ಮುದ್ದು ಸೊಸೆ: ಮನೆದೇವರ ಪೂಜೆಗೆ ಹೊರಟ ಶಿವರಾಮೇಗೌಡ ಕುಟುಂಬ; ಮೊದಲ ನೋಟದಲ್ಲೇ ಭದ್ರೇಗೌಡನ ಮನಸ್ಸು ಗೆದ್ದ ವಿದ್ಯಾ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಮನೆದೇವರ ಪೂಜೆಗೆ ಹೊರಟ ಶಿವರಾಮೇಗೌಡ ಕುಟುಂಬ; ಮೊದಲ ನೋಟದಲ್ಲೇ ಭದ್ರೇಗೌಡನ ಮನಸ್ಸು ಗೆದ್ದ ವಿದ್ಯಾ

ಮುದ್ದು ಸೊಸೆ: ಮನೆದೇವರ ಪೂಜೆಗೆ ಹೊರಟ ಶಿವರಾಮೇಗೌಡ ಕುಟುಂಬ; ಮೊದಲ ನೋಟದಲ್ಲೇ ಭದ್ರೇಗೌಡನ ಮನಸ್ಸು ಗೆದ್ದ ವಿದ್ಯಾ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಎಪಿಸೋಡ್‌ 2ರಲ್ಲಿ ಮನೆದೇವರ ಪೂಜೆಗಾಗಿ ಶಿವರಾಮೇಗೌಡ ತನ್ನ ಕುಟುಂಬದೊಂದಿಗೆ ಊರಿಗೆ ಹೊರಡುತ್ತಾನೆ. ದಾರಿಯಲ್ಲಿ ವಿದ್ಯಾಳನ್ನು ನೋಡುವ ಭದ್ರೇಗೌಡ ಮೊದಲ ನೋಟಕ್ಕೆ ಸೋತು ಹೋಗುತ್ತಾನೆ.

ಮೊದಲ ನೋಟದಲ್ಲೇ ಭದ್ರೇಗೌಡನ ಮನಸ್ಸು ಗೆದ್ದ ವಿದ್ಯಾ
ಮೊದಲ ನೋಟದಲ್ಲೇ ಭದ್ರೇಗೌಡನ ಮನಸ್ಸು ಗೆದ್ದ ವಿದ್ಯಾ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 2ನೇ ಎಪಿಸೋಡ್‌ ಕಥೆ ಹೀಗಿದೆ. ಹುಲಿಕೆರೆ ಜಮೀನ್ದಾರ ಶಿವರಾಮೇಗೌಡನಿಗೆ ತನ್ನ ಮಗ ಭದ್ರೇಗೌಡನಿಗೆ ಒಂದೊಳ್ಳೆ ಹೆಣ್ಣು ನೋಡಿ ಆದಷ್ಟು ಬೇಗ ಮದುವೆ ಮಾಡಬೇಕೆಂಬ ಆಸೆ. ಆದರೆ ಹಿಂದೊಮ್ಮೆ ನಡೆದ ಯಾವುದೋ ಘಟನೆಯಿಂದ ನೊಂದಿದ್ದ ಭದ್ರೇಗೌಡ ಮದುವೆಗೆ ನಿರಾಕರಿಸುತ್ತಾನೆ. ನನಗೆ ಮದುವೆ ಆಗುವ ಅರ್ಹತೆಯೇ ಇಲ್ಲ ಎಂದುಕೊಳ್ಳುತ್ತಾನೆ. ಮಗನ ವರ್ತನೆಯಿಂದ ಶಿವರಾಮೇಗೌಡನಿಗೆ ಬೇಸರ ಉಂಟಾಗುತ್ತದೆ.

