Brundavana Serial: ಪುಷ್ಪಾಗೆ ಹತ್ತಿರವಾಗುವ ಹೊತ್ತಿನಲ್ಲೇ ಪ್ರಪೋಸ್ ಮಾಡೇಬಿಟ್ಲು ಸಹನಾ, ಆಕಾಶ್ ಮುಂದಿನ ನಡೆಯೇನು?
Brindavana Kannada Serial Today Episode April 11th: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಹೆಂಡತಿಯನ್ನು ಮನಸಾರೆ ಹೊಗುತ್ತಿದ್ದಾನೆ ಆಕಾಶ್. ಪುಷ್ಪಾಳ ಮೋನೊ ಆಕ್ಟಿಂಗ್ ನೋಡಿ ಮನೆಯವರು ಫಿದಾ. ಕಾಲೇಜಿನಲ್ಲಿ ಆಕಾಶ್‌ಗೆ ಪ್ರಪೋಸ್ ಮಾಡೇ ಬಿಟ್ಲು ಸಹನಾ.
ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್ 11) ಸಂಚಿಕೆಯಲ್ಲಿ ಪುಷ್ಪಾ ಮನೆಯವರ ತಮಾಷೆಯ ಕ್ಷಣಗಳನ್ನು ವಿಡಿಯೊ ಮಾಡಿಟ್ಟುಕೊಂಡು ಅದನ್ನು ಎಡಿಟ್ ಮಾಡಿ ಎಲ್ಲರೆದುರು ತೋರಿಸಿದ್ದರ ಬಗ್ಗೆ ಖುಷಿ ವ್ಯಕ್ತಪಡಿಸುವ ಆಕಾಶ್, ಹೆಂಡತಿಯ ಬಳಿ ವಿಡಿಯೊ ಎಡಿಟಿಂಗ್ ಎಲ್ಲಾ ಯಾವಾಗ ಕಲಿತದ್ದು ಎಂದು ಪ್ರಶ್ನೆ ಮಾಡುತ್ತಾನೆ, ಅಲ್ಲದೇ ನೀವು ಏನೇ ಕೆಲಸ ಆದ್ರೂ ಬಹಳ ಬೇಗ ಕಲಿಯುತ್ತೀರಾ, ನಿಮ್ಮಲ್ಲಿರುವ ಶ್ರದ್ಧೆಯೇ ಇದಕ್ಕೆ ಕಾರಣ ಎಂದು ಹೊಗಳುತ್ತಾನೆ. ಅದಕ್ಕೆ ಪುಷ್ಪಾ ʼಹಾಗೇನಿಲ್ಲ ಆಕಾಶ್ ಅವರೇ, ನನಗೆ ವಿಡಿಯೊ ಎಡಿಟ್ ಮಾಡುವುದೆಲ್ಲಾ ಇನ್ನೂ ಅಷ್ಟಾಗಿ ಗೊತ್ತಿಲ್ಲ, ಇದನ್ನು ನಂಗೆ ಸಿಂಧು ಹೇಳಿಕೊಟ್ಟಿದ್ದು, ಅಲ್ಪಸ್ವಲ್ಪ ಗೊತ್ತಷ್ಟೇʼ ಎಂದು ವಿಧೇಯಳಾಗಿ ಹೇಳುತ್ತಾಳೆ. ಆಗ ಆಕಾಶ್ ʼಅಜ್ಜಿ ನಿಮಗೆ ಸುಮ್ನೆ ಮನೆ ಜವಾಬ್ದಾರಿ ಕೊಟ್ಟಿಲ್ಲ, ನಿಮ್ಮಲ್ಲಿ ತಾಳ್ಮೆ, ಸಮಯಪ್ರಜ್ಞೆ ಎಲ್ಲವೂ ಇದೆ. ಇದ್ರಿಂದ ನೀವು ಮನೆಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದೀರಿ, ಇದೆಲ್ಲವನ್ನೂ ತಿಳಿದೇ ಅಜ್ಜಿ ನಿಮಗೆ ಮನೆ ಜವಾಬ್ದಾರಿ ಕೊಟ್ಟಿದ್ದುʼ ಎಂದು ಹೊಗಳುತ್ತಾನೆ.
