ಮುದ್ದು ಸೊಸೆ: ಶಿವರಾಮೇಗೌಡನ ಕುತ್ತಿಗೆ ಪಟ್ಟಿ ಹಿಡಿದು ಠಾಣೆಗೆ ಎಳೆದೊಯ್ದು ಇನ್ಸ್‌ಪೆಕ್ಟರ್‌; ಖುಷಿ ಪಟ್ಟವರು ಒಬ್ಬರಲ್ಲ ಇಬ್ಬರಲ್ಲ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಶಿವರಾಮೇಗೌಡನ ಕುತ್ತಿಗೆ ಪಟ್ಟಿ ಹಿಡಿದು ಠಾಣೆಗೆ ಎಳೆದೊಯ್ದು ಇನ್ಸ್‌ಪೆಕ್ಟರ್‌; ಖುಷಿ ಪಟ್ಟವರು ಒಬ್ಬರಲ್ಲ ಇಬ್ಬರಲ್ಲ

ಮುದ್ದು ಸೊಸೆ: ಶಿವರಾಮೇಗೌಡನ ಕುತ್ತಿಗೆ ಪಟ್ಟಿ ಹಿಡಿದು ಠಾಣೆಗೆ ಎಳೆದೊಯ್ದು ಇನ್ಸ್‌ಪೆಕ್ಟರ್‌; ಖುಷಿ ಪಟ್ಟವರು ಒಬ್ಬರಲ್ಲ ಇಬ್ಬರಲ್ಲ

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 26 ನೇ ಸಂಚಿಕೆಯಲ್ಲಿ ತನ್ನ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಶಿವರಾಮೇಗೌಡನನ್ನು ಇನ್ಸ್‌ಪೆಕ್ಟರ್‌ ಪೊಲೀಸ್‌ ಸ್ಟೇಷನ್‌ಗೆ ಕರೆದೊಯ್ಯುತ್ತಾರೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ಶಿವರಾಮೇಗೌಡನ ಕುತ್ತಿಗೆ ಪಟ್ಟಿ ಹಿಡಿದು ಠಾಣೆಗೆ ಎಳೆದೊಯ್ದು ಇನ್ಸ್‌ಪೆಕ್ಟರ್‌
ಮುದ್ದು ಸೊಸೆ: ಶಿವರಾಮೇಗೌಡನ ಕುತ್ತಿಗೆ ಪಟ್ಟಿ ಹಿಡಿದು ಠಾಣೆಗೆ ಎಳೆದೊಯ್ದು ಇನ್ಸ್‌ಪೆಕ್ಟರ್‌

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 26ನೇ ಎಪಿಸೋಡ್‌ ಕಥೆ ಹೀಗಿದೆ. ವಿದ್ಯಾಗೆ ಭದ್ರ ತಾಳಿ ಕಟ್ಟುವ ಸಮಯಕ್ಕೆ ಪೊಲೀಸರು ಬಂದು ಮದುವೆ ನಿಲ್ಲಿಸುವಂತೆ ಹೇಳುತ್ತಾರೆ. ಮದುವೆಗೆ ಹುಡುಗ, ಹುಡುಗಿ ಇಬ್ಬರೂ ಒಪ್ಪಿದ್ದಾರೆ ಆದರೂ ಏಕೆ ಮದುವೆ ನಿಲ್ಲಿಸಬೇಕು ಎಂದು ಶಿವರಾಮೇಗೌಡ ಕೇಳುತ್ತಾನೆ. ಇದು ಬಾಲ್ಯ ವಿವಾಹ, ಹುಡುಗಿಗೆ ಇನ್ನೂ 18 ವರ್ಷ ತುಂಬಿಲ್ಲ ಎಂದು ಇನ್ಸ್‌ಪೆಕ್ಟರ್‌ ಹೇಳುತ್ತಾರೆ. ನೀನು ಮದುವೆ ಮಂಟಪ ಬಿಟ್ಟು ಬರದಿದ್ದರೆ ಬಟ್ಟೆ ಬಿಚ್ಚಿಸಿ ಕರೆದೊಯ್ಯುತ್ತೇನೆ ಎಂದು ಭದ್ರನಿಗೆ ಎಚ್ಚರಿಕೆ ಕೊಡುತ್ತಾರೆ. ಮಗನಿಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಸಿಟ್ಟಾದ ಶಿವರಾಮೇಗೌಡ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ಮಾಡುತ್ತಾನೆ.

