ಮುದ್ದು ಸೊಸೆ: ಚೆಲುವನ ಆತ್ಮಹತ್ಯೆ ನಾಟಕ ಮಗಳ ಮುಂದೆ ಬಯಲು; ಮದುವೆ ನಿಲ್ಲಿಸುವಂತೆ ಪೊಲೀಸ್‌ ಸ್ಟೇಷನ್‌ಗೆ ಕರೆ ಮಾಡಿದ್ಲಾ ವಿದ್ಯಾ?
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಚೆಲುವನ ಆತ್ಮಹತ್ಯೆ ನಾಟಕ ಮಗಳ ಮುಂದೆ ಬಯಲು; ಮದುವೆ ನಿಲ್ಲಿಸುವಂತೆ ಪೊಲೀಸ್‌ ಸ್ಟೇಷನ್‌ಗೆ ಕರೆ ಮಾಡಿದ್ಲಾ ವಿದ್ಯಾ?

ಮುದ್ದು ಸೊಸೆ: ಚೆಲುವನ ಆತ್ಮಹತ್ಯೆ ನಾಟಕ ಮಗಳ ಮುಂದೆ ಬಯಲು; ಮದುವೆ ನಿಲ್ಲಿಸುವಂತೆ ಪೊಲೀಸ್‌ ಸ್ಟೇಷನ್‌ಗೆ ಕರೆ ಮಾಡಿದ್ಲಾ ವಿದ್ಯಾ?

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 23 ನೇ ಸಂಚಿಕೆಯಲ್ಲಿ ಚೆಲುವ ಸೀಮೆಎಣ್ಣೆ ಸುರಿದುಕೊಂಡು ಸಾಯುವಂತೆ ಪ್ರಯತ್ನಿಸಿದ್ದು ನಾಟಕ ಅನ್ನೋದು ವಿದ್ಯಾ ಮುಂದೆ ಬಯಲಾಗಿದೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ಚೆಲುವನ ಆತ್ಮಹತ್ಯೆ ನಾಟಕ ಮಗಳ ಮುಂದೆ ಬಯಲು; ಮದುವೆ ನಿಲ್ಲಿಸುವಂತೆ ಪೊಲೀಸ್‌ ಸ್ಟೇಷನ್‌ಗೆ ಕರೆ ಮಾಡಿದ್ಲಾ ವಿದ್ಯಾ?
ಮುದ್ದು ಸೊಸೆ: ಚೆಲುವನ ಆತ್ಮಹತ್ಯೆ ನಾಟಕ ಮಗಳ ಮುಂದೆ ಬಯಲು; ಮದುವೆ ನಿಲ್ಲಿಸುವಂತೆ ಪೊಲೀಸ್‌ ಸ್ಟೇಷನ್‌ಗೆ ಕರೆ ಮಾಡಿದ್ಲಾ ವಿದ್ಯಾ? (Jio Hotstar)

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶನಿವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 23ನೇ ಎಪಿಸೋಡ್‌ ಕಥೆ ಹೀಗಿದೆ. ಈ ಮದುವೆ ಇಷ್ಟವಿಲ್ಲ ಎಂದು ಭದ್ರನಿಗೆ ವಿದ್ಯಾ ಬರೆದ ಪತ್ರ ಈಶ್ವರಿ ಕೈ ಸೇರಿದೆ. ಈಶ್ವರಿ ಅದನ್ನು ಚೆಲುವನಿಗೆ ತಂದುಕೊಡುತ್ತಾಳೆ. ಮಗಳ ಮೇಲೆ ಕೋಪಗೊಂಡ ಚೆಲುವ ಮನೆಗೆ ಬಂದು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಸಾಯುವ ನಾಟಕ ಮಾಡುತ್ತಾನೆ. ಜೊತೆಗೆ ಹೆಂಡತಿ ರತ್ನಳಿಗೂ ಸೀಮೆಎಣ್ಣೆ ಸುರಿದು ಇಬ್ಬರೂ ಸಾಯೋಣ ಎನ್ನುತ್ತಾನೆ. ಅಪ್ಪ ಮಾಡುತ್ತಿರುವುದು ನಾಟಕ ಎಂದು ಗೊತ್ತಾಗದೆ ವಿದ್ಯಾ, ಅವನ ಕಾಲಿಗೆ ಬಿದ್ದು ನೀನು ಹೇಳಿದಂತೆ ಕೇಳುತ್ತೇನೆ, ಈ ಮದುವೆ ಆಗುತ್ತೇನೆ ಎನ್ನುತ್ತಾಳೆ.

