ನನ್ನೆರಡು ಮಕ್ಕಳು ಹರಿಶ್ಚಂದ್ರ ಘಾಟ್‌ನಲ್ಲಿ ಸತ್ತು ಮಲಗಿವೆ; ಸಕ್ಕರೆ ಕಾಯಿಲೆಯ ಕರಾಳತೆ ಬಿಚ್ಚಿಟ್ಟ ʻದೃಷ್ಟಿಬೊಟ್ಟುʼ ನಟ ಅಶೋಕ್ ಹೆಗಡೆ
ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವವರು ನಟ ಅಶೋಕ್ ಹೆಗಡೆ. ಇದೇ ನಟನ ಬಾಳಲ್ಲಿ ಸಕ್ಕರೆ ಕಾಯಿಲೆ ಘೋರ ದುರಂತವನ್ನೇ ತಂದಿಟ್ಟಿದೆ. ಆಗ ತಾನೆ ಕಣ್ಣು ಬಿಟ್ಟಿದ ಎಳೆ ಕಂದಮ್ಮಗಳನ್ನೇ ಅದು ಬಲಿ ಪಡೆದಿದೆ! ಆ ದುರಂತದ ಬಗ್ಗೆ ನೆನಪು ಮಾಡಿಕೊಂಡು ಕಣ್ಣೀರಾಗಿದ್ದಾರೆ.

ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಗುರುತಿಸಿಕೊಂಡು ಗಮನ ಸೆಳೆದವರು ನಟ ಅಶೋಕ್ ಹೆಗಡೆ. ಸಿನಿಮಾಗಳಿಗಿಂತ ಕಿರುತೆರೆಯಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದ, ಈಗಲೂ ಧಾರಾವಾಹಿಗಳಲ್ಲಿಯೇ ಮುಂದುವರಿಯುತ್ತಿದ್ದಾರವರು. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ʻದೃಷ್ಟಿಬೊಟ್ಟುʼ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ ಅಶೋಕ್ ಹೆಗಡೆ. ಇಂತಿಪ್ಪ ನಟನ ಬಾಳಲ್ಲಿ ಸಕ್ಕರೆ ಕಾಯಿಲೆ ಘೋರ ದುರಂತವನ್ನೇ ತಂದಿಟ್ಟಿದೆ. ಆಗ ತಾನೆ ಕಣ್ಣು ಬಿಟ್ಟಿದ ಎಳೆ ಕಂದಮ್ಮಗಳನ್ನೇ ಅದು ಬಲಿ ಪಡೆದಿದೆ!
ಮಕ್ಕಳನ್ನು ಬಲಿ ಪಡೆದ ಸಕ್ಕರೆ ಕಾಯಿಲೆ
"ನಂಗೆ ಎರಡು ಮಕ್ಕಳಾಗಿದ್ದವು. ಪ್ರಗ್ನೆನ್ಸಿ ಸಮಯದಲ್ಲಿ ನನ್ನ ಹೆಂಡತಿ ಅಂಶು ಹೆಗಡೆಗೆ ಶುಗರ್ ಬಂತು. ನನ್ನ ಹೆಂಡತಿಯ ಶುಗರ್ ಆ ಮಕ್ಕಳಿಗೂ ಬಂದು, ಆ ಎರಡೂ ಮಕ್ಕಳು ಹಾಗೇ ಸತ್ತವು. ಇದೇ ಹರಿಶ್ಚಂದ್ರ ಘಾಟ್‌ನಲ್ಲಿ ಮಲಕಂಡವೆ. ಮೊದಲ ಮಗು ಹಾಗೇ ಆಯ್ತು. ಎರಡನೇ ಮಗು ಕೂಡ ಹಾಗೇ ಆಯ್ತು. ಮತ್ತೆ ಮಗು ಬೇಡವೇ ಬೇಡ ಅಂತ ನಾವಿಬ್ಬರೂ ನಿರ್ಧಾರ ಮಾಡಿದ್ವಿ. ಯಾಕೆಂದರೆ, ನಾನು ಶೂಟಿಂಗ್ ಅಂತ ಹೊರಗಡೆ ಇರ್ತಿನಿ. ಅವಳು ಒಬ್ಬಳೇ ಮನೆಯಲ್ಲಿ ಇರ್ತಾಳೆ. ಹೀಗಾಯ್ತಲ್ಲ ಮಾನಸಿಕವಾಗಿ ಕುಗ್ಗಿ ಬಿಡ್ತಾಳೆ. ಇನ್ನೊಂದು ಮಗು ಆದರೆ, ಅದೂ ಹೀಗೆ ಆಗಿ ಬಿಡುತ್ತೆ ಅಂತ. ಅದಕ್ಕೆ ಇಬ್ಬರೂ ಕೂತು ಮಕ್ಕಳು ಬೇಡ ಅನ್ನೋ ನಿರ್ಧಾರ ಮಾಡಿದ್ವಿ" ಎಂದಿದ್ದಾರೆ.
