ಮುದ್ದು ಸೊಸೆ: ಓದಿಗಾಗಿ ಮನೆ ಬಿಟ್ಟು ಹೊರಟ ವಿದ್ಯಾ, ರಸ್ತೆ ಮಧ್ಯೆ ಕುಡಿದು ಬಿದ್ದ ಅಪ್ಪನನ್ನು ಉಳಿಸಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಾಳಾ?
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಓದಿಗಾಗಿ ಮನೆ ಬಿಟ್ಟು ಹೊರಟ ವಿದ್ಯಾ, ರಸ್ತೆ ಮಧ್ಯೆ ಕುಡಿದು ಬಿದ್ದ ಅಪ್ಪನನ್ನು ಉಳಿಸಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಾಳಾ?

ಮುದ್ದು ಸೊಸೆ: ಓದಿಗಾಗಿ ಮನೆ ಬಿಟ್ಟು ಹೊರಟ ವಿದ್ಯಾ, ರಸ್ತೆ ಮಧ್ಯೆ ಕುಡಿದು ಬಿದ್ದ ಅಪ್ಪನನ್ನು ಉಳಿಸಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಾಳಾ?

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 31 ನೇ ಸಂಚಿಕೆಯಲ್ಲಿ ಓದಿಗಾಗಿ ವಿದ್ಯಾ ಮನೆ ಬಿಟ್ಟು ಹೋಗುತ್ತಾಳೆ. ರಸ್ತೆ ಮಧ್ಯೆ ಕುಡಿದು ಬಿದ್ದಿದ್ದ ಅಪ್ಪನನ್ನು ಮನೆಗೆ ಕರೆತರುತ್ತಾಳೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ಓದಿಗಾಗಿ ಮನೆ ಬಿಟ್ಟು ಹೊರಟ ವಿದ್ಯಾ, ರಸ್ತೆ ಮಧ್ಯೆ ಕುಡಿದು ಬಿದ್ದ ಅಪ್ಪನನ್ನು ಉಳಿಸಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಾಳಾ?
ಮುದ್ದು ಸೊಸೆ: ಓದಿಗಾಗಿ ಮನೆ ಬಿಟ್ಟು ಹೊರಟ ವಿದ್ಯಾ, ರಸ್ತೆ ಮಧ್ಯೆ ಕುಡಿದು ಬಿದ್ದ ಅಪ್ಪನನ್ನು ಉಳಿಸಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಾಳಾ?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಭಾನುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 31ನೇ ಎಪಿಸೋಡ್‌ ಕಥೆ ಹೀಗಿದೆ. ಹೇಗಾದರೂ ಮಾಡಿ ಈ ಸಂಬಂಧ ಉಳಿಸಿಕೊಳ್ಳಲೇಬೇಕೆಂಬ ಹಟದಿಂದ ಚೆಲುವ, ಗೌಡರ ಮನೆಗೆ ಬಂದು ಮದುವೆ ಬಗ್ಗೆ ಮಾತನಾಡುತ್ತಾನೆ. ಆದರೆ ಶಿವರಾಮೇಗೌಡನ ತಾಯಿ ಅವನಿಗೆ ಅವಮಾನ ಮಾಡುತ್ತಾಳೆ. ಈ ಸಂಬಂಧ ಬೇಡವೆಂದು ತಿಳಿಸಿ, ಅವರಿಗೆ ಕೊಟ್ಟಿದ್ದ ಒಡವೆ, ಬಟ್ಟೆ, ದುಡ್ಡನ್ನು ವಾಪಸ್‌ ತೆಗೆದುಕೊಂಡು ಬಾ ಎಂದು ಈಶ್ವರಿಗೆ ಹೇಳುತ್ತಾಳೆ. ವಿದ್ಯಾ ಖುಷಿಯಿಂದಲೇ ಎಲ್ಲಾ ವಸ್ತುಗಳನ್ನೂ ವಾಪಸ್‌ ಕೊಡುತ್ತಾಳೆ. ಮಗಳ ಮೇಲಿನ ಕೋಪಕ್ಕೆ ಚೆಲುವ ಅವಳನ್ನು ರೂಮ್‌ನಲ್ಲಿ ಕೂಡಿಹಾಕುತ್ತಾನೆ.

