ಮುದ್ದು ಸೊಸೆ: ಭದ್ರ-ವಿದ್ಯಾ ಮದುವೆ ನಿಲ್ಲಿಸಿದ್ದು ವಿನಂತಿ; ಭದ್ರೇಗೌಡ, ಶಿವರಾಮೇಗೌಡನ ಬಳಿ ಲೋಕೇಶ ನಿಜ ಹೇಳ್ತಾನಾ?
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 37 ನೇ ಸಂಚಿಕೆಯಲ್ಲಿ, ಪೊಲಿಸರಿಗೆ ಪೋನ್ ಮಾಡಿದ್ದು ನಾನೇ ಎಂಬ ಸತ್ಯವನ್ನು ವಿನಂತಿ ತಾಯಿ ಸಾವಿತ್ರಿ ಮುಂದೆ ಒಪ್ಪಿಕೊಳ್ಳುತ್ತಾಳೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಭಾನುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 37ನೇ ಎಪಿಸೋಡ್ ಕಥೆ ಹೀಗಿದೆ. ಭದ್ರ ಹಾಗೂ ವಿದ್ಯಾ ಮನೆಯಲ್ಲಿ ಮತ್ತೆ ಮದುವೆ ಶಾಸ್ತ್ರಗಳು ಆರಂಭವಾಗಿದೆ. ತಾನು ಮುಚ್ಚಿಟ್ಟಿದ್ದ ಸತ್ಯವನ್ನು ವಿದ್ಯಾ ಭದ್ರನ ಬಳಿ ಹೇಳಲು ಪ್ರಯತ್ನಿಸುತ್ತಾಳೆ. ಆದರೆ ಅದು ಸಾಧ್ಯವಾಗುವುದಿಲ್ಲ. ಪೊಲೀಸರಿಗೆ ಹೇಳಿ ಮದುವೆ ನಿಲ್ಲಿಸಿದ್ದು ವಿದ್ಯಾ ಎಂದು ಚೆಲುವನಿಗೆ ಗೊತ್ತಾಗಿ ಭದ್ರ ಕೋಪದಿಂದ ಅವಳ ಕತ್ತನ್ನು ಮಚ್ಚಿನಿಂದ ಕತ್ತರಿಸುವಂತೆ ಚೆಲುವ ಕನಸು ಕಾಣುತ್ತಾನೆ.
ಅಪ್ಪನ ಪ್ರೀತಿ ಕಂಡು ಭಾವುಕಳಾದ ವಿದ್ಯಾ
ನಿಜವಾಗಿಯೂ ಭದ್ರ ನನ್ನ ಮಗಳನ್ನು ಕೊಲ್ಲುತ್ತಿದ್ದಾನೆ ಎಂದು ತಿಳಿದು ಚೆಲುವ ಗಾಬರಿಯಿಂದ ಮಗಳೇ ವಿದ್ಯಾ ಎಂದು ಅರಚುತ್ತಾನೆ. ಅವನನ್ನು ನೋಡಿ ಎಲ್ಲರೂ ಗಾಬರಿಯಿಂದ ಓಡಿ ಬರುತ್ತಾರೆ. ರತ್ನ ತನ್ನ ಗಂಡನನ್ನು ಎಚ್ಚರಿಸುತ್ತಾಳೆ. ತಾನು ಕಾಣುತ್ತಿರುವುದು ಕನಸು ಎಂದು ತಿಳಿದು ಚೆಲುವ ನಿಟ್ಟುಸಿರು ಬಿಡುತ್ತಾನೆ. ಎದುರು ನಿಂತಿದ್ದ ಮಗಳನ್ನು ನೋಡಿ, ಮಗಳೇ ನಿನಗೇನೂ ತೊಂದರೆ ಆಗಿಲ್ಲ ತಾನೇ ಎನ್ನುತ್ತಾನೆ. ಈ ರೀತಿ ಏಕೆ ವರ್ತಿಸುತ್ತಿದ್ದೀಯ ಎಂದು ರತ್ನ ಕೇಳುತ್ತಾಳೆ. ವಿದ್ಯಾಳೇ ಪೊಲೀಸರಿಗೆ ಪೋನ್ ಮಾಡಿದ್ದು ಎಂದು ತಿಳಿದು ಸಿಟ್ಟಿನಿಂದ ವಿದ್ಯಾಳನ್ನು ಕೊಲ್ಲುತ್ತಿರುವಂತೆ ಕನಸು ಕಂಡೆ ಎಂದು ಚೆಲುವ ಹೇಳುತ್ತಾನೆ. ನೀನೂ ಹೆದರಿಕೊಂಡು ನಮ್ಮನ್ನೂ ಹೆದರಿಸಬೇಡ ಎಂದು ರತ್ನ ಹೇಳುತ್ತಾಳೆ.
