ಲ. ಈಗ ಕಲರ್ಸ್ ಕನ್ನಡವು ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಮೂಲಕ ಮುದ್ದುಸೊಸೆ ಸೀರಿಯಲ್ ಪ್ರಸಾರ ದಿನಾಂಕದ ಕುರಿತು ಇದ್ದ ಕುತೂಹಲಕ್ಕೆ ತೆರೆಬಿದ್ದಿದೆ. ತ್ರಿವಿಕ್ರಮ್‌ಮತ್ತು ಪ್ರತಿಮಾ ನಟನೆಯ ಮುದ್ದುಸೊಸೆ ಸೀರಿಯಲ್ ಇದೇ ಏಪ್ರಿಲ್ 14ರಿಂದ ಆರಂಭವಾಗಲಿದೆ. ಕಲರ್ಸ್ ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಅಂದರೆ ರಾತ್ರಿ 7.30 ಗಂಟೆಗೆ ಈ ಸೀರಿಯಲ್ ಪ್ರಸಾರವಾಗಿದೆ.
ಈ ಹಿಂದೆ ತ್ರಿವಿಕ್ರಮ್ ಪದ್ಮಾವತಿ ಸೀರಿಯಲ್‌ನಲ್ಲಿ ನಟಿಸಿದ್ದರು. ಅಂತರಪಟ, ದೊರೆಸಾನಿ ಸೀರಿಯಲ್‌ಗಳಲ್ಲಿ ಪ್ರತಿಮಾ ನಟಿಸಿದ್ದರು. ಈಗ ಮುದ್ದುಸೊಸೆಯಾಗಿ ಆಗಮಿಸಲಿದ್ದಾರೆ. ಪ್ರತಿಮಾ ಅಮ್ಮನ ಪಾತ್ರದಲ್ಲಿ ಹರಿಣಿ ಶ್ರೀಕಾಂತ್ ನಟಿಸುತ್ತಿದ್ದಾರೆ. ನಟಿ ಮೇಘಾ ಶೆಟ್ಟಿ ಈ ಮುದ್ದುಸೊಸೆ ಸೀರಿಯಲ್ ನಿರ್ಮಾಣ ಮಾಡುತ್ತಿದ್ದಾರೆ. ಈಕೆ ಈ ಹಿಂದೆ ಗೌರಿಶಂಕರ, ಕೆಂಡಸಂಪಿಗೆ ಸೀರಿಯಲ್ ನಿರ್ಮಾಣ ಮಾಡಿದ್ದರು.
ಮುದ್ದುಸೊಸೆ ಸೀರಿಯಲ್‌ನ ಪ್ರೊಮೊ ಈಗಾಗಲೇ ಬಿಡುಗಡೆಯಾಗಿದೆ. ತ್ರಿವಿಕ್ರಮ್ ಇಲ್ಲಿ ಭದ್ರನಾಗಿ ನಟಿಸಿದ್ದಾನೆ. ನಾಯಕ ಭದ್ರ ಮತ್ತು ವಿದ್ಯಾ ಮದುವೆ ನಡೆಯುತ್ತ ಇರುತ್ತದೆ. ಇದು ಅಪ್ರಾಪ್ತೆಯ ಮದುವೆ. ವಿದ್ಯಾ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಹುಡುಗಿ. ನಾನು ಓದಬೇಕು, ಈ ವಯಸ್ಸಿನಲ್ಲಿ ನನಗೆ ಮದುವೆ ಬೇಡ ಎಂಬ ಇವಳ ಅಳಲು ಕೇಳುವವರು ಯಾರೂ ಇಲ್ಲ. ಮದುವೆ ದಿನ ಆಕೆ ದಿಟ್ಟ ನಿರ್ಧಾರ ಕೈಗೊಳ್ಳುತ್ತಾಳೆ. ತಾನೇ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡುತ್ತಾಳೆ. ಬಾಲ್ಯವಿವಾಹವನ್ನು ತಪ್ಪಿಸಲು ಈ ರೀತಿ ಪೊಲೀಸರಿಗೆ ಮಾಹಿತಿ ನೀಡುವುದು ಉತ್ತಮ ಎಂಬ ಸಂದೇಶವನ್ನು ಈ ಸೀರಿಯಲ್ ಆರಂಭದಲ್ಲಿಯೇ ನೀಡಿದೆ.
