ಮುದ್ದು ಸೊಸೆ: ಭದ್ರೇಗೌಡ-ವಿನಂತಿ ಮದುವೆ ಸಂಧಾನಕ್ಕೆ ಅಣ್ಣನ ಬಳಿ ತಾಯಿಯನ್ನು ಕರೆತಂದ ಸಾವಿತ್ರಿ; ತಂಗಿ ಮಗಳನ್ನು ಒಪ್ಪುತ್ತಾನಾ ಶಿವರಾಮೇಗೌಡ?
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಭದ್ರೇಗೌಡ-ವಿನಂತಿ ಮದುವೆ ಸಂಧಾನಕ್ಕೆ ಅಣ್ಣನ ಬಳಿ ತಾಯಿಯನ್ನು ಕರೆತಂದ ಸಾವಿತ್ರಿ; ತಂಗಿ ಮಗಳನ್ನು ಒಪ್ಪುತ್ತಾನಾ ಶಿವರಾಮೇಗೌಡ?

ಮುದ್ದು ಸೊಸೆ: ಭದ್ರೇಗೌಡ-ವಿನಂತಿ ಮದುವೆ ಸಂಧಾನಕ್ಕೆ ಅಣ್ಣನ ಬಳಿ ತಾಯಿಯನ್ನು ಕರೆತಂದ ಸಾವಿತ್ರಿ; ತಂಗಿ ಮಗಳನ್ನು ಒಪ್ಪುತ್ತಾನಾ ಶಿವರಾಮೇಗೌಡ?

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 14ನೇ ಸಂಚಿಕೆ: ವಿನಂತಿಯನ್ನು ಭದ್ರನಿಗೆ ಮದುವೆ ಮಾಡಿಸುವ ಉದ್ದೇಶದಿಂದ ಅಣ್ಣನ ಜೊತೆ ಸಂಧಾನಕ್ಕೆ ಸಾವಿತ್ರಿ, ತಾಯಿಯನ್ನು ಕರೆತರುತ್ತಾಳೆ. ತಂಗಿ ಮಗಳನ್ನು ಭದ್ರನಿಗೆ ತಂದುಕೊಳ್ಳಲು ಶಿವರಾಮೇಗೌಡ ಒಪ್ಪಿಕೊಳ್ಳುತ್ತಾನಾ? (ಬರಹ: ರಕ್ಷಿತಾ)

ಮುದ್ದು ಸೊಸೆ: ಭದ್ರೇಗೌಡ-ವಿನಂತಿ ಮದುವೆ ಸಂಧಾನಕ್ಕೆ ಅಣ್ಣನ ಬಳಿ ತಾಯಿಯನ್ನು ಕರೆತಂದ ಸಾವಿತ್ರಿ
ಮುದ್ದು ಸೊಸೆ: ಭದ್ರೇಗೌಡ-ವಿನಂತಿ ಮದುವೆ ಸಂಧಾನಕ್ಕೆ ಅಣ್ಣನ ಬಳಿ ತಾಯಿಯನ್ನು ಕರೆತಂದ ಸಾವಿತ್ರಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 14ನೇ ಎಪಿಸೋಡ್‌ ಕಥೆ ಹೀಗಿದೆ. ಅಪ್ಪನ ಖುಷಿಗೆ ಭದ್ರ ಹೆಣ್ಣು ನೋಡಲು ಹೋಗುತ್ತಾನೆ, ಅಪ್ಪನ ತೀರ್ಮಾನವೇ ನನ್ನ ತೀರ್ಮಾನ ಎನ್ನುತ್ತಾನೆ. ಸುತ್ತಮುತ್ತಲಿನ ಊರಿನಲ್ಲಿ ನನ್ನ ಅಪ್ಪ ಒಳ್ಳೆ ಹೆಸರು ಮಾಡಿದ್ದಾರೆ, ಅವರ ವಿರುದ್ಧ ಹೋಗಿ ಕೆಟ್ಟ ಹೆಸರು ತರುವುದಿಲ್ಲ ಎಂದು ಕ್ವಾಟ್ಲೆ ಬಳಿ ಭದ್ರ ಹೇಳುವುದನ್ನು ಶಿವರಾಮ ಕೇಳಿಸಿಕೊಳ್ಳುತ್ತಾನೆ. ಮಗನಿಗೆ ತನ್ನ ಮೇಲೆ ಇರುವ ಗೌರವ ನೋಡಿ ಶಿವರಾಮೇಗೌಡ ಭಾವುಕನಾಗುತ್ತಾನೆ. ಮತ್ತೊಂದೆಡೆ 3 ಲಕ್ಷ ರೂ ಸಾಲ ತೀರಿಸಲು ಸಮಯ ಕೊಡುವಂತೆ ಭದ್ರನ ಬಳಿ ವಿದ್ಯಾ ಮನವಿ ಮಾಡುತ್ತಾಳೆ.

