ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 110 Mar 5th Aakash Realizes His Mistakes Rst

Brundavana Serial: ಪುಷ್ಪಾ ವಿಚಾರದಲ್ಲಿ ಬದಲಾಗೇ ಬಿಟ್ಟ ಆಕಾಶ್‌, ಚಿನ್ನದ ಬದಲು ಗಿರಿಜಾಗೆ ಸಿಕ್ಕಿದ್ದು ಬರೀ ಚಿಪ್ಪು

Brindavana Kannada Serial Today Episode Mar 5: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಪುಷ್ಪಾ ಮೇಲಿದ್ದ ಆಕಾಶ್‌ ಅಭಿಪ್ರಾಯ ನಿಧಾನಕ್ಕೆ ಬದಲಾಗುತ್ತಿದೆ. ಇತ್ತ ಚಿನ್ನ ಮಾರಾಟ ಮಾಡಲು ಹೊರಟ ಗಿರಿಜಾ ಗಂಟಲ್ಲಿ ಸಿಕ್ಕಿದ್ದು ಚಿಪ್ಪಿನ ರಾಶಿ. ಸಹನಾ ಬಳಿ ಮದುವೆಯಾಗಿರುವ ವಿಚಾರ ಹೇಳ್ತಾನಾ ಆಕಾಶ್‌?

ಪುಷ್ಪಾ ವಿಚಾರದಲ್ಲಿ ಬದಲಾಗೇ ಬಿಟ್ಟ ಆಕಾಶ್‌
ಪುಷ್ಪಾ ವಿಚಾರದಲ್ಲಿ ಬದಲಾಗೇ ಬಿಟ್ಟ ಆಕಾಶ್‌

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.5) ಸಂಚಿಕೆಯಲ್ಲಿ ಅಜ್ಜಿಯ ಪ್ರಾಣ ಉಳಿಸಿದ ಪುಷ್ಪಾಳ ಮೇಲೆ ಆಕಾಶ್‌ ನಿಲುವು ಬದಲಾಗಿರುತ್ತದೆ. ಕಾಲೇಜಿಗೆ ಹೊರಟಿರುವ ಆಕಾಶ್‌ಗೆ ಡಬ್ಬಿ ನೀಡಿ, ಎಲ್ಲವನ್ನೂ ರೆಡಿ ಮಾಡಿಕೊಡುವ ಪುಷ್ಪಾಳಿಗೆ ಆಕೆ ಗಿರಿಜಾಗೆ ನೀಡಿದ್ದ ಚಿನ್ನವನ್ನು ಮರಳಿ ಕೊಡುತ್ತಾನೆ. ಇದನ್ನು ನೋಡಿದ ಪುಷ್ಪಾಗೆ ಕ್ಷಣಕಾಲ ಗಾಬರಿಯಾಗುತ್ತದೆ. ಅಲ್ಲದೇ ನಾನು ಅತ್ತಿಗೆಗೆ ಕೊಟ್ಟ ಚಿನ್ನ ನಿಮ್ಮ ಕೈಯಲ್ಲಿ ಹೇಗೆ ಬಂತು ಎಂದು ಆಕಾಶ್‌ ಬಳಿ ಪ್ರಶ್ನಿಸುತ್ತಾಳೆ. ಅದಕ್ಕೆ ಆಕಾಶ್‌ ನೀವ್ಯಾಕೆ ಈ ಚಿನ್ನವನ್ನು ನಿಮ್ಮ ಅತ್ತಿಗೆಗೆ ಕೊಟ್ರಿ ಎಂದು ಪ್ರಶ್ನಿಸುತ್ತಾನೆ. ಆಗ ಅಳುತ್ತಾ ಅಣ್ಣನ ಅನಾರೋಗ್ಯದ ಬಗ್ಗೆ ಹೇಳುವ ಪುಷ್ಪಾ ಅಣ್ಣನ ಆರೋಗ್ಯದ ಮುಂದೆ ನನಗೆ ಚಿನ್ನ ಹೆಚ್ಚು ಅನ್ನಿಸಿಲ್ಲ, ಅದಕ್ಕೆ ಅತ್ತಿಗೆ ಚಿನ್ನವನ್ನು ಅಡವಿಟ್ಟು ಆಸ್ಪತ್ರೆಗೆ ತೋರಿಸಿದೆ ಎಂದು ಇರುವ ಸತ್ಯವನ್ನು ಹೇಳುತ್ತಾಳೆ. ಇದರಿಂದ ಆಕಾಶ್‌ಗೆ ಪುಷ್ಪಾಳ ಮುಗ್ಧತೆ ಅವಳ ಅತ್ತಿಗೆಯ ಹಣದ ವ್ಯಾಮೋಹ ಎಲ್ಲವೂ ಅರಿವಿಗೆ ಬರುತ್ತದೆ. ಅಳುತ್ತಿರುವ ಪುಷ್ಪಾಳನ್ನು ಸಮಾಧಾನ ಮಾಡುವ ಆಕಾಶ್‌ ನಿಮ್ಮ ಅಣ್ಣನ ಜವಾಬ್ದಾರಿ ನಂದು, ನೀವು ಅಳಬೇಡಿ ಎಂದು ಸಮಾಧಾನ ಮಾಡುತ್ತಾನೆ.

