ಮುದ್ದು ಸೊಸೆ: ವಿನಂತಿ, ಸಾವಿತ್ರಿ ಬಳಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಲೋಕೇಶ: ತನ್ನ ದುಡಿಮೆಯಲ್ಲಿ ಮಗಳಿಗೆ ಚಿನ್ನ ಕೊಡಿಸಿದ ಚೆಲುವ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ವಿನಂತಿ, ಸಾವಿತ್ರಿ ಬಳಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಲೋಕೇಶ: ತನ್ನ ದುಡಿಮೆಯಲ್ಲಿ ಮಗಳಿಗೆ ಚಿನ್ನ ಕೊಡಿಸಿದ ಚೆಲುವ

ಮುದ್ದು ಸೊಸೆ: ವಿನಂತಿ, ಸಾವಿತ್ರಿ ಬಳಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಲೋಕೇಶ: ತನ್ನ ದುಡಿಮೆಯಲ್ಲಿ ಮಗಳಿಗೆ ಚಿನ್ನ ಕೊಡಿಸಿದ ಚೆಲುವ

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 38 ನೇ ಸಂಚಿಕೆಯಲ್ಲಿ ವಿನಂತಿ ಹೆಸರು ಹೇಳದೆ ಲೋಕೇಶ ಅವಳನ್ನು ಕಾಪಾಡುತ್ತಾನೆ. ಅದರೆ ಹಣದ ಆಸೆಗೆ ಅವಳಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಾನೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ವಿನಂತಿ, ಸಾವಿತ್ರಿ ಬಳಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಲೋಕೇಶ
ಮುದ್ದು ಸೊಸೆ: ವಿನಂತಿ, ಸಾವಿತ್ರಿ ಬಳಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಲೋಕೇಶ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 38ನೇ ಎಪಿಸೋಡ್‌ ಕಥೆ ಹೀಗಿದೆ. ಪರಿಚಯಸ್ಥ ವ್ಯಕ್ತಿ ಕೊಟ್ಟ ಅಡ್ರೆಸ್‌ ಜಾಡು ಹಿಡಿದ ಭದ್ರ ಹಾಗೂ ಕ್ವಾಟ್ಲೆ ಇಬ್ಬರೂ ಅಂಗಡಿ ಬಳಿ ಲೋಕೇಶನನ್ನು ಹಿಡಿಯುತ್ತಾರೆ. 6 ತಿಂಗಳ ಹಿಂದೆ ನಡೆದ ಘಟನೆಯನ್ನು ಭದ್ರ, ಅವನಿಗೆ ನೆನಪಿಸುತ್ತಾನೆ. ಆ ಮೊಬೈಲ್‌ ನನ್ನದು ಆದರೆ ಕರೆ ಮಾಡಿದ್ದು ನಾನಲ್ಲ ಎಂದು ಆತ ಹೇಳುತ್ತಾನೆ. ಭದ್ರನಿಗೆ ವಿನಂತಿ ಮೇಲೆ ಅನುಮಾನ ಬಂದು ಲೋಕೇಶನನ್ನು ಮನೆ ಬಳಿ ಕರೆತರುತ್ತಾನೆ. ಅವನನ್ನು ನೋಡಿ ವಿನಂತಿ ಗಾಬರಿಯಾಗುತ್ತಾಳೆ. ನಿನ್ನ ಬಳಿ ಮೊಬೈಲ್‌ ಕೇಳಿದ ಹುಡುಗಿ ಇವಳೇನಾ ಹೇಳು ಎಂದು ಭದ್ರ ಕೇಳುತ್ತಾನೆ.