ವಿದ್ಯಾಗೆ ಸ್ಕಾಲರ್‌ಶಿಪ್‌ ವ್ಯವಸ್ಥೆ ಮಾಡಿದ ಪ್ರಿನ್ಸಿಪಾಲ್

ವಿದ್ಯಾ ತರಗತಿಯಲ್ಲಿರುವಾಗ ಅವಳನ್ನು ಪ್ರಿನ್ಸಿಪಾಲ್ ಬರಲು ಹೇಳುತ್ತಾರೆ. ನಾನು ಒಂದು ಟ್ರಸ್ಟ್‌ನವರ ಜೊತೆ ನಿನ್ನ ಬಗ್ಗೆ ಮಾತನಾಡಿದ್ದೆ, ನೀನು ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದೀಯ, ಅಷ್ಟೇ ಅಲ್ಲ, ನೀನು ಚೆನ್ನಾಗಿ ಓದಿ ಒಳ್ಳೆ ಅಂಕಗಳನ್ನು ತೆಗೆದರೆ ಅವರು ಪ್ರೋತ್ಸಾಹ ಧನ ಕೂಡಾ ನೀಡಲು ಒಪ್ಪಿದ್ದಾರೆ. ಆದ್ದರಿಂದ ನೀನು ಓದಿನ ಕಡೆ ಗಮನ ಹರಿಸು ಎನ್ನುತ್ತಾರೆ. ಖುಷಿಯ ವಿಚಾರ ಹೇಳಿದರೂ ವಿದ್ಯಾ ಖುಷಿ ವ್ಯಕ್ತಪಡಿಸುವುದಿಲ್ಲ. ಏನಾಯ್ತು ಏಕೆ ಬೇಸರದಿಂದ ಇದ್ದೀಯ ಎಂದುಪ್ರಿನ್ಸಿಪಾಲ್ ಕೇಳುತ್ತಾರೆ. ಮನೆಯಲ್ಲಿ ಅಪ್ಪ ತುಂಬಾ ಸಾಲ ಮಾಡಿಕೊಂಡಿದ್ದಾರೆ. ಯಾರಿಗೂ ನೆಮ್ಮದಿಯೇ ಇಲ್ಲ, ಅಮ್ಮ ಬಹಳ ಕಷ್ಟಪಡುತ್ತಿದ್ದಾರೆ. ಮನೆಯಲ್ಲಿ ಈ ಸಮಸ್ಯೆ ಇರುವುದರಿಂದ ನನಗೆ ಓದಿನ ಕಡೆ ಗಮನವೇ ಕೊಡಲು ಆಗುತ್ತಿಲ್ಲ ಎಂದು ಕಣ್ಣೀರಿಡುತ್ತಾಳೆ.

