ಬೃಂದಾವನ ಸೀರಿಯಲ್: ಸುಧಾಮೂರ್ತಿ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ; ಪೂಜೆ ದಿನವೂ ಪುಷ್ಪಾ ಮೇಲೆ ರೇಗುವುದು ನಿಲ್ಲಿಸಿಲ್ಲ ಆಕಾಶ್
Brindavana Kannada Serial Today Episode Feb 8: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಆಕಾಶ್ ಮನೆಯಲ್ಲಿ ಪೂಜೆ ತಯಾರಿ ಜೋರಾಗಿ ನಡೆಯುತ್ತಿದೆ. ಇತ್ತ ಗಿರಿಜಾ ಪುಷ್ಪಾಳ ಮನೆ ಕಡೆಗೆ ಹೊರಟು ನಿಂತಿದ್ದಾಳೆ. ಪೂಜೆ ದಿನವೂ ಆಕಾಶ್ ಪುಷ್ಪಾ ಮೇಲೆ ರೇಗೋದು ಬಿಡಲಿಲ್ಲ.
ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.8) ಸಂಚಿಕೆಯಲ್ಲಿ ಸುಧಾಮೂರ್ತಿಯವರ ಮನೆಯಲ್ಲಿ ಪೂಜೆ ತಯಾರಿಯ ಸಡಗರ ಎದ್ದು ಕಾಣುತ್ತಿತ್ತು. ಆಕಾಶ್ ತನ್ನ ತಂಗಿ ಜೊತೆ ಸೇರಿ ಬಂಧುಗಳು, ಸ್ನೇಹಿತರಿಗೆಲ್ಲಾ ಫೋನ್ ಕಾಲ್ ಮಾಡಿ ಆಹ್ವಾನ ನೀಡಿರುತ್ತಾನೆ. ಆಗ ಅಲ್ಲಿಗೆ ಬಂದ ಪುಷ್ಪಾಳನ್ನು ನೋಡಿದ ತಂಗಿ ʼಅಣ್ಣ ಅತ್ತಿಗೆ ಬಂದ್ರು, ಇನ್ನು ನಂಗೆ ಇಲ್ಲಿ ಕೆಲಸ ಇಲ್ಲ. ನಿಂಗೆ ಕಾಲ್ ಮಾಡೋಕೆ ಅತ್ತಿಗೆ ಸಹಾಯ ಮಾಡ್ತಾರೆʼ ಅಂತಾಳೆ. ಅದಕ್ಕೆ ಆಕಾಶ್ ʼಅವರು ಬಂದ್ರೆ ನಿಂಗೇನು, ನೀನು ನಂಬರ್ ಹೇಳು ನಾನು ಕಾಲ್ ಮಾಡ್ತೀನಿʼ ಅಂತ ಹೇಳಿ ತಂಗಿಯ ಬಳಿ ಇಲ್ಲೇ ಇರು ಅಂತಾನೇ. ಆದರೆ ಅದಕ್ಕೆ ಒಪ್ಪದ ಅವಳು ರೂಮ್‌ನಿಂದ ಹೊರಗೆ ಹೋಗುತ್ತಾಳೆ.
ಇತ್ತ ಆಕಾಶ್ ವಧುದಕ್ಷಿಣೆ ಬಗ್ಗೆ ಕೇಳಿದ್ದು ತಮಾಷೆಗಾಗಿ, ನಿನ್ನನ್ನು ರೇಗಿಸುವ ಸಲುವಾಗಿ ಹಾಗೆ ಕೇಳಿದ್ದಾನೆ ಎಂದು ಅತ್ತೆ ಹಾಗೂ ಅಜ್ಜಮ್ಮ ಹೇಳಿದ್ದನ್ನು ಸತ್ಯ ಎಂದು ನಂಬಿಕೊಂಡ ಪುಷ್ಪಾ, ಆಕಾಶ್ ಬಳಿ ʼನೀವು ಇಷ್ಟೊಂದು ತಮಾಷೆ ಮಾಡ್ತೀರಾ ಗೊತ್ತಿರಲಿಲ್ಲ. ವಧುದಕ್ಷಿಣೆ ಅಂತೆಲ್ಲಾ ಇಲ್ಲ ಅಂತೆ, ಅದೆಲ್ಲಾ ನೀವು ತಮಾಷೆಗಾಗಿ ಮಾಡಿದ್ದು ಅಂತ, ಅತ್ತೆ ಹಾಗೂ ಅಜ್ಜಿ ಹೇಳಿದ್ರುʼ ಅಂತ ನಗುತ್ತಲೇ ಹೇಳುತ್ತಾಳೆ. ಅಲ್ಲದೆ ನೀವು ಯಾರಿಗೆ ಕಾಲ್ ಮಾಡ್ಬೇಕು ಹೇಳಿ ನಾನು ನಂಬರ್ ಹೇಳ್ತೀನಿ ಅಂತಾಳೆ. ಮೊದಲೇ ಅಜ್ಜಿ, ಅಮ್ಮನ ಬಳಿ ವಧುದಕ್ಷಿಣೆ ಬಗ್ಗೆ ಕೇಳಿದ್ದ ಪುಷ್ಪಾಳ ಮೇಲೆ ಕೋಪಗೊಂಡಿದ್ದ ಆಕಾಶ್ ಕೋಪದಿಂದ ಪುಷ್ಪಾಳ ಕೈಯಲ್ಲಿದ್ದ ಪುಸ್ತಕ ಕಿತ್ತು ರೂಮ್‌ನಿಂದ ಹೊರ ಹೋಗುತ್ತಾನೆ. ಆಕಾಶ್ ಕೋಪಕ್ಕೆ ಕಾರಣವೇ ಅರಿಯದ ಪುಷ್ಪಾ ಮಾತ್ರ ದಂಗಾಗಿ ನಿಲ್ಲುತ್ತಾಳೆ.
