ಲಕ್ಷ್ಮೀ ಬಾರಮ್ಮ: ಕೀರ್ತಿ, ಲಕ್ಷ್ಮೀ ಜೊತೆ ಸೇರಿ ನನ್ನನ್ನು ಕೊಲೆ ಮಾಡಲು ಸಂಚು ಮಾಡುತ್ತಿದ್ದಾರೆ; ಮಗ ವೈಷ್ಣವ್ ಬಳಿ ಕಾವೇರಿ ಹೊಸ ನಾಟಕ
Lakshmi Baramma: ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಧಾರಾವಾಹಿ 603ನೇ ಎಪಿಸೋಡ್‌ನಲ್ಲಿ ಲಕ್ಷ್ಮೀ, ಕೀರ್ತಿಯನ್ನು ಕೊಲ್ಲಲು ಕಾವೇರಿ ಪ್ರಯತ್ನಿಸುತ್ತಾಳೆ. ಆಗ ಸುಪ್ರೀತಾ ಅವಳನ್ನು ತಡೆಯುತ್ತಾಳೆ. ವಿಧಿ, ಕೃಷ್ಣ ಹಾಗೂ ವೈಷ್ಣವ್ ಎಲ್ಲರೂ ಬೆಟ್ಟದ ಬಳಿ ಬರುತ್ತಾರೆ. ಅವರನ್ನು ನೋಡಿ ಕಾವೇರಿ ಮತ್ತೆ ನಾಟಕ ಶುರು ಮಾಡುತ್ತಾಳೆ. (ಬರಹ: ರಕ್ಷಿತಾ ಸೌಮ್ಯ)

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ವಾರ ಮುಕ್ತಾಯಗೊಳ್ಳಲಿದೆ. ಬುಧವಾರ ಪ್ರಸಾರವಾದ 603ನೇ ಸಂಚಿಕೆಯ ಕಥೆ ಇಲ್ಲಿದೆ. ನಿನ್ನನ್ನು ಭೇಟಿ ಆಗಬೇಕು ಎಂದು ಅನಾಮಧೇಯ ವ್ಯಕ್ತಿ ಹೇಳಿದ್ದಕ್ಕೆ ಭಯಗೊಂಡ ಕಾವೇರಿ ಆತನನ್ನು ಭೇಟಿ ಆಗಲು ಬೆಟ್ಟದ ಬಳಿ ಬರುತ್ತಾಳೆ. ಆದರೆ ಅಲ್ಲಿ ಮಂಟಪ, ಮಧು ಮಕ್ಕಳಂತೆ ತಯಾರಾದ ಲಕ್ಷ್ಮೀಯನ್ನು ನೋಡಿ ಗಾಬರಿಯಾಗುತ್ತಾಳೆ. ಅವಳ ಜೊತೆಗೆ ಕೀರ್ತಿ ಇರುವುದನ್ನು ನೋಡಿ ಇನ್ನಷ್ಟು ಶಾಕ್ ಆಗುತ್ತಾಳೆ. ತಾನು ಅವರಿಬ್ಬರ ಕೊಲೆ ಪ್ರಯತ್ನದ ಬಗ್ಗೆ ಮಾತನಾಡಿದ ವಿಡಿಯೋ ನೋಡಿ ಕಾವೇರಿಗೆ ಭಯವಾಗುತ್ತದೆ.
ಕೀರ್ತಿ-ಲಕ್ಷ್ಮೀ ವಿರುದ್ಧ ಮಗನ ಬಳಿ ಆರೋಪಿಸಿದ ಕಾವೇರಿ
ಆ ವಿಡಿಯೋ ನಿಮಗೆ ಹೇಗೆ ಸಿಕ್ಕಿತು? ಅದನ್ನು ರೆಕಾರ್ಡ್ ಮಾಡಿದ್ದು ಯಾರು ಎಂದು ಕಾವೇರಿ ಕೇಳುತ್ತಾಳೆ. ವಿಡಿಯೋ ಎಲ್ಲಿಂದ ಬಂತು, ಯಾರು ಕೊಟ್ಟಿದ್ದು ಎಂಬ ವಿಚಾರ ಈಗ ಬೇಕಾ ಅತ್ತೆ? ಮೊದಲು ವೈಷ್ಣವ್‌ನನ್ನು ಯಾರಿಗೆ ಕೊಟ್ಟು ಮದುವೆ ಮಾಡಿಸುತ್ತೀರಿ ಎಂದು ನೀವು ಹೇಳಿ ಎಂದು ಲಕ್ಷ್ಮೀ ಹಾಗೂ ಕೀರ್ತಿ ಕೇಳುತ್ತಾರೆ. ವೈಷ್ಣವ್ ನನಗೆ ಬೇಕು, ನನಗೆ ಮದುವೆ ಮಾಡಿಸಿ ಎಂದು ಇಬ್ಬರೂ ಎರಡೂ ಬದಿಯಿಂದ ಕಾವೇರಿ ಕೈ ಹಿಡಿದು ಎಳೆದಾಡುತ್ತಾರೆ. ಕಾವೇರಿಗೆ ಸಿಟ್ಟು ಬಂದು, ಇಬ್ಬರಿಗೂ ವೈಷ್ಣವ್ ಸಿಗುವುದಿಲ್ಲ. ಅವನು ನನ್ನ ಮಗ, ನಾನು ಆಯ್ಕೆ ಮಾಡಿದ ಹುಡುಗಿಯೊಂದಿಗೇ ಅವನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾನೆ. ಅವಳ ಜೊತೆಯೇ ಮದುವೆಯೂ ಆಗುತ್ತದೆ ಎಂದು ಕಾವೇರಿ ಅರಚಾಡುತ್ತಾಳೆ.