ಪ್ರತಿಯೊಬ್ಬರಿಗೂ ಕಷ್ಟ ಇದ್ದದ್ದೇ, ಎಲ್ಲರ ಮನೆಯಲ್ಲಿ ಒಂದಲ್ಲಾ ಒಂದು ಸಮಸ್ಯೆ ಇರುತ್ತದೆ, ನಿನ್ನ ಗುರಿಯನ್ನು ನೀನು ಬಿಡಬೇಡ, ಮೊದಲು ನೀನು ಓದಿನ ಕಡೆ ಗಮನ ಹರಿಸು. ಚೆನ್ನಾಗಿ ಓದಿ ನೀನು ಅಂದುಕೊಂಡಂತೆ ಡಾಕ್ಟರ್‌ ಆಗಿ ನಿಮ್ಮ ಮನೆಯವರ ಕಷ್ಟಗಳನ್ನು ಪರಿಹರಿಸು ಎಂದು ಬುದ್ಧಿ ಹೇಳುತ್ತಾರೆ. ವಿದ್ಯಾ ತಾಯಿ ರತ್ನಳನ್ನು ಭೇಟಿ ಆಗುವ ಪ್ರಿನ್ಸಿಪಲ್‌, ನಿಮ್ಮ ಕಷ್ಟಗಳನ್ನು ಮಕ್ಕಳ ಮುಂದೆ ಹೇಳಿಕೊಳ್ಳಬೇಡಿ ಎಂದು ಸಲಹೆ ನೀಡುತ್ತಾರೆ. ನನಗೂ ಮಕ್ಕಳಿಗೆ ಈ ವಿಚಾರಗಳನ್ನು ಹೇಳಿಕೊಳ್ಳುವುದು ಇಷ್ಟವಿಲ್ಲ. ಆದರೆ ಬಹಳ ದುಃಖವಾದಾಗ ಅವರ ಮುಂದೆ ಬೇಸರ ಹಂಚಿಕೊಳ್ಳುತ್ತೇನೆ, ಇನ್ಮುಂದೆ ಆ ರೀತಿ ಮಾಡುವುದಿಲ್ಲ ಎನ್ನುತ್ತಾಳೆ. ಪ್ರಿನ್ಸಿಪಲ್‌ ಮಾಡುತ್ತಿರುವ ಸಹಾಯಕ್ಕೆ ರತ್ನ ಧನ್ಯವಾದ ಅರ್ಪಿಸುತ್ತಾಳೆ.

ಭದ್ರನಿಗೆ ಮಗಳನ್ನು ಕೊಡಲು ಅಣ್ಣನ ಬಳಿ ಮಾತುಕತೆಗೆ ತಾಯಿಯನ್ನು ಬಳಸಿಕೊಂಡ ಸಾವಿತ್ರಿ

ಇತ್ತ ಸಾವಿತ್ರಿ ತನ್ನ ಮಗಳನ್ನು ಭದ್ರನಿಗೆ ಕೊಟ್ಟು ಮದುವೆ ಮಾಡಬೇಕೆಂದು ಹಟಕ್ಕೆ ಬಿದ್ದಿದ್ದಾಳೆ. ಭದ್ರ ಒಬ್ಬನೇ ಇರುವುದನ್ನು ನೋಡಿ ಅವನಿಗೆ ಸಮಾಧಾನ ಮಾಡಿ ಮನಸ್ಸು ಗೆಲ್ಲುವಂತೆ ಮಗಳಿಗೆ ಹೇಳಿಕಳಿಸುತ್ತಾಳೆ. ಭದ್ರನ ಬಳಿ ಹೋಗುವ ವಿನಂತಿ, ಅವನಿಗೆ ಜ್ಯೂಸ್‌ ಕೊಡುತ್ತಾಳೆ. ಅದರೆ ಭದ್ರ ನಿರಾಕರಿಸುತ್ತಾನೆ, ನೀನು ಪ್ರೀತಿ ಮಾಡಿದ ಹುಡುಗಿಗಿಂತ ನಾನು ಯಾವುದರಲ್ಲಿ ಕಡಿಮೆ ಇದ್ದೇನೆ ಎಂದು ಕೇಳುತ್ತಾಳೆ. ಸಾವಿತ್ರಿ ಕೂಡಾ ಅಲ್ಲಿಗೆ ಬಂದು ನನ್ನ ಗಂಡ ಬಿಟ್ಟು ಹೋದಾಗಿನಿಂದ ನಿಮ್ಮನ್ನೇ ನಂಬಿದ್ದೇವೆ. ನನ್ನ ಮಗಳನ್ನು ಕೈ ಬಿಡಬೇಡ, ಅವಳನ್ನು ಮದುವೆ ಆಗು, ನೀವಿಬ್ಬರೂ ಚೆನ್ನಾಗಿ ಇರಬೇಕು ಅನ್ನೋದು ನನ್ನ ಆಸೆ ಎನ್ನುತ್ತಾಳೆ. ದಯವಿಟ್ಟು ನನ್ನ ಮನಸ್ಸು ಕೆಟ್ಟಿದೆ, ಅದನ್ನು ಇನ್ನೂ ಹಾಳುಮಾಡಬೇಡಿ ಎಂದು ಭದ್ರ ಮನವಿ ಮಾಡುತ್ತಾನೆ.