ಆಕಾಶ್-ಪುಷ್ಪಾ ರೊಮ್ಯಾನ್ಸ್
ಮರುದಿನ ಬೆಳಿಗ್ಗೆ ಆಕಾಶ್‌ಗೆ ಸ್ನಾನಕ್ಕೆ ನೀರು ರೆಡಿ ಮಾಡಿ, ಕಾಫಿ ತರುವ ಪುಷ್ಪಾ ಅವನನ್ನು ಎಬ್ಬಿಸುತ್ತಾಳೆ. ʼಕಾಲೇಜಿಗೆ ಟೈಮ್ ಆಯ್ತು, ಎದ್ದು ರೆಡಿ ಆಗಿ, ಮೊದಲು ಕಾಫಿ ಕುಡಿಯಿರಿʼ ಎಂದು ಹೇಳಿ ಹೊರಡುವ ಪುಷ್ಪಾ ಇದ್ದಕ್ಕಿದ್ದಂತೆ ಏನೋ ನೆನಪಾಗಿ ತಿರುಗಿ ಬಿಡುತ್ತಾಳೆ. ಅಲ್ಲೇ ಆಕಾಶ್‌ಗೆ ಬ್ಯಾಲೆನ್ಸ್ ತಪ್ಪಿದಂತಾಗಿ ಪುಷ್ಪಾ, ಆಕಾಶ್ ಇಬ್ಬರೂ ಹಾಸಿಗೆಯ ಮೇಲೆ ಬೀಳುತ್ತಾರೆ. ಕ್ಷಣಕಾಲ ಹಾಗೇ ಇದ್ದಾಗ ಆ ಕಡೆಯಿಂದ ಅನುಪಮಾ ಪುಷ್ಪಾಳನ್ನು ಕೂಗುತ್ತಾರೆ. ಆದರೆ ಆಕಾಶ್ ಪುಷ್ಪಾಳನ್ನು ಹೋಗಲು ಬಿಡುವುದಿಲ್ಲ. ಆದರೆ ಅವನಿಂದ ತಪ್ಪಿಸಿಕೊಂಡು ಹೋಗುವ ಪುಷ್ಪಾ ಬಾಗಿಲ ಬಳಿ ಸೆರಗು ಎಳೆದಂತಾಗಿ ಅಲ್ಲೇ ನಿಂತು ಬಿಡುತ್ತಾಳೆ. ಬಿಡಿ ಆಕಾಶ್ ಅವರೇ ಎಂದು ನಾಚಿಕೊಳ್ಳುತ್ತಾ ನಿಲ್ಲುತ್ತಾಳೆ. ಆದರೆ ಆಕಾಶ್ ಆ ಕಡೆಯಿಂದ ಎದುರು ಬಂದಾಗ ತಿರುಗಿ ನೋಡುವ ಪುಷ್ಪಾಗೆ ಸೆರಗು ಎಳೆದಿದ್ದು ಆಕಾಶ್ ಅಲ್ಲ, ಮೇಜಿಗೆ ಸೆರುಗು ಸಿಕ್ಕಿಕೊಂಡಿದೆ ಎಂಬುದು ಅರ್ಥ ಆಗುತ್ತದೆ. ಆಗ ಆಕಾಶ್ ನಾವು ಅಂದುಕೊಳ್ಳುವ ಒಂದು ಸಣ್ಣ ತಪ್ಪು ಎಷ್ಟು ದೊಡ್ಡ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ ಅಲ್ವಾ ಎಂದು ಪ್ರಶ್ನೆ ಮಾಡುತ್ತಾನೆ. ಆಕಾಶ್ ಸಾರಿ ಕೇಳುವ ಪುಷ್ಪಾಳಿಗೆ ಆಕಾಶ್ ಆ ಮಾತನ್ನು ತನಗೆ ತಾನೇ ಹೇಳಿಕೊಂಡಿದ್ದು ಎಂಬುದು ಅರ್ಥವಾಗುವುದಿಲ್ಲ.
ಕಾಲೇಜಿನಲ್ಲಿ ಆಕಾಶ್‌ಗೆ ಪ್ರಪೋಸ್ ಮಾಡುವ ಸಹನಾ
ಇತ್ತ ಮನೆಯಲ್ಲಿ ಕನ್ನಡಿ ಮುಂದೆ ನಿಂತು ಸಿಂಗರಿಸಿಕೊಳ್ಳುವ ಸಹನಾಳನ್ನು ಭಾರ್ಗವಿಗೆ ತೋರಿಸುತ್ತಾನೆ ಆಕೆಯ ತಮ್ಮ ಭಾಸ್ಕರ. ಸಹನಾ ಖುಷಿಯಿಂದ ಕನ್ನಡಿ ಮುಂದೆ ನಿಂತಿದ್ದನ್ನು ನೋಡಿ ಭಾರ್ಗವಿಗೂ ಅನುಮಾನ ಹುಟ್ಟುತ್ತದೆ. ಅಲ್ಲದೇ ಅದಕ್ಕೆ ತಕ್ಕಂತೆ ಭಾಸ್ಕರ ಕೂಡ ಒಗ್ಗರಣೆ ಹಾಕುತ್ತಾನೆ. ಜೊತೆಗೆ ಸಹನಾ ಪ್ರೀತಿಸುತ್ತಿರುವ ಹುಡುಗ ಯಾರು, ಅವರ ಹಿನ್ನೆಲೆ ಏನು ಎಂಬುದನ್ನು ನಾನು ಕಂಡುಹಿಡಿಯುತ್ತೇನೆ ಎನ್ನುವ ಭಾಸ್ಕರ ಮಾತಿಗೆ ಅಡ್ಡ ಹಾಕುವ ಭಾರ್ಗವಿ, ಸಹನಾಳ ವಿಚಾರ ನನಗೆ ಬಿಡು, ಅವಳಿಗೆ ಯಾವುದು ಸರಿ, ಯಾವುದು ಹೊಂದುತ್ತೆ ಎಂಬುದನ್ನು ನಾನು ನಿರ್ಧಾರ ಮಾಡುತ್ತೇನೆ. ನೀನು ನಿನಗೆ ವಹಿಸಿರುವ ಕೆಲಸದ ಕಡೆ ಗಮನ ಕೊಡು ಎಂದು ಗದರುತ್ತಾಳೆ. ಅದಕ್ಕೆ ಭಾಸ್ಕರ ಅರ್ಥ ಆಯ್ತು, ನಾನು ಬೃಂದಾವನ ನೆಮ್ಮದಿ ಹಾಳು ಮಾಡಬೇಕು, ಅವರ ಕಣ್ಣಲ್ಲಿ ನೀರು ಬರಿಸಿ, ನಿಮ್ಮ ಮುಖದಲ್ಲಿ ನಗು ಮೂಡುವಂತೆ ಮಾಡುವ ಕೆಲಸ ನನ್ನದು ಎಂದು ಹೇಳುತ್ತಾನೆ.
