ಮುದ್ದು ಸೊಸೆ: ವಿದ್ಯಾ 18ನೇ ಹುಟ್ಟುಹಬ್ಬದಂದೇ ಜೈಲಿನಿಂದ ಹೊರಬಂದ ಶಿವರಾಮೇಗೌಡ; ಮತ್ತೆ ಮದುವೆಯೋ, ಪೊಲೀಸರಿಗೆ ಫೋನ್‌ ಮಾಡಿದವರ ಬೇಟೆಯೋ?
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ವಿದ್ಯಾ 18ನೇ ಹುಟ್ಟುಹಬ್ಬದಂದೇ ಜೈಲಿನಿಂದ ಹೊರಬಂದ ಶಿವರಾಮೇಗೌಡ; ಮತ್ತೆ ಮದುವೆಯೋ, ಪೊಲೀಸರಿಗೆ ಫೋನ್‌ ಮಾಡಿದವರ ಬೇಟೆಯೋ?

ಮುದ್ದು ಸೊಸೆ: ವಿದ್ಯಾ 18ನೇ ಹುಟ್ಟುಹಬ್ಬದಂದೇ ಜೈಲಿನಿಂದ ಹೊರಬಂದ ಶಿವರಾಮೇಗೌಡ; ಮತ್ತೆ ಮದುವೆಯೋ, ಪೊಲೀಸರಿಗೆ ಫೋನ್‌ ಮಾಡಿದವರ ಬೇಟೆಯೋ?

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 33 ನೇ ಸಂಚಿಕೆಯಲ್ಲಿ ವಿದ್ಯಾಗೆ 18 ವರ್ಷ ತುಂಬಿದ ದಿನವೇ ಶಿವರಾಮೇಗೌಡ 6 ತಿಂಗಳ ಶಿಕ್ಷೆ ಮುಗಿಸಿ ಜೈಲಿನಿಂದ ಹೊರ ಬರುತ್ತಾನೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ವಿದ್ಯಾ 18ನೇ ಹುಟ್ಟುಹಬ್ಬದಂದೇ ಜೈಲಿನಿಂದ ಹೊರಬಂದ ಶಿವರಾಮೇಗೌಡ
ಮುದ್ದು ಸೊಸೆ: ವಿದ್ಯಾ 18ನೇ ಹುಟ್ಟುಹಬ್ಬದಂದೇ ಜೈಲಿನಿಂದ ಹೊರಬಂದ ಶಿವರಾಮೇಗೌಡ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 33ನೇ ಎಪಿಸೋಡ್‌ ಕಥೆ ಹೀಗಿದೆ. ವಿದ್ಯಾ ಮನೆ ಬಿಟ್ಟು ಹೋಗಲು ಪ್ರಯತ್ನಿಸಿದ್ದಕ್ಕೆ ಅವಳ ಕಾಲಿಗೆ, ಅಕ್ಕನಿಗೆ ಸಹಾಯ ಮಾಡಿದ್ದಕ್ಕೆ ಸರಸ್ವತಿ ಕೈಗೆ ಚೆಲುವ ಬರೆ ಎಳೆಯುತ್ತಾನೆ. ಮಕ್ಕಳ ಅವಸ್ಥೆ ನೋಡಿ ರತ್ನ ಕಣ್ಣೀರಿಡುತ್ತಾಳೆ. ಹೆಣ್ಣು ಮಕ್ಕಳು ಮದುವೆ ಆಗಿ ಮನೆಯಿಂದ ಹೊರ ಹೋದರೆ ಮಾತ್ರ ಸಮಾಜ ಗೌರವ ಕೊಡುತ್ತದೆ, ಇನ್ಮುಂದೆ ಹೀಗೆಲ್ಲಾ ಮಾಡಬೇಡಿ ಎಂದು ಬುದ್ಧಿ ಹೇಳುತ್ತಾಳೆ. ಶಾಲೆಗೆ ಹೋಗದಿದ್ದರೂ ವಿದ್ಯಾ ಓದುತ್ತಾ ಕೂರುತ್ತಾಳೆ. ಹೀಗೇ 6 ತಿಂಗಳು ಕಳೆಯುತ್ತದೆ.