ವೈಷ್ಣವ್ ಬೇರೆ ಹುಡುಗಿಯನ್ನು ಮದುವೆಯಾಗಲು ನಾವು ಬಿಡುವುದಿಲ್ಲ ಎಂದು ಲಕ್ಷ್ಮೀ , ಕೀರ್ತಿ ಹೇಳುತ್ತಾರೆ. ನೀವು ಇದ್ದರೆ ತಾನೇ ಈ ಮದುವೆಯನ್ನು ತಡೆಯುವುದು ನಿಮ್ಮಿಬ್ಬರ ಕಥೆಯನ್ನು ಈಗಲೇ ಮುಗಿಸುತ್ತೇನೆ ಎಂದು ಕಾವೇರಿ ತನ್ನ ಬ್ಯಾಗ್‌ನಲ್ಲಿದ್ದ ರಿವಾಲ್ವರ್ ತೆಗೆದು ಲಕ್ಷ್ಮೀ, ಕೀರ್ತಿ ಕಡೆ ಗುರಿ ಇಡುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಸುಪ್ರೀತಾ ಬರುತ್ತಾಳೆ. ಕಾವೇರಿ ಅವರಿಬ್ಬರಿಗೂ ಏನು ಮಾಡಬೇಡ ಎನ್ನುತ್ತಾಳೆ. ನಾನು ಯಾರ ಮಾತನ್ನೂ ಕೇಳುವುದಿಲ್ಲ ಎಂದು ಕಾವೇರಿ ಹೇಳುತ್ತಾಳೆ. ಅವಳ ಗಮನ ಬೇರೆಡೆ ಇರುವುದನ್ನು ನೋಡಿ ಲಕ್ಷ್ಮೀ ಹಾಗೂ ಕೀರ್ತಿ ಇಬ್ಬರೂ ಅವಳ ಕೈಯಿಂದ ರಿವಾಲ್ವರ್ ಕಸಿದುಕೊಂಡು ಎಸೆಯುತ್ತಾರೆ. ನೀವು ಇಷ್ಟು ಕ್ರೂರಿ ಎಂದು ನನಗೆ ಗೊತ್ತಿರಲಿಲ್ಲ ಎಂದು ಸುಪ್ರೀತಾ ಬೇಸರ ವ್ಯಕ್ತಪಡಿಸುತ್ತಾಳೆ.
ಮನೆಮಂದಿ ಮುಂದೆ ಬಯಲಾಯ್ತು ಕಾವೇರಿ ಅಸಲಿ ಮುಖ
ಅಷ್ಟರಲ್ಲಿ ಅಲ್ಲಿಗೆ ವಿಧಿ, ಕೃಷ್ಣ ಹಾಗೂ ಕಾವೇರಿ ತಾಯಿ ಬರುತ್ತಾರೆ. ಗಂಡನನ್ನು ನೋಡಿದ ಕಾವೇರಿ ನಾಟಕ ಶುರು ಮಾಡುತ್ತಾಳೆ. ನೋಡಿ ಕೃಷ್ಣ ನೀವೆಲ್ಲರೂ ಲಕ್ಷ್ಮೀ ಪರ ವಹಿಸಿಕೊಂಡು ಮಾತನಾಡುತ್ತಿದ್ದೀರಿ, ಆದರೆ ಲಕ್ಷ್ಮೀ ಇಲ್ಲಿಗೆ ನನ್ನನ್ನು ಕರೆಸಿ ನನ್ನನ್ನು ಸಾಯಿಸಲು ಪ್ಲ್ಯಾನ್ ಮಾಡುತ್ತಿದ್ದಾಳೆ. ಅವಳೊಂದಿಗೆ ಕೀರ್ತಿ ಕೈ ಜೋಡಿಸಿದ್ದಾಳೆ, ಇವರಿಬ್ಬರನ್ನೂ ನಂಬಬೇಡಿ, ನಿಮ್ಮ ಎದುರು ಇವರು ನಾಟಕ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಾಳೆ. ನಾಟಕ ಮಾಡುತ್ತಿರುವುದು, ಸುಳ್ಳು ಹೇಳುತ್ತಿರುವುದು ನೀನು, ಅವರಲ್ಲ ಎಂದು ಕೃಷ್ಣ ಹೇಳುತ್ತಾನೆ. ಕಾವೇರಿ ತಾಯಿ ಹಾಗೂ ಮಗಳು ವಿಧಿ ಕೂಡಾ ಅವಳ ಬಗ್ಗೆ ಬೇಸರಗೊಳ್ಳುತ್ತಾರೆ. ನೀವೆಲ್ಲಾ ನನ್ನ ಪರ ಇಲ್ಲದಿದ್ದರೂ ಪರವಾಗಿಲ್ಲ, ನನ್ನ ಪರ ನನ್ನ ಮಗ ಇದ್ದಾನೆ, ಅವನು ನನ್ನ ಮಾತುಗಳನ್ನು ನಂಬುತ್ತಾನೆ ಎಂದು ಕಾವೇರಿ ಹೇಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ವೈಷ್ಣವ್ ಕೂಡಾ ಬರುತ್ತಾನೆ.