ದೇವಲಾಪುರದಿಂದ ಹುಲಿಕೇರಿಗೆ ವಾಪಸಾದ ಭದ್ರನ ಕುಟುಂಬ

ಭದ್ರ, ಕ್ವಾಟ್ಲೆ, ಗೋವಿಂದ ಮೂವರೂ ಶಿವರಾಮೇಗೌಡನನ್ನು ಮಾತನಾಡಿಸಿಕೊಂಡು ಮನೆಗೆ ಬರುತ್ತಾರೆ. ಊರಿಗೆ ಹೊರಡುವ ಮುನ್ನ ಮತ್ತೊಮ್ಮೆ ಮದುವೆ ಬಗ್ಗೆ ಕೇಳೋಣ ಎಂದು ಚೆಲುವ ತೋಟದ ಮನೆಯಲ್ಲಿ ಭದ್ರನನ್ನು ಭೇಟಿ ಆಗುತ್ತಾನೆ. ಗೌಡರು ಹೇಗಿದ್ದಾರೆ ಎಂದು ಕೇಳುತ್ತಾನೆ. ಅಪ್ಪ ಜೈಲಿನಲ್ಲಿ ಸುಖವಾಗಿಲ್ಲ, ಊಟ ಮಾಡದೆ ಬಹಳ ಸೊರಗಿದ್ದಾರೆ ಎಂದು ಭದ್ರ ಹೇಳುತ್ತಾನೆ. ಮದುವೆ ನಿಂತಾಗಿನಿಂದ ವಿದ್ಯಾ ಊಟ, ತಿಂಡಿ ಬಿಟ್ಟು ನಿಮ್ಮ ಮನೆ ಬಗ್ಗೆಯೇ ಯೋಚಿಸುತ್ತಿದ್ದಾಳೆ. ಗೌಡರು ಮದುವೆ ಬಗ್ಗೆ ಏನಾದರೂ ಮಾತನಾಡಿದ್ರಾ ಎಂದು ಚೆಲುವ ಕೇಳುತ್ತಾನೆ. ಅಣ್ಣ ಅದರ ಬಗ್ಗೆ ಏನೂ ಮಾತನಾಡಲಿಲ್ಲ. ಸದ್ಯಕ್ಕೆ ಫೋನ್‌ ಮಾಡಿದವರು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ನಾವೂ ಕೂಡಾ ಅದೇ ಕೆಲಸ ಮಾಡುತ್ತಿದ್ದೇವೆ. ಮೊದಲು ಅಣ್ಣ ಜೈಲಿನಿಂದ ವಾಪಸ್‌ ಬರಲಿ, ನಂತರ ಮದುವೆ ಬಗ್ಗೆ ಮಾತನಾಡೋಣ ಎಂದು ಗೋವಿಂದ ಹೇಳುತ್ತಾನೆ.

