Brundavana Serial: ಆಕಾಶ್‌ಗೆ ಸತ್ಯ ಅರ್ಥ ಮಾಡಿಸುವ ಪ್ರಯತ್ನದಲ್ಲಿ ಚಿಕ್ಕೋಡಿ, ಪುಷ್ಪಾಗೆ ಧೈರ್ಯ ತುಂಬುವ ಅನುಪಮಾ
Brindavana Kannada Serial Today Episode Mar 25th: : ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಫ್ಯಾಮಿಲಿ ಫೋಟೊ ಬಿದ್ದು ಒಡೆದಿರುವುದಕ್ಕೆ ಮನದಲ್ಲಿ ಭಯ ಇದ್ರೂ ಮನೆಯವರಿಗೆ ಧೈರ್ಯ ತುಂಬುವ ಅಜ್ಜಮ್ಮ. ಸಹನಾ ವಿಚಾರದಲ್ಲಿ ಆಕಾಶ್ ಕಣ್ಣು ತೆರೆಸುವ ಪ್ರಯತ್ನದಲ್ಲಿ ಚಿಕ್ಕೋಡಿ. ಸಹನಾ ಮುಂದೆ ಭಾರ್ಗವಿಯ ದ್ವೇಷದ ಮಾತು.
ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್ 25) ಸಂಚಿಕೆಯಲ್ಲಿ ಆಸ್ಪತ್ರೆಯಿಂದ ಮನೆಗೆ ಬಂದ ಸುಧಾಮೂರ್ತಿ ಫ್ಯಾಮಿಲಿ ಫೋಟೊ ಇಲ್ಲದ್ದನ್ನು ನೋಡಿ ಗಾಬರಿಯಾಗುತ್ತಾರೆ. ಫೋಟೊ ಎಲ್ಲಿ ಎಂದು ಕೇಳಿದಾಗ ಜೋರಾಗಿ ಗಾಳಿ ಬೀಸಿ ಫೋಟೊ ಒಡೆದಿರುವ ಸತ್ಯವನ್ನು ಹೇಳುತ್ತಾರೆ ಸತ್ಯಮೂರ್ತಿ. ರತ್ನ, ಸುಧಾಮೂರ್ತಿ ಅವರ ಗಂಡ ಎಲ್ಲರೂ ಮನೆಗೆ ಕೆಡುಕಾಗಬಹುದು ಎಂಬ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದಾಗ ಅವರನ್ನು ಬೈದು ಸಾಮಾಧಾನ ಮಾಡುವ ಸುಧಾಮೂರ್ತಿ ʼಬೃಂದಾವನಕ್ಕೆ ಎಂದಿಗೂ ಕೇಡಾಗುವುದಿಲ್ಲ. ಸುಮ್ಮನೆ ಗಾಬರಿ ಪಡಬೇಡಿʼ ಎಂದು ಭರವಸೆ ನೀಡುತ್ತಾರೆ. ಆದರೆ ಸುಧಾಮೂರ್ತಿಗಳ ಮನದಲ್ಲಿ ಭಾರ್ಗವಿ ಆಡಿರುವ ದ್ವೇಷದ ಮಾತುಗಳೇ ತುಂಬಿ, ಭಯ ಮೂಡಿಸುತ್ತದೆ.