ಮನೆದೇವರ ಪೂಜೆಗೆ ಹೋಗಲು ಒಪ್ಪಿಕೊಂಡ ಭದ್ರೇಗೌಡ

ದೇವರ ಪೂಜೆ ಮಾಡುವಾಗ ಕ್ವಾಟ್ಲೆ ಮೈ ಮೇಲೆ ದೇವಿ ಬರುತ್ತಾಳೆ. ನನ್ನ ಮೇಲೆ ಏಕೆ ಮುನಿಸಿಕೊಂಡಿದ್ದೀಯ ತಾಯಿ? ನಮ್ಮ ಮನೆಯಲ್ಲಿ ಏಕೆ ಶುಭಕಾರ್ಯಗಳು ನಡೆಯುತ್ತಿಲ್ಲ ಎಂದು ಶಿವರಾಮೇಗೌಡ ಕೇಳುತ್ತಾನೆ. ಮನೆ ದೇವರ ಪೂಜೆ ಮಾಡುವುದನ್ನು ಮರೆತಿದ್ದೀಯ ಎಂದು ದೇವಿ ಹೇಳುತ್ತಾಳೆ. ಆಗ ಶಿವರಾಮೇಗೌಡ ದೇವಿಗೆ ಕ್ಷಮೆ ಕೇಳಿ ಕುಟುಂಬ ಸಹಿತ ತನ್ನ ಸ್ವಂತ ಊರಿಗೆ ಹೊರಡಲು ಸಿದ್ಧನಾಗುತ್ತಾನೆ. ಮಗನನ್ನು ಕರೆದು, ನಾನು ಹೇಳಿದ ಎಲ್ಲಾ ಕೆಲಸವನ್ನು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುತ್ತೀಯ, ಆದರೆ ಮದುವೆ ವಿಚಾರದಲ್ಲಿ ಮಾತ್ರ ಏಕೆ ನನ್ನ ಮನಸ್ಸು ನೋಯಿಸುತ್ತಿದ್ದೀಯ? ಪೂಜೆಗೆ ಬರುವುದಿಲ್ಲ ಎಂದು ಕ್ವಾಟ್ಲೆ ಬಳಿ ಹೇಳಿದೆಯಂತೆ. ನನ್ನ ಸ್ನೇಹಿತನ ಮನೆಗೆ ಹೆಣ್ಣು ನೋಡಲು ಹೋಗಿ ಅವರು ನಿನಗೆ ಅವಮಾನ ಮಾಡಿದ್ದು ನನಗೂ ಬಹಳ ನೋವಾಗಿದೆ. ಆದರೆ ಅದೊಂದೇ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಹೀಗೆಲ್ಲಾ ಮಾಡಬೇಡ, ದಯವಿಟ್ಟು ಮನೆದೇವರ ಪೂಜೆಗೆ ಬಾ ಎಂದು ಕರೆಯುತ್ತಾನೆ. ಅಪ್ಪನ ಮನಸ್ಸಿಗೆ ಬೇಸರವಾಗಬಾರದು ಎಂಬ ಉದ್ದೇಶದಿಂದ ಭದ್ರೇಗೌಡ ಪೂಜೆಗೆ ಬರುವುದಾಗಿ ಒಪ್ಪಿಕೊಳ್ಳುತ್ತಾನೆ.

