ಮುದ್ದು ಸೊಸೆ: ಮದುವೆ ನಿಲ್ಲಿಸಿದವರ ವಿಳಾಸ ಸಿಕ್ಕೇಬಿಡ್ತು, ಕೈಯಲ್ಲಿ ಮಚ್ಚು ಹಿಡಿದು ರೋಷದಿಂದ ಚೆಲುವನ ಮನೆಗೆ ಬಂದ ಭದ್ರ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 36 ನೇ ಸಂಚಿಕೆಯಲ್ಲಿ, ಮದುವೆ ನಿಲ್ಲಿಸಿದವರು ಯಾರೆಂದು ಭದ್ರನಿಗೆ ಗೊತ್ತಾಗಿದೆ. ಭದ್ರ ಆವೇಶದಿಂದ ಮಚ್ಚು ಹಿಡಿದು ಚೆಲುವನ ಮನೆಗೆ ಬರುತ್ತಾನೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶನಿವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 36ನೇ ಎಪಿಸೋಡ್ ಕಥೆ ಹೀಗಿದೆ. ಚೆಲುವ ಅದ್ದೂರಿಯಾಗಿ ವಿದ್ಯಾ ಹುಟ್ಟುಹಬ್ಬ ಆಚರಿಸಿ ಅವಳಿಗೆ ಕೇಕ್ ತಿನ್ನಿಸುತ್ತಾನೆ. ಅಷ್ಟರಲ್ಲಿ ಭದ್ರನಿಗೆ ಪರಿಚಯವಿರುವ ವ್ಯಕ್ತಿಯೊಬ್ಬರು ಅವನಿಗೆ ಕರೆ ಮಾಡಿ ಪೊಲೀಸರಿಗೆ ಫೋನ್ ಮಾಡಿದ್ದು ಯಾರು ಎಂಬ ವಿಚಾರ ಗೊತ್ತಾಗಿದೆ, ನೀವು ನನ್ನನ್ನು ಭೇಟಿಯಾದರೆ ಅವರ ವಿಳಾಸ ಕೊಡುವುದಾಗಿ ಹೇಳುತ್ತಾರೆ. ಈ ವಿಚಾರವನ್ನು ಭದ್ರ ಚೆಲುವನಿಗೆ ಹೇಳುತ್ತಾನೆ. ಮದುವೆ ನಿಲ್ಲಲು, ಶಿವರಾಮೇಗೌಡ ಜೈಲಿಗೆ ಹೋಗಲು ನನ್ನ ಮಗಳೇ ಕಾರಣ ಎಂದು ತಿಳಿದರೆ ನಮ್ಮ ಕಥೆ ಏನಾಗುವುದೋ ಎಂದು ಚೆಲುವ ಆತಂಕಗೊಳ್ಳುತ್ತಾನೆ.
ಭದ್ರನಿಗೆ ಕರೆ ಮಾಡಿ ತಪ್ಪು ಒಪ್ಪಿಕೊಂಡ ವಿದ್ಯಾ
ವಿದ್ಯಾ ಕೂಡಾ ಪರಿಸ್ಥಿತಿ ನೆನೆದು ಭಯಗೊಳ್ಳುತ್ತಾಳೆ. ಅವರು ಮನೆ ಬಳಿ ಬಂದು ಗಲಾಟೆ ಮಾಡುವುದಕ್ಕೆ ಮುನ್ನ ನಾನೇ ಒಪ್ಪಿಕೊಳ್ಳುತ್ತೇನೆ. ಅವರು ಏನೇ ಶಿಕ್ಷೆ ಕೊಟ್ಟರೂ ನಾನೇ ಅನುಭವಿಸುತ್ತೇನೆ ಎಂದು ಸರಸ್ವತಿಗೆ ಅಪ್ಪನ ಫೋನ್ ತರಲು ಹೇಳುತ್ತಾಳೆ. ವಿದ್ಯಾ ಆತಂಕದಿಂದಲೇ ಭದ್ರನಿಗೆ ಕರೆ ಮಾಡುತ್ತಾಳೆ. ಚೆಲುವ ಫೋನ್ ಮಾಡಿರಬಹುದು ಎಂದು ಭದ್ರ ಫೋನ್ ರಿಸೀವ್ ಮಾಡುತ್ತಾನೆ. ಅಪ್ಪ ಅಲ್ಲ ನಾನು ವಿದ್ಯಾ ಮಾತನಾಡುತ್ತಿರುವುದು, ನಿಮ್ಮ ಬಳಿ ಏನೋ ಹೇಳಬೇಕಿತ್ತು. ಪೊಲೀಸರಿಗೆ ಫೋನ್ ಮಾಡಿ ಮದುವೆ ನಿಲ್ಲಿಸಿದ್ದು ಯಾರು ಎಂದು ನೀವು ಹುಡುಕುತ್ತಿದ್ದೀರಿ ತಾನೇ, ಅದು ಬೇರೆ ಯಾರೂ ಅಲ್ಲ, ನಾನೇ ಫೋನ್ ಮಾಡಿದ್ದು. ಈ ವಿಚಾರವಾಗಿ ಅಪ್ಪ ಬಹಳ ಭಯಗೊಂಡಿದ್ದಾರೆ ಎಂದು ವಿದ್ಯಾ ಹೇಳುತ್ತಾಳೆ.
ಆದರೆ ಚೆಲುವನ ಮನೆ ಮುಂದೆ ಮೈಕ್ ಹಾಕಿದ್ದರಿಂದ ವಿದ್ಯಾ ಹೇಳಿದ ಮಾತುಗಳು ಒಂದೂ ಅವನಿಗೆ ಕೇಳಿಸುವುದಿಲ್ಲ, ಕರೆ ಮಾಡಿರುವುದು ವಿದ್ಯಾ ಎಂದು ಕೂಡಾ ಅವನಿಗೆ ಗೊತ್ತಾಗುವುದಿಲ್ಲ. ಮಗಳು ಫೋನ್ ಹಿಡಿದು ಯಾರೊಂದಿಗೂ ಮಾತನಾಡುತ್ತಿರುವುದನ್ನು ರತ್ನ ನೋಡಿ ಗಾಬರಿ ಆಗುತ್ತಾಳೆ. ಮತ್ತೆ ಏನು ಸಮಸ್ಯೆ ಮಾಡಲು ಹೊರಟ್ಟಿದ್ದೀರ? ಫೋನಿನಲ್ಲಿ ಯಾರ ಜೊತೆ ಮಾತನಾಡುತ್ತಿದ್ದೀರ ಎಂದು ಗಾಬರಿಯಿಂದ ಕೇಳುತ್ತಾಳೆ. ಭದ್ರ ಅವರಿಗೆ ಫೋನ್ ಮಾಡಿದ್ದಾಗಿ ವಿದ್ಯಾ ಹೇಳುತ್ತಾಳೆ. ಅವರಿಗೆ ಪೋನ್ ಮಾಡಿ ಏನು ಮಾತನಾಡಿದೆ, ಏನು ಹೇಳಿದೆ? ನಿಮ್ಮ ತಂದೆಗೆ ಗೊತ್ತಾದರೆ ಅವರು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ರತ್ನ ಆತಂಕಗೊಳ್ಳುತ್ತಾಳೆ. ಅಷ್ಟರಲ್ಲಿ ಸರಸ್ವತಿ ಮಧ್ಯೆ ಬರುತ್ತಾಳೆ. ಇವಳಿಗೆ ಓದಬೇಕೆಂಬ ಆಸೆ ಇದೆ ಅನ್ನೋದನ್ನು ಹೇಳಿಕೊಂಡಿದ್ದಾಳೆ ಎಂದು ಸುಳ್ಳು ಹೇಳುತ್ತಾಳೆ. ಭದ್ರ ಬಹಳ ಒಳ್ಳೆಯವರು ನಿನ್ನ ಅದೃಷ್ಟ ಚೆನ್ನಾಗಿದ್ದರೆ ಮದುವೆ ನಂತರವೂ ಖಂಡಿತ ಅವರು ನಿನ್ನನ್ನು ಓದಿಸುತ್ತಾರೆ ಎಂದು ರತ್ನ ಹೇಳುತ್ತಾಳೆ.
ಮಚ್ಚು ಹಿಡಿದು ಚೆಲುವನ ಬಳಿ ಬಂದ ಭದ್ರೇಗೌಡ
ಇತ್ತ ಭದ್ರನಿಗೆ ಪರಿಚಯದ ವ್ಯಕ್ತಿ ಶಿವಲಿಂಗ ಕರೆ ಮಾಡಿ ತನ್ನನ್ನು ಭೇಟಿ ಆಗಲು ಹೇಳುತ್ತಾನೆ. ಆತ ಹೇಳಿದ ಸ್ಥಳಕ್ಕೆ ಭದ್ರ ಹಾಗೂ ಕ್ವಾಟ್ಲೆ ಹೋಗುತ್ತಾರೆ. ಅಷ್ಟರಲ್ಲಿ ಆಗಲೇ ಚೆಲುವನ ಪೋನಿನಿಂದ ಕರೆ ಬಂದದ್ದು ಭದ್ರನಿಗೆ ನೆನಪಾಗಿ ಅವನಿಗೆ ಕರೆ ಮಾಡುತ್ತಾನೆ. ಚೆಲುವ ಪೋನ್ ರಿಸೀವ್ ಮಾಡುತ್ತಾನೆ. ತನ್ನ ಫೋನಿನಿಂದ ಯಾರೋ ಭದ್ರನಿಗೆ ಕರೆ ಮಾಡಿರುವ ವಿಚಾರ ಚೆಲುವನಿಗೆ ಗೊತ್ತಾಗುತ್ತದೆ. ಏನಿಲ್ಲ ಅಳಿಯಂದಿರೇ, ಪೊಲೀಸ್‌ಗೆ ಫೋನ್ ಮಾಡಿದ ವ್ಯಕ್ತಿಯ ವಿಳಾಸ ಸಿಕ್ಕಿದೆ ಎಂದು ಹೇಳಿದ್ರಿ ಅದು ಯಾರು ಎಂದು ತಿಳಿದುಕೊಳ್ಳೋಕೆ ಕರೆ ಮಾಡಿದೆ ಎನ್ನುತ್ತಾನೆ. ಅದನ್ನು ತಿಳಿದುಕೊಳ್ಳಲು ಹೋಗುತ್ತಿದ್ದೇನೆ, ಅಲ್ಲಿಂದ ಬಂದು ನಿಮಗೆ ಕರೆ ಮಾಡುತ್ತೇನೆ ಎಂದು ಭದ್ರ ಹೇಳುತ್ತಾನೆ. ಇದು ಅನಧಿಕೃತ ಕೆಲಸ, ಒಂದು ವೇಳೆ ಈ ವಿಚಾರ ಯಾರಿಗಾದರೂ ಗೊತ್ತಾದರೆ ನನ್ನ ಕೆಲಸ ಹೋಗುತ್ತದೆ, ಇದನ್ನು ಬೇರೆ ಯಾರಿಗೂ ಹೇಳಬೇಡಿ ಎಂದು ಶಿವಲಿಂಗ ಹೇಳಿ, ವಿಳಾಸವನ್ನು ಭದ್ರನ ಕೈಗೆ ಕೊಡುತ್ತಾನೆ. ಅದನ್ನು ನೋಡಿ ಭದ್ರ ಸಿಟ್ಟಾಗುತ್ತಾನೆ.
ಇತ್ತ ಚೆಲುವ ಮನೆಗೆ ಬಂದು, ಅಳಿಯಂದಿರಿಗೆ ಯಾರು ಫೋನ್ ಮಾಡಿದ್ದು? ನಿಜ ಹೇಳಿದರೆ ಸರಿ ಎಂದು ಹೆದರಿಸುತ್ತಾನೆ. ನಿನ್ನೆ ರಾತ್ರಿ ಅಕ್ಕನ ಬರ್ತ್‌ಡೇ ಆಚರಿಸಿದ್ದು ನನಗೆ ಬಹಳ ಖುಷಿ ಆಯ್ತು. ಅದಕ್ಕೆ ಥ್ಯಾಂಕ್ಸ್ ಹೇಳಲು ಅವರಿಗೆ ಕರೆ ಮಾಡಿದ್ದೆ ಎಂದು ಸರಸ್ವತಿ ಸುಳ್ಳು ಹೇಳುತ್ತಾಳೆ. ಅಷ್ಟರಲ್ಲಿ ಭದ್ರ ಸಿಟ್ಟಿನಿಂದ ಚೆಲುವನ ಹೆಸರು ಕೂಗುತ್ತಾ ಮಚ್ಚು ಹಿಡಿದು ಬರುತ್ತಾನೆ. ಪೊಲೀಸರಿಗೆ ಫೋನ್ ಮಾಡಿ ಮದುವೆ ನಿಲ್ಲಿಸಿ, ನನ್ನ ಅಪ್ಪನನ್ನು ಜೈಲಿಗೆ ಹೋಗುವಂತೆ ಮಾಡಿ ಈಗ ಏನೂ ಗೊತ್ತಿಲ್ಲದಂತೆ ನಾಟಕ ಮಾಡುತ್ತಿದ್ದೀಯ ನಿನ್ನನ್ನು ಬಿಡುವುದಿಲ್ಲ ಎಂದು ಚೆಲುವನಿಗೆ ಹೊಡೆಯಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ವಿದ್ಯಾ ಅಡ್ಡ ಬರುತ್ತಾಳೆ. ಏನೇ ಶಿಕ್ಷೆ ಇದ್ದರೂ ನನಗೆ ಕೊಡಿ, ಪೊಲೀಸರಿಗೆ ಫೋನ್ ಮಾಡಿದ್ದು ನಾನೇ. ಓದಿ ಡಾಕ್ಟರ್ ಆಗಬೇಕೆಂಬ ಕನಸು ಇತ್ತು, ಇಷ್ಟು ಬೇಗ ಮದುವೆ ಆಗಲು ನನಗೆ ಇಷ್ಟವಿರಲಿಲ್ಲ, ಆ ಕಾರಣಕ್ಕೆ ಪೊಲೀಸರಿಗೆ ಫೋನ್ ಮಾಡಿದೆ, ಆದರೆ ನಿಮ್ಮ ತಂದೆಗೆ ಅವಮಾನ ಮಾಡುವ ಉದ್ದೇಶದಿಂದ ಅಲ್ಲ ಎನ್ನುತ್ತಾಳೆ. ಅದನ್ನು ಕೇಳಿ ಭದ್ರ ಶಾಕ್ ಆಗುತ್ತಾನೆ.
ತಪ್ಪು ಮಾಡಿದ್ದು ವಿದ್ಯಾ ಅನ್ನೋದು ನಿಜವಾಗಲೂ ಭದ್ರನಿಗೆ ಗೊತ್ತಾಗಿದೆಯಾ? ಅಥವಾ ಅದು ಕನಸಾ? ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರಸ್ವತಿ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