ಮತ್ತೆ ವಿನಂತಿ-ಭದ್ರನ ಮದುವೆ ವಿಚಾರ ಪ್ರಸ್ತಾಪ

ಮನೆ ಕಡೆ ಬರಬೇಡ ಎಂದು ಶಿವರಾಮೇಗೌಡನ ತಾಯಿ ಹೇಳಿದ್ದರೂ ಚೆಲುವ ಮಾತ್ರ ಆಗ್ಗಾಗ್ಗೆ ಗೌಡರ ಮನೆಗೆ ಹೋಗಿ ಬರುತ್ತಾನೆ. ಭದ್ರ ತೋಟದಲ್ಲಿ ಒಬ್ಬನೇ ಇರುವಾಗ ಅಲ್ಲಿಗೆ ಬರುವ ಚೆಲುವ ಮೊದಲು ಗೌಡರ ಯೋಗಕ್ಷೇಮ ವಿಚಾರಿಸುತ್ತಾನೆ. ಚೆಲುವನನ್ನು ನೋಡಿ ಭದ್ರ ಮಾವ ಎಂದು ಮಾತನಾಡಿಸುತ್ತಾನೆ. ಸದ್ಯಕ್ಕೆ ನೀವೂ ಕೂಡಾ ನಿಮ್ಮ ಅಜ್ಜಿಯಂತೆ ಇಲ್ಲಿಗೆ ಏಕೆ ಬಂದೆ ಎಂದು ನನ್ನನ್ನು ದೂರ ತಳ್ಳಲಿಲ್ಲ. ನೀವು ಈ ರೀತಿ ಇರುವುದನ್ನು ನನ್ನಿಂದ ನೋಡಲು ಆಗುತ್ತಿಲ್ಲ. ಮನೆಗೆ ಹೋದರೆ ಅಲ್ಲಿ ವಿದ್ಯಾ ಊಟ, ತಿಂಡಿ ಬಿಟ್ಟು ಯೋಚನೆ ಮಾಡುತ್ತಿದ್ದಾಳೆ. ಇಷ್ಟೆಲ್ಲಾ ಆದ ನಂತರ ಈ ಮದುವೆ ನಡೆಯುವುದೋ ಇಲ್ಲವೋ ಅನ್ನೋದೇ ದೊಡ್ಡ ಕೊರಗಾಗಿದೆ. ಅವಳಿಗೆ ಸಮಾಧಾನ ಮಾಡಲೂ ಆಗದೆ, ನಿಮಗೆ ಧೈರ್ಯವನ್ನೂ ಹೇಳಲಾಗದೆ ಒದ್ದಾಡುತ್ತಿದ್ದೀನಿ, ಅವಳನ್ನು ಕೈ ಬಿಡಬೇಡಿ, ಅವಳು ನಿಮ್ಮ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದಾಳೆ ಎಂದು ಹೇಳಿ ಚೆಲುವ ಅಲ್ಲಿಂದ ಹೊರಡುತ್ತಾನೆ.

ಎಷ್ಟು ಸಾರಿ ಹೇಳಿದರೂ ಆ ದರಿದ್ರವನು ಇಲ್ಲಿಗೆ ಬರುತ್ತಲೇ ಇದ್ದಾನೆ ಎಂದು ಶಿವರಾಮೇಗೌಡನ ತಾಯಿ, ಚೆಲುವನ ಮೇಲೆ ಕೋಪಗೊಳ್ಳುತ್ತಾಳೆ. ಭದ್ರನ ಹೆಂಡತಿ ಸ್ಥಾನ ಖಾಲಿ ಇರುವವರೆಗೂ ಅವನು ಇಲ್ಲಿಗೆ ಬರುತ್ತಲೇ ಇರುತ್ತಾನೆ. ಇದಕ್ಕೆಲ್ಲಾ ಒಂದೇ ಪರಿಹಾರ. ನಮ್ಮ ವಿನಂತಿಗೆ ಭದ್ರನ ಕೈಲಿ ತಾಳಿ ಕಟ್ಟಿಸಿದರೆ ಎಲ್ಲವೂ ಸರಿ ಆಗುತ್ತದೆ ಎಂದು ಮಗಳು ಸಾವಿತ್ರಿ ಬಳಿ ಹೇಳುತ್ತಾಳೆ. ಅಣ್ಣ ನಿನ್ನ ಮಾತನ್ನು ಕೇಳುತ್ತಾನಾ ಎಂದು ಸಾವಿತ್ರಿ ಪ್ರಶ್ನಿಸುತ್ತಾಳೆ. ಕೇಳದಿದ್ದರೆ ಬಿಡುವವರು ಯಾರು, ಏನೇ ಆದರೂ ಸರಿ ನನ್ನ ಮಗನೊಂದಿಗೆ ಮಾತನಾಡಿ ವಿನಂತಿಯನ್ನು ಈ ಮನೆ ಸೊಸೆಯನ್ನಾಗಿಸುತ್ತೇನೆ, ಈ ಬಾರಿ ಬಿಡುವುದಿಲ್ಲ ಎನ್ನುತ್ತಾಳೆ. ಆಕೆಯ ಮಾತು ಕೇಳಿ ಸಾವಿತ್ರಿ ಹಾಗೂ ವಿನಂತಿ ಖುಷಿಯಾಗುತ್ತಾರೆ.

