ಮುದ್ದು ಸೊಸೆ: ಭದ್ರೇಗೌಡ- ವಿದ್ಯಾ ಮದುವೆ ತಯಾರಿ ಶುರು; ಮುಖದಲ್ಲಿ ಕಳೆ ಕಳೆದುಕೊಂಡು ಪೊಲೀಸರಿಗಾಗಿ ಕಾದು ನಿಂತ ಮದು ಮಗಳು
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಭದ್ರೇಗೌಡ- ವಿದ್ಯಾ ಮದುವೆ ತಯಾರಿ ಶುರು; ಮುಖದಲ್ಲಿ ಕಳೆ ಕಳೆದುಕೊಂಡು ಪೊಲೀಸರಿಗಾಗಿ ಕಾದು ನಿಂತ ಮದು ಮಗಳು

ಮುದ್ದು ಸೊಸೆ: ಭದ್ರೇಗೌಡ- ವಿದ್ಯಾ ಮದುವೆ ತಯಾರಿ ಶುರು; ಮುಖದಲ್ಲಿ ಕಳೆ ಕಳೆದುಕೊಂಡು ಪೊಲೀಸರಿಗಾಗಿ ಕಾದು ನಿಂತ ಮದು ಮಗಳು

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 24 ನೇ ಸಂಚಿಕೆಯಲ್ಲಿ ಮದು ಮಗಳಾಗಿ ತಯಾರಾಗಿ ದೇವಸ್ಥಾನಕ್ಕೆ ಬರುವ ವಿದ್ಯಾ ಮದುವೆ ನಿಲ್ಲಿಸಲು ಪೊಲೀಸರ ಬರುವಿಕೆಯನ್ನೇ ಕಾಯುತ್ತಾಳೆ.(ಬರಹ: ರಕ್ಷಿತಾ)

ಮುದ್ದು ಸೊಸೆ: ಭದ್ರೇಗೌಡ-ವಿದ್ಯಾ ಮದುವೆ ತಯಾರಿ ಶುರು; ಮುಖದಲ್ಲಿ ಕಳೆ ಕಳೆದುಕೊಂಡು ಪೊಲೀಸರಿಗಾಗಿ ಕಾದು ನಿಂತ ಮದು ಮಗಳು
ಮುದ್ದು ಸೊಸೆ: ಭದ್ರೇಗೌಡ-ವಿದ್ಯಾ ಮದುವೆ ತಯಾರಿ ಶುರು; ಮುಖದಲ್ಲಿ ಕಳೆ ಕಳೆದುಕೊಂಡು ಪೊಲೀಸರಿಗಾಗಿ ಕಾದು ನಿಂತ ಮದು ಮಗಳು

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಭಾನುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 24ನೇ ಎಪಿಸೋಡ್‌ ಕಥೆ ಹೀಗಿದೆ. ಮಗಳನ್ನು ಮದುವೆಗೆ ಒಪ್ಪಿಸಲು ಚೆಲುವ, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ನಾಟಕ ಮಾಡುತ್ತಾನೆ. ಅದಕ್ಕೆ ಹೆದರಿ ವಿದ್ಯಾ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಅದೇ ಸಮಯಕ್ಕೆ ಭದ್ರ ಕರೆ ಮಾಡಿ, ನನ್ನನ್ನು ಮದುವೆ ಆಗಲು ನಿಮಗೆ ಒಪ್ಪಿಗೆ ಇದೆಯಾ ಎಂದು ಕೇಳುತ್ತಾನೆ. ಇಷ್ಟವಿಲ್ಲದಿದ್ದರೂ ವಿದ್ಯಾ ನನಗೆ ಒಪ್ಪಿಗೆ ಎಂದು ಹೇಳುತ್ತಾಳೆ. ಇಷ್ಟು ಹೊತ್ತು ಅಪ್ಪ ಮಾಡಿದ್ದು ನಾಟಕ ಎಂದು ಗೊತ್ತಾದ ನಂತರ ವಿದ್ಯಾ ಒಂದು ನಿರ್ಧಾರಕ್ಕೆ ಬರುತ್ತಾಳೆ. ಪೊಲೀಸರಿಗೆ ಕರೆ ಮಾಡಿ ತಾನು ಅಪ್ತಾಪ್ತೆ, ಮನೆಯಲ್ಲಿ ಬಲವಂತವಾಗಿ ಮದುವೆ ಮಾಡುತ್ತಿದ್ದಾರೆ, ದಯವಿಟ್ಟು ಈ ಮದುವೆ ನಿಲ್ಲಿಸಿ ಎಂದು ಮನವಿ ಮಾಡುತ್ತಾಳೆ.