ಹೀಗೆ, ಮದುವೆ ದಿನ ಎಲ್ಲರೂ ಪಾಯಸದೂಟ ತಿನ್ನಲು ರೆಡಿಯಾಗಿರ್ತಾರೆ. ಹುಡುಗ ಹುಡುಗಿ ಇನ್ನೇನೂ ತಾಳಿಕಟ್ಟುತ್ತಾರೆ ಎಂದು ಎಲ್ಲರೂ ಭಾವಿಸುತ್ತಾರೆ. ತಾಳಿ ಕಟ್ಟುವ ಶುಭ ವೇಳೆ ಪೊಲೀಸರ ಎಂಟ್ರಿಯಾಗುತ್ತದೆ. ಈ ಸಮಯದಲ್ಲಿ ನಾಯಕನ ತಂದೆಗೆ ಅವಮಾನವಾಗುತ್ತದೆ. ಪೊಲೀಸರ ಮೇಲೆ ಕೈ ಮಾಡಲು ಹೀರೋನ ತಂದೆ ಮುಂದಾಗುತ್ತಾರೆ. ಪೊಲೀಸರು ಹೀರೋನ ತಂದೆಯನ್ನು ವಶಕ್ಕೆ ಪಡೆಯುತ್ತಾರೆ.
ಈ ಸಮಯದಲ್ಲಿ ತನ್ನ ತಂದೆಗೆ ಅವಮಾನ ಮಾಡಿದವರನ್ನು ಬಿಡೋಲ್ಲ ಎಂದು ನಾಯಕ ಅಬ್ಬರಿಸುತ್ತಾನೆ. ಮದುವೆ ತಪ್ಪಿಸಲು ಫೋನ್ ಮಾಡಿದವರು ಯಾರೆಂದು ತಿಳಿಯಲು ಆತ ಬಯಸುತ್ತಾನೆ. ವಿದ್ಯಾಳಿಗೆ ಸ್ವಲ್ಪ ಭಯವಾಗುತ್ತದೆ. ನಾನೇ ಫೋನ್ ಮಾಡಿದ್ದು ಎಂದು ತಿಳಿಯದಿರಲಿ ಎಂದುಕೊಳ್ಳುತ್ತಾಳೆ. ನಾಯಕಿಯ ಮುಖ ನೋಡುತ್ತ ಈ ಜನ್ಮದಲ್ಲಿ ಇವಳೇ ನನ್ನ ಹೆಂಡತಿ ಎಂದು ಡೈಲಾಗ್ ಹೊಡೆಯುತ್ತಾನೆ ನಾಯಕ. ಇನ್ನು ಸ್ವಲ್ಪ ದಿನದಲ್ಲಿ ನಿನಗೆ ಹದಿನೆಂಟು ವರ್ಷ ತುಂಬುತ್ತದೆ. ಅಪ್ಪಯ್ಯನನ್ನು ಜೈಲಿನಿಂದ ಬಿಡಿಸಿಕೊಂಡು ಬರುವೆ ಎಂದು ನಾಯಕ ಹೋಗುತ್ತಾನೆ. ಇದೇ ಸಮಯದಲ್ಲಿ ಈತನಿಗೆ ಒಂದು ಫೋನ್ ಬರುತ್ತದೆ. ಮದುವೆ ನಿಲ್ಲಿಸಲು ಫೋನ್ ಮಾಡಿದ್ದು ಯಾರು ಎಂದು ಗೊತ್ತಾಯ್ತು ಎನ್ನುತ್ತಾನೆ. ಈಕೆಗೆ ಭಯವಾಗುತ್ತದೆ. ಈ ಪ್ರೊಮೊ ಮೂಲಕ ಧಾರಾವಾಹಿ ಕುರಿತು ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಲಾಗಿದೆ. ಏಪ್ರಿಲ್ 14ರಂದು ಈ ಸೀರಿಯಲ್ ರಾತ್ರಿ 7.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.