ವಿದ್ಯಾ ಜೊತೆ ಮಾತನಾಡಿದ ಭದ್ರೇಗೌಡ

ವಿದ್ಯಾ ಜೊತೆ ಮದುವೆ ಫಿಕ್ಸ್‌ ಆದಾಗಿನಿಂದ ಭದ್ರ ಗೊಂದಲದಲ್ಲಿದ್ದಾನೆ. ಅದರಲ್ಲೂ ಬ್ಯೂಟಿ ಪಾರ್ಲರ್‌ ಹುಡುಗಿಯನ್ನು ವಾಪಸ್‌ ಕಳಿಸಿದ ನಂತರವಂತೂ ವಿದ್ಯಾಗೆ ಈ ಮದುವೆ ಇಷ್ಟವಿದೆಯೋ ಇಲ್ಲವೋ ಎಂಬ ಅನುಮಾನ ಭದ್ರನಿಗೆ ಕಾಡುತ್ತಿದೆ. ವಿದ್ಯಾಗೆ ಈ ಮದುವೆ ಇಷ್ಟವಿದ್ದರೆ ಮಾತ್ರ ನಾನು ಅವಳಿಗೆ ತಾಳಿ ಕಟ್ಟುವುದು, ಇಲ್ಲವಾದರೆ ಇಲ್ಲ ಎಂದು ಕ್ವಾಟ್ಲೆ ಬಳಿ ಹೇಳಿಕೊಳ್ಳುತ್ತಾನೆ. ಹಾಗೇನೂ ಇಲ್ಲ ನೀನು ಇಲ್ಲದ್ದನ್ನೆಲ್ಲಾ ಯೋಚನೆ ಮಾಡಬೇಡ ಎಂದು ಕ್ವಾಟ್ಲೆ ಸಮಾಧಾನ ಮಾಡುತ್ತಾನೆ. ಅದರೂ ಭದ್ರನಿಗೆ ಸಮಾಧಾನವಾಗುವುದಿಲ್ಲ. ಹೇಗಾದರೂ ಮಾಡಿ ವಿದ್ಯಾಗೆ ಕರೆ ಮಾಡಿ ಅವಳಿಗೆ ನಾನು ಒಪ್ಪಿಗೆ ಆಗಿದ್ದೀನೋ ಇಲ್ಲವೋ, ಈ ಮದುವೆ ನಿಜಕ್ಕೂ ಇಷ್ಟವಿದೆಯೇ ತಿಳಿದುಕೊಳ್ಳಬೇಕು ಎಂದು ನಿರ್ಧರಿಸುತ್ತಾನೆ. ಚೆಲುವನ ನಂಬರ್‌ಗೆ ಭದ್ರ ಕರೆ ಮಾಡುತ್ತಾನೆ.

ಸೀಮೆಎಣ್ಣೆ ಸುರಿದುಕೊಂಡು ಮನೆಯಲ್ಲಿ ಡ್ರಾಮಾ ಸೃಷ್ಟಿಸಿದ್ದ ಚೆಲುವ, ಭಾವೀ ಅಳಿಯ ಕರೆ ಮಾಡಿದ್ದನ್ನು ನೋಡಿ ಆಶ್ಚರ್ಯಗೊಳ್ಳುತ್ತಾನೆ. ಭದ್ರ ಅಂಜಿಕೆಯಿಂದಲೇ ಹೇಗಿದ್ದೀರ ಮಾವ ಎಂದು ಚೆಲುವನನ್ನು ಕೇಳುತ್ತಾನೆ. ಉಭಯ ಕುಶಲೋಪರಿ ವಿಚಾರಿಸಿದ ನಂತರ ನಾನು ವಿದ್ಯಾ ಜೊತೆ ಮಾತನಾಡಬೇಕಿತ್ತು ಎಂದು ಭದ್ರ ಹೇಳುತ್ತಾನೆ. ನಿಮ್ಮ ಹೆಂಡತಿ ಆಗುವವಳ ಜೊತೆ ಮಾತನಾಡಲು ಏಕೆ ಮುಜುಗರ ಇರಿ ಕೊಡುತ್ತೇನೆ ಎಂದು ವಿದ್ಯಾ ಕೈಗೆ ಫೋನ್‌ ಕೊಡುತ್ತಾನೆ. ಭದ್ರನ ಜೊತೆ ವಿದ್ಯಾ ಮಾತನಾಡಲು ನಿರಾಕರಿಸುತ್ತಾಳೆ ಎಂಬ ಕಾರಣಕ್ಕೆ ಬೆಂಕಿಕಡ್ಡಿ ಗೀರುವಂತೆ ನಾಟಕ ಮಾಡುತ್ತಾನೆ. ಅಪ್ಪನಿಗೆ ಹೆದರಿ ವಿದ್ಯಾ ಭದ್ರನ ಜೊತೆ ಮಾತನಾಡುತ್ತಾಳೆ.

