ಮುದ್ದು ಸೊಸೆ ಧಾರಾವಾಹಿ ಆರಂಭ; ನಾಯಕ ಭದ್ರೇಗೌಡ, ನಾಯಕಿ ವಿದ್ಯಾ ಪರಿಚಯ ಮಾಡಿಕೊಡಲು ಬಂದ್ರು ನಿರ್ಮಾಪಕಿ ಮೇಘಾ ಶೆಟ್ಟಿ
Muddu Sose Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಮೊದಲ ಎಪಿಸೋಡ್‌ನಲ್ಲಿ ಶಿವರಾಮೇಗೌಡ ತನ್ನ ಮಗ ಭದ್ರೇಗೌಡನಿಗೆ ಹೆಣ್ಣು ನೋಡಲು ನಿರ್ಧರಿಸುತ್ತಾನೆ. ಮತ್ತೊಂದೆಡೆ ನಾಯಕಿ ವಿದ್ಯಾ ಆಶುಭಾಷಣ ಸ್ಪರ್ಧೆಯಲ್ಲಿ ಸ್ವಾತಂತ್ಯ್ರದ ಬಗ್ಗೆ ಮಾತನಾಡಿ ಬಹುಮಾನ ಗೆಲ್ಲುತ್ತಾಳೆ. (ಬರಹ: ರಕ್ಷಿತಾ ಸೌಮ್ಯ)

Muddu Sose Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತ್ಯಗೊಂಡಿದೆ. ಏಪ್ರಿಲ್ 14 ರಿಂದ ರಾತ್ರಿ 7.30ಕ್ಕೆ ಮುದ್ದುಸೊಸೆ ಹೆಸರಿನ ಹೊಸ ಧಾರಾವಾಹಿ ಆರಂಭವಾಗಿದೆ. ಮಂಡ್ಯ ಹಿನ್ನೆಲೆಯಲ್ಲಿ ಈ ಧಾರಾವಾಹಿ ಕಥೆ ಸಾಗುತ್ತದೆ. ಓದಿ ಡಾಕ್ಟರ್ ಆಗಬೇಕೆಂದು ಕನಸು ಕಂಡ ನಾಯಕಿ ವಿದ್ಯಾ, ಹೆಣ್ಣು ಮಕ್ಕಳು ಓದಿದರೆ ಅವರು ಕೆಟ್ಟ ದಾರಿ ಹಿಡಿಯುತ್ತಾರೆ ಎಂಬ ನಂಬಿರುವ ಶಿವರಾಮೇಗೌಡ, ಅಪ್ಪನ ಆದೇಶವನ್ನು ಚಾಚೂ ತಪ್ಪದೆ ಪಾಲಿಸುವ ಭದ್ರೇಗೌಡ, ಕೂಡು ಕುಟುಂಬದಲ್ಲಿದ್ದರೂ ಅಧಿಕಾರಕ್ಕಾಗಿ ಆಸೆ ಪಟ್ಟು ಭದ್ರೇಗೌಡ, ಶಿವರಾಮೇಗೌಡನ ವಿರುದ್ಧ ಕತ್ತಿ ಮಸೆಯುತ್ತಿರುವ ತಮ್ಮನ ಹೆಂಡತಿ, ಮಕ್ಕಳು ಹೀಗೆ ಕಥೆ ಆರಂಭವಾಗುತ್ತದೆ. ಮುದ್ದು ಸೊಸೆ ಧಾರಾವಾಹಿ ಮೊದಲ ಎಪಿಸೋಡ್ ಕಥೆ ಇಲ್ಲಿದೆ.