ಪೊಲೀಸರ ದಾರಿ ಕಾದು ನಿಂತ ವಿದ್ಯಾ

ಭದ್ರೇಗೌಡ ಹಾಗೂ ವಿದ್ಯಾ ಮದುವೆ ತಯಾರಿ ಶುರುವಾಗಿದೆ. ಚೆಲುವನ ಮನೆಯಲ್ಲಿ ಚಪ್ಪರ ಹಾಕಿ, ಹೂವಿನ ಅಲಂಕಾರ ಮಾಡಲಾಗಿದೆ. ಚೆಲುವ ಅಂತೂ ಮಗಳ ಮೂಲಕ ನಮ್ಮ ಮನೆಗೆ ಲಕ್ಷ್ಮೀ ಬರುತ್ತಿದ್ದಾಳೆ ಎಂಬ ಖುಷಿಯಲ್ಲಿದ್ದಾನೆ. ಸಂಭ್ರಮದಿಂದ ಮನೆ ಅಲಂಕಾರದಲ್ಲಿ ತೊಡಗಿದ್ದಾನೆ. ಆದರೆ ರತ್ನ ಮಾತ್ರ ಧಾರೆ ಸೀರೆ ಕೈಯಲ್ಲಿ ಹಿಡಿದುಕೊಂಡು ಇದನ್ನು ವಿದ್ಯಾಗೆ ಕೊಟ್ಟು, ಉಟ್ಟು ಬಾ ಎಂದು ಹೇಳಲು ಹಿಂಜರಿಯುತ್ತಾಳೆ. ಸೀರೆ ಕೈಯಲ್ಲಿ ಹಿಡಿದು ಏನು ಮಾಡುತ್ತಿದ್ದೀಯ ಎಂದು ಚೆಲುವ ಕೇಳುತ್ತಾನೆ. ನೀನು ಬೀಗ ಹಾಕಿ ಒಳಗೆ ಮಗಳನ್ನು ಕೂಡಿ ಹಾಕಿದರೆ ಹೇಗೆ ಸೀರೆ ಉಡಿಸೋದು ಎಂದು ಕೇಳುತ್ತಾಳೆ. ಚೆಲುವ ರೂಮ್‌ ಬಾಗಿಲು ತೆಗೆಯುತ್ತಾನೆ. ತಾಯಿಯನ್ನು ನೋಡಿ ಏನವ್ವ ಎಂದು ವಿದ್ಯಾ ಕೇಳುತ್ತಾಳೆ. ಈ ಧಾರೆ ಸೀರೆ ಉಟ್ಟು ಬಾ ಎಂದು ಅವಳ ಕೈಗೆ ಸೀರೆ ಕೊಡುತ್ತಾಳೆ. ವಿದ್ಯಾ ಮರು ಮಾತನಾಡದೆ ಸೀರೆ ತೆಗೆದುಕೊಳ್ಳುತ್ತಾಳೆ.