ಇತ್ತ ಅಜ್ಜಮ್ಮನನ್ನು ರೂಮಿಗೆ ಕರೆ ತರುವ ಪುಷ್ಪಾ ʼಎಲ್ಲೋ ಜೋರಾಗಿ ಗಾಳಿ ಬೀಸಿದ್ರೆ, ಇನ್ನೆಲ್ಲೋ ಮಳೆಯಾಗುತ್ತೆ ಅಂತಾರೆ, ಹಾಗೆಯೇ ನೀವು ನನ್ನ ಹತ್ರ ಮಾತು ತಗೊಂಡಿರುವುದಕ್ಕೂ ಇವತ್ತು ಇಲ್ಲಿ ನಡೆದಿರುವುದಕ್ಕೂ ಏನೋ ಸಂಬಂಧ ಇದೆ ಅನ್ನಿಸ್ತಾ ಇದೆʼ ಎನ್ನುತ್ತಾಳೆ. ಅಲ್ಲದೇ ʼಈ ಮನೆಯಲ್ಲಿ ಇಷ್ಟು ದಿನ ಇಷ್ಟೊಂದು ಒಗ್ಗಟ್ಟು ಇದೆ ಅಂದ್ರೆ ಅದಕ್ಕೆ ನೀವು ಹಾಕಿ ಕೊಟ್ಟಿರುವ ಅಡಿಪಾಯವೇ ಕಾರಣ. ಹಾಗಿದ್ದಾಗ ಮನೆಯಲ್ಲಿ ಒಗ್ಗಟ್ಟು ಹೇಗೆ ಮುರಿಯುತ್ತದೆ. ಆದರೂ ಎಲ್ಲೋ ಏನೋ ಸಮಸ್ಯೆ ಆಗಿದೆ ಅನ್ನುವುದು ಮಾತ್ರ ನಿಜ. ಅದೇನು ಅಂತ ನನ್ನ ಬಳಿ ಹೇಳಿ ಅಜ್ಜಮ್ಮʼ ಎಂದು ಮನವಿ ಮಾಡಿಕೊಳ್ಳುತ್ತಾಳೆ.
ಆಕಾಶ್ ಮನಸ್ಸು ಬದಲಿಸುವ ಪ್ರಯತ್ನದಲ್ಲಿ ಚಿಕ್ಕೋಡಿ
ಸಹನಾ ತನ್ನನ್ನು ಕಾಯುತ್ತಿದ್ದಾಳೆ ಎಂದು ತಿಳಿದ ಆಕಾಶ್ ಅವಳನ್ನು ಹುಡುಕಿ ಬರುತ್ತಾನೆ. ಆದರೆ ಅಷ್ಟೊತ್ತಿಗಾಗಲೇ ಸಹನಾ ತನ್ನ ತಾಯಿಯ ಜೊತೆ ಅಲ್ಲಿಂದ ಹೊರಟು ಹೋಗಿರುತ್ತಾಳೆ. ಆ ಹೊತ್ತಿಗೆ ಅಲ್ಲಿಗೆ ಬರುವ ಚಿಕ್ಕೋಡಿ ಆಕಾಶ್‌ಗೆ ಸತ್ಯ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಾನೆ. ʼನಿಂಗೆ ಈಗಾಗಲೇ ಮದುವೆ ಆಗಿದೆ. ಮದುವೆ ಹೇಗೆ ನಡೆಯಿತು ಎನ್ನುವುದಕ್ಕಿಂತ ಮದುವೆಯಾದ ಮೇಲೆ ಪುಷ್ಪಾ ಬಾಬಿ ನಿನ್ನ ಜೊತೆ, ನಿಮ್ಮ ಮನೆಯವರ ಜೊತೆ ಹೇಗಿದ್ದಾರೆ ಎಂಬುದನ್ನು ನೋಡು. ಅವರಿಗಿಂತ ಒಳ್ಳೆಯ ಸಂಗಾತಿ ನಿನಗೆ ಸಿಗಲು ಸಾಧ್ಯವೇ ಇಲ್ಲ. ಅದೂ ಅಲ್ಲದೇ ಅಜ್ಜಿಯ ಆರೋಗ್ಯ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಇಂತಹ ಸಂದರ್ಭದಲ್ಲಿ ನೀನು ಬೇರೆ ಹುಡುಗಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೀಯಾ ಎಂಬುದು ಅವರಿಗೆ ತಿಳಿದರೆ ಏನಾಗಬಹುದು ಎಂಬುದನ್ನು ಯೋಚನೆ ಮಾಡುʼ ಎಂದು ಇರುವ ಪರಿಸ್ಥಿತಿಯನ್ನು ತಿಳಿಸಿ ಆಕಾಶ್ ಮನಸ್ಸಿನಿಂದ ಸಹನಾಳನ್ನು ತೆಗೆದು ಹಾಕಿಸುವ ಪ್ರಯತ್ನ ಮಾಡುತ್ತಾನೆ.