ಚಿನ್ನವಲ್ಲ, ಗಿರಿಜಾ ತಂದ ಗಂಟಿನಲ್ಲಿದ್ದಿದ್ದು ಚಿಪ್ಪು

ಇತ್ತ ಪುಷ್ಪಾ ಕೊಟ್ಟ ಚಿನ್ನವನ್ನು ಮಾರಾಟ ಮಾಡಲು ಶೇಟ್‌ ಚಮಕ್‌ಲಾಲ್‌ನನ್ನು ಮನೆಗೆ ಕರೆಸುವ ಗಿರಿಜಾ ಚಿನ್ನದ ಗಂಟು ಬಿಚ್ಚುವ ಶೇಟ್‌ ಬಳಿಯಿಂದ 50 ಸಾವಿರ ಪಡೆದು ಸಂಘದ ಸಾಲ ನೀಡುವವರಿಗೆ ಕೊಟ್ಟು, ಅವರನ್ನು ಮನೆಯಿಂದ ಸಾಗ ಹಾಕುತ್ತಾಳೆ. ನಂತರ ಶೇಟ್‌ ಬಳಿ ಒಂದು 6 ಲಕ್ಷ ತಂದಿದ್ದೀಯಾ ಅಲ್ವಾ, ಇದರಲ್ಲಿ ಇರುವ ಚಿನ್ನವೆಲ್ಲಾ 24 ಕ್ಯಾರೆಟ್‌ದು ಎಂದು ಹಣದ ವ್ಯಾಮೋಹದಲ್ಲಿ ಪ್ರಶ್ನಿಸುತ್ತಾಳೆ. ಹಣದ ಬಗ್ಗೆ ಚಿಂತೆ ಬೇಡ, ಚಿನ್ನ ತೋರಿಸಿ ಮೊದ್ಲು ಎಂದು ಶೇಟ್‌ ಹೇಳಿದಾಗ ಚಿನ್ನದ ಗಂಟನ್ನು ನಿಧಾನಕ್ಕೆ ಬಿಚ್ಚುತ್ತಾಳೆ ಗಿರಿಜಾ. ಆದರೆ ಗಂಟಿನಲ್ಲಿದ್ದನ್ನು ನೋಡಿ ಲಲಿತಾ ಹಾಗೂ ಶೇಟ್‌ ಇಬ್ಬರೂ ಶಾಕ್‌ ಆಗುತ್ತಾರೆ. ಲಲಿತಾಳ ಬಳಿ ಚಿನ್ನ ನೋಡಿ ಶಾಕ್‌ ಆದ್ಯಾ ಎಂದು ಕೇಳುವ ಗಿರಿಜಾಳಿಗೆ ಮೊದಲು ನೀವು ನೋಡು ಎಂದು ಗದರಿಸುತ್ತಾಳೆ ಲಲಿತಾ. ಚಿನ್ನದ ಗಂಟಿನ ಕಡೆ ನೋಡುವ ಗಿರಿಜಾ ತಲೆ ತಿರುಗಿ ಬೀಳುವುದು ಒಂದೇ ಬಾಕಿಯಾಗುತ್ತದೆ. ಕಾರಣ ಅದರಲ್ಲಿ ಚಿಪ್ಪು ಹಾಗೂ ಮಕ್ಕಳ ಆಟಿಕೆ ಗಳಿರುತ್ತದೆ. ಇತ್ತ ಶೇಟು ಬಳಿ 50 ಸಾವಿರ ಪಡೆದ ಗಿರಿಜಾಗೆ ಏನು ಮಾಡಬೇಕು ಎಂದು ತೋಚದೇ ಒಂದು ವಾರ ಸಮಯ ಕೊಡಿ ಚಿನ್ನ ಕೊಡ್ತೀನಿ, ದಮ್ಮಯ್ಯ ನನ್ನ ಮಾನ-ಮರ್ಯಾದೆ ಕಳಿಬೇಡಿ ಅಂತ ಬೇಡಿಕೊಳ್ಳುತ್ತಾರೆ. ಒಂದು ವಾರದಲ್ಲಿ ಚಿನ್ನದ ಕೊಟ್ಟಿಲ್ಲ ಅಂದ್ರೆ ಪೊಲೀಸ್‌ ಮನೆಗೆ ಬರ್ತಾರೆ ಅಂತ ಧಮಕಿ ಹಾಕಿ ಹೊರಡುತ್ತಾನೆ ಶೇಟ್‌ಜಿ.