ಶಿವರಾಮೇಗೌಡನ ಹೆಂಡತಿ ಒಡವೆ ಮೇಲೆ ವಾರಗಿತ್ತಿ ಕಣ್ಣು

ಶಿವರಾಮೇಗೌಡನ ತಮ್ಮ ಗೋವಿಂದೇಗೌಡನ ಹೆಂಡತಿ ಈಶ್ವರಿಗೆ ತನ್ನ ಗಂಡ ಹಾಗೂ ಮಗ ಇಬ್ಬರೂ ಮನೆಯನ್ನು ಆಳಬೇಕು, ಅಧಿಕಾರ ನಮ್ಮ ಕೈಗೆ ಸಿಗಬೇಕೆಂಬ ಆಸೆ. ಆದಕ್ಕಾಗಿ ನಾನಾ ಪಿತೂರಿ ಮಾಡುತ್ತಾಳೆ. ಶಿವರಾಮೇಗೌಡನ ಹೆಂಡತಿ ಮೈ ತುಂಬಾ ಒಡವೆ ಹಾಕಿರುವುದನ್ನು ನೋಡಿ, ಈಶ್ವರಿ ಮಗಳು ಚಿತ್ರ ಹೇಗಾದರೂ ಮಾಡಿ ಆ ಒಡವೆ ಪಡೆಯಬೇಕು ಎಂದುಕೊಳ್ಳುತ್ತಾಳೆ. ನಾನು ಪೂಜೆಗೆ ಬರುತ್ತಿಲ್ಲ. ನನಗೆ ಡಿವೋರ್ಸ್‌ ಆಗಿರುವ ವಿಚಾರ ಎಲ್ಲರಿಗೂ ಗೊತ್ತು, ಆದರೆ ಎಲ್ಲಾದರೂ ಹೊರಗೆ ಹೋದರೆ ಒಂದೊಳ್ಳೆ ಒಡವೆ ಹಾಕಿಕೊಳ್ಳುವ ಅದೃಷ್ಟವೂ ನನಗೆ ಇಲ್ಲ, ಆ ದೊಡ್ಡಮ್ಮ ನೋಡು ಮೈ ತುಂಬಾ ಒಡವೆ ಹಾಕಿಕೊಂಡಿದ್ದಾಳೆ ಎನ್ನುತ್ತಾಳೆ. ಮಗಳು ಬೇಸರಗೊಂಡಿದ್ದನ್ನು ಸಹಿಸಲಾಗದೆ ಈಶ್ವರಿ, ನೋಡುತ್ತಿರು ಅವಳಿಂದ ನೀನು ಇಷ್ಟಪಟ್ಟ ನೆಕ್‌ಲೇಸ್‌ ತೆಗೆದುಕೊಂಡು ಬರುತ್ತೇನೆ ಎನ್ನುತ್ತಾಳೆ.

ಊರಿಗೆ ಹೊರಡಲು ಸಿದ್ದಳಾಗುತ್ತಿದ್ದ ಶಿವರಾಮೇಗೌಡನ ಹೆಂಡತಿಯನ್ನು ಮಾತನಾಡಿಸುವ ಈಶ್ವರಿ, ಪೂಜೆ ಎಲ್ಲಾ ಸುಸೂತ್ರವಾಗಿ ಸಾಗಲಿ ನೀವು ಹೋಗಿ ಬನ್ನಿ ಅಕ್ಕ ಎನ್ನುತ್ತಾಳೆ. ಇದೇನು ಹೋಗಿ ಬನ್ನಿ ಎನ್ನುತ್ತಿದ್ದೀಯ ನೀನು ಬರುವುದಿಲ್ಲವೇ ಎಂದು ಕೇಳುತ್ತಾಳೆ. ನನ್ನ ಮಗಳು ಗಂಡನನ್ನು ಬಿಟ್ಟು ಜೊತೆಗೆ ಅವಳ ಒಡವೆಯನ್ನೂ ಅಲ್ಲೇ ಬಿಟ್ಟು ಬಂದಿದ್ದಾಳೆ. ಬಹಳ ದಿನಗಳ ನಂತರ ಶುಭ ಕಾರ್ಯಕ್ಕೆ ಹೋಗುತ್ತಿದ್ದೇವೆ, ಒಡವೆ ಇಲ್ಲದೆ ಹೇಗೆ ಹೋಗುವುದು ಎನ್ನುತ್ತಾಳೆ. ಅವಳ ದುರಾಸೆ ಅರ್ಥ ಮಾಡಿಕೊಳ್ಳದ ಶಿವರಾಮೇಗೌಡನ ಹೆಂಡತಿ ಕತ್ತಿನಲ್ಲಿದ್ದ ನೆಕ್‌ಲೇಸನ್ನು ಚಿತ್ರಾಗೆ ಕೊಡುತ್ತಾಳೆ. ಬಳೆಗಳನ್ನು ಈಶ್ವರಿಗೆ ಕೊಡುತ್ತಾಳೆ.