ಶಿವರಾಮೇಗೌಡನ ಮನ ಒಳಿಸಲು ಸಾವಿತ್ರಿ, ತಾಯಿಯನ್ನು ಸಂಧಾನಕ್ಕೆ ಕರೆತರುತ್ತಾಳೆ. ಶಿವರಾಮೇಗೌಡನ ತಾಯಿ ಮಗನ ಬಳಿ ಬಂದು, ನಾವು ತಪ್ಪು ಮಾಡಿಬಿಟ್ಟೆವು ಎನ್ನಿಸುತ್ತಿದೆ, ಮೊದಲೇ ಭದ್ರನಿಗೆ ವಿನಂತಿಯನ್ನು ಕೊಟ್ಟು ಮದುವೆ ಮಾಡಿದ್ದರೆ ಅವನು ಪ್ರೀತಿ ಎಂದೆಲ್ಲಾ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಜಾತಕ ಸರಿ ಇಲ್ಲದಿದ್ರೆ ಏನಂತೆ ಎಷ್ಟೋ ಜನರು ದೋಷಗಳನ್ನು ಪರಿಹಾರ ಮಾಡಿ ಮದುವೆ ಮಾಡಿಸುತ್ತಾರೆ. ನಾವು ಹಾಗೇ ಮಾಡಿದರಾಯ್ತು. ಆ ಹುಡುಗಿ ತಂದೆ ಕುಡುಕ, ನಮ್ಮ ಅಂತಸ್ತಿಗೆ ಸರಿಸಮ ಇಲ್ಲದ ಆ ಹುಡುಗಿಯನ್ನು ಮದುವೆ ಮಾಡಿಕೊಂಡರೆ ಜನರು ಮಾತನಾಡಿಕೊಳ್ಳುತ್ತಾರೆ. ಈಗ ನೋಡಿರುವ ಶ್ರೀಮಂತ ಮನೆತನದ ಹೆಣ್ಣನ್ನು ಮದುವೆ ಮಾಡಿಕೊಂಡು ಒಂದು ವೇಳೆ ಅವಳು ಈ ಮನೆಗೆ ಹೊಂದಿಕೊಳ್ಳದಿದ್ದರೆ ಕಷ್ಟ ಎನ್ನುತ್ತಾಳೆ. ತಾಯಿ ಮಾತಿಗೆ ದನಿಗೂಡಿಸುವ ಸಾವಿತ್ರಿ, ನನ್ನ ಮಗಳು ಚಿಕ್ಕಂದಿನಿಂದ ಈ ಮನೆಯಲ್ಲೆ ಬೆಳೆದಿದ್ದಾಳೆ. ನಾಳೆ ಏನೇ ಸಮಸ್ಯೆ ಬಂದರೂ ಹೊಂದಿಕೊಂಡು ಹೋಗುತ್ತಾಳೆ. ನಿನ್ನ ಹೆಸರನ್ನೂ ಉಳಿಸುತ್ತಾಳೆ ಎನ್ನುತ್ತಾಳೆ. ನನಗೆ ಸ್ವಲ್ಪ ಸಮಯಾವಕಾಶ ಕೊಡಿ ಎಂದು ಶಿವರಾಮೇಗೌಡ ತಾಯಿ ಬಳಿ ಹೇಳುತ್ತಾನೆ.

ತಂಗಿ ಮಗಳನ್ನು ಭದ್ರನಿಗೆ ತಂದುಕೊಳ್ಳಲು ಶಿವರಾಮೇಗೌಡ ಒಪ್ಪಿಕೊಳ್ಳುತ್ತಾನಾ ಎನ್ನುವುದು ಮುದ್ದು ಸೊಸೆ ಧಾರಾವಾಹಿಯ ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರೂ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in