ಮುದ್ದು ಸೊಸೆ: ಮತ್ತೆ ಶುರುವಾಯ್ತು ಮದುವೆ ಸಂಭ್ರಮ; ಮನೆ ಮುಂದೆ ಪಟಾಕಿ ಹಚ್ಚಿ ಮನ ಮೆಚ್ಚಿದ ಹುಡುಗಿ ಹುಟ್ಟುಹಬ್ಬ ಆಚರಿಸಿದ ಭದ್ರ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 34 ನೇ ಸಂಚಿಕೆಯಲ್ಲಿ ವಿದ್ಯಾ ಹುಟ್ಟುಹಬ್ಬವನ್ನು ಭದ್ರ ಅದ್ದೂರಿಯಾಗಿ ಆಚರಿಸುತ್ತಾನೆ. ಮತ್ತೆ ಇಬ್ಬರ ಮನೆಯಲ್ಲೂ ಮದುವೆ ಸಂಭ್ರಮ ಶುರುವಾಗುತ್ತದೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 34ನೇ ಎಪಿಸೋಡ್ ಕಥೆ ಹೀಗಿದೆ. ವಿದ್ಯಾಗೆ 18 ವರ್ಷ ತುಂಬಿದ ದಿನವೇ ಶಿವರಾಮೇಗೌಡ ಜೈಲಿನಿಂದ ಬಿಡುಗಡೆ ಆಗುತ್ತಾನೆ. ಅವಮಾನ ತಾಳಲಾರದೆ ಶಿವರಾಮೇಗೌಡ ಎದೆ ಹಿಡಿದು ಸತ್ತಂತೆ ಈಶ್ವರಿ ಕನಸು ಕಾಣುತ್ತಾಳೆ. ನಿನ್ನನ್ನು ಜೈಲಿನಿಂದ ಬಿಡಿಸಲು ಸಾಧ್ಯವಾಗದಿದ್ದಕ್ಕೆ ಕ್ಷಮಿಸು ಎಂದು ತಂದೆ ಬಳಿ ಭದ್ರ ಕ್ಷಮೆ ಕೇಳುತ್ತಾನೆ. ಜೀವನದಲ್ಲಿ ಇಂಥ ಘಟನೆಗಳು ನಡೆದರೆ ನಾವು ಗಟ್ಟಿಯಾಗುತ್ತೇವೆ, ತಪ್ಪು ಮಾಡಿದ್ದೇನೆ, ಅದಕ್ಕೆ ಶಿಕ್ಷೆ ಅನುಭವಿಸಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲಿ ಇಂಥ ಏರಿಳಿತಗಳು ಇದ್ದೇ ಇರುತ್ತದೆ ಎಂದು ಶಿವರಾಮೇಗೌಡ ಹೇಳುತ್ತಾನೆ.
ಅಪ್ಪನಿಗೆ ಹಾಲಿನ ಅಭಿಷೇಕ ಮಾಡಿದ ಭದ್ರ
ಆಗಿರುವ ಅವಮಾನಕ್ಕೆ ನೀನು ಸಾಯುತ್ತೀಯ ಎಂದುಕೊಂಡಿದ್ದೆ, ಆದರೆ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಶಿಕ್ಷೆ ಅನುಭವಿಸಿದರೂ ನೀನು ಏನೂ ಆಗಿಲ್ಲ ಎಂಬಂತೆ ಇದ್ದೀಯ ಎಂದು ಈಶ್ವರಿ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ಮನೆ ಒಳಗೆ ಹೋಗುತ್ತಿದ್ದ ಅಪ್ಪನನ್ನು ತಡೆಯುವ ಭದ್ರ, ಅವನಿಗೆ ಹಾಲಿನ ಅಭಿಷೇಕ ಮಾಡುತ್ತಾನೆ. ಇನ್ಮುಂದೆ ಈ ಹಾಲಿನಂತೆ ನಿನ್ನ ಜೀವನ ಪರಿಶುದ್ಧವಾಗಿರಲಿ. ಈ 6 ತಿಂಗಳು ನೀನು ಅನುಭವಿಸಿದ್ದ ನೋವು, ಕಷ್ಟ ಈ ಹಾಲಿನ ಮೂಲಕ ಕಳೆದುಹೋಗಲಿ ಎಂದು ಹಾರೈಸುತ್ತಾನೆ. ಅದನ್ನು ನೋಡಿ ಈಶ್ವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಅವಳು ಒಳಗೆ ಬಂದು ಹಾಲು ಕುಡಿಯುತ್ತಾಳೆ. ನಾನು ಅಂದುಕೊಂಡಿದ್ದೇ ಬೇರೆ, ಇಲ್ಲಿ ಆಗುತ್ತಿರುವುದೇ ಬೇರೆ. ಶಿವರಾಮೇಗೌಡನಿಗೆ ಅವಮಾನವಾಗಿ ಅವನು ಎಲ್ಲರ ಮುಂದೆ ತಲೆ ತಗ್ಗಿಸಿದರೆ ಮಾತ್ರ ಉರಿಯುತ್ತಿರುವ ನನ್ನ ಹೊಟ್ಟೆ ತಣ್ಣಗಾಗುತ್ತದೆ ಎಂದು ಈಶ್ವರಿ ಹೇಳುತ್ತಾಳೆ.