ಪೂಜೆ ತಯಾರಿಯಲ್ಲಿ ಮನೆ ಮಂದಿ
ಸುಧಾಮೂರ್ತಿಯವರ ಮನೆಯ ಮಹಿಳಾಮಣಿಗಳೆಲ್ಲಾ ನಾಳೆ ಪೂಜೆಗೆ ಅಡುಗೆ ಏನು ಮಾಡಬೇಕು ಎಂದು ಚರ್ಚೆಯಲ್ಲಿ ಮುಳುಗಿರುತ್ತಾರೆ. ಅಷ್ಟೊಂದು ಜನರಿಗೆ ಅಡುಗೆ ಮಾಡಲು ನಮ್ಮಿಂದ ಸಾಧ್ಯಾನಾ ಅಂತ ಒಬ್ರು ಕೇಳಿದ್ರೆ, ಏನೆಲ್ಲಾ ಮಾಡ್ಬೇಕು ಅನ್ನುವ ಪ್ರಶ್ನೆ ಇನ್ನೊಬ್ಬರದ್ದು. ಹೀಗೆ ಚರ್ಚೆ ಮಾಡುತ್ತಾ ಮಾಡುತ್ತಾ ಕೊನೆಗೆ ಮನೆಯವರೆಲ್ಲಾ ಸೇರಿ ಏನೆಲ್ಲಾ ಅಡುಗೆ ಮಾಡೋದು ಅನ್ನೋದನ್ನ ಫೈನಲ್ ಮಾಡ್ತಾರೆ. ಅಲ್ಲದೆ ಅಡುಗೆಮನೆಯಲ್ಲಿ ವಿಚಾರದಲ್ಲಿ ಗಂಡಸರನ್ನು ಸೇರಿಸಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆ.
ಪುಷ್ಪಾ ಮನೆಯತ್ತ ಗಿರಿಜಾ ಸವಾರಿ
ಮರುದಿನ ಬೆಳಿಗ್ಗೆ ಮನೆಯ ಗಂಡಸರೆಲ್ಲಾ ಪೂಜೆಗೆ ಮನೆಯನ್ನು ಅಲಂಕಾರ ಮಾಡುವುದರಲ್ಲಿ ನಿರತರಾಗಿದ್ರೆ ಪುಷ್ಪಾ ಅತ್ತಿಗೆ ಗಿರಿಜಾ ಅವರ ಮನೆಯತ್ತ ಹೊರಟಿರುತ್ತಾಳೆ. ದಾರಿಯಲ್ಲಿ ಬರುವಾಗ ಸ್ನೇಹಿತೆ ಲಲಿತಾಗೆ ಕರೆ ಮಾಡುವ ಪುಷ್ಪಾ ಅವಳಿಗೆ ಹೊಟ್ಟೆ ಉರಿಸುವ ಸಲುವಾಗಿ ನಾನು ಮೈಸೂರು ಅರಮನೆ, ಝೂ ಎಲ್ಲ ನೋಡಿಕೊಂಡು ಐಷಾರಾಮಿ ಹೋಟೆಲ್‌ನಲ್ಲಿ ಉಳಿದುಕೊಂಡೆ ಎನ್ನುತ್ತಾರೆ. ಅಲ್ಲದೇ ಹೋಟೆಲ್ ಹಾಸಿಗೆ, ಬಾತ್‌ರೂಮ್ ಬಗ್ಗೆ ವರ್ಣನೆ ಮಾಡುತ್ತಾ ಲಲಿತಾ ಇನ್ನಷ್ಟು ಉರಿದುಕೊಳ್ಳುವ ಹಾಗೆ ಮಾಡುತ್ತಾಳೆ.