ಜೈಲಿನಿಂದ ಮನೆಗೆ ಬಂದ ಶಿವರಾಮೇಗೌಡ

ಇತ್ತ ವಿದ್ಯಾ 18ನೇ ವರ್ಷಕ್ಕೆ ಕಾಲಿಡುತ್ತಾಳೆ. ರಾತ್ರಿ 12 ಗಂಟೆ ಅಲಾರಾಂ ಹೊಡೆಯುತ್ತಲೇ ಸರಸ್ವತಿ ಎಚ್ಚರಗೊಂಡು ಅಕ್ಕನನ್ನು ಎಬ್ಬಿಸುತ್ತಾಳೆ. ನಿದ್ರೆ ಮಂಪರಿನಲ್ಲಿದ್ದ ವಿದ್ಯಾ ಆ ದಿನ ತನ್ನ ಹುಟ್ಟುಹಬ್ಬ ಎನ್ನುವುದನ್ನೇ ಮರೆತಿರುತ್ತಾಳೆ. ಅವಳನ್ನು ಬಲವಂತವಾಗಿ ಎಚ್ಚರಿಸುವ ಸರಸ್ವತಿ ಅಕ್ಕನಿಗೆ ಹುಟ್ಟುಹಬ್ಬದ ಶುಭ ಕೋರುತ್ತಾಳೆ. ತಂಗಿ ವಿಶ್‌ ಮಾಡಿದ್ದಕ್ಕೆ ವಿದ್ಯಾ ಖುಷಿ ಆದರೂ ತನಗೆ 18 ವರ್ಷ ತುಂಬಿದ್ದಕ್ಕೆ ಭಯಗೊಳ್ಳುತ್ತಾಳೆ. 18 ವರ್ಷ ತುಂಬಿಲ್ಲ ಎಂಬ ಕಾರಣಕ್ಕೆ ಇಷ್ಟು ದಿನ ಮನೆಯಲ್ಲಿ ಮದುವೆ ಮಾತುಕತೆ ಇರಲಿಲ್ಲ, ಆದರೆ ಈಗ ಆ ರೀತಿ ಅಲ್ಲ. ಇವತ್ತಿನಿಂದ ನಾನು ಮೇಜರ್‌. ಯಾವ ಪೊಲೀಸರು ಕೂಡಾ ನನ್ನ ಮದುವೆ ತಡೆಯಲು ಬರುವುದಿಲ್ಲ ಎಂದು ಕಣ್ಣೀರಿಡುತ್ತಾಳೆ.

ಇತ್ತ ಶಿವರಾಮೇಗೌಡ ಜೈಲಿನಿಂದ ಬಿಡುಗಡೆ ಆಗುತ್ತಾನೆ. ಅಪ್ಪ ಸೊರಗಿರುವುದನ್ನು ನೋಡಿ ಭದ್ರ ಬೇಸರಗೊಳ್ಳುತ್ತಾನೆ. ನಿನ್ನನ್ನು ನಾನು ಜೈಲಿನಿಂದ ಬಿಡಿಸಲು ಆಗಲಿಲ್ಲ ಎಂದು ಬೇಸರಗೊಳ್ಳುತ್ತಾನೆ. ಶಿವರಾಮೇಗೌಡ ಮನೆಗೆ ಬಂದು ಕೋಪದಿಂದ ಅರಚಾಡುವಂತೆ, ಇಷ್ಟೆಲ್ಲಾ ಸಂಬಂಧಗಳಿದ್ದರೂ ಯಾರೂ ನನ್ನನ್ನು ಜೈಲಿನಿಂದ ಬಿಡಿಸಲಿಲ್ಲ ಎಂದು ಅಳುವಂತೆ, ಮಾನ ಮರ್ಯಾದೆ ಕಳೆದುಕೊಂಡು ನಾನು ಬದುಕುವುದಿಲ್ಲ ಎಂದು ಎದೆ ಹಿಡಿದುಕೊಂಡು ಸತ್ತಂತೆ ಈಶ್ವರಿ ಕನಸು ಕಾಣುತ್ತಾಳೆ. ಕಂಡ ಕನಸನ್ನು ಮಗನ ಬಳಿ ಹೇಳುತ್ತಾಳೆ. ಅದು ಬರೀ ಕನಸು ತಾನೇ ಎಂದು ಸುಭಾಷ್‌ ಬೇಸರದಿಂದ ಹೇಳುತ್ತಾನೆ. ಒಂದಲ್ಲಾ ಒಂದು ದಿನ ಅದೂ ನಡೆಯುತ್ತದೆ ಎಂದು ಈಶ್ವರಿ ಹೇಳುತ್ತಾಳೆ. ಶಿವರಾಮೇಗೌಡ ಮನೆಗೆ ಬರುತ್ತಾನೆ. ಆದರೆ ಈಶ್ವರಿ ಅಂದುಕೊಂಡಂತೆ ಶಿವರಾಮೇಗೌಡ ತನ್ನ ಸ್ಥಿತಿಗೆ ಬೇಸರಗೊಳ್ಳುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ, ಬದುಕಿನಲ್ಲಿ ಇಂಥ ಏರಿಳಿತಗಳು ಇರಲೇಬೇಕು ಎಂದು ಮಗನ ಬಳಿ ಹೇಳುತ್ತಾನೆ.

ಶಿವರಾಮೇಗೌಡನ ತಾಯಿ ಮಗಳಿಗೆ ಹೇಳಿದಂತೆ ವಿನಂತಿ ಮದುವೆ ವಿಚಾರವನ್ನು ಮಗನ ಬಳಿ ಮಾತನಾಡುತ್ತಾಳಾ? ವಿದ್ಯಾಳನ್ನು ಮರೆತು ಭದ್ರ ಬೇರೆ ಮದುವೆ ಆಗುತ್ತಾನಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರಸ್ವತಿ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in