ಮಗಳನ್ನು ರೂಮ್‌ನಲ್ಲಿ ಕೂಡಿಹಾಕಿದ ಚೆಲುವ

ನಾನು ನಿಮ್ಮ ಮನೆಗೆ ಹೆಣ್ಣು ನೋಡಲು ಬಂದ ದಿನವೇ ಈ ಪ್ರಶ್ನೆ ಕೇಳಬೇಕಿತ್ತು, ಈಗ ಬಹಳ ತಡವಾಯ್ತು, ಆದರೆ ಈಗಲೂ ಮಾತನಾಡದಿದ್ದರೆ ತಪ್ಪಾಗುತ್ತದೆ. ನಿಮಗೆ ನಾನು ಇಷ್ಟವೇ, ಈ ಮದುವೆ ನಿಮಗೆ ಒಪ್ಪಿಗೆ ಇದ್ಯಾ ಎಂದು ಕೇಳುತ್ತಾನೆ. ಮನಸ್ಸಿಲ್ಲದ ಮನಸ್ಸಿನಿಂದ ಹೌದು ಒಪ್ಪಿಗೆ ಆಗಿದ್ದೀರ ಎಂದು ವಿದ್ಯಾ ಹೇಳುತ್ತಾಳೆ. ಅದನ್ನು ಕೇಳಿ ಭದ್ರನಿಗೆ ಖುಷಿಯಾಗುತ್ತದೆ. ಇಷ್ಟು ದಿನ ನೀನು ವಿದ್ಯಾ ಆಗಿದ್ದೆ, ನಾಳೆಯಿಂದ ನಿನ್ನ ಹೆಸರಿನೊಂದಿಗೆ ನನ್ನ ಹೆಸರು ಸೇರಿಕೊಳ್ಳುತ್ತದೆ. ಇಷ್ಟು ದಿನಗಳು ನನ್ನ ಮನಸ್ಸನ್ನು ತುಂಬಿದ ನೀನು ಇನ್ಮುಂದೆ ನನ್ನ ಮನೆಗೂ ಬರುತ್ತಿದ್ದೀಯ ಎಂದು ಒಬ್ಬನೇ ಮಾತನಾಡಿಕೊಂಡು ಖುಷಿ ಪಡುತ್ತಾನೆ.

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ನಾಟಕ ಮುಗಿದ ನಂತರ ಚೆಲುವ ಸ್ನಾನ ಮಾಡಿ ಬರುತ್ತಾನೆ. ಮಗಳ ವಿಚಾರಕ್ಕೆ ನೀನು ಈ ರೀತಿ ಮಾಡಿದ್ದು ಸರಿನಾ ಎಂದು ಕಾಳವ್ವ ಕೇಳುತ್ತಾಳೆ. ನಾನು ನಿಜವಾಗಿಯೂ ಸಾಯುತ್ತೇನೆ ಎಂದುಕೊಂಡಿದ್ದೀಯ? ಇದೆಲ್ಲಾ ವಿದ್ಯಾಳನ್ನು ಎದುರಿಸಲು ಆಡಿದ ನಾಟಕವಷ್ಟೇ ಎಂದು ಚೆಲುವ ಹೇಳುತ್ತಾನೆ. ಅದನ್ನು ವಿದ್ಯಾ ಕೇಳಿಸಿಕೊಳ್ಳುತ್ತಾಳೆ. ಅಪ್ಪನ ನಾಟಕ ನೆನಪಿಸಿಕೊಂಡು ಅಳುತ್ತಾಳೆ. ವಿದ್ಯಾ ರೂಮ್‌ನಲ್ಲಿ ಕುಳಿತಿದ್ದಾಗ ಚೆಲುವ ಬಾಗಿಲಿಗೆ ಬೀಗ ಹಾಕುತ್ತಾನೆ. ಈ ಮದುವೆ ನಿಲ್ಲಿಸಲು ನನಗೆ ಏನಾದರೂ ದಾರಿ ಸಿಕ್ಕರೆ ಸಾಕು ಎಂದು ವಿದ್ಯಾ ಯೋಚಿಸುವಾಗ ಏನೋ ನೆನಪಾಗಿ ಕೈಗೆ ಮೊಬೈಲ್‌ ತೆಗೆದುಕೊಳ್ಳುತ್ತಾಳೆ. ಯಾರಿಗೂ ಕರೆ ಮಾಡಿ ನಾನಿನ್ನೂ ಅಪ್ತಾಪ್ತೆ, ನನಗೆ ನಾಳೆ ಮದುವೆ ಮಾಡಲು ಹೊರಟಿದ್ದಾರೆ ದಯವಿಟ್ಟು ಈ ಮದುವೆ ನಿಲ್ಲಿಸಿ ಎಂದು ಮನವಿ ಮಾಡುತ್ತಾಳೆ.

ವಿದ್ಯಾ ಕರೆ ಮಾಡಿದ್ದು ಯಾರಿಗೆ? ಅವಳು ಮನವಿ ಮಾಡಿದಂತೆ ಮದುವೆ ನಿಂತುಹೋಗುವುದಾ? ಮುದ್ದು ಸೊಸೆ ಧಾರಾವಾಹಿಯ ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರೂ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.