ಮಗಳು ಹೀಗೆ ಏನೂ ಮಾತನಾಡದೆ ಸುಮ್ಮನಾಗಿದ್ದಕ್ಕೆ ರತ್ನ ಆಶ್ಚರ್ಯಗೊಳ್ಳುತ್ತಾಳೆ. ವಿದ್ಯಾ ಸ್ನಾನ ಮುಗಿಸಿ ಸೀರೆ ಉಡುತ್ತಾಳೆ. ಭದ್ರನ ಮನೆಯಿಂದ ಕೊಟ್ಟ ಒಡವೆಗಳನ್ನು ಧರಿಸುತ್ತಾಳೆ. ರತ್ನ ಹಾಗೂ ಚೆಲುವ ದೇವರಿಗೆ ಪೂಜೆ ಮಾಡುತ್ತಾರೆ. ದೇವರೆ ನನ್ನ ಮಗಳ ಮದುವೆಯನ್ನು ಯಾವುದೇ ವಿಘ್ನ ಇಲ್ಲದೆ ನಡೆಸಿಕೊಡು, ಮತ್ತೇನೂ ಕೇಳುವುದಿಲ್ಲ ಎಂದು ಚೆಲುವ ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಅಷ್ಟರಲ್ಲಿ ವಿದ್ಯಾ ತಯಾರಾಗಿ ಬರುತ್ತಾಳೆ. ಮದು ಮಗಳನ್ನು ನೋಡಿ ಚೆಲುವ ಖುಷಿಯಾಗುತ್ತಾನೆ. ಮಹಾಲಕ್ಷ್ಮಿಯಂತೆ ಕಾಣುತ್ತಿದ್ದೀಯ ಎಂದು ವಿದ್ಯಾಳನ್ನು ಎಲ್ಲರೂ ಹೊಗಳುತ್ತಾರೆ. ಆದರೆ ವಿದ್ಯಾ ಬಾಗಿಲು ಕಡೆ ನೋಡುತ್ತಾ, ಪೊಲೀಸರು ಇನ್ನೂ ಏಕೆ ಬಂದಿಲ್ಲ ಎಂದು ಯೋಚಿಸುತ್ತಾಳೆ. ಎಲ್ಲರೂ ದೇವಸ್ಥಾನಕ್ಕೆ ಹೊರಡುತ್ತಾರೆ.

ಪೊಲೀಸರಿಗೆ ಕರೆ ಮಾಡಿರುವುದನ್ನು ತಾಯಿಗೆ ತಿಳಿಸಿದ ವಿದ್ಯಾ

ಇತ್ತ ದೇವಸ್ಥಾನದಲ್ಲಿ ವಿದ್ಯಾ-ಭದ್ರನ ಮದುವೆಗೆ ಎಲ್ಲಾ ತಯಾರಿ ಮಾಡಲಾಗಿದೆ. ಗೋವಿಂದ, ಕ್ವಾಟ್ಲೆ, ಶಿವರಾಮೇಗೌಡ ಹಾಗೂ ಮೋಹನ ಮದುವೆಗೆ ಬರುವವರನ್ನು ಸ್ವಾಗತಿಸುತ್ತಾರೆ. ಗಂಡನನ್ನು ಗಮನಿಸುವ ಈಶ್ವರಿ ನನ್ನ ಗಂಡ ನಮ್ಮ ಮದುವೆಯಲ್ಲೂ ಇಷ್ಟು ಖುಷಿಯಿಂದ ಇರಲಿಲ್ಲ ಎಂದುಕೊಳ್ಳುತ್ತಾಳೆ.