ಬಿದ್ದೇ ಬಿಟ್ರು ಸತ್ಯಮೂರ್ತಿ
ಮನೆಗೆ ಹೂ, ತೋರಣಗಳಿಂದ ಅಲಂಕಾರ ಮಾಡುವ ಕಾಯಕದಲ್ಲಿ ತೊಡಗಿರುವ ಸುಧಾಮೂರ್ತಿ ಅಳಿಯಂದಿರು, ಮಕ್ಕಳು ಹಾಗೂ ಮೊಮ್ಮಕ್ಕಳು ಸತ್ಯಮೂರ್ತಿಯನ್ನು ರೇಗಿಸುತ್ತಿರುತ್ತಾರೆ. ಹೂವಿನ ಮಾಲೆ ಹಾಕಲು ಗೋಡೆಗೆ ಯಾರು ಮೊಳೆ ಹೊಡೆಯಬೇಕು ಎಂದು ಚರ್ಚಿಸಿ, ಸತ್ಯಮೂರ್ತಿಯನ್ನು ಏಣಿ ಮೇಲೆ ಹತ್ತಿಸಿ, ಗೊತ್ತಾಗದಂತೆ ಕೆಳಗೆ ಬೀಳಿಸಿ ಮಜಾ ತೆಗೆದುಕೊಳ್ಳುತ್ತಾರೆ.
ಪೂಜೆ ದಿನವೂ ಬೈಯೋದು ಬಿಡಲಿಲ್ಲ ಆಕಾಶ್
ಇತ್ತ ಪೂಜೆಗೆಂದು ನೀಲಿ ಸೀರೆ ಉಟ್ಟು ಗಂಡನ ಮುಂದೆ ಬಂದು ನಿಲ್ಲುವ ಪುಷ್ಪಾ ಕನಸಿನ ಲೋಕಕ್ಕೆ ಜಾರುತ್ತಾಳೆ. ಗಂಡ ಈ ಸೀರೆಯಲ್ಲಿ ನೀನು ಮುದ್ದಾಗಿ ಕಾಣುತ್ತಿದ್ದೀಯಾ ಎಂದು ಹೇಳಿದಂತೆ ಕನಸು ಕಾಣುತ್ತಾಳೆ. ಆದರೆ ವಾಸ್ತವದಲ್ಲಿ ಕಥೆ ಬೇರೆಯೇ ಆಗುತ್ತದೆ. ಆಕಾಶ್ ಪೂಜೆಗೆ ಧರಿಸಲು ತಂದ ಬಟ್ಟೆಯನ್ನು ಪುಷ್ಪಾ ಐರನ್ ಮಾಡಿ ತಂದು ಕೊಡುತ್ತಾಳೆ. ಆದರೆ ಆ ಡ್ರೆಸ್‌ನಲ್ಲಿ ಎಣ್ಣೆ ಕಲೆ ಆಗಿರುತ್ತೆ. ಅದು ಹೇಗಾಯ್ತು ಅನ್ನೋದು ಪುಷ್ಪಾಗೂ ತಿಳಿದಿರುವುದಿಲ್ಲ. ಆದರೆ ಅದನ್ನು ನೋಡಿದ ಆಕಾಶ್ ಪುಷ್ಪಾಳ ಮೇಲೆ ಹಿಗ್ಗಾಮುಗ್ಗಾ ರೇಗುತ್ತಾನೆ. ಒಂದ್ ಕೆಲಸವನ್ನೂ ನಿಮ್ಮಿಂದ ನೀಟಾಗಿ ಮಾಡಲು ಬರುವುದಿಲ್ಲ ಎಂದು ಬೈಯುತ್ತಾನೆ. ಇದೇ ಬೇಸರದಲ್ಲಿ ರೂಮ್‌ನಿಂದ ಹೊರ ಬಂದ ಪುಷ್ಪಾಗೆ ಮನೆಯ ಮಕ್ಕಳು ಸಾರಿ ಕೇಳ್ತಾರೆ. ಅಲ್ಲದೆ ಆಕಾಶ್ ಶರ್ಟ್‌ಗೆ ಎಣ್ಣೆ ತಾಕುವಂತೆ ಮಾಡಿದ್ದು ತಾವೇ ಅಂತ ಹೇಳ್ತಾರೆ. ಅದಕ್ಕೆ ಸ್ವಲ್ಪವೂ ಬೇಸರ ಮಾಡಿಕೊಳ್ಳದ ಪುಷ್ಪಾ ಅವರನ್ನು ಮುದ್ದಿಸಿ, ಸಮಾಧಾನಿಸುತ್ತಾಳೆ. ಇವಿಷ್ಟು ಇವತ್ತಿನ ಸಂಚಿಕೆಯಾದ್ರೆ ಪೂಜೆ ಹೇಗೆ ನಡೆಯಬಹುದು, ಯಾರೆಲ್ಲಾ ಬರಬಹುದು, ಪುಷ್ಪಾಳ ಅತ್ತಿಗೆ ಗಿರಿಜಾ ಬಂದು ಏನು ಅವಾಂತರ ಮಾಡಬಹುದು ಎಂಬುದನ್ನು ನಾಳಿನ ಸಂಚಿಕೆಯಲ್ಲಿ ನೋಡಬೇಕು.