ವಿದ್ಯಾ ಮಾತು, ಧೈರ್ಯ, ರೂಪಕ್ಕೆ ಮರುಳಾದ ಭದ್ರೇಗೌಡ

ಎಲ್ಲರೂ ಊರಿಗೆ ಹೊರಡುತ್ತಾರೆ. ದಾರಿ ಮಧ್ಯೆ ಪ್ರಕೃತಿಯನ್ನು ನೋಡುವ ಭದ್ರೇಗೌಡ ಸಂತೋಷಪಡುತ್ತಾನೆ. ನಾನು ಊರೆಲ್ಲಾ ಸುತ್ತಾಡಿಕೊಂಡು ಬರುತ್ತೇನೆ ನೀವು ಮನೆಗೆ ಹೋಗಿ ಎಂದು ಕ್ವಾಟ್ಲೆ ಜೊತೆ ಊರ ಹೊರಗೆ ಬರುತ್ತಾನೆ. ಅಲ್ಲಿ ಯಾವುದೋ ಹುಡುಗಿ ಅರಚಾಡುತ್ತಿರುವ ಸದ್ದು ಕೇಳುತ್ತದೆ. ದನಿ ಜಾಡು ಹಿಡಿದು ಭದ್ರೇಗೌಡ ಹಾಗೂ ಕ್ವಾಟ್ಲೆ ಹೋಗುತ್ತಾರೆ. ಅಲ್ಲಿ ವಿದ್ಯಾ ತನ್ನ ಸಹಪಾಠಿ ಜೊತೆ ಏರುದನಿಯಲ್ಲಿ ಮಾತನಾಡುತ್ತಿರುತ್ತಾಳೆ. ಬೇಲಿಯಲ್ಲಿ ಸಿಲುಕಿದ್ದ ಹಾವಿಗೆ ಏಟು ಮಾಡಬೇಡ, ಅದನ್ನು ಅದರ ಪಾಡಿಗೆ ಬಿಟ್ಟುಬಿಡು ಎಂದು ಮನವಿ ಮಾಡುತ್ತಿರುತ್ತಾಳೆ. ವಿದ್ಯಾಳನ್ನು ನೋಡುವ ಭದ್ರೇಗೌಡ ಮೊದಲ ನೋಟದಲ್ಲೇ ಅವಳಿಗೆ ಫಿದಾ ಆಗುತ್ತಾನೆ. ಅವಳು ಹಾವನ್ನು ಉಳಿಸಲು ಅಷ್ಟು ಮನವಿ ಮಾಡುತ್ತಿದ್ದಾಳೆ ಎಂದು ತಿಳಿದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ.

ತಂಗವ್ವ ಹಾವಿಗೆ ಹೊಡೆದರೆ ನೀನೇಕೆ ಬೇಸರ ಮಾಡಿಕೊಳ್ಳುತ್ತೀಯ ಎಂದು ಕ್ವಾಟ್ಲೆ ಕೇಳುತ್ತಾನೆ. ಅದೂ ಒಂದು ಜೀವ ತಾನೇ, ಎರೆಹುಳು ಹೇಗೆ ರೈತನ ಮಿತ್ರನೋ ಹಾವು ಕೂಡಾ ರೈತನ ಮಿತ್ರ. ಗದ್ದೆಗೆ ಬರುವ ಇಲಿಗಳನ್ನು ಹಾವು ತಿಂದು ಬೆಳೆಯನ್ನು ಉಳಿಸುತ್ತದೆ ಎನ್ನುತ್ತಾಳೆ. ವಿದ್ಯಾ ಮಾತು ಕೇಳುತ್ತಾ, ಅವಳನ್ನೇ ನೋಡುತ್ತಾ ಭದ್ರೇಗೌಡ ಕಳೆದುಹೋಗುತ್ತಾನೆ. ವಿದ್ಯಾ ಬೇಲಿಯಿಂದ ಹಾವನ್ನು ಬಿಡಿಸಿ ಸಹಪಾಠಿಗಳ ಜೊತೆ ಮನೆಗೆ ಹೊರಡುತ್ತಾಳೆ. ದಾರಿಯಲ್ಲಿ ಅವಳ ಕಾಲ್ಗೆಜ್ಜೆ ಕೆಳಗೆ ಬೀಳುತ್ತದೆ. ಅದನ್ನು ಭದ್ರೇಗೌಡ ತೆಗೆದುಕೊಂಡು ತನ್ನ ಬಳಿ ಇಟ್ಟುಕೊಳ್ಳುತ್ತಾನೆ.

ವಿದ್ಯಾಳನ್ನು ನೋಡಿ ಭದ್ರೇಗೌಡ ತನ್ನ ಮದುವೆ ನಿರ್ಧಾರವನ್ನು ಬದಲಿಸಿಕೊಳ್ಳುತ್ತಾನಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

 

ಲೇಖನ: ರಕ್ಷಿತಾ ಸೌಮ್ಯ

 

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner