ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಫೋನ್‌ನಲ್ಲಿ ಆಕಾಶ್‌-ಪುಷ್ಪಾ ಪ್ರೇಮ ಸಲ್ಲಾಪ; ಹಣದ ವಿಚಾರಕ್ಕೆ ಅಪ್ಪಣ್ಣನಿಗೆ ಬೆದರಿಕೆ ಹಾಕುವ ಗಿರಿಜಾ

Brundavana Serial: ಫೋನ್‌ನಲ್ಲಿ ಆಕಾಶ್‌-ಪುಷ್ಪಾ ಪ್ರೇಮ ಸಲ್ಲಾಪ; ಹಣದ ವಿಚಾರಕ್ಕೆ ಅಪ್ಪಣ್ಣನಿಗೆ ಬೆದರಿಕೆ ಹಾಕುವ ಗಿರಿಜಾ

Brindavana Kannada Serial Today Episode April 29th: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಆಕಾಶ್‌-ಪುಷ್ಪಾ ಫೋನ್‌ನಲ್ಲೇ ಸರಸ-ಸಲ್ಲಾಪ ನಡೆಸುತ್ತಿದ್ದರೆ, ಬೃಂದಾವನದ ಕುಡಿ ಆಕಾಶ್‌ನಿಂದಲೇ ಮನೆ ಒಡೆಯುತ್ತೇನೆ ಎಂದು ಮತ್ತೆ ಹೇಳುತ್ತಿದ್ದಾಳೆ ಭಾರ್ಗವಿ. ಪುಷ್ಪಾ ಮನೆಯವರ ಬಳಿ ಹಣ ಕೇಳದಿದ್ದರೆ ಸಾಯುವುದಾಗಿ ಬೆದರಿಕೆ ಹಾಕುವ ಗಿರಿಜಾ.

ಫೋನ್‌ನಲ್ಲಿ ಆಕಾಶ್‌-ಪುಪ್ಪಾ ಪ್ರೇಮ ಸಲ್ಲಾಪ; ಹಣದ ವಿಚಾರಕ್ಕೆ ಅಪ್ಪಣ್ಣನಿಗೆ ಬೆದರಿಕೆ ಹಾಕುವ ಗಿರಿಜಾ
ಫೋನ್‌ನಲ್ಲಿ ಆಕಾಶ್‌-ಪುಪ್ಪಾ ಪ್ರೇಮ ಸಲ್ಲಾಪ; ಹಣದ ವಿಚಾರಕ್ಕೆ ಅಪ್ಪಣ್ಣನಿಗೆ ಬೆದರಿಕೆ ಹಾಕುವ ಗಿರಿಜಾ

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 29)ಸಂಚಿಕೆಯಲ್ಲಿ ಆಕಾಶ್‌ ಪುಷ್ಪಾಳ ಮೇಲೆ ಒಲವಿನ ಧಾರೆಯನ್ನೇ ಹರಿಸುತ್ತಿದ್ದಾನೆ. ಗಂಡ-ಹೆಂಡತಿ ಇಬ್ರು ಮನೆಯಲ್ಲೇ ಇದ್ರೂ ನವಪ್ರೇಮಿಗಳಂತೆ ಫೋನ್‌ನಲ್ಲಿ ಸರಸ ಸಲ್ಲಾಪ ನಡೆಸುತ್ತಿರುತ್ತಾರೆ. ಆ ಹೊತ್ತಿಗೆ ಆಕಾಶ್‌ ಮಾತನ್ನು ಕದ್ದು ಕೇಳಿಸಿಕೊಳ್ಳುವ ಸತ್ಯಮೂರ್ತಿ ಆಕಾಶ್‌ ಬೇರೆ ಯಾವುದೋ ಹುಡುಗಿ ಜೊತೆ ಮಾತನಾಡುತ್ತಿದ್ದಾನೆ ಎಂದು ಭಾವಿಸಿ ಸ್ನೇಹಾ, ಅನುಪಮಾ, ರತ್ನಾಳ ಮುಂದೆ ʼಆಕಾಶ್‌ ಸರಿಯಿಲ್ಲ, ಅವನು ಯಾವುದೋ ಹುಡುಗಿ ಜೊತೆ ಕದ್ದುಮುಚ್ಚಿ ಮಾತನಾಡುತ್ತಿದ್ದಾನೆ. ನಾನು ಮೊದಲೇ ಹೇಳಿದ್ದೆ ಅವನಿಗೆ ಪುಷ್ಪಾ ಮೇಲೆ ಪ್ರೀತಿ ಇರಲಿಲ್ಲ ಅಂತ, ನೀವ್ಯಾರು ಕೇಳಿಲ್ಲʼ ಎಂದು ಒಂದೇ ಸಮ ಒದರುತ್ತಾನೆ. ಅವರು ಕೂಡ ಮುಗ್ಧರಂತೆ ʼಹೌದಾ ಮಾವ, ಈಗೇನು ಮಾಡೋಣ?ʼ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಸತ್ಯಮೂರ್ತಿ ʼಮಾಡೋದೇನು ಈಗಲೇ ಹೋಗಿ ನಾನು ಪುಷ್ಪಾಳಿಗೆ ಹೇಳ್ತೀನಿ ನೀವು ಬನ್ನಿʼ ಎಂದು ಕರೆದುಕೊಂಡು ಹೋಗ್ತಾನೆ. ಅಡುಗೆಮನೆಗೆ ಹೋಗುವ ಸತ್ಯಮೂರ್ತಿಗೆ ಸತ್ಯ ಅರಿವಾಗುತ್ತದೆ. ಆಕಾಶ್‌ ಮಾತನಾಡುತ್ತಿರುವುದು ಪುಷ್ಪಾ ಜೊತೆಗೆ ಎಂದು ತಿಳಿದ ಸತ್ಯಮೂರ್ತಿ ಮನೆಯ ಹೆಂಗಸರ ಮುಂದೆ ಪೇಚಿಗೆ ಸಿಲುಕುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಹಟ ಬಿಡದ ಭಾರ್ಗವಿ

