ಮುದ್ದು ಸೊಸೆ: ತಾಳಿ ಕಟ್ಟುವ ಸಮಯಕ್ಕೆ ಮದುವೆ ಮಂಟಪಕ್ಕೆ ಪೊಲೀಸರ ಎಂಟ್ರಿ; ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ಮಾಡಿದ ಶಿವರಾಮೇಗೌಡ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ತಾಳಿ ಕಟ್ಟುವ ಸಮಯಕ್ಕೆ ಮದುವೆ ಮಂಟಪಕ್ಕೆ ಪೊಲೀಸರ ಎಂಟ್ರಿ; ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ಮಾಡಿದ ಶಿವರಾಮೇಗೌಡ

ಮುದ್ದು ಸೊಸೆ: ತಾಳಿ ಕಟ್ಟುವ ಸಮಯಕ್ಕೆ ಮದುವೆ ಮಂಟಪಕ್ಕೆ ಪೊಲೀಸರ ಎಂಟ್ರಿ; ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ಮಾಡಿದ ಶಿವರಾಮೇಗೌಡ

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 25 ನೇ ಸಂಚಿಕೆಯಲ್ಲಿ ವಿದ್ಯಾಗೆ ತಾಳಿ ಕಟ್ಟುವ ಸಮಯಕ್ಕೆ ಪೊಲೀಸರು ಬರುತ್ತಾರೆ. ಇನ್ಸ್‌ಪೆಕ್ಟರ್‌ ಮೇಲೆ ಶಿವರಾಮೇಗೌಡ ಹಲ್ಲೆ ಮಾಡುತ್ತಾನೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ತಾಳಿ ಕಟ್ಟುವ ಸಮಯಕ್ಕೆ ಮದುವೆ ಮಂಟಪಕ್ಕೆ ಪೊಲೀಸರ ಎಂಟ್ರಿ
ಮುದ್ದು ಸೊಸೆ: ತಾಳಿ ಕಟ್ಟುವ ಸಮಯಕ್ಕೆ ಮದುವೆ ಮಂಟಪಕ್ಕೆ ಪೊಲೀಸರ ಎಂಟ್ರಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 25ನೇ ಎಪಿಸೋಡ್‌ ಕಥೆ ಹೀಗಿದೆ. ಭದ್ರನ ಮನೆಯಿಂದ ಕೊಟ್ಟಿದ್ದ ಸೀರೆ, ಒಡವೆ ಧರಿಸಿ ಮನೆಯವರೊಂದಿಗೆ ವಿದ್ಯಾ ಮದುವೆ ಮಂಟಪಕ್ಕೆ ಬರುತ್ತಾಳೆ. ಪ್ರತಿ ಕ್ಷಣವೂ ಪೊಲೀಸರ ಬರುವಿಕೆಯನ್ನೇ ಕಾಯುತ್ತಾಳೆ. ಮದು ಮಗಳ ಅಲಂಕಾರದಲ್ಲಿ ವಿದ್ಯಾಳನ್ನು ನೋಡಿದ ಭದ್ರ ಖುಷಿಯಾಗುತ್ತಾನೆ. ಅಮ್ಮನಿಗೂ ನಾನು ಓದಬೇಕೆಂದು ಬಹಳ ಆಸೆ, ಆದರೆ ಪರಿಸ್ಥಿತಿಗೆ ಕಟ್ಟುಬಿದ್ದು ಅವಳು ಕೂಡಾ ಈ ಮದುವೆಗೆ ಒಪ್ಪಿಕೊಂಡಿದ್ದಾಳೆ. ನಾನು ಪೊಲೀಸರಿಗೆ ಕರೆ ಮಾಡಿರುವ ವಿಚಾರವನ್ನು ಹೇಳಿದರೆ ಅಮ್ಮ ಖುಷಿ ಪಡುತ್ತಾಳೆ ಎಂದು ವಿಚಾರವನ್ನು ರತ್ನಳಿಗೆ ಹೇಳಲು ವಿದ್ಯಾ ನಿರ್ಧರಿಸುತ್ತಾಳೆ.