ವಿದ್ಯಾ ಕಾಲ್ಗುಣ ಸರಿ ಇಲ್ಲ ಎಂದ ಶಿವರಾಮೇಗೌಡನ ತಾಯಿ

ಬಾಲ್ಯ ವಿವಾಹ ಮಾಡುವುದು ದೊಡ್ಡ ತಪ್ಪು. ಅದರ ಜೊತೆಗೆ ಡ್ಯೂಟಿಯಲ್ಲಿದ್ದ ಪೊಲೀಸ್‌ ಆಫೀಸರ್‌ ಮೇಲೆ ಕೈ ಮಾಡಿ ಇನ್ನೂ ದೊಡ್ಡ ತಪ್ಪು ಮಾಡಿದ್ದೀಯ ಇದರ ಪರಿಣಾಮ ಏನು ಅನ್ನೋದನ್ನು ತೋರಿಸುತ್ತೇನೆ ಬಾ ಎಂದು ಶಿವರಾಮೇಗೌಡನ ಕುತ್ತಿಗೆ ಪಟ್ಟಿ ಹಿಡಿದು ಪೊಲೀಸರು ಠಾಣೆಗೆ ಕರೆದೊಯ್ಯುತ್ತಾರೆ. ಮದುವೆ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಷ್ಟರಲ್ಲಿ ಇಷ್ಟೆಲ್ಲಾ ರಾದ್ಧಾಂತ ಆಗಿದ್ದನ್ನು ನೋಡಿ ಎಲ್ಲರೂ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಶಿವರಾಮೇಗೌಡನಿಗೆ ಈ ಪರಿಸ್ಥಿತಿ ಬಂದಿದ್ದಕ್ಕೆ ಸಾವಿತ್ರಿ, ವಿನಂತಿ, ಈಶ್ವರಿ, ಚಿತ್ರಾ, ಸುಭಾಷ್‌ ಖುಷಿಯಾಗುತ್ತಾರೆ. ಮದುವೆ ನಡೆಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾ ಕೂಡಾ ಖುಷಿಯಾಗುತ್ತಾಳೆ. ತಂದೆಯನ್ನು ಬಿಡಿಸಲು ಕ್ವಾಟ್ಲೆ ಹಾಗೂ ಚಿಕ್ಕಪ್ಪನ ಜೊತೆ ಭದ್ರ ಪೊಲೀಸ್‌ ಸ್ಟೇಷನ್‌ಗೆ ಹೋಗುತ್ತಾನೆ.