ದೇವಲಾಪುರದಿಂದ ಎಲ್ಲರೂ ಹುಲಿಕೇರಿಗೆ ವಾಪಸ್‌ ಬರುತ್ತಾರೆ. ನನ್ನ ಮಗ ಇಲ್ಲದ ಈ ಮನೆಯನ್ನು ನೋಡಲು ನನಗೆ ಸಂಕಟವಾಗುತ್ತಿದೆ, ದೇವರ ಪೂಜೆಗೆಂದು ಊರಿಗೆ ಹೋಗಿ ವಾಪಸ್‌ ಬರುವಾಗ ಈ ರೀತಿ ಬರುತ್ತೇವೆಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಶಿವರಾಮೇಗೌಡನ ತಾಯಿ ಕಣ್ಣೀರಿಡುತ್ತಾಳೆ. ಭದ್ರ ತನ್ನ ಅಪ್ಪನ ಕುರ್ಚಿಯನ್ನು ನೋಡಿ ಬೇಸರಗೊಳ್ಳುತ್ತಾನೆ. ಈ ಮನೆಗೆ ಬಂದರೆ ದೇವರ ಗುಡಿಗೆ ಬಂದಂತೆ ನೆಮ್ಮದಿ ಸಿಗುತ್ತಿತ್ತು, ಆದರೆ ಈಗ ಗುಡಿಯಲ್ಲಿ ದೇವರು ಇಲ್ಲದಂತೆ ಆಗುತ್ತಿದೆ ಎಂದು ಮೋಹನ ಹೇಳುತ್ತಾಳೆ. ಹೀಗೆ ಎಲ್ಲರೂ ಶಿವರಾಮೇಗೌಡನನ್ನು ನೆನಪಿಸಿಕೊಂಡು ದುಃಖ ವ್ಯಕ್ತಪಡಿಸುತ್ತಾರೆ. ಭಾವ ಎಲ್ಲವನ್ನೂ 5 ನಿಮಿಷದಲ್ಲಿ ಹಾಳು ಮಾಡಿಕೊಂಡರು. ಸುತ್ತಮುತ್ತಲಿನ ಜನರು ಭಾವನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದಾರೆ. ಇದೊಂದು ಘಟನೆ ಅವರ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಿತು. ಈ ಬಾರಿ ಎಲೆಕ್ಷನ್‌ನಲ್ಲಿ ಭಾಗವಹಿಸಿದರೆ ಗೆಲ್ಲುವುದು ಕಷ್ಟವೆಂದು ಜನರು ಮಾತನಾಡುತ್ತಿರುವುದಾಗಿ ಈಶ್ವರಿ ಹೇಳುತ್ತಾಳೆ. ಯಾರು ಏನೇ ಮಾತನಾಡಿಕೊಳ್ಳಲಿ ಚಿಕ್ಕಮ್ಮ, ಗುಳ್ಳೆನರಿಗಳು ಯಾವಾಗಲೂ ಸಿಂಹದ ಮುಂದೆ ಬಂದು ಮಾತನಾಡುವುದಿಲ್ಲ. ಬೆನ್ನ ಹಿಂದೆ ಮಸಲತ್ತು ಮಾಡುತ್ತವೆ, ನನ್ನ ಅಪ್ಪನ ಹೆಸರು ಹಾಳು ಮಾಡಲು ಇದನ್ನೆಲ್ಲಾ ಮಾಡುತ್ತಿದ್ದಾರೆ. ಅಪ್ಪ ಏನು ಅನ್ನೋದು ಅವರನ್ನು ಪ್ರೀತಿ ಮಾಡುವವರಿಗೆ ಮಾತ್ರ ಗೊತ್ತು ಎಂದು ಭದ್ರ ಕೋಪದಿಂದ ಹೇಳುತ್ತಾನೆ. ನನ್ನನ್ನೇ ಗುಳ್ಳೆನರಿ ಎನ್ನುತ್ತೀಯ, ಆ ಸಿಂಹಾಸನದ ಮೇಲೆ ನನ್ನ ಮಗನನ್ನು ಕೂರಿಸಲು ನಾನು ಏನು ಬೇಕಾದರೂ ಮಾಡುತ್ತೇನೆ, ಯಾವ ಹಂತಕ್ಕಾದರೂ ಹೋಗುತ್ತೇನೆ ನೆನಪಿಟ್ಟುಕೋ ಎಂದು ಈಶ್ವರಿ ಮನಸ್ಸಿನಲ್ಲೇ ಶಪಥ ಮಾಡುತ್ತಾಳೆ.

ವಿದ್ಯೆಗಾಗಿ ಮನೆ ಬಿಟ್ಟು ಹೊರಡಲು ಮುಂದಾದ ವಿದ್ಯಾ

ಇತ್ತ ವಿದ್ಯಾ ತನ್ನ ಓದಿನ ಬಗ್ಗೆಯೇ ಯೋಚಿಸುತ್ತಾ ಅನ್ನ, ನೀರು ಬಿಟ್ಟಿದ್ದಾಳೆ. ಅಪ್ಪ ಈ ಮದುವೆ ಮಾಡೇ ತೀರುತ್ತೇನೆ ಎಂದು ಹಟ ಮಾಡುತ್ತಿದ್ದಾರೆ. ಒಂದು ವೇಳೆ ಅವರಿಷ್ಟದಂತೆ ಈ ಮದುವೆ ನಡೆದರೆ ನನ್ನ ಕನಸು ಕನಸಾಗೇ ಉಳಿಯುತ್ತದೆ ಎಂದು ಚಿಂತಿಸುತ್ತಾಳೆ. ಅಷ್ಟರಲ್ಲಿ ತಂಗಿ ಸರಸ್ವತಿ ಊಟ ಕೊಡಲು ಬರುತ್ತಾಳೆ. ನಾನು ಇಲ್ಲೇ ಇದ್ದರೆ ಅಪ್ಪ ನನ್ನನ್ನು ಮದುವೆ ಮಾಡಿಬಿಡುತ್ತಾರೆ. ಆದ್ದರಿಂದ ನಾನು ಮನೆ ಬಿಟ್ಟು ಹೋಗುತ್ತೇನೆ, ನಮ್ಮ ಪ್ರಿನ್ಸಿಪಲ್‌ ಬಳಿ ಹೋದರೆ ಅವರು ಏನಾದರೂ ವ್ಯವಸ್ಥೆ ಮಾಡುತ್ತಾರೆ. ದಯವಿಟ್ಟು ಎಲ್ಲರೂ ಮಲಗಿದ್ದಾಗ ಈ ರೂಮ್‌ ಬೀಗ ತೆಗೆದು ನನ್ನನ್ನು ಕಳಿಸಿಕೊಡು, ಇದೊಂದು ಸಹಾಯ ಮಾಡು ಎಂದು ಮನವಿ ಮಾಡುತ್ತಾಳೆ. ಅಕ್ಕ ಮನೆ ಬಿಟ್ಟು ಹೋಗುವ ನಿರ್ಧಾರ ಕೇಳಿ ಸರಸ್ವತಿಗೆ ಶಾಕ್‌ ಆದರೂ, ಅವಳ ಭವಿಷ್ಯ ಚೆನ್ನಾಗಿರಲೆಂದು ರೂಮ್‌ ಬಾಗಿಲು ತೆಗೆಯುವುದಾಗಿ ಒಪ್ಪಿಕೊಳ್ಳುತ್ತಾಳೆ.

ವಿದ್ಯಾ ತನ್ನ ವಸ್ತುಗಳನ್ನೆಲ್ಲಾ ಬ್ಯಾಗ್‌ನಲ್ಲಿಟ್ಟುಕೊಂಡು ತಂಗಿ ಸಹಾಯದಿಂದ ಮನೆಯಿಂದ ಹೊರಬರುತ್ತಾಳೆ. ಆದರೆ ರಸ್ತೆ ಮಧ್ಯೆ ತನ್ನ ಅಪ್ಪ ಕುಡಿದು ಬಿದ್ದಿರುವುದನ್ನು ನೋಡಿ ಗಾಬರಿಯಾಗುತ್ತಾಳೆ. ಅವನನ್ನು ಎಚ್ಚರಿಸಲು ಪ್ರಯತ್ನಿಸುತ್ತಾಳೆ, ಆದರೆ ಚೆಲುವ ಕಂಠಪೂರ್ತಿ ಕುಡಿದು ಪ್ರಜ್ಞೆ ಇಲ್ಲದೆ ಬಿದ್ದಿರುತ್ತಾನೆ. ಪಕ್ಕಕ್ಕಾದರೂ ಮಲಗಿಸೋಣ ಎಂದುಕೊಂಡರೂ ಸಾಧ್ಯವಾಗುವುದಿಲ್ಲ. ನಾನು ಇಲ್ಲೇ ನಿಂತರೆ ಆಗುವುದಿಲ್ಲ, ಇಲ್ಲಿಂದ ಹೋಗಬೇಕು ಎಂದು ಚೆಲುವನನ್ನು ಬಿಟ್ಟು ಹೊರಡಲು ಮುಂದಾಗುತ್ತಾಳೆ. ಅಷ್ಟರಲ್ಲಿ ಒಂದು ವ್ಯಾನ್‌ ಚೆಲುವನತ್ತ ವೇಗವಾಗಿ ಬರುತ್ತದೆ. ತಂದೆಯನ್ನು ಆ ಸ್ಥಿತಿಯಲ್ಲಿ ಬಿಟ್ಟು ಹೋಗಲು ಮನಸ್ಸಾಗದೆ ವಿದ್ಯಾ ಆಗುತ್ತಿದ್ದ ಅನಾಹುತದಿಂದ ಅವನನ್ನು ರಕ್ಷಿಸಿ ಮನೆಗೆ ಕರೆತರುತ್ತಾಳೆ.

ಚೆಲುವನನ್ನು ರಕ್ಷಿಸಲು ಹೋಗಿ ವಿದ್ಯಾ ಮತ್ತೆ ಕಷ್ಟಕ್ಕೆ ಸಿಲುಕುತ್ತಾಳಾ? ಮಗಳು ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದ ವಿಚಾರ ಚೆಲುವನಿಗೆ ಗೊತ್ತಾದರೆ ಹೇಗೆ ಪ್ರತಿಕ್ರಿಯಿಸುತ್ತಾನೆ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರೂ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.