ಮಗಳಿಗೆ ಸಹಾಯ ಮಾಡಲಾಗದೆ ಕೈಚೆಲ್ಲಿದ ರತ್ನ

ಅವ್ವ ನನಗೆ ಚೆನ್ನಾಗಿ ಗೊತ್ತು, ನಿನಗೂ ನಾನು ಓದಿ ದೊಡ್ಡ ಡಾಕ್ಟರ್‌ ಆಗಬೇಕು, ಸಾಧಿಸಬೇಕು ಅಂತ ಆಸೆ ಇದೆ. ನೀನು ಈಗ ಯಾವ ಪರಿಸ್ಥಿತಿಯಲ್ಲಿದ್ದೀಯ ಎಂದು ನನಗೆ ಚೆನ್ನಾಗಿ ಗೊತ್ತು. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನಿನ್ನೆ ರಾತ್ರಿ ನಾನು ಒಂದು ನಿರ್ಧಾರಕ್ಕೆ ಬಂದಿದ್ದೀನಿ ಎಂದು ವಿದ್ಯಾ ವಿಷಯ ಹೇಳಬೇಕು ಎನ್ನುವಷ್ಟರಲ್ಲಿ ರತ್ನ ಕಣ್ಣಿಗೆ ಏನೋ ಬಿತ್ತು ಎಂದು ಕಣ್ಣು ಮುಟ್ಟಿ ನೋಡಿಕೊಳ್ಳುತ್ತಾಳೆ. ನೀನು ಒಳ್ಳೆ ಮನೆಗೆ ಸೊಸೆಯಾಗಿ ಹೋಗುತ್ತಿದ್ದೀಯ. ಪ್ರತಿ ಹೆಣ್ಣು ಹೆತ್ತವರ ಆಸೆ ಇದು. ಮೊದಲು ಗೌಡರ ಮನೆಯವರು ಹೆಣ್ಣು ಕೇಳಲು ಬಂದಾಗ ನನಗೆ ಬಹಳ ಬೇಸರವಾಗಿತ್ತು. ಆದರೆ ಅವರು ನಮ್ಮ ಬಗ್ಗೆ ತೋರಿಸಿದ ಪ್ರೀತಿ ಕಂಡು ನನ್ನ ಮನಸ್ಸು ತುಂಬಿ ಬಂತು. ನೀನು ನಿಜವಾಗಿಯೂ ಅದೃಷ್ಟ ಮಾಡಿದ್ದೆ, ಒಳ್ಳೆ ಮನೆ ಸಿಕ್ಕಿದೆ, ಇನ್ಮುಂದೆ ನೀನು ಸಂತೋಷವಾಗಿರುತ್ತೀಯ ಎಂದು ರತ್ನ ಹೇಳುತ್ತಾಳೆ.

ನನ್ನ ಬೆಂಬಲಕ್ಕೆ ತಾಯಿ ನಿಲ್ಲುತ್ತಾಳೆ ಎಂದುಕೊಂಡಿದ್ದ ವಿದ್ಯಾಗೆ ಅವಳ ಮಾತು ಕೇಳಿ ಆಶ್ಚರ್ಯವಾಗುತ್ತದೆ. ನೀನು ಅದೇನೋ ಹೇಳಲು ಬಂದೆ ಏನು ಹೇಳು ಎಂದು ರತ್ನ ಹೇಳುತ್ತಾಳೆ. ಆದರೆ ವಿದ್ಯಾ ತಾನು ಪೊಲೀಸರಿಗೆ ಪೋನ್‌ ಮಾಡಿದ ವಿಚಾರವನ್ನು ಅಮ್ಮನ ಬಳಿ ಹೇಳಲು ನಿರಾಕರಿಸುತ್ತಾಳೆ. ಏನಿಲ್ಲ ಅವ್ವ ಗೌರಿಪೂಜೆಗೆ ಹೊತ್ತಾಯ್ತು ಬಾ ಎಂದು ಕರೆದೊಯ್ಯುತ್ತಾಳೆ. ಗೌರಿ ಪೂಜೆ ಮಾಡುವಾಗಲೂ ವಿದ್ಯಾ ಮದುವೆ ನಿಂತರೆ ಸಾಕು ಎಂದು ಯೋಚಿಸುತ್ತಾಳೆ. ನನ್ನ ತಾಯಿ ನನ್ನ ಜೊತೆಯಾಗಿ ನಿಲ್ಲುತ್ತಾಳೆ ಎಂದುಕೊಂಡಿದ್ದೆ ಆದರೆ ಈಗ ಅವಳೂ ಕೈ ಚೆಲ್ಲಿ ಕೂತಿದ್ದಾಳೆ. ತಾಯಿ ಗೌರಿ ನೀನೇ ನನ್ನನ್ನು ಕಾಪಾಡಬೇಕು ಎಂದು ಪ್ರಾರ್ಥಿಸುತ್ತಾಳೆ. ಪೂಜೆ ಮಾಡುವಾಗಲೂ ವಿದ್ಯಾ ಕಣ್ಣು ಪೊಲೀಸರಿಗಾಗೇ ಹುಡುಕಾಡುತ್ತಿರುತ್ತದೆ. ಪೂಜೆ ಮುಗಿಸಿ ಎಲ್ಲರಿಗೂ ಅರಿಶಿನ ಕುಂಕುಮ ಕೊಡುತ್ತಾಳೆ.