ಅವರ ಹಿಂದೆಯೇ ಶಿವರಾಮೇಗೌಡನ ತಾಯಿ ಓಡೋಡಿ ಹೋಗುತ್ತಾಳೆ. ನನ್ನ ಮಗ ಸುತ್ತಮುತ್ತಲಿನ ಹಳ್ಳಿಯಲೆಲ್ಲಾ ಒಳ್ಳೆ ಹೆಸರು ಸಂಪಾದಿಸಿದ್ದ. ಗತ್ತಿನಿಂದ ಮೆರೆಯುತ್ತಿದ್ದವನನ್ನು ಪೊಲೀಸರು ಈ ರೀತಿ ಎಳೆದೊಯ್ಯುತ್ತಿದ್ದಾರಲ್ಲ ಎಂದು ಕಣ್ಣೀರಿಡುತ್ತಾಳೆ. ಮಗ ಪೊಲೀಸ್‌ ಸ್ಟೇಷನ್‌ಗೆ ಹೋಗಿದ್ದಕ್ಕೆ ಶಿವರಾಮೇಗೌಡನ ತಾಯಿ ಕಣ್ಣೀರಿಟ್ಟರೆ, ಮಗಳ ಮದುವೆ ನಿಂತುಹೋಯ್ತಲ್ಲಾ ಎಂದು ಚೆಲುವ ಆತಂಕ ವ್ಯಕ್ತಪಡಿಸುತ್ತಾನೆ. ನನ್ನ ಮಗಳ ಗತಿ ಏನು? ಹಸೆಮಣೆವರೆಗೂ ಬಂದ ಹೆಣ್ಣಿನ ಮದುವೆ ಈ ರೀತಿ ಅರ್ಧದಲ್ಲಿ ನಿಂತರೆ ಮುಂದೆ ಏನು ಗತಿ? ನನ್ನ ಮಗಳಿಗೆ ನೀವಾದರೂ ಧೈರ್ಯ ಹೇಳಿ ಅಮ್ಮ ಎಂದು ಮನವಿ ಮಾಡುತ್ತಾನೆ. ಚೆಲುವನ ಮಾತುಗಳನ್ನು ಕೇಳಿಸಿಕೊಂಡು ಶಿವರಾಮೇಗೌಡನ ತಾಯಿ ಸಿಟ್ಟಾಗುತ್ತಾಳೆ. ಇದೆಲ್ಲದಕ್ಕೂ ನೀನು ನಿನ್ನ ಮಗಳೇ ಕಾರಣ. ನನ್ನ ಮಗ ರಾಜನಂತೆ ಇದ್ದ, ನಿನ್ನ ಮಗಳ ಕಾಲ್ಗುಣದಿಂದಲೇ ಅವನಿಗೆ ಈ ಗತಿ ಬಂದಿದ್ದು, ನನ್ನ ಮಗ ಪೊಲೀಸ್‌ ಸ್ಟೇಷನ್‌ಗೆ ಹೋದ ಚಿಂತೆ ನನಗೆ, ನೀನು ನಿನ್ನ ಮಗಳ ಮದುವೆ ವಿಚಾರವೇ ದೊಡ್ಡದು ಎಂದುಕೊಂಡಿದ್ದೀಯ ಎನ್ನುತ್ತಾಳೆ. ಆ ಮಾತು ಕೇಳಿ ಚೆಲುವ ಹಾಗೂ ರತ್ನ ಬೇಸರಗೊಳ್ಳುತ್ತಾರೆ. ತಾಯಿ ಮಾತಿಗೆ ದನಿಗೂಡಿಸುವ ಸಾವಿತ್ರಿ ಮನೆಗೆ ಕಾಲಿಡುವ ಮುನ್ನವೇ ಹೀಗೆಲ್ಲಾ ಆಯ್ತು, ಇನ್ನು ಮನೆಗೆ ಬಂದಿದ್ದರೆ ಇನ್ನು ಎಷ್ಟೆಲ್ಲಾ ಸಮಸ್ಯೆ ಆಗುವುದೋ ಎನ್ನುತ್ತಾಳೆ.

