Lakshmi Baramma: ಕಾವೇರಿ 13ನೇ ದಿನದ ಕಾರ್ಯ, ಮಹಾಲಕ್ಷ್ಮೀ ಸೀಮಂತದೊಂದಿಗೆ ಅಂತ್ಯವಾಯ್ತು ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma: ಕಾವೇರಿ 13ನೇ ದಿನದ ಕಾರ್ಯ, ಮಹಾಲಕ್ಷ್ಮೀ ಸೀಮಂತದೊಂದಿಗೆ ಅಂತ್ಯವಾಯ್ತು ಲಕ್ಷ್ಮೀ ಬಾರಮ್ಮ ಧಾರಾವಾಹಿ

Lakshmi Baramma: ಕಾವೇರಿ 13ನೇ ದಿನದ ಕಾರ್ಯ, ಮಹಾಲಕ್ಷ್ಮೀ ಸೀಮಂತದೊಂದಿಗೆ ಅಂತ್ಯವಾಯ್ತು ಲಕ್ಷ್ಮೀ ಬಾರಮ್ಮ ಧಾರಾವಾಹಿ

Lakshmi Baramma: ಕಲರ್ಸ್‌ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಧಾರಾವಾಹಿ 605 ಅಂತಿಮ ಸಂಚಿಕೆಯಲ್ಲಿ ಮನೆ ಮಂದಿ ಸೇರಿ ಕಾವೇರಿ 13ನೇ ದಿನದ ಕಾರ್ಯ ಪೂರೈಸುತ್ತಾರೆ, ಕೀರ್ತಿ ವಿದೇಶಕ್ಕೆ ಹೋಗುತ್ತಾಳೆ. ಲಕ್ಷ್ಮೀ ಗರ್ಭಿಣಿಯಾಗಿದ್ದು ಅವಳ ಸೀಮಂತ ನೆರವೇರುತ್ತದೆ. (ಬರಹ: ರಕ್ಷಿತಾ ಸೌಮ್ಯ)

ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆಯ ಸಂಚಿಕೆ (ಏಪ್ರಿಲ್ 12)
ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆಯ ಸಂಚಿಕೆ (ಏಪ್ರಿಲ್ 12)

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯಗೊಂಡಿದೆ. ಶುಕ್ರವಾರ ಪ್ರಸಾರವಾದ 605 ಕೊನೆಯ ಸಂಚಿಕೆಯ ಕಥೆ ಇಲ್ಲಿದೆ. ಮನೆಯವರೆಲ್ಲಾ ತಪ್ಪು ಎತ್ತಿ ತೋರಿಸಿದರೂ, ಮಗ ವೈಷ್ಣವ್‌ ಕೂಡಾ ನೀನು ತಪ್ಪು ಮಾಡಿದೆ ಎಂದು ಹೇಳಿದರೂ ಕಾವೇರಿ ಮಾತ್ರ ದುರಹಂಕಾರದಿಂದಲೇ ವರ್ತಿಸುತ್ತಾಳೆ. ನಾನು ತಪ್ಪೇ ಮಾಡಿಲ್ಲ ಎಂದು ವಾದಿಸುತ್ತಾಳೆ. ಕೊನೆ ಕ್ಷಣದಲ್ಲೂ ಲಕ್ಷ್ಮೀಯನ್ನು ಹಂಗಿಸುತ್ತಾಳೆ. ಕಾವೇರಿ ಕಾಲು ಜಾರಿ ಬೆಟ್ಟದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ.