ಋಣ ಸಂದಾಯ ಮಾಡಲು ಬಂದಿರುವೆ ಎನ್ನುವ ಭಾರ್ಗವಿ
ಸಹನಾ ಭಾರ್ಗವಿ ಬಳಿ ʼನೀನು ಇನ್ನು ಎಷ್ಟು ದಿನ ಇಲ್ಲಿರ್ತೀಯಾ ಮಾಮ್ʼ ಎಂದು ಸಹನಾ ಕೇಳಿದ್ದಕ್ಕೆ ಉತ್ತರಿಸುವ ಭಾರ್ಗವಿ ʼನಾನು ಇನ್ನು ಮುಂದೆ ಹೋಗುವುದಿಲ್ಲ. ಇಲ್ಲಿಯೇ ಇರುವ ಸಲುವಾಗಿ ಬಂದಿದ್ದೇನೆʼ ಎನ್ನುತ್ತಾಳೆ. ಇದನ್ನು ಕೇಳಿ ಶಾಕ್ ಆಗುವ ಸಹನಾ ʼಹಾಗಾದ್ರೆ ನೀವು ನನಗೆ ಸರ್ಪ್ರೈಸ್ ಕೊಡುವ ಸಲುವಾಗಿ ಬಂದಿಲ್ಲ, ನಿಮ್ಮ ಮನದಲ್ಲಿ ಬೇರೆ ಏನೋ ಉದ್ದೇಶ ಇದೆ. ನಿಮ್ಮ ಮನಸ್ಸಿನಲ್ಲಿ ಏನಿದೆ? ನೀವ್ಯಾಕೆ ಬಂದ್ರಿʼ ಎಂದು ಪ್ರಶ್ನೆ ಮಾಡುತ್ತಾಳೆ. ʼಒಬ್ಬರ ಋಣ ಸಂದಾಯ ಮಾಡಬೇಕಿತ್ತು, ಅದಕ್ಕಾಗಿಯೇ ಬಂದೆʼ ಎನ್ನುತ್ತಾಳೆ ಭಾರ್ಗವಿ. ʼಯಾರಮ್ಮ ಅವರು, ನಿನಗೂ ಅವರಿಗೂ ಏನ್ ಸಂಬಂಧʼ ಎಂದು ಸಹನಾ ಕೇಳಿದ್ದಕ್ಕೆ ʼಅದು ತುಂಬಾ ದೊಡ್ಡ ಸಂಬಂಧ, ಅದನ್ನು ಮಾತಿನಲ್ಲಿ ಹೇಳಲು ಆಗುವುದಿಲ್ಲ. ನನ್ನ ಜೀವನದಲ್ಲಿ ಈ ಒಂದು ಸ್ಥಿತಿಯಲ್ಲಿ ಇದ್ದೇನೆ ಅಂದ್ರೆ ಅದಕ್ಕೆ ಅವರೇ ಕಾರಣʼ ಎಂದು ತನ್ನ ದ್ವೇಷ ಮಾತುಗಳನ್ನು ಮುಂದುವರಿಸುತ್ತಾಳೆ. ಸಹನಾಗೆ ತನ್ನ ತಾಯಿ ನಿಜಕ್ಕೂ ಯಾರದ್ದೋ ಋಣದಲ್ಲಿ ಇದ್ದಾಳೆ ಎನ್ನುವುದು ಅರ್ಥ ಆಗುತ್ತದೆ ಹೊರತು ಆಕೆ ಆಡಿದ್ದು ದ್ವೇಷದ ಮಾತುಗಳು ಎಂಬುದು ಅರಿವಾಗುವುದಿಲ್ಲ.