ಶಿವರಾಮೇಗೌಡನ ಪರಿಸ್ಥಿತಿಯನ್ನು ಸಂಭ್ರಮಿಸಿದ ಈಶ್ವರಿ

ಶಿವರಾಮೇಗೌಡನನ್ನು ಪೊಲೀಸರು ಕರೆದೊಯ್ಯುತ್ತಿರುವ ದೃಶ್ಯವನ್ನು ಸುಭಾಷ್‌ ತನ್ನ ಸ್ನೇಹಿತನ ಮೂಲಕ ವಿಡಿಯೋ ಮಾಡಿಸುತ್ತಾನೆ. ಅದನ್ನು ನೋಡಿ ಈಶ್ವರಿ ಖುಷಿಯಾಗುತ್ತಾಳೆ. ಆ ಹುಡುಗಿಯನ್ನು ಮನೆಗೆ ಕರೆತಂದು ಶಿವರಾಮೇಗೌಡನಿಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದೆ, ಆದರೆ ನೀನು ಅದಕ್ಕಿಂತ ದೊಡ್ಡ ಕೆಲಸವನ್ನೇ ಮಾಡಿದ್ದೀಯ ಈ ವಿಡಿಯೋವನ್ನು ನಿನ್ನ ಸ್ನೇಹಿತರಿಗೆ ಕಳಿಸಿ ವೈರಲ್‌ ಮಾಡಿಸು. ಶಿವರಾಮೇಗೌಡನ ಮರ್ಯಾದೆ ಮಂಡ್ಯದಲ್ಲಿ ಮಾತ್ರವಲ್ಲ, ಇಡೀ ರಾಜ್ಯದ ಮುಂದೆ ಹರಾಜು ಆಗುವಂತೆ ಮಾಡು ಎಂದು ಮಗನಿಗೆ ಹೇಳುತ್ತಾಳೆ. ಅತ್ತೆ ಹಾಗೂ ಅತ್ತಿಗೆ ಕಣ್ಣೀರಿಡುತ್ತಿದ್ದರೆ ಈಶ್ವರಿ ಮಾತ್ರ ಏನೋ ಸಾಧನೆ ಮಾಡಿದವಳಂತೆ ಮಕ್ಕಳ ಜೊತೆ ಸೇರಿ ಸಂಭ್ರಮಿಸುತ್ತಾಳೆ.

ವಿದ್ಯಾ ತನ್ನ ತಂದೆ ತಾಯಿ ಜೊತೆ ಖುಷಿಯಿಂದಲೇ ಮನೆಗೆ ವಾಪಸ್‌ ಹೋಗುತ್ತಾಳೆ. ಇತ್ತ ಭದ್ರ ಪೊಲೀಸ್‌ ಸ್ಟೇಷನ್‌ಗೆ ಹೋಗುತ್ತಾನೆ. ಆದರೆ ಅವನನ್ನು ಪೊಲೀಸರು ಒಳಗೆ ಹೋಗದಂತೆ ತಡೆಯುತ್ತಾರೆ. ಲಾಯರ್‌ ಹಾಗೂ ಮಿನಿಸ್ಟರ್‌ಗೆ ಕರೆ ಮಾಡುವಂತೆ ಕ್ವಾಟ್ಲೆ ಹಾಗೂ ಚಿಕ್ಕಪ್ಪನಿಗೆ ಹೇಳುತ್ತಾನೆ. ಲಾಯರ್‌ ಬಂದು ಇನ್ಸ್‌ಪೆಕ್ಟರ್‌ ಜೊತೆ ಮಾತನಾಡುತ್ತಾರೆ. ನಾನು ಆಗಲೇ ಎಫ್‌ಐಆರ್‌ ಹಾಕಿ ಆಯ್ತು, ಈ ವಿಷಯವನ್ನು ನೀವು ಕೋರ್ಟ್‌ನಲ್ಲಿ ನೋಡಿಕೊಳ್ಳಿ ಎಂದು ಇನ್ಸ್‌ಪೆಕ್ಟರ್‌ ಹೇಳುತ್ತಾರೆ. ತಂದೆಯನ್ನು ಈ ಪರಿಸ್ಥಿತಿಗೆ ತಂದವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಭದ್ರ ಅರಚುತ್ತಾನೆ.

ಶಿವರಾಮೇಗೌಡ ಪೊಲೀಸ್‌ ಸ್ಟೇಷನ್‌ನಿಂದ ವಾಪಸ್‌ ಬರುತ್ತಾನಾ? ಸುಭಾಷ್‌ ರೆಕಾರ್ಡ್‌ ಮಾಡಿದ ವಿಡಿಯೋ ವೈರಲ್‌ ಆಗುವುದಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರೂ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in