ಮುದ್ದು ಸೊಸೆ: ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಕ್ಕೆ ವಿದ್ಯಾ ಕಾಲಿಗೆ, ಸಹಾಯ ಮಾಡಿದ್ದಕ್ಕೆ ಸರಸ್ವತಿ ಕೈಗೆ ಬರೆ ಎಳೆದ ಚೆಲುವ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಕ್ಕೆ ವಿದ್ಯಾ ಕಾಲಿಗೆ, ಸಹಾಯ ಮಾಡಿದ್ದಕ್ಕೆ ಸರಸ್ವತಿ ಕೈಗೆ ಬರೆ ಎಳೆದ ಚೆಲುವ

ಮುದ್ದು ಸೊಸೆ: ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಕ್ಕೆ ವಿದ್ಯಾ ಕಾಲಿಗೆ, ಸಹಾಯ ಮಾಡಿದ್ದಕ್ಕೆ ಸರಸ್ವತಿ ಕೈಗೆ ಬರೆ ಎಳೆದ ಚೆಲುವ

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 32 ನೇ ಸಂಚಿಕೆಯಲ್ಲಿ ವಿದ್ಯಾ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದನ್ನು ತಿಳಿದ ಚೆಲುವ ಸಿಟ್ಟಿನಿಂದ ಮಗಳಿಗೆ ಬರೆ ಎಳೆಯುತ್ತಾನೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಕ್ಕೆ ವಿದ್ಯಾ ಕಾಲಿಗೆ, ಸಹಾಯ ಮಾಡಿದ್ದಕ್ಕೆ ಸರಸ್ವತಿ ಕೈಗೆ ಬರೆ ಎಳೆದ ಚೆಲುವ
ಮುದ್ದು ಸೊಸೆ: ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಕ್ಕೆ ವಿದ್ಯಾ ಕಾಲಿಗೆ, ಸಹಾಯ ಮಾಡಿದ್ದಕ್ಕೆ ಸರಸ್ವತಿ ಕೈಗೆ ಬರೆ ಎಳೆದ ಚೆಲುವ (Colors Kannada)

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 32ನೇ ಎಪಿಸೋಡ್‌ ಕಥೆ ಹೀಗಿದೆ. ಭದ್ರ ಹಾಗೂ ಅವನ ಕುಟುಂಬ ದೇವಲಾಪುರದಿಂದ ಹುಲಿಕೇರಿಗೆ ವಾಪಸ್‌ ಹೋಗುತ್ತಾರೆ. ಇತ್ತ ವಿದ್ಯಾ ಓದುವ ಆಸೆಯಿಂದ ಮನೆ ಬಿಟ್ಟು ಹೋಗಲು ನಿರ್ಧರಿಸುತ್ತಾಳೆ. ತಂಗಿ ಸರಸ್ವತಿ ಅಕ್ಕನಿಗೆ ಸಹಾಯ ಮಾಡುತ್ತಾಳೆ. ಆದರೆ ದಾರಿ ಮಧ್ಯೆ ಚೆಲುವ ಕುಡಿದು ಬಿದ್ದಿದ್ದನ್ನು ನೋಡಲಾಗದೆ ವಿದ್ಯಾ ಅವನನ್ನು ಅಪಘಾತದಿಂದ ರಕ್ಷಿಸಿ ಮನೆಗೆ ವಾಪಸ್‌ ಕರೆತರುತ್ತಾಳೆ. ಚೆಲುವನ ಅವಾಂತರ ಕಂಡು ರತ್ನ ಹಾಗೂ ಕಾಳವ್ವ ಗಾಬರಿ ಆಗುತ್ತಾರೆ.