ಕಾವೇರಿ 13ನೇ ದಿನದ ಕಾರ್ಯ ನೆರವೇರಿಸಿದ ವೈಷ್ಣವ್‌

ವೈಷ್ಣವ್‌ ಹಾಗೂ ಮನೆಯವರು ಕಾವೇರಿ 13ನೇ ದಿನದ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನೆರವೇರಿಸುತ್ತಾರೆ. ಎಲ್ಲರೂ ಕಾವೇರಿಯನ್ನು ನೆನೆದು ಕಣ್ಣೀರಿಡುತ್ತಾರೆ. ಅವಳು ಎಷ್ಟು ಚೆನ್ನಾಗಿ ಬದುಕಬಹುದಿತ್ತು, ಆದರೆ ತನ್ನ ದುರ್ಬುದ್ಧಿಯಿಂದಲೇ ಪ್ರಾಣ ಕಳೆದುಕೊಂಡಳು ಎಂದು ಕಾವೇರಿ ತಾಯಿ ದುಃಖ ವ್ಯಕ್ತಪಡಿಸುತ್ತಾಳೆ. ಶಾಸ್ತ್ರಗಳು ಮುಗಿದ ನಂತರ, ಕಾಗೆಗೆ ಪಿಂಡ ಇಡುವಂತೆ ಪುರೋಹಿತರು ವೈಷ್ಣವ್‌ಗೆ ಸೂಚಿಸುತ್ತಾರೆ. ವೈಷ್ಣವ್‌ ಮನೆ ಹೊರಗೆ ಬಂದು ಪಿಂಡ ಇಡುತ್ತಾನೆ. ನೀನು ಏನೇ ತಪ್ಪು ಮಾಡಿದರೂ ನನ್ನ ಅಮ್ಮನೇ. ನನಗೆ ಇದೆಲ್ಲಾ ಇಷ್ಟವಿಲ್ಲ, ಲಕ್ಷ್ಮೀ ಹೇಳಿದರು ಎಂಬ ಕಾರಣಕ್ಕೆ ಮಾಡುತ್ತಿದ್ದೇನೆ, ನಿನ್ನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ವೈಷ್ಣವ್‌ ಹೇಳುತ್ತಾನೆ, ಅಷ್ಟರಲ್ಲಿ ಒಂದು ಕಾಗೆ ಬಂದು ಪಿಂಡ ಸ್ವೀಕರಿಸುತ್ತದೆ.

ಕಾಗೆ ಪಿಂಡ ಸ್ವೀಕರಿಸಿದ್ದರೆ ನೀವೆಲ್ಲಾ ಊಟ ಮಾಡಿ ಎಂದು ಹೇಳಿ ಪುರೋಹಿತರು ಮನೆಯಿಂದ ಹೊರಡುತ್ತಾರೆ. ಎಲ್ಲರೂ ಊಟ ಮಾಡಲು ಹೊರಡಬೇಕು ಎನ್ನುವಷ್ಟರಲ್ಲಿ ಕೀರ್ತಿ ನಾನು ಎಲ್ಲರಿಗೂ ಏನೋ ಹೇಳಬೇಕು ಎನ್ನುತ್ತಾಳೆ. ನಾನು ನಿಮ್ಮೆಲ್ಲರನ್ನು ಬಿಟ್ಟು ಹೋಗುತ್ತಿದ್ದೇನೆ ಎನ್ನುತ್ತಾಳೆ. ಅವಳು ಮಾತು ಕೇಳಿ ಮನೆಯವರು ಶಾಕ್‌ ಆಗುತ್ತಾರೆ. ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ನನಗೂ ಗೊತ್ತಿಲ್ಲ, ಆದರೆ ದಯವಿಟ್ಟು ನನ್ನನ್ನು ಕಳಿಸಿಕೊಡಿ, ಇಷ್ಟು ದಿನಗಳ ಕಾಲ ನನ್ನಿಂದ ಲಕ್ಷ್ಮೀ ಹಾಗೂ ಈ ಮನೆಯವರಿಗೆ ಬಹಳ ತೊಂದರೆ ಕೊಟ್ಟಿದ್ದೇನೆ, ಅದರೆ ಇನ್ಮುಂದೆ ಆ ರೀತಿ ಆಗುವುದು ನನಗೆ ಇಷ್ಟವಿಲ್ಲ. ನನಗೆ ವೈಷ್ಣವ್‌ ಮೇಲಿನ ಭಾವನೆ ಹೋಗುತ್ತಿಲ್ಲ ಎನ್ನುತ್ತಾಳೆ.