ಮಗಳೇ ನಾನು ಇರುವವರೆಗೂ ನಿನಗೆ ಏನೂ ಸಮಸ್ಯೆ ಆಗುವುದಿಲ್ಲ, ನೀನು ಹೆದರಬೇಡ. ನೀನೇ ಪೊಲೀಸರಿಗೆ ಪೋನ್ ಮಾಡಿದ್ದು ಎಂಬ ವಿಚಾರವನ್ನು ನಾನು ಹೊರಗೆ ಬರದಂತೆ ನೋಡಿಕೊಳ್ಳುತ್ತೇನೆ ಎಂದು ಮಗಳಿಗೆ ಚೆಲುವ ಧೈರ್ಯ ಹೇಳುತ್ತಾನೆ. ಅಪ್ಪ ಕುಡುಕ ಆದರೂ, ಹಣದ ವ್ಯಾಮೋಹ ಇದ್ದರೂ ನನ್ನ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಎಂಬುದು ವಿದ್ಯಾಗೆ ಅರ್ಥವಾಗಿ ಭಾವುಕಳಾಗುತ್ತಾಳೆ. ಚೆಲುವ ತನ್ನ ಪರಿಚಯಸ್ಥ ಕಾನ್ಸ್‌ಟೇಬಲ್ ನಾರಾಯಣಪ್ಪನಿಗೆ ಕರೆ ಮಾಡಿ ದಯವಿಟ್ಟು ನನ್ನ ಮಗಳು ನಿನಗೆ ಕರೆ ಮಾಡಿದ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಮನವಿ ಮಾಡುತ್ತಾನೆ. ನೀನು ಅದರ ಬಗ್ಗೆ ಚಿಂತೆ ಮಾಡಬೇಡ, ನಾನು ಈ ವಿಚಾರವನ್ನು ಯಾರಿಗೂ ಹೇಳುವುದಿಲ್ಲ. ನೀನು ಧೈರ್ಯವಾಗಿ ಮದುವೆ ಕೆಲಸ ನೋಡಿಕೋ ಎಂದು ಆತ ಧೈರ್ಯ ತುಂಬುತ್ತಾರೆ. ನಾನು ಯಾರಿಗೂ ಹೇಳಿಲ್ಲ ಎಂದು ಇವರು ಹೇಳುತ್ತಿದ್ದಾರೆ, ಅಲ್ಲಿ ಅಳಿಯಂದಿರು ನಿಜ ಗೊತ್ತಾಗಿದೆ ಎನ್ನುತ್ತಿದ್ದಾರೆ, ನನಗೆ ಏನೂ ಅರ್ಥವಾಗುತ್ತಿಲ್ಲವಲ್ಲ ಎಂದು ಚೆಲುವ ಗೊಂದಲಕ್ಕೆ ಒಳಗಾಗುತ್ತಾನೆ.
ಇತ್ತ ಭದ್ರ ಹಾಗೂ ಕ್ವಾಟ್ಲೆ ತಮಗೆ ದೊರೆತ ಮಾಹಿತಿ ಆಧಾರದ ಮೇರೆಗೆ ಆ ವಿಳಾಸದಲ್ಲಿದ್ದ ವ್ಯಕ್ತಿಯನ್ನು ಹುಡುಕಿ ಬರುತ್ತಾರೆ. ಒಂದು ಅಂಗಡಿ ಮುಂದೆ ಇಬ್ಬರೂ ಕೂರುತ್ತಾರೆ. ಅಷ್ಟರಲ್ಲಿ ಲೋಕೇಶ ಎಂಬಾತ ಅಲ್ಲಿಗೆ ಬಂದು ಕಬ್ಬಿನ ಜ್ಯೂಸ್ ಆರ್ಡರ್ ಮಾಡುತ್ತಾನೆ. ಲೋಕೇಶನ ಲೆಕ್ಕದಲ್ಲಿ ನಮಗೂ ಎರಡು ಕಬ್ಬಿನ ಜ್ಯೂಸ್ ಕೊಡಿ ಎಂದು ಕ್ವಾಟ್ಲೆ ಹೇಳುತ್ತಾನೆ. ನೀವು ಯಾರೆಂದು ನನಗೆ ಗೊತ್ತಿಲ್ಲ, ಆದರೂ ನಾನು ನಿಮಗೆ ಜ್ಯೂಸ್ ಏಕೆ ಕೊಡಿಸಬೇಕು ಎಂದು ಲೋಕೇಶ ಕೇಳುತ್ತಾನೆ. ನಾವು ಯಾರು ಎಂದು ಗೊತ್ತಿಲ್ಲದ ಮೇಲೆ ನೀನು ನನ್ನ ಮದುವೆ ಏಕೆ ನಿಲ್ಲಿಸಿದೆ ಎಂದು ಭದ್ರ ಕೇಳುತ್ತಾನೆ. ಅವನ ಮಾತು ಕೇಳಿ ಲೋಕೇಶ ಏನೂ ಅರ್ಥವಾಗದವನಂತೆ ವರ್ತಿಸುತ್ತಾನೆ. 6 ತಿಂಗಳ ಹಿಂದೆ ನೀನು ಪೊಲೀಸರಿಗೆ ಫೋನ್ ಮಾಡಿ ನನ್ನ ಮದುವೆ ನಿಲ್ಲಿಸಿದೆ, ಜೊತೆಗೆ ನನ್ನ ಅಪ್ಪ ಜೈಲಿಗೆ ಹೋಗುವಂತೆ ಮಾಡಿದೆ ಎಂದು ನೆನಪಿಸುತ್ತಾನೆ. ಆಗ ಲೋಕೇಶನಿಗೆ ಎಲ್ಲವೂ ಅರ್ಥವಾಗುತ್ತದೆ.
ಲೋಕೇಶನನ್ನು ನೋಡುತ್ತಲೇ ಶಾಕ್ ಆದ ವಿನಂತಿ
ಲೋಕೇಶ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕ್ವಾಟ್ಲೆ ಹಾಗೂ ಭದ್ರ ಅವನನ್ನು ಹಿಡಿದು ನಿಜ ಹೇಳುವಂತೆ ಹೊಡೆಯುತ್ತಾರೆ. ಈ ಅಡ್ರೆಸ್ ಮಾತ್ರ ನಂದು ಆದರೆ ನಿಜಕ್ಕೂ ಫೋನ್ ಮಾಡಿದ್ದು ನಾನಲ್ಲ, ನನ್ನ ಬಳಿ ಫೋನ್ ಪಡೆದು ಒಂದು ಹುಡುಗಿ ಯಾರಿಗೂ ಕರೆ ಮಾಡಿದಳು ಎಂದು ಲೋಕೇಶ ಹೇಳುತ್ತಾನೆ. ಆ ವಿಚಾರವನ್ನು ಅಪ್ಪನಿಗೆ ಹೇಳಲು ಭದ್ರ ಕರೆ ಮಾಡುತ್ತಾನೆ. ಪೊಲೀಸರಿಗೆ ಫೋನ್ ಮಾಡಿದ್ದು ಹುಡುಗಿನಾ ಎಂದು ಶಿವರಾಮೇಗೌಡ ಅರಚುತ್ತಾನೆ. ಅದನ್ನು ಕೇಳುತ್ತಿದ್ದಂತೆ ವಿನಂತಿ ಗಾಬರಿ ಆಗಿ ರೂಮ್ ಒಳಗೆ ಹೋಗುತ್ತಾಳೆ. ಸಾವಿತ್ರಿ ಕೂಡಾ ಮಗಳ ಹಿಂದೆ ಹೋಗುತ್ತಾಳೆ. ಅವಳನ್ನೇ ಗಮನಿಸುತ್ತಿದ್ದ ಈಶ್ವರಿ ಏನೋ ವಿಷಯ ಇದೆ ಇದನ್ನು ತಿಳಿದುಕೊಳ್ಳಲೇಬೇಕು ಎಂದು ಅವರಿಬ್ಬರನ್ನೂ ಹಿಂಬಾಲಿಸುತ್ತಾಳೆ.