ಕಾಲೇಜು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದ ಮೇಘಾ ಶೆಟ್ಟಿ
ನಟಿ ಮೇಘಾ ಶೆಟ್ಟಿ ದೇವಲಾಪುರದ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸುತ್ತಾರೆ. ದಾರಿಯಲ್ಲಿ ಭದ್ರೇಗೌಡ ಮೇಘಾಗೆ ಎದುರಾಗುತ್ತಾನೆ. ನಿಮ್ಮ ಮಂಡ್ಯ ಕಾಲೇಜೊಂದಕ್ಕೆ ಗೆಸ್ಟ್ ಆಗಿ ಹೋಗುತ್ತಿದ್ದೇನೆ ಎನ್ನುತ್ತಾರೆ. ಹೌದಾ, ಒಳ್ಳೆಯದಾಲಿ ಎಂದು ಭದ್ರೇಗೌಡ ಆಕೆಯನ್ನು ತಿರುಗಿ ನೋಡದೆ ಶುಭ ಹಾರೈಸಿ ಹೋಗುತ್ತಾನೆ. ದಾರಿಯಲ್ಲಿ ತಾಯಿ ಕಾಣದೆ ಅಳುತ್ತಿದ್ದ ಮಗುವನ್ನು ಎತ್ತಿಕೊಂಡು ಭದ್ರ ಸಂತೈಸುತ್ತಾನೆ. ಆದಷ್ಟು ಬೇಗ ನೀವೂ ಮದುವೆ ಆಗಿ ತೊಟ್ಟಿಲು ತೂಗಿ ಎಂದು ಆ ತಾಯಿ ಹಾರೈಸುತ್ತಾಳೆ. ಅಯ್ಯೋ ನನಗೆ ಈಗಲೇ ಮದುವೆ ಬೇಡ ಎಂದು ಹೇಳಿ ಭದ್ರ ಅಲ್ಲಿಂದ ಹೊರಡುತ್ತಾನೆ. ಶಿವರಾಮೇಗೌಡ ಹೊರಗೆ ಕೆಲಸ ಮುಗಿಸಿಕೊಂಡು ಮನೆಗೆ ಬರುವ ದಾರಿಯಲ್ಲಿ ಪ್ರೇಮಿಗಳಿಬ್ಬರು ಆತ್ಮೀಯವಾಗಿ ಇರುವುದನ್ನು ನೋಡಿ ಹಳೆಯ ನೆನಪುಗಳಿಗೆ ಜಾರುತ್ತಾನೆ.
ತಾಯಿ ಬೇಡ ಎಂದರೂ ಶಿವರಾಮೇಗೌಡ ತನ್ನ ಮಗಳನ್ನು ಓದಲು ಕಳಿಸುತ್ತಾನೆ. ಆದರೆ ಒಂದು ದಿನ ಅವಳು ತಾನು ಪ್ರೀತಿಸುತ್ತಿದ್ದ ಹುಡುಗನನ್ನು ಯಾರಿಗೂ ಹೇಳದೆ ಮದುವೆ ಆಗ ಅವನೊಂದಿಗೆ ಮನೆ ಬಳಿ ಬಂದು ನಿಲ್ಲುತ್ತಾಳೆ. ಅದನ್ನು ನೋಡಿ ಶಿವರಾಮೇಗೌಡ ಕೋಪಗೊಳ್ಳುತ್ತಾನೆ. ನನ್ನ ಅವ್ವ ಬೇಡ ಎಂದರೂ ಒಳ್ಳೆ ಹೆಸರು ತರುತ್ತೀಯ ಎಂದು ಓದಲು ಕಳಿಸಿದೆ, ಆದರೆ ಈಗ ನೀನು ಮಾಡಿದ್ದೇನು? ನಿನಗೂ ನನಗೂ ಸಂಬಂಧವಿಲ್ಲ ಮನೆ ಬಿಟ್ಟು ಹೋಗು ಎಂದು ಅವರಿಬ್ಬರನ್ನೂ ಹೊರಗೆ ಕಳಿಸುತ್ತಾನೆ. ಇನ್ಮುಂದೆ ನಮ್ಮ ಕುಟುಂಬದಲ್ಲಿ ಯಾವ ಹೆಣ್ಣು ಮಕ್ಕಳೂ ಓದಬಾರದು ಎಂದು ಷರತ್ತು ವಿಧಿಸುತ್ತಾನೆ.