ಕೀರ್ತಿ ಅನುಪಸ್ಥಿತಿಯಲ್ಲಿ ನೆರವೇರಿದ ಲಕ್ಷ್ಮೀ ಸೀಮಂತ

ಕೀರ್ತಿ ಮನಸ್ಸನ್ನು ಅರ್ಥ ಮಾಡಿಕೊಂಡ ಲಕ್ಷ್ಮೀ ನೀವು ಹೇಗೆ ನನಗೆ ಒಳ್ಳೆಯದು ಬಯಸುತ್ತಿದ್ದೀರೋ, ನಿಮಗೆ ನಾನೂ ಅದನ್ನೇ ಬಯಸುತ್ತೇನೆ, ಇಲ್ಲಿಂದ ನೀವು ದೂರ ಹೋದರೆ ಖುಷಿಯಾಗಿರುತ್ತೀರಿ ಎಂದರೆ ಖಂಡಿತ ಹೋಗಿ ಎನ್ನುತ್ತಾಳೆ. ನಾನು ಇಲ್ಲಿಂದ ಹೋದ ನಂತರ ನನ್ನನ್ನು ಯಾರೂ ಹುಡುಕಬಾರದು ಎಂದು ಕೀರ್ತಿ ಕಂಡಿಷನ್‌ ಮಾಡುತ್ತಾಳೆ. ಲಕ್ಷ್ಮೀ ಅದಕ್ಕೂ ಸರಿ ಎಂದು ತಲೆ ಆಡಿಸುತ್ತಾಳೆ. ಕಣ್ಣೀರಿಡುತ್ತಲೇ ಲಕ್ಷ್ಮೀ ಒಪ್ಪಿಕೊಳ್ಳುತ್ತಾಳೆ. ಎಲ್ಲರೂ ಹೊರಗೆ ಬಂದು ಕೀರ್ತಿಯನ್ನು ಬೀಳ್ಕೊಡುತ್ತಾರೆ, ಕಾರುಣ್ಯ ಕೂಡಾ ಮಗಳ ಜೊತೆ ಏರ್‌ಪೋರ್ಟ್‌ಗೆ ಹೋಗುತ್ತಾಳೆ. ಕೀರ್ತಿಯನ್ನು ಕಳಿಸಿ ಎಲ್ಲರೂ ಮನೆ ಒಳಗೆ ಹೋಗುತ್ತಾರೆ. ಅಷ್ಟರಲ್ಲಿ ಲಕ್ಷ್ಮೀ ತಲೆ ಸುತ್ತಿ ಬೀಳುತ್ತಾಳೆ.

ಮನೆಗೆ ಡಾಕ್ಟರ್‌ ಬಂದು ಪರೀಕ್ಷಿಸಿ ಲಕ್ಷ್ಮೀ 2 ತಿಂಗಳ ಗರ್ಭಿಣಿ ಎಂದು ಹೇಳುತ್ತಾರೆ. ಅದನ್ನು ಕೇಳಿ ಮನೆಯವರು ಖುಷಿಯಾಗುತ್ತಾರೆ. 5 ತಿಂಗಳ ನಂತರ ಲಕ್ಷ್ಮೀ ಸೀಮಂತ ಕಾರ್ಯ ನೆರವೇರುತ್ತದೆ. ಎಲ್ಲರೂ ಖುಷಿಯಾಗಿ ಲಕ್ಷ್ಮೀಗೆ ಸಿಹಿ ತಿನ್ನಿಸಿ, ಮಡಿಲು ತುಂಬುತ್ತಾರೆ. ಕೀರ್ತಿಯನ್ನು ನೆನಪಿಸಿಕೊಂಡು ಲಕ್ಷ್ಮೀ ಭಾವುಕಳಾಗುತ್ತಾಳೆ. ವೈಷ್ಣವ್‌ ತನ್ನ ಹೆಂಡತಿಗಾಗಿ ಹಾಡು ಹಾಡುತ್ತಾನೆ. ಕೊನೆಗೆ ಎಲ್ಲರೂ ಗ್ರೂಪ್‌ ಫೋಟೋ ತೆಗೆಸಿಕೊಳ್ಳುತ್ತಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತಿತ್ತು. ಮೊದಲು ಒಟ್ಟಿಗೆ ಪ್ರಸಾರವಾಗುತ್ತಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ, ನಂತರ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿತ್ತು. ಏಪ್ರಿಲ್‌ 14 ರಿಂದ ಇದೇ ಸಮಯಕ್ಕೆ ಮುದ್ದು ಸೊಸೆ ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ಕಾವೇರಿ - ಸುಷ್ಮಾ ನಾಣಯ್ಯ

ಕೃಷ್ಣಕಾಂತ್ - ಅರಸ್‌

ವೈಷ್ಣವ್‌ - ಶಮಂತ್‌ ಗೌಡ

ಲಕ್ಷ್ಮೀ - ಭೂಮಿಕಾ ರಮೇಶ್‌

ಕೀರ್ತಿ - ತನ್ವಿ ರಾವ್‌

ಸುಪ್ರೀತಾ - ರಜನಿ ಪ್ರವೀಣ್‌

ನಿತಿನ್‌ - ಅಯ್ಯಪ್ಪ

ವಿಧಿ - ಲಾವಣ್ಯ ಹಿರೇಮಠ್

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner