ಮುದ್ದು ಸೊಸೆ: ಸಂಬಂಧ ಬೇಡವೆಂದು ಒಡವೆ, ದುಡ್ಡು ವಾಪಸ್ ಪಡೆದ ಈಶ್ವರಿ; ಈ ಮದುವೆ ಮಾಡಿಸಿ ಎಲ್ಲವನ್ನೂ ನನ್ನದಾಗಿಸಿಕೊಳ್ಳುತ್ತೇನೆಂದ ಚೆಲುವ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 30 ನೇ ಸಂಚಿಕೆಯಲ್ಲಿ ಅತ್ತೆ ಹೇಳಿದಂತೆ ಈಶ್ವರಿ ವಿದ್ಯಾ ಮನೆಗೆ ಬಂದು ಸಂಬಂಧ ಬೇಡವೆಂದು ಹೇಳಿ ಒಡವೆ, ಹಣವನ್ನು ವಾಪಸ್ ಪಡೆಯುತ್ತಾಳೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶನಿವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 30ನೇ ಎಪಿಸೋಡ್ ಕಥೆ ಹೀಗಿದೆ. ಪೊಲೀಸರಿಗೆ ಫೋನ್ ಮಾಡಿದವರು ಯಾರು ಎಂದು ತಿಳಿಯಲು ಭದ್ರ, ಗೋವಿಂದ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪರಿಚಯಸ್ಥ ಕಾನ್ಸ್‌ಟೆಬಲ್ ಒಬ್ಬರಿಂದ ಈ ಮದುವೆ ನಿಲ್ಲಿಸಲು ನನ್ನ ಮಗಳು ವಿದ್ಯಾಳೇ ಕಾರಣ ಎಂಬ ಸತ್ಯ ಚೆಲುವನಿಗೆ ಗೊತ್ತಾಗುತ್ತದೆ. ಭಯ ಹಾಗೂ ಕೋಪದಿಂದ ಚೆಲುವ ಮನೆಗೆ ಬರುತ್ತಾನೆ. ಮದುವೆ ಮುರಿದ ಖುಷಿಗೆ ವಿದ್ಯಾ ಮತ್ತೆ ಟ್ಯೂಷನ್ ಹೊರಡಲು ಸಿದ್ಧಳಾಗುತ್ತಾಳೆ. ಚೆಲುವ ಸಿಟ್ಟಿನಿಂದ ವಿದ್ಯಾಳನ್ನು ಮನೆ ಒಳಗೆ ಎಳೆದೊಯ್ಯುತ್ತಾನೆ.
ಮಗಳಿಗೆ ಥಳಿಸಿ ರೂಮ್‌ನಲ್ಲಿ ಕೂಡಿ ಹಾಕಿದ ಚೆಲುವ
ವಿದ್ಯಾಳೊಂದಿಗೆ ಚೆಲುವ ಈ ರೀತಿ ವರ್ತಿಸುತ್ತಿರುವುದಕ್ಕೆ ಕಾಳವ್ವ ಹಾಗೂ ರತ್ನ ಬೇಸರಗೊಳ್ಳುತ್ತಾರೆ. ಆದರೆ ಪೊಲೀಸರಿಗೆ ಕರೆ ಮಾಡಿ ಮದುವೆ ನಿಲ್ಲಿಸುವಂತೆ ಮಾಡಿದ್ದು ವಿದ್ಯಾಳೇ ಎಂದು ತಿಳಿದು ಇಬ್ಬರೂ ಗಾಬರಿಯಾಗುತ್ತಾರೆ. ದೇವರಂಥ ಗೌಡರು ಜೈಲಿಗೆ ಹೋಗುವಂತೆ ಮಾಡಿಬಿಟ್ಟೆಯಲ್ಲಾ ಎಂದು ಮಗಳಿಗೆ ಚೆಲುವ ಹೊಡೆಯುತ್ತಾನೆ. ಗೌಡರ ಮನೆಯವರಿಗೆ ಈ ವಿಚಾರ ತಿಳಿದರೆ ಇವಳನ್ನು ಜೀವಂತ ಉಳಿಸುವುದಿಲ್ಲ ಎಂದು ರತ್ನ ಗಾಬರಿ ಆಗುತ್ತಾಳೆ. ವಿದ್ಯಾಳನ್ನು ಚೆಲುವ ರೂಮ್‌ನಲ್ಲಿ ಕೂಡಿ ಹಾಕುತ್ತಾನೆ. ರೂಮ್‌ನಲ್ಲಿದ್ದ ಮೊಬೈಲನ್ನು ಕೋಪದಿಂದ ಎಸೆಯುತ್ತಾನೆ. ಗೌಡರು ಜೈಲಿನಿಂದ ವಾಪಸ್ ಬರುವವರೆಗೂ ನೀನೂ ಕೂಡಾ ಈ ರೂಮ್‌ನಲ್ಲೇ ಬಿದ್ದಿರಬೇಕು. ನಾನು ಹೇಳುವವರೆಗೂ ಇವಳಿಗೆ ಒಂದು ತುತ್ತು ಅನ್ನ, ನೀರು ಕೊಡಬಾರದು ಎಂದು ಚೆಲುವ ಮನೆಯವರಿಗೆ ಕಂಡಿಷನ್ ಮಾಡಿ ಭದ್ರನನ್ನು ಭೇಟಿ ಮಾಡಲು ಹೊರಡುತ್ತಾನೆ.
ಇತ್ತ ಭದ್ರ ಪೊಲೀಸರಿಗೆ ಫೋನ್ ಮಾಡಿದವರು ಯಾರು ಎಂದು ಗೊತ್ತಾಗದೆ ಕೋಪಗೊಳ್ಳುತ್ತಾನೆ. ಅವನು ಯಾರೆಂದು ಪೊಲೀಸರು ಹೇಳುತ್ತಿಲ್ಲ. ಅನುಮಾನ ಬಂದವರನ್ನೆಲ್ಲಾ ಕರೆತಂದು ಅವರಿಗೆ ಸಾಯುವವರೆಗೂ ಹೊಡೆದು ವಿಚಾರಿಸುತ್ತಿದ್ದೇನೆ ಅವರೂ ಬಾಯಿ ಬಿಡುತ್ತಿಲ್ಲ, ಅದು ಯಾರೇ ಆಗಲೀ ನನ್ನ ಕೈಗೆ ಸಿಕ್ಕರೆ ಜೀವಂತ ಸುಟ್ಟುಬಿಡುತ್ತೇನೆ ಎಂದು ಅರಚುತ್ತಾನೆ. ಭದ್ರನ ಮಾತು ಕೇಳಿ ಎಲ್ಲರೂ ಅವನ ಬಳಿಗೆ ಓಡಿ ಬಂದು ಭದ್ರನನ್ನು ಸಮಾಧಾನ ಮಾಡುತ್ತಾರೆ. ಅಷ್ಟರಲ್ಲಿ ಚೆಲುವ ಅಲ್ಲಿಗೆ ಬರುತ್ತಾನೆ. ಚೆಲುವನನ್ನು ನೋಡಿ ಶಿವರಾಮೇಗೌಡನ ತಾಯಿ ಸಿಟ್ಟಾಗುತ್ತಾಳೆ. ಚೆಲುವನನ್ನು ಮನೆಹಾಳ ಎಂದು ಬೈಯ್ಯುತ್ತಾಳೆ. ನಿಮಗೆಷ್ಟು ಅವಮಾನ ಆಗಿದೆಯೋ ನನಗೂ ಅಷ್ಟೇ ಅವಮಾನ ಆಗಿದೆ ಎಂದು ಚೆಲುವ ಬೇಸರಿಂದ ಹೇಳುತ್ತಾನೆ. ನಿನ್ನ ಮೊಸಳೆ ಕಣ್ಣೀರಿಗೆ ನಾನು ಕರಗುವವಳಲ್ಲ. ಮದುವೆ ಮುರಿದುಬಿತ್ತು, ನಿಮ್ಮ ಸಂಬಂಧ ಬೇಡ ಎಂದು ನಾವು ನಿರ್ಧರಿಸಿದ ಮೇಲೆ ಮತ್ತೆ ಇಲ್ಲಿಗೆ ಏಕೆ ಬಂದಿದ್ದೀಯ ಎಂದು ಕೇಳುತ್ತಾಳೆ.
ಈಶ್ವರಿಗೆ ಒಡವೆ, ಬಟ್ಟೆಗಳನ್ನು ವಾಪಸ್ ಕೊಟ್ಟ ವಿದ್ಯಾ
ದಯವಿಟ್ಟು ಹೀಗೆಲ್ಲಾ ಮಾತನಾಡಬೇಡಿ, ಮುಂದೆ ಏನಾಗುವುದೋ ಏನೋ ಎಂದು ನನ್ನ ಮಗಳು ಕೊರಗುತ್ತಿದ್ದಾಳೆ ಎಂದು ಚೆಲುವ ಕಣ್ಣೀರಿಡುತ್ತಾನೆ, ಕೊರಗುವ ಅವಶ್ಯಕತೆ ಇಲ್ಲ. ಇಲ್ಲಿಗೆ ಎಲ್ಲವೂ ಮುಗಿಯಿತು ಎಂದು ಶಿವರಾಮೇಗೌಡನ ತಾಯಿ ಹೇಳುತ್ತಾಳೆ. ಗೋವಿಂದ, ತಾಯಿಗೆ ಸುಮ್ಮನಿರುವಂತೆ ಹೇಳುತ್ತಾನೆ. ಪರಿಸ್ಥಿತಿ ಸುಧಾರಿಸಿದ ನಂತರ ಮಾತನಾಡೋಣ ನೀನು ಈಗ ಮನೆಗೆ ಹೋಗು ಎಂದು ಚೆಲುವನಿಗೆ ಗೋವಿಂದ ಸಮಾಧಾನ ಮಾಡುತ್ತಾನೆ. ನನ್ನ ಮಗಳ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಿ ಎಂದು ಚೆಲುವ ಮನವಿ ಮಾಡಿ ಹೊರಡುತ್ತಾನೆ, ಚೆಲುವನನ್ನು ತಡೆಯುವ ಸಾವಿತ್ರಿ ಈ ಸಂಬಂಧ ಬೇಡವೆಂದ ಮೇಲೆ ನಾವು ಕೊಟ್ಟಿರುವ ಒಡವೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಲು ನಿಮಗೆ ಹೇಗೆ ಮನಸ್ಸಾಗುತ್ತದೆ ಎಂದು ಕೇಳುತ್ತಾಳೆ. ಇವರ ಮನೆಗೆ ಹೋಗಿ ಒಡವೆ, ಬಟ್ಟೆಗಳನ್ನು ತೆಗೆದುಕೊಂಡು ಬಾ ಎಂದು ಶಿವರಾಮೇಗೌಡನ ತಾಯಿ ಈಶ್ವರಿಗೆ ಹೇಳುತ್ತಾಳೆ.
ಒಡವೆ ವಾಪಸ್ ಕೇಳಲು ಈಶ್ವರಿ ಮಗಳು ಚಿತ್ರಾ ಜೊತೆ ಚೆಲುವನ ಮನೆಗೆ ಬರುತ್ತಾಳೆ. ಹೀಗೆಲ್ಲಾ ಆಗುತ್ತೆ ಎಂದು ನಾನು ತಿಳಿದುಕೊಂಡಿರಲಿಲ್ಲ. ಎಲ್ಲಾ ಸರಿ ಇದ್ದಿದ್ದರೆ ಇಷ್ಟೊತ್ತಿಗೆ ವಿದ್ಯಾ ನಮ್ಮ ಮನೆಯಲ್ಲಿ ಇರಬೇಕಿತ್ತು ಎನ್ನುತ್ತಾಳೆ. ಅವಳ ಹಣೆಯಲ್ಲಿ ಹೀಗೆ ಬರೆದಿರುವುದು ಎಂದಾದರೆ ಯಾರಿಂದಲೂ ಏನು ಮಾಡಲು ಸಾಧ್ಯ ಎಂದು ರತ್ನ ಹೇಳುತ್ತಾಳೆ. ಈ ಸಂಬಂಧ ನಮಗೆ ಬೇಡ, ಅವರಿಗೆ ಕೊಟ್ಟಿದ್ದ ಒಡವೆ, ವಸ್ತ್ರವನ್ನು ವಾಪಸ್ ಪಡೆದು ಬಾ ಎಂದು ಅತ್ತೆ ಹೇಳಿದ್ದಾಗಿ ಈಶ್ವರಿ ಹೇಳುತ್ತಾಳೆ. ವಿದ್ಯಾ ಕೂಡಲೇ ಒಳಗೆ ಹೋಗಿ ಅವರು ಕೊಟ್ಟಿದ್ದನ್ನು ಈಶ್ವರಿ ಕೈಗೆ ಕೊಡುತ್ತಾಳೆ. ಇದರಲ್ಲಿ ನೀವು ಕೊಟ್ಟ ಎಲ್ಲಾ ವಸ್ತುಗಳಿವೆ, ಆದರೆ ಮದುವೆಗೆ 20 ಸಾವಿರ ರೂ. ಖರ್ಚು ಆಗಿದೆ. ಅದನ್ನು ಆದಷ್ಟು ಬೇಗ ವಾಪಸ್ ಕೊಡುತ್ತೇವೆ. ಹೇಗಿದ್ದರೂ ನಿಮಗೆ 3 ಲಕ್ಷ ರೂ ಕೊಡಬೇಕಲ್ಲ, ಅದರ ಜೊತೆಗೆ ಇದನ್ನೂ ಕೊಡುತ್ತೇವೆ ಎನ್ನುತ್ತಾಳೆ. ಈಶ್ವರಿ ಎಲ್ಲವನ್ನೂ ತೆಗೆದುಕೊಂಡು ಮನೆಗೆ ಹೊರಡುತ್ತಾಳೆ. ವಿಚಾರ ತಿಳಿದ ಚೆಲುವ, ಮತ್ತೆ ಈ ಮದುವೆ ಮಾಡಿಸಿ ಆ ಒಡವೆ, ವಸ್ತ್ರ ಎಲ್ಲವನ್ನೂ ನನ್ನದಾಗಿಸಿಕೊಳ್ಳುತ್ತೇನೆ ಎನ್ನುತ್ತಾನೆ.
ಒಡವೆ , ಬಟ್ಟೆ ವಾಪಸ್ ಪಡೆದದ್ದು ಭದ್ರನಿಗೆ ಗೊತ್ತಾಗುವುದಾ? ಶಿವರಾಮೇಗೌಡನನ್ನು ಚೆಲುವ ಜೈಲಿನಿಂದ ಬಿಡಿಸಿಕೊಳ್ಳುತ್ತಾನಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರೂ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ
ವಿಭಾಗ