ಪುಷ್ಪಾಳ ಮೋನೊ ಆಕ್ಟಿಂಗ್
ನಿಮ್ಮ ಮನೆಯಲ್ಲಿ ಬಟ್ಟೆ ಮಡಿಸುತ್ತಿರುವ ಪುಷ್ಪಾ ಆಕಾಶ್ ಶರ್ಟ್ ಧರಿಸಿ ಮೊನೊ ಆಕ್ಟಿಂಗ್ ಮಾಡುತ್ತಾಳೆ. ಆಕಾಶ್ ಪಾತ್ರವನ್ನೂ ತಾನೇ ಮಾಡುವ ಪುಷ್ಪಾ ತಮ್ಮಿಬ್ಬರ ನಡುವೆ ಪ್ರೀತಿಯ ಸಂಭಾಷಣೆಯಾದರೆ ಹೇಗಿರುತ್ತದೆ ಎಂದು ನಟಿಸುತ್ತಿರುತ್ತಾಳೆ. ಇದನ್ನೆಲ್ಲಾ ಅನುಪಮಾ, ರತ್ನ, ಸ್ನೇಹ ಕದ್ದು ನೋಡುತ್ತಿರುತ್ತಾರೆ. ಇತ್ತ ಮೋನೊ ಆಕ್ಟಿಂಗ್‌ನಲ್ಲೂ ಆಕಾಶ್‌ಗೆ ನೀವೇ ನನ್ನ ಸರ್ವಸ್ವ ನೀವಿಲ್ಲ ಅಂದ್ರೆ ನಂಗೆ ಬದುಕಿಲ್ಲ ಎನ್ನುವ ಪುಷ್ಪಾಳನ್ನು ನೋಡಿ ಮನೆಯವರು ಒಂದು ವೇಳೆ ಆಕಾಶ್‌ನನ್ನು ಯಾರಾದ್ರೂ ಕಿಡ್ನಾಪ್ ಮಾಡಿದ್ರೆ ಏನ್ ಮಾಡ್ತೀಯಾ ಎಂದು ತಮಾಷೆಗೆ ಕೇಳಿದ ಪ್ರಶ್ನೆಯಿಂದ ಗಾಬರಿಯಾಗುತ್ತಾಳೆ ಪುಷ್ಪಾ. ಅತ್ತ ಆಕಾಶ್ ಮುಂದೆ ಹೂಬೊಕೆ ಹಿಡಿದು ಮಂಡಿಯೂರಿ ಕುಳಿತು ಪ್ರೇಮ ಭಿಕ್ಷೆ ಬೇಡುತ್ತಿದ್ದಾಳೆ ಸಹನಾ.
ಸಹನಾಳನ್ನು ಆರಂಭದಿಂದಲೂ ಪ್ರೀತಿಸುತ್ತಿದ್ದ ಆಕಾಶ್‌ಗೀಗ ಪುಷ್ಪಾಳ ಮೇಲೆ ಪ್ರೀತಿ ಆಗಿದೆ. ಇತ್ತ ಸಹನಾ ತಾನಾಗಿಯೇ ಆಕಾಶ್‌ಗೆ ಪ್ರಪೋಸ್ ಮಾಡುತ್ತಿದ್ದಾಳೆ. ಆಕಾಶ್ ಸಹನಾ ಪ್ರೀತಿಯನ್ನ ಒಪ್ಪಿಕೊಂಡು ಪುಷ್ಪಾಳನ್ನು ಮರಿತಾನಾ, ತನಗೆ ಮದುವೆಯಾಗಿರುವ ವಿಚಾರವನ್ನ ಸಹನಾಳ ಮುಂದೆ ಹೇಳುತ್ತಾನಾ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನೋಡಬೇಕಿದೆ.
ವಿಭಾಗ