ಚಂದನ್ ಶೆಟ್ಟಿ- ನಿವೇದಿತಾ ಗೌಡ ಬದುಕು ಹಾಳಾಗೋಕೆ ನಾನು ಬಿಡಲ್ಲ, ಮಧ್ಯಸ್ಥಿಕೆಗೆ ಧ್ರುವ ಸರ್ಜಾ ಅವ್ರನ್ನ ಕರೆಸ್ತಿನಿ; ಪ್ರಥಮ್
ಬಿಗ್‌ಬಾಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಸ್ಪರರು ಡಿವೋರ್ಸ್ ಪಡೆದು ದೂರವಾಗಿದ್ದಾರೆ. ವಿಚ್ಛೇದನ ಕುರಿತು ಹತ್ತಾರು ಕಾರಣಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ನಡುವೆ ಇವರಿಬ್ಬರ ನಡುವಿನ ಸಮಸ್ಯೆ ಬಗೆಹರಿಸಲು ಪ್ರಥಮ್ ಮುಂದಾಗಿದ್ದಾರೆ.

Chandan Shetty Niveditha Gowda Divorce: ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಶುಕ್ರವಾರ ಅಧಿಕೃತವಾಗಿ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಜೋಡಿ ಪರಸ್ಪರರ ಒಪ್ಪಿಗೆ ಪಡೆದುಕೊಂಡೇ ಈ ನಿರ್ಧಾರಕ್ಕೆ ಬಂದಿದೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿ ಬೇರೆ ಬೇರೆಯಾಗಿದ್ದಕ್ಕೆ, ತರಹೇವಾರಿ ಚರ್ಚೆ ನಡೆಯುತ್ತಿದೆಯಾದರೂ, ವಿಚ್ಛೇದನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಆ ಬಗ್ಗೆಯೂ ಕೆಲವು ಬಗೆಬಗೆ ವಿಚಾರಗಳು ಕೇಳಿಬರುತ್ತಿವೆ. ಇವರಿಬ್ಬರ ಡಿವೋರ್ಸ್ ವಿಚಾರ ತಿಳಿಯುತ್ತಿದ್ದಂತೆಯೇ ಬಿಗ್ ಬಾಸ್ ವಿಜೇತ ಪ್ರಥಮ್ ಮಧ್ಯಪ್ರವೇಶಿಸಿದ್ದಾರೆ.
ಅವರಿಬ್ಬರ ಖಾಸಗಿತನ ಗೌರವಿಸಿ...
ನಟ "ಒಳ್ಳೆ ಹುಡುಗ" ಪ್ರಥಮ್ ಇದೀಗ ಈ ಜೋಡಿಯನ್ನು ಶತಾಯ ಗತಾಯ ಒಂದು ಮಾಡಲು ಮುಂದಾಗಿದ್ದಾರೆ. ಅವರ ವೈಯಕ್ತಿಕ ವಿಚಾರದ ಬಗ್ಗೆ ಎಲ್ಲರೂ ಗೌರವ ನೀಡಬೇಕು ಎಂದು ಹೇಳಿ, ಇಬ್ಬರ ನಡುವಿನ ಸಮಸ್ಯೆ ಬಗೆಹರಿಸಲು ಧ್ರುವ ಸರ್ಜಾ ಅವರನ್ನು ಕರೆತರುವುದಾಗಿ ಹೇಳಿದ್ದಾರೆ ಪ್ರಥಮ್. "ನನ್ನ ಮತ್ತು ಚಂದನ್ ನಡುವೆ ಈ ಮೊದಲು ಬೇರೆ ಬೇರೆ ಅಭಿಪ್ರಾಯಗಳಿದ್ದವು. ಅದರಾಚೆಗೂ ನಾವಿಬ್ಬರೂ ಒಳ್ಳೆ ಸ್ನೇಹಿತರು. ಚಂದನ್ ತುಂಬ ಅಗ್ರೆಸ್ಸಿವ್ ಅಲ್ಲ. ನಿವೇದಿತಾ ಪುಕ್ಕ ಹುಡುಗಿ. ಅವರಿಗೆ ತಿಳಿವಳಿಕೆ ಹೇಳಿದ್ರೆ ಅರ್ಥ ಮಾಡಿಕೊಳ್ತಾರೆ. ಅವರ ಖಾಸಗಿತನವನ್ನು ಗೌರವಿಸಿ. ಇಬ್ಬರೂ ನಮ್ಮರೇ. ವಾರದ ಹಿಂದಷ್ಟೇ ರೀಲ್ಸ್ ಮಾಡಿದ್ದಾರೆ. ಏನೋ ಮನಸಿಗೆ ಬೇಸರ ಆಗುವಂಥದ್ದು ನಡೆದಿದೆ" ಎಂದಿದ್ದಾರೆ.
ಧ್ರುವ ಸರ್ಜಾ ಮಾತನ್ನು ಚಂದನ್ ಕೇಳ್ತಾರೆ..