ಮನೆಯವರ ಮುಂದೆಯೇ ಆತ್ಮಹತ್ಯೆಗೆ ಪ್ರಯತ್ನಿಸಿದ ರತ್ನ

ವಿದ್ಯಾಳನ್ನು ನೋಡಿ ರತ್ನಳಿಗೆ ಆಶ್ಚರ್ಯವಾಗುತ್ತದೆ. ನೀನು ರೂಮ್‌ನಲ್ಲಿ ಬಂಧಿಯಾಗಿದ್ದೆ ತಾನೇ ಹೊರಗೆ ಹೇಗೆ ಬಂದೆ ಎಂದು ಆಶ್ಚರ್ಯದಿಂದ ಕೇಳುತ್ತಾಳೆ. ವಿದ್ಯಾಳನ್ನು ರತ್ನ ಪ್ರಶ್ನೆ ಮಾಡುವಾಗ ಸರಸ್ವತಿ ಕೂಡಾ ಗಾಬರಿಯಾಗುತ್ತಾಳೆ. ವಿದ್ಯಾಳ ಬ್ಯಾಗ್‌ ನೋಡಿ ಕಾಳವ್ವನಿಗೆ ಎಲ್ಲಾ ಅರ್ಥವಾಗುತ್ತದೆ. ನಿನ್ನ ಮಗಳು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿ ಮನೆ ಮರ್ಯಾದೆ ಕಳೆಯುವ ಕೆಲಸ ಮಾಡಿದ್ದಾಳೆ ಎಂದು ಕಾಳವ್ವ ಸಿಟ್ಟಾಗುತ್ತಾಳೆ. ವಿಷಯ ಅರ್ಥವಾದ ನಂತರ ರತ್ನ ಕೂಡಾ ಗಾಬರಿ ಆಗುತ್ತಾಳೆ. ಇಂಥ ಮಕ್ಕಳನ್ನು ಪಡೆಯಲು ನಾನು ಏನು ಕರ್ಮ ಮಾಡಿದ್ದೆನೋ, ನಿನ್ನ ಅಪ್ಪನಿಗೆ ಎಚ್ಚರವಾದ ನಂತರ ಅವರು ಏನಾದರೂ ಕೇಳಿದರೆ ನಾನು ಏನು ಉತ್ತರ ಕೊಡಲಿ? ನಿನ್ನನ್ನು ಅವರು ಸುಮ್ಮನೆ ಬಿಡುತ್ತಾರಾ ಎಂದು ರತ್ನ ಗೋಳಾಡುತ್ತಾಳೆ.

ಚೆಲುವನಿಗೆ ಹಿಂದಿನ ರಾತ್ರಿ ನಡೆದಿದ್ದೆಲ್ಲಾ ನೆನಪಾಗುತ್ತದೆ. ನೀನು ಮನೆ ಬಿಟ್ಟು ಹೋಗಲು ಪ್ರಯತ್ನಿಸಿದ್ದೀಯ, ಅವಳು ನಿನಗೆ ಸಹಾಯ ಮಾಡಿದ್ದಾಳೆ. ಯಾರ ಜೊತೆ ಓಡಿ ಹೋಗಲು ನಿರ್ಧರಿಸಿದ್ದೆ ಎಂದು ಚೆಲುವ ಸಿಟ್ಟಿನಿಂದ ಕೇಳುತ್ತಾನೆ. ನಾನು ಓದುವ ಆಸೆಯಿಂದ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದೆ ಎಂದು ವಿದ್ಯಾ ಹೇಳುತ್ತಾಳೆ. ಇಲ್ಲ, ನಿನ್ನ ಮನಸ್ಸಿನಲ್ಲಿ ಬೇರೆ ಯಾರೋ ಇದ್ದಾನೆ, ಅದೇ ಕಾರಣಕ್ಕೆ ನೀನು ಮದುವೆ ನಿಲ್ಲಿಸಿದೆ ಎಂದು ಚೆಲುವ ಹೇಳುತ್ತಾನೆ. ನಾನು ಪ್ರಮಾಣ ಮಾಡಿಯಾದರೂ ಹೇಳುತ್ತೇನೆ, ನಾನು ನಿಜವಾಗಿಯೂ ಓದಬೇಕೆನ್ನುವ ಆಸೆಯಿಂದ ಈ ಕೆಲಸ ಮಾಡಿದೆ ಎಂದು ವಿದ್ಯಾ ಅಳುತ್ತಾಳೆ. ಇಷ್ಟೆಲ್ಲಾ ನಡೆದರೂ ನೀನು ಇನ್ನೂ ಬದುಕಿದ್ದೀಯ ಎಂದು ಚೆಲುವ ರತ್ನಳಿಗೆ ಬೈಯ್ಯುತ್ತಾನೆ. ಸರಿ ಹಾಗಾದರೆ ನಾನು ಸಾಯುತ್ತೇನೆ ಎಂದು ರತ್ನ ಸೀರೆ ತೆಗೆದುಕೊಂಡು ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಾಳೆ. ಮಕ್ಕಳು ಹಾಗು ಕಾಳವ್ವ ಅವಳನ್ನು ತಡೆಯುತ್ತಾರೆ.