ಶಿವರಾಮೇಗೌಡ ಶುಚಿಯಾಗಿ ಎಂದಿನಂತೆ ಪಂಚೆ, ತನ್ನ ಒಡವೆಗಳನ್ನು ಧರಿಸಿ ತನಗಾಗಿ ಮೀಸಲಿದ್ದ ಸಿಂಹಾಸನದ ಮೇಲೆ ಬಂದು ಕೂರುತ್ತಾನೆ. ಅದನ್ನು ನೋಡಿ ಈಶ್ವರಿ ಹೊರತುಪಡಿಸಿ ಎಲ್ಲರೂ ಖುಷಿಯಾಗುತ್ತಾರೆ. ಈಗ ಈ ಸಿಂಹಾಸನಕ್ಕೆ ಒಂದು ಗತ್ತು ಬಂತು ಎನ್ನುತ್ತಾರೆ. ಮದುವೆ ಮನೆಯಲ್ಲಿ ನಡೆದ ಘಟನೆಯನ್ನು ಈಶ್ವರಿ ನೆನಪಿಸಿಕೊಳ್ಳುತ್ತಾಳೆ. ಆದರೆ ಶಿವರಾಮೇಗೌಡ, ಅವಳಿಗೆ ಸುಮ್ಮನಿರುವಂತೆ ಸೂಚಿಸುತ್ತಾನೆ. ಆಗಿದ್ದು ಆಗಿ ಹೋಯ್ತು, ನಾವು ಈ ಮನೆಯಲ್ಲಿ ನೆಮ್ಮದಿಯಾಗಿರಬೇಕು ಎಂದರೆ ಹಳೆಯ ಕಹಿ ಘಟನೆಯನ್ನು ಮರೆಯಬೇಕು. ಇನ್ಮುಂದೆ ಯಾರೂ ಕೂಡಾ ಮನೆಯಲ್ಲಿ ಈ ವಿಚಾರವನ್ನು ಮಾತನಾಡಬೇಡಿ. ಹಾಗೇ ಈ ಕಹಿ ಘಟನೆಯನ್ನು ನಾವೆಲ್ಲಾ ಮರೆಯಬೇಕಾದರೆ ನಮ್ಮ ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯಬೇಕು. ಆದಷ್ಟು ಬೇಗ ಭದ್ರನ ಮದುವೆ ನಡೆಯಬೇಕು ಎಂದು ಹೇಳುತ್ತಾನೆ.