ಇತ್ತ ಸುಧಾಮೂರ್ತಿ ʼಹಕ್ಕಿಗೂಡಿಗೆ ಕಲ್ಲು ಬಿದ್ದಾಗ ಚದುರಿ ಹೋಗುವ ಹಕ್ಕಿಗಳು ಮತ್ತೆ ಅದೇ ಗೂಡಿಗೆ ಬಂದು ಸೇರುವುದಿಲ್ಲ ಎಂಬ ಭಯ ನನ್ನನ್ನು ಕಾಡುತ್ತಿದೆ. ಅದಕ್ಕಾಗಿ ಈ ಕುಟುಂಬದ ಒಗ್ಗಟ್ಟು ಎಂದಿಗೂ ಒಡೆಯಲು ಬಿಡಬೇಡ ಎಂದು ನಿನ್ನ ಬಳಿ ಪ್ರಮಾಣ ಮಾಡಿಸಿಕೊಂಡಿದ್ದು, ನೀನು ಆ ಮಾತನ್ನು ಯಾವಾಗಲೂ ತಪ್ಪಬೇಡʼ ಎಂದು ಪುಷ್ಪಾ ಬಳಿ ಮನವಿ ಮಾಡಿಕೊಳ್ಳುತ್ತಾರೆ.
ಅನುಪಮಾ ಬಳಿ ವೈರಿಗಳ ಬಗ್ಗೆ ಕೇಳುತ್ತಿದ್ದಾಳೆ ಪುಷ್ಪಾ
ಅಡುಗೆಮನೆಯಲ್ಲಿ ಅಜ್ಜಮ್ಮ ಹೇಳಿ ಮಾತನ್ನೇ ಮೆಲುಕು ಹಾಕುವ ಪುಷ್ಪಾಳನ್ನು ನೋಡಿ ಅನುಪಮಾ ʼಏನ್ ಪುಷ್ಪಾ ತುಂಬಾ ಗಂಭೀರವಾಗಿ ಯೋಚನೆ ಮಾಡ್ತಾ ಇದೀಯʼ ಎಂದು ಕೇಳುತ್ತಾಳೆ. ಅದಕ್ಕೆ ಪುಷ್ಪಾ ʼನಮ್ಮ ಈ ಮನೆಯ ಮೇಲೆ ಯಾರಿಗಾದ್ರೂ ದ್ವೇಷ ಇದ್ಯಾ, ಈ ಮನೆಯ ಒಗ್ಗಟ್ಟು ಮುರಿಯಲು ಯಾರಾದ್ರೂ ಪ್ರಯತ್ನ ಮಾಡ್ತಾ ಇದಾರಾ? ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅನುಪಮಾ ʼಖಂಡಿತ ಯಾರಿಗೂ ದ್ವೇಷ ಇಲ್ಲ, ಒಂದು ವೇಳೆ ಇದ್ರೂ ಈ ಮನೆಯ ಒಗ್ಗಟ್ಟನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಈ ಮನೆಯನ್ನು ಎಲ್ಲ ಮನೆಗಳಂತೆ ಸಿಮೆಂಟು, ಇಟ್ಟಿಗೆ, ಕಲ್ಲು, ಮಣ್ಣಿನಿಂದ ನಿರ್ಮಾಣ ಮಾಡಿದ್ದಲ್ಲ. ಇದು ಪ್ರೀತಿ, ಸಂಬಂಧ, ಮಮಕಾರ, ಗೌರವ, ಪ್ರೇಮದಿಂದ ಕಟ್ಟಿಸಿದ ಮನೆ, ಇದನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲʼ ಎಂದು ಪುಷ್ಪಾಳಿಗೆ ಧೈರ್ಯ ತುಂಬುತ್ತಾಳೆ ಅನುಪಮಾ.
ಪುಷ್ಪಾಗೆ ಅಜ್ಜಮ್ಮನ ಮಾತಿನ ಹಿಂದಿನ ಮರ್ಮ ಅರಿವಾಗುವುದೇ, ಸಹನಾ ತನ್ನ ತಾಯಿಯ ದ್ವೇಷದ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಾಳಾ, ಆಕಾಶ್‌ಗೆ ಈಗಲಾದ್ರೂ ತಾನು ಮಾಡುತ್ತಿರುವುದು ತಪ್ಪು ಎಂಬುದು ಅರ್ಥವಾಗುತ್ತಾ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ವಿಭಾಗ