ಶಿವರಾಮೇಗೌಡನ ವಿರುದ್ಧ ತಮ್ಮನ ಹೆಂಡತಿ ಮಸಲತ್ತು
ಮನೆಗೆ ಬಂದ ನಂತರ ಶಿವರಾಮೇಗೌಡನ ತಮ್ಮ, ವ್ಯವಹಾರದ ಲೆಕ್ಕ ಬರೆದಿರುವ ಪುಸ್ತಕ ನೋಡುವಂತೆ ಅಣ್ಣನಿಗೆ ಹೇಳುತ್ತಾನೆ. ನೀನು ನೋಡಿದರೆ ನಾನು ನೋಡಿದಂತೆ ಬಿಡು ಎಂದು ತಮ್ಮನ ಬಗ್ಗೆ ನಂಬಿಕೆ ವ್ಯಕ್ತಪಡಿಸುತ್ತಾನೆ. ಅದನ್ನು ದೂರದಿಂದ ನೋಡುವ ಶಿವರಾಮೇಗೌಡನ ತಮ್ಮನ ಹೆಂಡತಿ, ನನ್ನ ಗಂಡ ಅವರ ಅಣ್ಣನ ಮುಂದೆ ಈ ರೀತಿ ಕೈಕಟ್ಟಿ ನಿಂತಿರುವುದನ್ನು ನಾನು ನೋಡಲಾಗುತ್ತಿಲ್ಲ. ನನ್ನ ಗಂಡನಿಗೆ ಹಾಗೂ ಮಗನಿಗೆ ಈ ಅಧಿಕಾರ ದೊರೆಯಬೇಕು ಎಂದುಕೊಂಡು ಮಗನಿಗೆ ತನ್ನ ಮನಸ್ಸಿನಲ್ಲಿರುವ ವಿಚಾರ ಹೇಳುತ್ತಾಳೆ. ಕೆಲವೇ ದಿನಗಳಲ್ಲಿ ನಿನ್ನ ಕನಸು ನನಸಾಗುತ್ತದೆ ನೋಡ್ತಿರು ಎಂದು ಸುಭಾಷ್ ಗೌಡ, ತನ್ನ ತಾಯಿಗೆ ಮಾತು ಕೊಡುತ್ತಾನೆ.
ಶಿವರಾಮೇಗೌಡ ತನ್ನ ಮಗ ಭದ್ರೇಗೌಡನಿಗೆ ನಾಳೆ ಹೆಣ್ಣು ನೋಡಲು ಹೋಗಲು ಸಿದ್ಧವಾಗುವಂತೆ ಹೇಳುತ್ತಾನೆ. ನೀನು ಹೇಳಿದ ಎಲ್ಲಾ ಮಾತನ್ನು ಕೇಳುತ್ತೇನೆ. ಆದರೆ ಮದುವೆ ವಿಚಾರದಲ್ಲಿ ದಯವಿಟ್ಟು ನನ್ನನ್ನು ಕ್ಷಮಿಸು ಎಂದು ಭದ್ರೇಗೌಡ, ಅಪ್ಪನ ಬಳಿ ಕ್ಷಮೆ ಕೇಳುತ್ತಾನೆ, ಇನ್ನೂ ಎಷ್ಟು ದಿನ ಅದನ್ನೇ ಮನಸ್ಸಿನಲ್ಲಿಟುಕೊಂಡು ಕೊರಗುತ್ತೀಯ ಎಂದು ಶಿವರಾಮೇಗೌಡ ಕೇಳುತ್ತಾನೆ. ಮರೆಯಲು ಅದು ಬಟ್ಟೆ ಮೇಲಿನ ಕೊಳೆ ಅಲ್ಲ, ಮನಸ್ಸಿನಲ್ಲಿರುವ ಗಾಯ ಎಂದು ಭದ್ರೇಗೌಡ ಹೇಳುತ್ತಾನೆ.
ಆಶುಭಾಷಣ ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದ ವಿದ್ಯಾ
ಇತ್ತ ನಾಯಕಿ ವಿದ್ಯಾ , ಶಾಲೆ ಕಾರ್ಯಕ್ರಮವೊಂದರಲ್ಲಿ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ ಸ್ವಾತಂತ್ಯ್ರದ ಬಗ್ಗೆ ಮಾತನಾಡಿ ಬಹುಮಾನ ಗೆಲ್ಲುತ್ತಾಳೆ. ಮಗಳ ಗೆಲುವು ನೋಡಿ ವಿದ್ಯಾ ತಾಯಿ ಖುಷಿ ಪಡುತ್ತಾಳೆ. ಗೆದ್ದ ಕಪ್‌ಅನ್ನು ಮನೆಗೆ ತಂದು ಸ್ಪರ್ಧೆಯಲ್ಲಿ ಗೆದ್ದ ಖುಷಿಯನ್ನು ಅಜ್ಜಿ ಬಳಿ ಹೇಳಿಕೊಂಡರೂ ಆಕೆ ಸ್ಪಂದಿಸುವುದಿಲ್ಲ. ಮಗಳಿಗೆ ಓದು ಬರಹ ಹೇಳಿಕೊಡುವ ಬದಲು ಗಂಡನ ಮನೆಯಲ್ಲಿ ಹೇಗೆ ಇರಬೇಕು ಅನ್ನೋದನ್ನು ಹೇಳಿಕೊಡು ಎಂದು ಸೊಸೆಗೆ ಹೇಳುತ್ತಾಳೆ. ಆಕೆಯ ಮಾತು ಕೇಳಿ ವಿದ್ಯಾ ಹಾಗೂ ಅವಳ ತಾಯಿ ಬೇಸರಗೊಳ್ಳುತ್ತಾರೆ. ಅಜ್ಜಿ ನಾನು ಮದುವೆ ಆಗುವುದಿಲ್ಲ, ಓದಿ ಡಾಕ್ಟರ್ ಆಗುವೆ ಎನ್ನುತ್ತಾಳೆ. ಇವತ್ತು ಕಪ್ ಗೆದ್ದಂತೆ ಜೀವನದಲ್ಲೂ ಗೆದ್ದೇ ಗೆಲ್ಲುತ್ತೇನೆ ಎಂದು ವಿದ್ಯಾ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾಳೆ.