ಇದೇ ಸಮಯಕ್ಕೆ ಕಾಯುತ್ತಿದ್ದ ಶಿವರಾಮೇಗೌಡನ ತಾಯಿ ನಾನು ಅದೇ ವಿಚಾರ ಮಾತನಾಡಬೇಕು ಎಂದುಕೊಂಡಿದ್ದೆ, ಇಷ್ಟೆಲ್ಲಾ ರಾಧ್ಧಾಂತಕ್ಕೆ ಕಾರಣವಾಗಿದ್ದು ಆ ಮದುವೆ, ಆದ್ದರಿಂದ ಆದಷ್ಟು ಬೇಗ ಭದ್ರನಿಗೆ ನಮ್ಮ ವಿನಂತಿಯನ್ನು ಕೊಟ್ಟು ಮದುವೆ ಮಾಡಿಬಿಡೋಣ ಎನ್ನುತ್ತಾಳೆ. ಸಾವಿತ್ರಿ ಕೂಡಾ ತಾಯಿ ಮಾತಿಗೆ ತಲೆ ಆಡಿಸುತ್ತಾಳೆ. ಈ ವಿಚಾರದಲ್ಲಿ ಎಲ್ಲರೂ ನಿಮ್ಮ ಅಭಿಪ್ರಾಯ ಹೇಳಿ ಎಂದು ಶಿವರಾಮೇಗೌಡ ಹೇಳುತ್ತಾನೆ. ನೀವು ಚೆನ್ನಾಗಿ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದಿರುತ್ತೀರಿ, ಭದ್ರನ ಮದುವೆ ವಿಚಾರದಲ್ಲಿ ನೀವು ಯಾವ ತೀರ್ಮಾನ ತೆಗೆದುಕೊಂಡರೂ ನಮ್ಮ ಒಪ್ಪಿಗೆ ಇದೆ ಎಂದು ಎಲ್ಲರೂ ಹೇಳುತ್ತಾರೆ. ಸರಿ ಎಲ್ಲರೂ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ಈಗ ನಾನು ಹೇಳುತ್ತೇನೆ. ಈ ಶಿವರಾಮೇಗೌಡ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಬದಲಾಯಿಸುವುದಿಲ್ಲ, ನಮ್ಮ ಭದ್ರ ಇಷ್ಟ ಪಟ್ಟ ವಿದ್ಯಾಳೇ ಈ ಮನೆ ಸೊಸೆ. ಆದಷ್ಟು ಬೇಗ ಈ ಮದುವೆ ಮಾಡೋಣ ಎನ್ನುತ್ತಾನೆ. ಅದನ್ನು ಕೇಳಿ ಸಾವಿತ್ರಿ, ವಿನಂತಿ ಹಾಗೂ ಶಿವರಾಮೇಗೌಡನ ತಾಯಿ ಸಿಟ್ಟಾಗುತ್ತಾರೆ.
ವಿದ್ಯಾಗೆ ಸೀರೆ, ಹೂ ಕೊಟ್ಟು ಹುಟ್ಟುಹಬ್ಬಕ್ಕೆ ಶುಭ ಕೋರಿದ ಭದ್ರೇಗೌಡ
ಅಷ್ಟರಲ್ಲಿ ಭದ್ರ ಹೂವಿನ ಹಾರದ ಜೊತೆ ಗೌಡರ ಮನೆಗೆ ಬರುತ್ತಾನೆ. ಜೈಕಾರ ಹಾಕುತ್ತಾ ಶಿವರಾಮೇಗೌಡನಿಗೆ ಹಾರ ಹಾಕುತ್ತಾನೆ. ನೀವು ವಾಪಸ್ ಬಂದಿದ್ದು ನನಗೆ ಬಹಳ ಖುಷಿಯಾಯ್ತು ಎನ್ನುತ್ತಾನೆ. ಮದುವೆ ವಿಚಾರವನ್ನು ಗೋವಿಂದ ತಿಳಿಸುತ್ತಾನೆ. ಆ ಮಾತು ಕೇಳುತ್ತಿದ್ದಂತೆ ಚೆಲುವ ಖುಷಿಯಾಗುತ್ತಾನೆ. ವಿದ್ಯಾಗೆ 18 ವರ್ಷ ತುಂಬುತ್ತಿದ್ದಂತೆ ಈ ಮದುವೆ ಮಾಡೋಣ ಎಂದು ಗೋವಿಂದ ಹೇಳುತ್ತಾನೆ. ಇವತ್ತೇ ಅವಳಿಗೆ 18 ವರ್ಷ ತುಂಬಿದೆ ಎಂದು ಚೆಲುವ ಹೇಳುತ್ತಾನೆ. ಜೊತೆಗೆ ಕಾಲೇಜ್ ಸರ್ಟಿಫಿಕೇಟ್ ಕೂಡಾ ತೋರಿಸುತ್ತಾನೆ. ಅದನ್ನು ನೋಡಿ ಗೋವಿಂದ ಅಣ್ಣನ ಸೂಚನೆ ಮೇರೆಗೆ ಪುರೋಹಿತರ ಜೊತೆ ಮಾತನಾಡಿ ಮುಂದಿನ 2 ದಿನಗಳಲ್ಲಿ ಮದುವೆಗೆ ಶುಭ ಮುಹೂರ್ತವಿದೆ ಎಂದು ತಿಳಿಸುತ್ತಾನೆ. ಚೆಲುವನ ಮನೆಯಿಂದ ವಾಪಸ್ ಪಡೆದಿದ್ದ ಒಡವೆ, ಬಟ್ಟೆಗಳು, ದುಡ್ಡನ್ನು ಈಶ್ವರಿ ಮತ್ತೆ ಚೆಲುವನಿಗೆ ಕೊಡುತ್ತಾಳೆ.