ಹೌದು ಅಮ್ಮ, ನಾನು ನಿನ್ನನ್ನು ನಂಬಿದ್ದೆ. ನನ್ನನ್ನು ಬಿಟ್ಟರೆ ನಿನಗೆ ಬೇರೆ ಯಾವುದೇ ಪ್ರಪಂಚ ಇಲ್ಲ ಎಂದು ನಂಬಿದ್ದೆ, 10ನೇ ತರಗತಿ ಫೇಲ್ ಆದ ನನ್ನನ್ನು ಸೆಲಬ್ರಿಟಿಯನ್ನಾಗಿ ಮಾಡಿದೆ, ನನ್ನ ಮೇಲೆ ನಿನಗೆ ಬಹಳ ಪ್ರೀತಿ ಇದೆ ಎಂದು ನಂಬಿದ್ದೆ, ಕೀರ್ತಿ ಹಾಗೂ ನನ್ನ ಪ್ರೀತಿಯನ್ನು ಒಪ್ಪಿಕೊಂಡಾಗ, ಲಕ್ಷ್ಮೀಯನ್ನು ನನಗೆ ಮದುವೆ ಮಾಡಿಸಿದಾಗ, ಅವಳ ವಿರುದ್ಧ ಆರೋಪ ಮಾಡಿದಾಗ, ಅವರಿಬ್ಬರ ಕೊಲೆ ಪ್ರಯತ್ನ ಮಾಡಿದ್ದು ಕೋರ್ಟಿನಲ್ಲಿ ಸಾಬೀತು ಆದಾಗ, ಇದೆಲ್ಲದಕ್ಕೂ ನಿನ್ನ ತಾಯಿಯೇ ಕಾರಣ ಎಂದು ಕೀರ್ತಿ ನನ್ನ ಬಳಿ ಹೇಳಿದಾಗ ಎಲ್ಲಾ ಸಂದರ್ಭದಲ್ಲೂ ನನ್ನ ತಾಯಿಯೇ ಸರಿ, ಬೇರೆ ಎಲ್ಲರೂ ಸುಳ್ಳು ಹೇಳುತ್ತಾರೆ ಎಂದು ನಂಬಿದ್ದೆ, ಆದರೆ ನಂಬಿಕೆ ಸುಳ್ಳು ಅನ್ನೋದು ಈಗ ನನಗೆ ಗೊತ್ತಾಗುತ್ತಿದೆ ಎಂದು ವೈಷ್ಣವ್ ನೋವಿನಿಂದ ಹೇಳುತ್ತಾನೆ. ಮಗನಿಗೆ ಎಲ್ಲಾ ವಿಚಾರ ಗೊತ್ತಾಗಿರಬಹುದು ಎಂದು ಕಾವೇರಿ ಗಾಬರಿಯಾಗುತ್ತಾಳೆ.
ಕಾವೇರಿ ಇನ್ನಾದರೂ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾಳಾ? ಮಗ-ಸೊಸೆಯನ್ನು ಒಂದು ಮಾಡುತ್ತಾಳಾ? ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಮೊದಲು ಒಟ್ಟಿಗೆ ಪ್ರಸಾರವಾಗುತ್ತಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ಕಾವೇರಿ - ಸುಷ್ಮಾ ನಾಣಯ್ಯ
ಕೃಷ್ಣಕಾಂತ್ - ಅರಸ್
ವೈಷ್ಣವ್ - ಶಮಂತ್ ಗೌಡ
ಲಕ್ಷ್ಮೀ - ಭೂಮಿಕಾ ರಮೇಶ್
ಕೀರ್ತಿ - ತನ್ವಿ ರಾವ್
ಸುಪ್ರೀತಾ - ರಜನಿ ಪ್ರವೀಣ್
ನಿತಿನ್ - ಅಯ್ಯಪ್ಪ
ವಿಧಿ - ಲಾವಣ್ಯ ಹಿರೇಮಠ್