ಅಕ್ಕನ ಕಾಲಿಗೆ, ತಂಗಿ ಕೈಗೆ ಬರೆ ಎಳೆದ ಚೆಲುವ

ಮಗಳು ಮನೆ ಬಿಟ್ಟು ಹೋದಳು ಎಂದು ಜನರು ಮಾತನಾಡುವುದನ್ನು ಕೇಳುವುದಕ್ಕಿಂತ ಸಾಯುವುದೇ ಮೇಲು ತಾನೇ ಎಂದು ರತ್ನ ಅಳುತ್ತಾಳೆ. ನಿನ್ನ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಓದಬೇಕೆಂದು ಮನೆಯಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದೆ ಎಂದು ವಿದ್ಯಾ ಹೇಳುತ್ತಾಳೆ. ಇರಬಹುದು, ಆದರೆ ಜನ್ಮ ಕೊಟ್ಟಿದ ಅಪ್ಪನೇ ನಿನ್ನ ಬಗ್ಗೆ ಇಲ್ಲದ್ದನ್ನು ಮಾತನಾಡಿದರೆ ಇನ್ನು ಹೊರಗಿನವರು ಮಾತನಾಡದೆ ಇರುತ್ತಾರಾ? ಸುಳಿಗೆ ಸಿಕ್ಕರೂ ಬದುಕಬಹುದು, ಆದರೆ ಜನರ ನಾಲಿಗೆಗೆ ಸಿಕ್ಕರೆ ಬದುಕಲು ಸಾಧ್ಯವೇ ಎಂದು ರತ್ನ ಅಳುತ್ತಾಳೆ. ಮಾಡೋದು ಮಾಡಿ ಈಗ ಅಳುತ್ತಿದ್ದೀಯ, ನೀನು ಮಾಡಿದ ತಪ್ಪಿಗೆ ಶಿಕ್ಷೆ ಆಗಲೇಬೇಕು ಎಂದು ಚೆಲುವ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಿಂದ ವಿದ್ಯಾ ಹಾಗೂ ಸರಸ್ವತಿ ಇಬ್ಬರಿಗೂ ಬರೆ ಎಳೆಯುತ್ತಾನೆ. ಇಬ್ಬರೂ ನೋವಿನಿಂದ ಅರಚುತ್ತಾರೆ. ನಂತರ ರತ್ನ ಇಬ್ಬರೂ ಮಕ್ಕಳ ಗಾಯಕ್ಕೆ ಔಷಧ ಹಚ್ಚುತ್ತಾಳೆ.

ಜೈಲಿನಲ್ಲಿ ಇರುವಷ್ಟು ದಿನ ಶಿವರಾಮೇಗೌಡನಿಗೆ ನರಕ ದರ್ಶನವಾಗಬೇಕು ಎಂಬ ಕಾರಣಕ್ಕೆ ಸುಭಾಷ್‌ ಮತ್ತೆ ಪಕ್ಷದ ಕಾರ್ಯಕರ್ತನಿಗೆ ಹಣ ಕೊಡುತ್ತಾನೆ. ಇತ್ತ ಜೈಲಿನಲ್ಲಿ ಬೇರೆ ಕೈದಿಗಳಿಗೆ ಒಂದು ಊಟವಾದರೆ, ಶಿವರಾಮೇಗೌಡನಿಗೆ ಉಪ್ಪು, ಖಾರ ಹೆಚ್ಚಿಗೆ ಹಾಕಿರುವ ಊಟ ನೀಡಲಾಗುತ್ತದೆ. ಅದನ್ನು ತಿಂದು ಆತ ಬೇಸರಗೊಳ್ಳುತ್ತಾನೆ. ನೀವು ಪೊಲೀಸರಿಗೆ ಹೊಡೆದಿದ್ದಕ್ಕೆ ಬೇಕಂತಲೇ ನಿಮಗೆ ಈ ರೀತಿ ಊಟ ನೀಡುತ್ತಿದ್ದಾರೆ, ನನ್ನ ತಟ್ಟೆಯಲ್ಲಿ ಇರುವುದು ಚೆನ್ನಾಗಿದೆ ತೆಗೆದುಕೊಳ್ಳಿ ಎಂದು ಸಹ ಕೈದಿ ಹೇಳುತ್ತಾನೆ. ಇಲ್ಲ ನನಗೆ ಕೊಟ್ಟು ಅಭ್ಯಾಸ, ಮತ್ತೊಬ್ಬರ ಬಳಿ ತೆಗೆದುಕೊಂಡು ಅಭ್ಯಾಸ ಇಲ್ಲ, ಇದನ್ನೇ ತಿನ್ನುತ್ತೇನೆ ಎಂದು ಶಿವರಾಮೇಗೌಡ ತನಗೆ ನೀಡಿದ ಊಟವನ್ನೇ ಕಷ್ಟಪಟ್ಟು ತಿನ್ನುತ್ತಾನೆ. ಇತ್ತ ಮನೆಯಲ್ಲಿ ಈಶ್ವರಿ ತನ್ನ ಮಗ ಸುಭಾಷ್‌ನನ್ನು ಶಿವರಾಮೇಗೌಡ ಕುಳಿತುಕೊಳ್ಳುತ್ತಿದ್ದ ಸಿಂಹಾಸನದ ಮೇಲೆ ಕುಳ್ಳಿರಿಸಿ ಖುಷಿ ಪಡುತ್ತಾಳೆ.

ಶಿವರಾಮೇಗೌಡ ಜೈಲಿನಿಂದ ಬಿಡುಗಡೆ ಆಗುವುದು ಯಾವಾಗ? ಸಿಂಹಾಸನ ಶಾಶ್ವತವಾಗಿ ಸುಭಾಷನ ಪಾಲಾಗುವುದಾ? ಈಶ್ವರಿ ಕುತಂತ್ರ ಎಲ್ಲರಿಗೂ ತಿಳಿಯುವುದಾ? ಮುಂಬರುವ ಸಂಚಿಕೆಗಳಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರೂ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.