ಒಡವೆ. ಬಟ್ಟೆ ಪಡೆದು ಚೆಲುವ ಕುಣಿದಾಡುತ್ತಾ ಮನೆಗೆ ಬಂದು ಎಲ್ಲರಿಗೂ ವಿಷಯ ತಿಳಿಸುತ್ತಾನೆ. ಆ ವಿಚಾರ ಕೇಳಿ ವಿದ್ಯಾ, ಸರೂ ಬೇಸರಗೊಂಡರೆ ರತ್ನ, ಕಾಳವ್ವ ಖುಷಿಯಾಗುತ್ತಾರೆ. ಎಲ್ಲರ ಜೀವನದಲ್ಲಿ ಅದೃಷ್ಟ ಎರಡು ಬಾರಿ ಬರುವುದಿಲ್ಲ, ಆದರೆ ನಿನ್ನ ಜೀವನದಲ್ಲಿ ಬಂದಿದೆ, ಅರ್ಥ ಮಾಡಿಕೊಂಡು ಬದುಕು ಎಂದು ಮಗಳಿಗೆ ರತ್ನ ಬುದ್ಧಿ ಹೇಳುತ್ತಾಳೆ. ಅಷ್ಟರಲ್ಲಿ ಮನೆ ಮುಂದೆ ಲೈಟ್ ಬೆಳಗುವುದನ್ನು ನೋಡಿ ವಿದ್ಯಾ ಖುಷಿಯಾಗುತ್ತಾಳೆ. ಅದೇನು ಎಂದು ನೋಡಲು ಹೊರಗೆ ಬಂದರೆ ಪಟಾಕಿ ಸದ್ದಾಗುತ್ತದೆ. ಯಾರು ನಮ್ಮ ಮನೆ ಬಳಿ ಪಟಾಕಿ ಹೊಡೆಯುತ್ತಿರುವುದು ಎಂದು ರತ್ನ ಕೇಳುತ್ತಾಳೆ. ಅಷ್ಟರಲ್ಲಿ ಭದ್ರ ಅಲ್ಲಿಗೆ ಬಂದು ವಿದ್ಯಾಗೆ ಹುಟ್ಟುಹಬ್ಬದ ಶುಭ ಕೋರುತ್ತಾನೆ. ಸೀರೆ, ಹೂ, ಬಳೆಯನ್ನು ಕೊಟ್ಟು ನನ್ನ ಜೀವನದ ಮೊದಲ ಹುಡುಗಿ, ಕೊನೆ ಹುಡುಗಿ ನೀನೇ, ಈ ಸೀರೆ ಉಟ್ಟು ಬಾ ಎನ್ನುತ್ತಾನೆ. ವಿದ್ಯಾಗೆ ಇಷ್ಟವಿಲ್ಲದಿದ್ದರೂ ಸೀರೆ ತೆಗೆದುಕೊಂಡು ಒಳಗೆ ಹೋಗುತ್ತಾಳೆ.
ಭದ್ರ ಕೊಟ್ಟ ಸೀರೆಯನ್ನು ವಿದ್ಯಾ ಉಟ್ಟು ಬರ್ತ್‌ಡೇ ಸಂಭ್ರಮದಲ್ಲಿ ಭಾಗಿಯಾಗುತ್ತಾಳಾ? ಮದುವೆ ನಿಲ್ಲಿಸಲು ವಿನಂತಿ, ಸಾವಿತ್ರಿ ಏನು ಪ್ಲ್ಯಾನ್ ಮಾಡುತ್ತಾರೆ? ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರಸ್ವತಿ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ
ವಿಭಾಗ