ನನ್ನ ಹೆಂಡತಿ ನನ್ನ ಕೈ ಬಿಡಲಿಲ್ಲ…
"ನಿನಗೆ ನಾನು, ನನಗೆ ನೀನು. ಅವಳು ನನ್ನನ್ನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಪ್ರೀತಿಸಿಲ್ಲ. ಪ್ರೀತಿ ಒಂದನ್ನು ಇಟ್ಟುಕೊಂಡು ಮಾತ್ರ ಪ್ರೀತಿಸಿದ್ದು. ಇವತ್ತಿಗೂ ನಾನು ಮತ್ತು ನನ್ನ ಹೆಂಡತಿ ಗಟ್ಟಿಯಾಗಿದ್ದೇವೆ. ಕೆಲವರು ಕೇಳೋರು, "ಮದುವೆ ಆಗಿ ಇಷ್ಟು ವರ್ಷ ಆಗಿದೆ, ಇನ್ನೂ ಮಕ್ಕಳಾಗಿಲ್ವ?" ಅಂತ. ಗಂಡಸರು, ಹೇಗೋ ಹೇಳಿ ಬಿಡ್ತಾರೆ. ಆದರೆ, ಹೆಣ್ಮಕ್ಕಳಿಗೆ ಆಗುವ ನೋವೇ ಬೇರೆ. ಮದುವೆ ಆದಾಗ ಅಸಿಸ್ಟಂಟ್ ನಿರ್ದೇಶಕನಾಗಿದ್ದೆ. ಊಟಕ್ಕೂ ದುಡ್ಡಿರಲಿಲ್ಲ. ಆದರೂ ಕೂಡ ನನ್ನ ಹೆಂಡತಿ, ನನ್ನನ್ನು ಕೈ ಬಿಡಲಿಲ್ಲ. ಇವನ ಹತ್ರ ದುಡ್ಡಿಲ್ಲ. ಇವನು ಹೀರೋ ಆಗಲಿಲ್ಲ ಎಂದು ನನ್ನನ್ನು ಬಿಟ್ಟು ಹೋಗಲಿಲ್ಲ. ನನ್ನ ಜೊತೆ ನಿಂತುಕೊಂಡಳು" ಎಂದಿದ್ದಾರೆ.
ಒಳ್ಳೆಯ ಬದುಕಿಗೋಸ್ಕರ ಹೋರಾಡ್ತಿದ್ದೇವೆ..
"ಆವತ್ತು ಕುಂಕುಮ ಭಾಗ್ಯ ಸೀರಿಯಲ್ ಶೂಟಿಂಗ್ ಇತ್ತು. ಆವತ್ತೇ ಲೀಲಾ ಪ್ಯಾಲೇಸ್ ಬಳಿಯ ಮಣಿಪಾಲ್ ಆಸ್ಪತ್ರೆಯಲ್ಲಿ ನನ್ನ ಮಗು ಹೋಯಿತು. ನನ್ನ ಮಗು ಯಾವುದೇ ತಪ್ಪು ಮಾಡಿಲ್ಲ. ಅದು ನರಕಕ್ಕೆ ಹೋಗಲ್ಲ, ಸ್ವರ್ಗಕ್ಕೆ ಹೋಗುತ್ತದೆ ಎಂದ ವಿಶ್ವಾಸ ನನ್ನದು. ನಮ್ಮಲ್ಲಿ ಉಪನಯನ ಆದಮೇಲೆ ಸುಡ್ತಾರೆ. ಹರಿಶ್ಚಂದ್ರ ಘಾಟ್‌ನಲ್ಲಿ ಹ್ಯಾಪಿ ಬರ್ತ್‌ಡೇ ಅನ್ನೋ ಎರಡು ಬಟ್ಟೆ ಸಿಗುತ್ತೆ. ಅದನ್ನ ತೆಗೆದುಕೊಂಡೆ, ಕೆಳಗಡೆ ಒಂದು, ಅದರ ಮೇಲೆಯೊಂದು ಹಾಸಿ ಕಳಿಸಿದೆ. ಆ ಮಗು ಸತ್ತಿರಬಹುದು. ಜೀವ ಇಲ್ಲದೇ ಇರಬಹುದು. ಆದರೆ, ನನ್ನ ಮತ್ತು ನನ್ನ ಹೆಂಡತಿಯ ಬಳಿ ಆ ಜೀವ ಇದೆ. ಇವತ್ತಿಗೂ ನನಗೆ ನನ್ನ ಹೆಂಡತಿ, ಬರೀ ಹೆಂಡತಿ ಮಾತ್ರವಲ್ಲ. ಇವತ್ತಿಗೂ ನಾವು ಕಷ್ಟದಲ್ಲಿದ್ದೇವೆ. ಹೋರಾಟ ಮಾಡ್ತಿದ್ದೇವೆ. ಹೊಡೆದಾಟ ಮಾಡ್ತಿದ್ದೇವೆ. ಒಳ್ಳೆಯ ಬದುಕಿಗೋಸ್ಕರ" ಎಂದಿದ್ದಾರೆ.
"ಆವತ್ತಿನಿಂದ ಇವತ್ತಿನವರೆಗೂ ವಯಸ್ಸು ಆಗ್ತಾನೆ ಬಂತು. ನನ್ನ ಹೆಂಡತಿ ಬಾಯಲ್ಲಿ, ನಾನು ಖುಷಿಯಾಗಿದ್ದೀನಿ ದದ್ದ ಅಂತ ಒಂದು ಮಾತು ಬರಬೇಕು. ಆ ಒಂದು ದಿನಕ್ಕೋಸ್ಕರ ಕಾಯ್ತಾ ಇದ್ದೀನಿ. ಅದನ್ನು ನನ್ನ ಈ ಸಿನಿಮಾ ಇಂಡಸ್ತ್ರಿ ಅಥವಾ ಟಿವಿ ಇಂಡಸ್ಟ್ರಿ ಕೊಟ್ಟೇ ಕೊಡುತ್ತೆ ಅನ್ನೋ ನಂಬಿಕೆ, ವಿಶ್ವಾಸದ ಮೇಲೆ ಬದುಕಿದ್ದೇನೆ" ಎಂದು ಅಶ್ವವೇಗ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಶೋಕ್ ಹೆಗಡೆ ಕಣ್ಣೀರಿಟ್ಟಿದ್ದಾರೆ.