ಆ ದಿನ ನಿನ್ನ ಜೊತೆ ಜಗಳ ಮಾಡಿಕೊಂಡು ನಾನು ಮನೆ ಕಡೆ ಹೋಗುತ್ತಿದ್ದೆ, ಅಷ್ಟರಲ್ಲಿ ವಿದ್ಯಾ ಪ್ರಿನ್ಸಿಪಲ್ ಅವಳಿಗೆ ಇನ್ನೂ 18 ವರ್ಷ ತುಂಬಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು. ಅದನ್ನು ಕೇಳಿ ಈ ಮದುವೆ ನಿಲ್ಲಿಸಲು ಅಲ್ಲಿದ್ದ ವ್ಯಕ್ತಿ ಬಳಿ ಫೋನ್ ಪಡೆದು ಪೊಲೀಸರಿಗೆ ಪೋನ್ ಮಾಡಿದೆ ಎಂದು ವಿನಂತಿ ತನ್ನ ತಾಯಿ ಬಳಿ ಹೇಳಿಕೊಳ್ಳುತ್ತಾಳೆ. ಅದನ್ನು ಕೇಳಿ ಸಾವಿತ್ರಿ ಭಯಗೊಳ್ಳುತ್ತಾಳೆ. ಅಣ್ಣನಿಗೆ ಈ ವಿಚಾರ ಗೊತ್ತಾದರೆ ಏನು ಮಾಡುವನೋ ಎಂಬ ಭಯ ಶುರುವಾಗುತ್ತದೆ. ಇತ್ತ ಭದ್ರನಿಗೆ ವಿನಂತಿ ಮೇಲೆ ಅನುಮಾನ ಶುರುವಾಗುತ್ತದೆ. ಆ ಹುಡುಗಿಯನ್ನು ಮತ್ತೊಮ್ಮೆ ನೋಡಿದರೆ ಕಂಡುಹಿಡಿಯುತ್ತೀಯ ಎಂದು ಕೇಳುತ್ತಾನೆ. ಹೌದು ಎಂದು ಲೋಕೇಶ ಹೇಳುತ್ತಾನೆ. ಭದ್ರ ಕಾರ್ ಡಿಕ್ಕಿಯಲ್ಲಿ ಲೋಕೇಶನನ್ನು ಕೂರಿಸಿಕೊಂಡು ತನ್ನೊಂದಿಗೆ ಮನೆ ಬಳಿ ಕರೆತರುತ್ತಾನೆ. ವಿನಂತಿ ಅವನನ್ನು ನೋಡುತ್ತಲೇ ಗಾಬರಿ ಆಗುತ್ತಾಳೆ.
ವಿನಂತಿಯೇ ತನ್ನ ಬಳಿ ಫೋನ್ ಪಡೆದು ಪೊಲೀಸರಿಗೆ ಫೋನ್ ಮಾಡಿದ್ದು ಎಂಬ ವಿಚಾರವನ್ನು ಲೋಕೇಶ ಹೇಳುತ್ತಾನಾ? ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರಸ್ವತಿ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ
ವಿಭಾಗ