ತಾಳಿ ಕಟ್ಟುವ ಶುಭ ವೇಳೆ ಪೊಲೀಸರ ಆಗಮನ

ಇತ್ತ ವಿನಂತಿ, ತಾನು ಇಷ್ಟಪಟ್ಟ ಭದ್ರ ಬೇರೆ ಹುಡುಗಿಯನ್ನು ಮದುವೆ ಆಗುತ್ತಿರುವುದನ್ನು ನೋಡದೆ ದುಃಖಿಸುತ್ತಾಳೆ. ಮದುವೆ ನಿಲ್ಲಿಸದ ತಾಯಿ ಮೇಲೆ ಕೋಪಗೊಳ್ಳುತ್ತಾಳೆ. ನಾನು ವಿಷ ಕುಡಿದರೆ ಮದುವೆ ನಿಲ್ಲುತ್ತದೆ ಎಂದು ಸಾವಿತ್ರಿ ಹೇಳುತ್ತಾಳೆ. ನೀನು ಸತ್ತರೂ ನಿನ್ನ ಹೆಣವನ್ನು ಒಂದು ಕಡೆ ಬಚ್ಚಿಟ್ಟು ಮಾವ ಭದ್ರನ ಮದುವೆ ಮಾಡಿಸುತ್ತಾರೆ ಎಂದು ವಿನಂತಿ ತಾಯಿ ಮೇಲೆ ಕೋಪಗೊಳ್ಳುತ್ತಾಳೆ. ಭದ್ರ ಮಾಮ ಬೇರೆ ಹುಡುಗಿಗೆ ತಾಳಿ ಕಟ್ಟುವುದನ್ನು ನಾನು ನೋಡುವುದಿಲ್ಲ ಎಂದು ವಿನಂತಿ ಮದುವೆ ಮನೆಯಿಂದ ಹೋಗುತ್ತಾಳೆ. ಸಾವಿತ್ರಿ ಬೇರೆ ದಾರಿ ಇಲ್ಲದೆ ಬಂದು ತಾಯಿ ಪಕ್ಕ ಕೂರುತ್ತಾಳೆ. ಇಲ್ಲಿ ಇರುವುದಿಲ್ಲ ಎಂದು ಹೇಳಿದ್ದ ವಿನಂತಿ ವಾಪಸ್‌ ಬಂದು ಅಮ್ಮನ ಪಕ್ಕದಲ್ಲಿ ಕೂರುತ್ತಾಳೆ. ಮದುವೆ ನೋಡುವುದಿಲ್ಲ ಎಂದು ಹೇಳಿದ್ದೆ ಮತ್ತೆ ಏಕೆ ಬಂದೆ ಎಂದು ಸಾವಿತ್ರಿ ಕೇಳುತ್ತಾಳೆ. ನೀನು ಸಾಯುತ್ತೇನೆ ಎಂದು ಹೇಳಿದ್ದೆ ಏಕೆ ಸತ್ತಿಲ್ಲ ಎಂದು ವಿನಂತಿ ಕೇಳುತ್ತಾಳೆ. ಮಗಳ ಪ್ರಶ್ನೆಗೆ ಸಾವಿತ್ರಿ ಏನೂ ಮಾತನಾಡದೆ ಸುಮ್ಮನಾಗುತ್ತಾಳೆ.