ಮಗಳ ಪ್ರೀತಿಯನ್ನು ಆಕಾಶ್‌ ರಿಜೆಕ್ಟ್‌ ಮಾಡಿದ್ದರೂ ಆ ವಿಷಯವನ್ನು ಮಗಳಿಗೆ ಹೇಳದ ಭಾರ್ಗವಿ ಆಕಾಶ್‌ನಿಂದಲೇ ವೃಂದಾವನ ಒಡೆಯುತ್ತಾನೆ ಎಂದು ಭಾಸ್ಕರ ಬಳಿ ಹೇಳುತ್ತಾಳೆ. ಅವನಿಗೆ ಮಗಳ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿ, ಆ ಮೂಲಕ ಬೃಂದಾವನ ನೆಮ್ಮದಿ ಕೆಡಿಸುತ್ತೇನೆ ಎಂದು ಪಣ ತೊಡುತ್ತಾಳೆ. ಅವನು ಈಗ ಮಗಳನ್ನು ರಿಜೆಕ್ಟ್‌ ಮಾಡಿದ್ದರೂ ಮುಂದೆ ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತಾನೆ, ಒಪ್ಪಿಕೊಳ್ಳುವ ಹಾಗೆ ನಾನು ಮಾಡುತ್ತೇನೆ ಎಂದು ಭಾರ್ಗವಿ ಹಠ ಹಿಡಿಯುತ್ತಾಳೆ.

ಪುಷ್ಪಾ ಮನೆಯ ಬಳಿ ಹಣ ಕೇಳುವಂತೆ ಗಿರಿಜಾಳ ಒತ್ತಾಯ

ಅಪ್ಪಣ್ಣನ ಬಳಿ ತಾನು ಸಾಲ ಮಾಡಿದ್ದು, ನನಗೆ 2 ಲಕ್ಷ ಬೇಕು ಎಂದು ಬೇಡಿಕೆ ಇಡುತ್ತಾಳೆ. ಅಷ್ಟೊಂದು ದುಡ್ಡು ನನ್ನ ಬಳಿ ಎಲ್ಲಿದೆ ಎಂದು ಅಪ್ಪಣ್ಣ ಕೇಳಿದಾಗ ಗಿರಿಜಾ ಪುಷ್ಪಾಳ ಮನೆಯವರ ಬಳಿ ಹೋಗಿ ಹಣ ಕೇಳಿ ಎಂದು ಬೇಡಿಕೆ ಇಡುತ್ತಾಳೆ. ಇದಕ್ಕೆ ಗಂಡ ಒಪ್ಪದೇ ಇದ್ದಾಗ ವಿಷ ಕುಡಿದು ಸಾಯುತ್ತೇನೆ ಎಂದು ಹಟ ಹಿಡಿಯುತ್ತಾಳೆ. ಇದರಿಂದ ಗಂಡ ಹೆದರಿ ಹಣ ಕೇಳಬಹುದು ಎಂದು ಭಾವಿಸಿದ್ದ ಗಿರಿಜಾಗೆ ಚಮಕ್‌ ಕೊಡುವ ಅಪ್ಪಣ್ಣ, ವಿಷ ನಾನೇ ಕುಡಿಸ್ತೀನಿ ನಿಂಗೆ ಎಂದು ಉಲ್ಟಾ ಬೆದರಿಕೆ ಹಾಕುತ್ತಾನೆ, ಅಲ್ಲದೇ ತಾನು ಯಾವುದೇ ಕಾರಣಕ್ಕೂ ಸ್ವಾಭಿಮಾನ ಬಿಟ್ಟು ಬದುಕುವವನಲ್ಲ ಎಂದು ಗಿರಿಜಾಳಿಗೆ ಮನವರಿಕೆ ಮಾಡಿಸುತ್ತಾನೆ. ಜೀವ ಭಯದಿಂದ ನಡುಗುವ ಗಿರಿಜಾ ದುಡ್ಡಿನ ಆಸೆ ಬಿಟ್ಟು ಒಳಗೆ ನಡೆಯುತ್ತಾಳೆ.

ಆಕಾಶ್‌-ಪುಷ್ಪಾ ಪ್ರೀತಿ ಬೆಳೆದು ಹೆಮ್ಮರವಾಗುತ್ತಾ, ಸಹನಾಳಿಗೆ ಆಕಾಶ್‌ ರಿಜೆಕ್ಟ್‌ ಮಾಡಿರುವ ವಿಚಾರ ತಿಳಿಸದ ಭಾರ್ಗವಿ ಮಾಡಲು ಹೊರಟಿರುವುದಾದ್ರೂ ಏನು, ಆಕೆ ಹೇಳಿದಂತೆ ಸಹನಾಳ ಪ್ರೀತಿಯಲ್ಲಿ ಬೀಳ್ತಾನಾ ಆಕಾಶ್‌ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point