ಇತ್ತ ಚಿನ್ನದ ಜಾಗದಲ್ಲಿ ಚಿಪ್ಪು ಹೇಗೆ ಬಂತು ಎಂದು ತಿಳಿಯದೇ ಕಂಗಾಲಾಗುವ ಗಿರಿಜಾ ಜೋರಾಗಿ ಅಳುತ್ತಾಳೆ. ಅವಳಿಗೆ ಈ ಬಗ್ಗೆ ಪುಷ್ಪಾಳ ಬಳಿ ಕೇಳುವಂತೆ ಸಲಹೆ ನೀಡುತ್ತಾಳೆ ಗೆಳತಿ ಲಲಿತಾ. ತಕ್ಷಣಕ್ಕೆ ಪುಷ್ಪಾಗೆ ಕಾಲ್‌ ಮಾಡುವ ಗಿರಿಜಾ ಚಿನ್ನದ ಬಗ್ಗೆ ಕೇಳಿದಾಗ ಪುಷ್ಪಾ ಆಕಾಶ್‌ ತನಗೆ ಚಿನ್ನ ಕೊಟ್ಟಿದ್ದು, ಅಣ್ಣನ ಆರೋಗ್ಯದ ಬಗ್ಗೆ ನೋಡಿಕೊಳ್ಳುತ್ತೇನೆ ಎಂದಿದ್ದು ಎಲ್ಲವನ್ನೂ ಹೇಳುತ್ತಾಳೆ. ಆಕಾಶ್‌ಗೆ ತನ್ನ ಮೋಸದಾಟ ತಿಳಿದಿದೆ ಎನ್ನುವುದನ್ನು ಕೇಳಿದ ಗಿರಿಜಾ ಗಾಬರಿಯಿಂದ ದಿಕ್ಕೆ ತೋಚದಂತಾಗುತ್ತಾಳೆ.

ಸಹನಾಗೆ ತಿಳಿಯುತ್ತಾ ಆಕಾಶ್‌ಗೆ ಮದುವೆಯಾಗಿರುವ ವಿಚಾರ

ಇತ್ತ ಪುಷ್ಪಾ ಮೇಲಿನ ಅನುಮಾನಗಳೆಲ್ಲಾ ಪರಿಹಾರವಾಗಿರುವ ಖುಷಿಯಿಂದ ಕಾಲೇಜಿಗೆ ಬರುವ ಆಕಾಶ್‌ ಅದೇ ಖುಷಿಯಲ್ಲಿ ನನ್‌ ಫ್ರೆಂಡ್‌ ವೈಫ್‌ ಬಗ್ಗೆ ಅವನಿಗಿರುವ ಗೊಂದಲ ಕ್ಲಿಯರ್‌ ಆಗಿದೆ. ಇದಕ್ಕೆಲ್ಲಾ ಕಾರಣ ಅವಳ ಅತ್ತಿಗೆ, ಅವಳ ಮೋಸದಾಟ ನನ್ನ ಫ್ರೆಂಡ್‌ಗೆ ಅರ್ಥವಾಗಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾನೆ. ಅವರ ಮುಖದಲ್ಲಿನ ಖುಷಿಯನ್ನ ಗಮನಿಸುವ ಸಹನಾ ʼಆಕಾಶ್‌ ಇದು ನಿಜಕ್ಕೂ ನಿಮ್ಮ ಫ್ರೆಂಡ್‌ ಸ್ಟೋರಿನಾ, ನೀವು ಆವತ್ತು ಹಾಗೂ ಇವತ್ತು ಹೇಳ್ತಾ ಇರೋದು ಕೇಳಿದ್ರೆ ಇದು ನಿಮ್ಮದೇ ಕಥೆ ಅನ್ನಿಸ್ತಿದೆ, ಆಕೆ ನಿಮ್ಮದೇ ಹೆಂಡತಿ ಅನ್ನಿಸ್ತಿದೆʼ ಎಂದು ಪ್ರಶ್ನೆ ಮಾಡ್ತಾಳೆ. ಸಹನಾ ಕೇಳಿದ ಪ್ರಶ್ನೆಗೆ ಆಕಾಶ್‌ ಸ್ಥಬನಾಗುತ್ತಾನೆ.

ಸಹನಾಗೆ ತನಗೆ ಮದುವೆಯಾಗಿರುವ ವಿಚಾರ ಹೇಳ್ತಾನಾ ಆಕಾಶ್‌, ಪುಷ್ಪ ಮೇಲಿನ ಎಲ್ಲಾ ಗೊಂದಲಗಳು ನಿಜಕ್ಕೂ ಕ್ಲಿಯರ್‌ ಆಗಿದ್ಯಾ, ಚಿನ್ನವೂ ಇಲ್ಲದೇ ಶೇಟುವಿನ ಬಳಿ ದುಡ್ಡು ತೆಗೆದುಕೊಂಡ ಗಿರಿಜಾ ಮುಂದೇನು ಮಾಡ್ತಾಳೆ ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)