ಇತ್ತ ಭದ್ರೇಗೌಡ ಮದು ಮಗನಾಗಿ ತಯಾರಾಗಿದ್ದಾನೆ, ತಂದೆ, ತಾಯಿ ಹಾಗೂ ಚಿಕ್ಕಪ್ಪನ ಆಶೀರ್ವಾದ ಪಡೆದು ಮದುವೆ ಮಂಟಪಕ್ಕೆ ಬರುತ್ತಾನೆ. ಮದುವೆ ಶಾಸ್ತ್ರಗಳೆಲ್ಲಾ ಮುಗಿದು ವಿದ್ಯಾಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಪೊಲೀಸರು ಬರುತ್ತಾರೆ. ಈ ಮದುವೆ ನಿಲ್ಲಿಸಬೇಕೆಂದು ನಮಗೆ ಫೋನ್‌ ಬಂದಿದೆ ನೀವಾಗಿಯೇ ಮದುವೆ ನಿಲ್ಲಿಸಿದರೆ ಸರಿ ಇಲ್ಲವಾದರೆ ಕಾನೂನು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಇನ್ಸ್‌ಪೆಕ್ಟರ್‌ ಹೇಳುತ್ತಾರೆ. ಈ ಮದುವೆಗೆ ಹುಡುಗ ಹುಡುಗಿ ಇಬ್ಬರೂ ಒಪ್ಪಿದ್ದಾರೆ, ಆದರೂ ಏನು ನಿಮ್ಮ ತಕರಾರು ಎಂದು ಶಿವರಾಮೇಗೌಡ ಕೇಳುತ್ತಾನೆ. ಹುಡುಗಿಗೆ ಇನ್ನೂ 18 ವರ್ಷ ತುಂಬಿಲ್ಲ, ಕಾನೂನಿನ ಪ್ರಕಾರ ಹುಡುಗಿಗೆ 18 ವರ್ಷ ತುಂಬಿರಬೇಕು, ಇಲ್ಲವಾದರೆ ಅದು ಬಾಲ್ಯ ವಿವಾಹವಾಗುತ್ತದೆ ಎಂದು ಇನ್ಸ್‌ಪೆಕ್ಟರ್‌ ಹೇಳುತ್ತಾರೆ. ಇಷ್ಟಾದರೂ ಭದ್ರ ಮಾತ್ರ ಹಸೆಮಣೆಯಿಂದ ಮೇಲೆ ಏಳುವುದಿಲ್ಲ. ನೀನಾಗಿಯೇ ಎದ್ದು ಬಂದು ಮದುವೆ ನಿಲ್ಲಿಸಿದರೆ ಸರಿ ಇಲ್ಲವಾದರೆ ಬಟ್ಟೆ ಬಿಚ್ಚಿ ಶೂನಲ್ಲಿ ಒದ್ದು ಎಳೆದುಕೊಂಡು ಹೋಗುತ್ತೇನೆ ಎಂದು ಭದ್ರನಿಗೆ ಇನ್ಸ್‌ಪೆಕ್ಟರ್‌ ಎಚ್ಚರಿಸುತ್ತಾರೆ. ಪ್ರೀತಿಯ ಮಗನಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಕ್ಕೆ ಕೋಪಗೊಂಡ ಶಿವರಾಮೇಗೌಡ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ಮಾಡುತ್ತಾನೆ.

ಪೊಲೀಸರ ಮೇಲೆ ಹಲ್ಲೆ ಮಾಡಿದ್ದಕ್ಕೆ ಶಿವರಾಮೇಗೌಡ ಅರೆಸ್ಟ್‌ ಆಗುತ್ತಾನಾ? ಮುದ್ದು ಸೊಸೆ ಧಾರವಾಹಿಯ ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರೂ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in