ಇನ್ನು ವಿದ್ಯಾ ತಂದೆ ಚೆಲುವ ಮಹಾನ್ ಕುಡುಕ, ಸಾಲ ಮಾಡಿಯಾದರೂ ಕುಡಿಯಲೇಬೇಕು ಎನ್ನುವ ವ್ಯಕ್ತಿತ್ವದವನು. ಇವತ್ತು ಕುಡಿಯೋಕೆ ದುಡ್ಡಿಲ್ಲ, ಯಾರಾದರೂ ಮಿಕ ಸಿಗುತ್ತಾರಾ ನೋಡೋಣ ಎಂದು ಚೆಲುವೆ ರಸ್ತೆಯಲ್ಲಿ ಕಾಯುತ್ತಾ ನಿಂತಿರುತ್ತಾನೆ, ಆಗ ಅವನಿಗೆ ಸಾಲ ಕೊಟ್ಟಿರುವ ಬಡ್ಡಿ ಭೈರಣ್ಣ ಎದುರಾಗುತ್ತಾನೆ, ಅವನನ್ನು ನೋಡಿ ಚೆಲುವೆ ಹೆದರಿ ಮನೆ ಬಳಿ ಓಡುತ್ತಾನೆ. ನಾನು ಒಳಗೆ ಇರುತ್ತೇನೆ, ಯಾರಾದರೂ ಕೇಳಿದರೆ ನಾನು ಮನೆಯಲ್ಲಿ ಇಲ್ಲವೆಂದು ಹೇಳುವಂತೆ ಮನೆಯವರಿಗೆ ಹೇಳಿ ಒಳಗೆ ಅಡಗುತ್ತಾನೆ. ಮನೆಗೆ ಬಂದ ಬಡ್ಡಿ ಭೈರಣ್ಣನನ್ನು ಚೆಲುವನ ತಾಯಿ ಬೈದು ಕಳಿಸುತ್ತಾಳೆ. ಕುಡಿಯಲು ಹಣಕ್ಕಾಗಿ ಪರದಾಡುತ್ತಿದ್ದ ಚೆಲುವನ ಗಮನ, ಮಗಳು ವಿದ್ಯಾ ಗೆದ್ದ ಕಪ್ ಕಡೆ ಹರಿಯುತ್ತದೆ. ಅದನ್ನು ತೆಗೆದುಕೊಂಡು ಮಾರಲು ಹೊರಡುತ್ತಾನೆ. ಅಪ್ಪನ ಬುದ್ಧಿ ಗೊತ್ತಿರುವ ವಿದ್ಯಾ ಅದನ್ನು ವಾಪಸ್ ಕೊಟ್ಟುಬಿಡು ಎಂದು ಗೋಳಾಡುತ್ತಾಳೆ.
ಭದ್ರೇಗೌಡ, ಮದುವೆಯಾಗಲು ಹಿಂಜರಿಯುತ್ತಿರುವುದೇಕೆ? ವಿದ್ಯಾ ತನ್ನ ಅಪ್ಪನಿಂದ ಸ್ಪರ್ಧೆಯಲ್ಲಿ ಗೆದ್ದು ತಂದ ಕಪ್ ವಾಪಸ್ ಪಡೆಯುತ್ತಾಳಾ? ನಾಯಕಿ-ನಾಯಕಿ ಭೇಟಿ ಆಗುವುದು ಯಾವಾಗ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ. (ಬರಹ: ರಕ್ಷಿತಾ ಸೌಮ್ಯ)
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ವಿದ್ಯಾ - ಪ್ರತಿಮಾ ಠಾಕೂರ್
ವಿದ್ಯಾ ತಾಯಿ - ಹರಿಣಿ ಶ್ರೀಕಾಂತ್