"ಈ ಸಮಯದಲ್ಲಿ ಒಂದು ಮಾತು ಹೇಳ್ತಿದ್ದೇನೆ. ನಿಮಗೆ ಹೇಳಲು ನನಗೆ ಹಕ್ಕಿದೆ. ಇದಕ್ಕೆ ಮೂರು ಆಪ್ಶನ್ ಇದೆ. ನಗೋದಕ್ಕೆ ಸಾವಿರ ಜನ ಇರ್ತಾರೆ. ಸೋಷಿಯಲ್ ಮೀಡಿಯಾ ಕೆಟ್ಟೋಗಿದೆಯಪ್ಪ. ಬದುಕು ಚೆನ್ನಾಗಿ ಕಟ್ಕೋಳ್ರಯ್ಯ. ಈ ಬಗ್ಗೆ ಧ್ರುವ ಸರ್ಜಾ ಅವರ ಜತೆಗೆ ನಾನು ಮಾತನಾಡ್ತಿನಿ. ನನ್ನ, ಚಂದನ್ ಮತ್ತು ಧ್ರುವ ಅವರದ್ದು ಬಿಡಿಸಲಾಗದ ನಂಟಿದೆ. ಸುನಾಮಿ ಬಂದರೂ ನಮ್ಮನ್ನು ದೂರ ಮಾಡಲು ಆಗಲ್ಲ. ಹಾಗಾಗಿ ಧ್ರುವ ಅವರ ಮಾತನ್ನು ಚಂದನ್ ತೆಗೆದುಹಾಕಲ್ಲ ಅಂತ ನಾನು ಅಂದುಕೊಳ್ಳುತ್ತೇನೆ. ಚಿರು ಅವರ ಪುಣ್ಯ ಸ್ಮರಣೆ, ಅವರು ನೋವಲ್ಲಿ ಇರ್ತಾರೆ. ಹಾಗಾಗಿ ಈ ವಿಷಯವನ್ನು ನಾನೇ ಅವರ ಗಮನಕ್ಕೆ ತಂದು ಇತ್ಯರ್ಥಕ್ಕೆ ತರುತ್ತೇವೆ" ಎಂದಿದ್ದಾರೆ ಪ್ರಥಮ್.
ಮಗು ಬೇಕು ಅಂತ ಚಂದನ್, ಬೇಡ ಅಂತ ನಿವೇದಿತಾ
ಚಂದನ್ ಮತ್ತು ನಿವೇದಿತಾ ಅವರ ಬಿಗ್‌ಬಾಸ್‌ನಲ್ಲಿನ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಮೈಸೂರಿನ ಯುವ ದಸರಾ ವೇದಿಕೆ ಮೇಲೆ ಸಾವಿರಾರು ಜನರ ಸಮ್ಮುಖದಲ್ಲಿ ಪ್ರೇಮ ನಿವೇದನೆ ಮಾಡಿದ್ದ ಚಂದನ್‌ಗೆ ನಿವೇದಿತಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಅದಾದ ಬಳಿಕ 2020ರ ಫೆಬ್ರವರಿಯಲ್ಲಿ ಎರಡೂ ಕುಟುಂಬಗಳ ಆಶೀರ್ವಾದ ಪಡೆದು, ಸಿನಿಮಾ ಆಪ್ತರ ಸಮ್ಮುಖದಲ್ಲಿಈ ಜೋಡಿಯ ಅದ್ಧೂರಿ ವಿವಾಹವೂ ನೆರವೇರಿತ್ತು. ಮದುವೆಯಾದ ಬಳಿಕ ಸಾಲು ಸಾಲು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಕಿರುತೆರೆಯಲ್ಲಿ ನಿವೇದಿತಾ ಗೌಡ ಹಲವು ಶೋಗಳಲ್ಲಿ ಭಾಗವಹಿಸಿದ್ದಾರೆ.
ಇತ್ತೀಚಿನ ಕೆಲ ತಿಂಗಳಿಂದ ಮಕ್ಕಳು ಮಾಡಿಕೊಳ್ಳುವ ವಿಚಾರಕ್ಕೆ ಈ ಜೋಡಿ ನಡುವೆ ಮಾತುಕತೆ ನಡೆದರೂ ಅದು ಫಲಪ್ರದವಾಗಿಲ್ಲ. ಮದುವೆಯಾಗಿ 4 ವರ್ಷ ಕಳೆದರೂ, ಮಕ್ಕಳ ಮಾಡಿಕೊಳ್ಳುವ ವಿಚಾರದಲ್ಲಿ ಕೆರಿಯರ್ ಹಾಳು ಮಾಡಿಕೊಳ್ಳಲ್ಲ ಎಂಬ ನಿರ್ಧಾರ ನಿವೇದಿತಾ ಗೌಡ ಅವರದ್ದು ಎಂದು ಹೇಳಲಾಗುತ್ತಿದೆ. ಚಂದನ್ ಕುಟುಂಬದಿಂದಲೂ ಮಗು ಬೇಕು ಎಂಬ ಒತ್ತಡವಿದೆ ಎಂಬ ಮಾತೂ ಕೆಲ ಮೂಲಗಳಿಂದ ಕೇಳಿಬರುತ್ತಿದೆ. ಈ ಕಾರಣಕ್ಕಾಗಿಯೇ ಈ ಜೋಡಿ ಪರಸ್ಪರರು ಮಾತನಾಡಿಕೊಂಡು, ದೂರವಾಗಲು ನಿರ್ಧರಿಸಿದ್ದಾರಂತೆ. ಈ ಬಗ್ಗೆ ಅವರಿಂದಲೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