ಮದುವೆ ಸಂಭ್ರಮವನ್ನು ನೋಡಲಾಗದ ವಿನಂತಿ, ತಾಯಿಯನ್ನು ಸಾವಿತ್ರಿ ಎಂದು ಹೆಸರು ಹಿಡಿದು ಕರೆಯುತ್ತಾಳೆ. ನಾನು ನಿನ್ನ ತಾಯಿ ಹೀಗೇಕೆ ಹೆಸರು ಹೇಳುತ್ತಿದ್ದೀಯ ಎಂದು ಸಾವಿತ್ರಿ ಕೇಳುತ್ತಾಳೆ. ಇಷ್ಟು ದಿನ ಭದ್ರನೇ ನಿನ್ನ ಗಂಡ, ನಿನಗೆ ಅವನೇ ತಾಳಿ ಕಟ್ಟುವುದು, ಈ ಮದುವೆ ನಡೆಯಲು ಬಿಡುವುದಿಲ್ಲ ಎಂದೆಲ್ಲಾ ಹೇಳುತ್ತಿದ್ದೆ ಈಗೇನು ಆಗುತ್ತಿದೆ ಎಂದು ಕೋಪದಿಂದ ಕೇಳುತ್ತಾಳೆ. ಏನು ಮಾಡುವುದು ಎಲ್ಲರೂ ಕೊನೆ ಸಮಯಕ್ಕೆ ನನಗೆ ಕೈ ಕೊಟ್ಟರು ಎಂದು ಸಾವಿತ್ರಿ ಬೇಸರದಿಂದ ಹೇಳುತ್ತಾಳೆ.

ದೇವಸ್ಥಾನಕ್ಕೆ ಬರುವ ವಿದ್ಯಾ ಕುಟುಂಬವನ್ನು ಶಿವರಾಮೇಗೌಡ ಹಾಗೂ ಮೋಹನ ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ. ವಿದ್ಯಾ ಬಂದಿದ್ದಾಳೆ ಎಂದು ತಿಳಿದು ಭದ್ರ ಅವಳನ್ನು ನೋಡಲು ಬರುತ್ತಾನೆ. ರತ್ನಳನ್ನು ಮಾತನಾಡಿಸುವ ಪರಿಚಯದ ಮಹಿಳೆ ನನ್ನ ಮಗನಿಗೆ ನಿನ್ನ ಮಗಳನ್ನು ಮದುವೆ ಮಾಡಿಕೊಡು ಎಂದು ಕೇಳಿದ್ದಕ್ಕೆ ಮಗಳನ್ನು ಓದಿಸಬೇಕು ಎಂದು ಹೇಳಿದ್ದೆ, ಈಗ ಶ್ರೀಮಂತರು ಬಂದರು ಎಂದು ಮದುವೆ ಮಾಡುತ್ತಿದ್ದೀಯ ಎಂದು ವ್ಯಂಗ್ಯವಾಡುತ್ತಾರೆ. ಅದನ್ನು ಕೇಳಿಸಿಕೊಳ್ಳುವ ವಿದ್ಯಾ, ಹಾಗಾದರೆ ಅಮ್ಮನಿಗೂ ನಾನು ಓದಬೇಕು ಎಂಬ ಆಸೆ ಬೆಟ್ಟದಷ್ಟಿದೆ, ಆದರೆ ಪರಿಸ್ಥಿತಿ ಕೈಗೆ ಕಟ್ಟುಬಿದ್ದು ಸುಮ್ಮನಿದ್ದಾಳೆ. ನಾನು ಪೊಲೀಸರಿಗೆ ಕರೆ ಮಾಡಿರುವುದನ್ನು ಹೇಳಿದರೆ ಅವಳು ನಿರಾಳ ಆಗುತ್ತಾಳೆ ಎಂದು ಹಿಂದಿನ ರಾತ್ರಿ ತಾನು ಪೊಲೀಸರಿಗೆ ವಿಷಯ ಮುಟ್ಟಿಸಿದ್ದನ್ನು ಅಮ್ಮನ ಬಳಿ ಹೇಳುತ್ತಾಳೆ.

ಮಗಳ ನಿರ್ಧಾರವನ್ನು ರತ್ನ ಒಪ್ಪುತ್ತಾಳಾ? ಪೊಲೀಸರಿಗೆ ಕರೆ ಮಾಡಿದ್ದು ವಿದ್ಯಾಳೇ ಎಂಬ ವಿಷಯ ಎಲ್ಲರಿಗೂ ತಿಳಿಯುವುದಾ? ಧಾರಾವಾಹಿಯ ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರೂ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.