ಭದ್ರನ ಸಿಟ್ಟಿಗೆ ವಿನಂತಿ ಬಲಿಯಾಗುವುದನ್ನು ತಪ್ಪಿಸಿದ ಲೋಕೇಶ

ಸಾವಿತ್ರಿ ಬಳಿ ವಿನಂತಿ ಎಲ್ಲವನ್ನೂ ಹೇಳಿಕೊಳ್ಳುತ್ತಾಳೆ. ಅಮ್ಮ ಮಗಳ ವರ್ತನೆ ನೋಡಿ ಈಶ್ವರಿಗೆ ಅನುಮಾನ ಉಂಟಾಗುತ್ತದೆ. ಆ ದಿನ ನನ್ನಿಂದ ಪೋನ್‌ ಪಡೆದು ಪೊಲೀಸರಿಗೆ ಫೋನ್‌ ಮಾಡಿದ್ದು ವಿನಂತಿ ಎಂದು ಲೋಕೇಶನಿಗೆ ನೆನಪಿದ್ದರೂ ಆ ಹುಡುಗಿ ಇವಳಲ್ಲ ಎಂದು ಭದ್ರನ ಬಳಿ ಸುಳ್ಳು ಹೇಳುತ್ತಾನೆ. ವಿನಂತಿ ಅಲ್ಲ ಎಂದಾದರೆ ಅವಳು ನಿನ್ನನ್ನು ನೋಡಿ ಏಕೆ ಹೆದರಿಕೊಂಡಳು ಎಂದು ಭದ್ರ ಕೇಳುತ್ತಾನೆ. ಅಣ್ಣ ಅದನ್ನು ಅವರ ಬಳಿಯೇ ಕೇಳಬೇಕು ಎಂದು ಲೋಕೇಶ ಹೇಳುತ್ತಾನೆ. ನಿಜ ಹೇಳದಿದ್ದರೆ ನಿನಗೆ ಇನ್ನಷ್ಟು ಗೂಸಾ ಕೊಡುತ್ತೇನೆ ಎಂದು ಭದ್ರ ಗದರುತ್ತಾನೆ. ನಿಮ್ಮ ಭಯಕ್ಕೆ ನಾನು ಈ ಹುಡುಗಿಯೇ ಫೋನ್‌ ಮಾಡಿದ್ದು ಎಂದು ಹೇಳಬೇಕಾ ಅಣ್ಣ ಎಂದು ಲೋಕೇಶ ಕೇಳುತ್ತಾನೆ. ಆತ ತನ್ನ ಹೆಸರು ಹೇಳದಿದ್ದನ್ನು ಗಮನಿಸಿದ ವಿನಂತಿ ಆಶ್ಚರ್ಯಗೊಳ್ಳುತ್ತಾಳೆ. ಸರಿ ನಾಳೆ ನೀನು ಮದುವೆಗೆ ಬಾ, ಅಲ್ಲಿಗೆ ಆ ಹುಡುಗಿ ಖಂಡಿತ ಬಂದಿರುತ್ತಾಳೆ. ಅವಳು ಯಾರು ಅನ್ನೋದನ್ನು ನಾಳೆ ನೀನು ತೋರಿಸಲೇಬೇಕು ಎಂದು ಕ್ವಾಟ್ಲೆ ಹೇಳುತ್ತಾನೆ. ಬರುತ್ತೇನೆ ಎಂದು ಲೋಕೇಶ ಅಲ್ಲಿಂದ ಹೊರಡುತ್ತಾನೆ.

ವಿನಂತಿ ಮೇಲೆ ಅನುಮಾನಗೊಂಡು ಭದ್ರ ಈ ಹುಡುಗನನ್ನು ಇಲ್ಲಿಗೆ ಕರೆತಂದಿರಬಹುದು ಎಂದು ಈಶ್ವರಿ ಅನುಮಾನ ವ್ಯಕ್ತಪಡಿಸುತ್ತಾಳೆ. ಸಾವಿತ್ರಿಯನ್ನು ಹಿತ್ತಲ ಬಳಿ ಕರೆದೊಯ್ದು ಅಮ್ಮ, ಮಗಳು ಏನು ನಡೆಸುತ್ತಿದ್ದೀರ? ಪೊಲೀಸರಿಗೆ ಫೋನ್‌ ಮಾಡಿದ್ದು ವಿನಂತಿ ತಾನೇ ಎಂದು ಕೇಳುತ್ತಾಳೆ. ಆದರೆ ಸಾವಿತ್ರಿ ಮಗಳ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿಯೊಂದಕ್ಕೂ ನೀವು ನಮ್ಮ ಬಗ್ಗೆ ಅನುಮಾನ ಪಡುತ್ತೀರಿ. ಆ ಹುಡುಗನನ್ನು ಡಿಕ್ಕಿಯಲ್ಲಿ ಕುರಿಯಂತೆ ತುಂಬಿಕೊಂಡಿದ್ದನ್ನು ನೋಡಿ ವಿನಂತಿ ಹೆದರಿದ್ದಾಳೆ. ಹಾಗೆಂದ ಮಾತ್ರಕ್ಕೆ ನನ್ನ ಮಗಳೇ ಪೊಲೀಸರಿಗೆ ಫೋನ್‌ ಮಾಡಿದ್ದು ಎಂದು ಹೇಗೆ ಹೇಳುತ್ತೀರ, ಏನು ಮಾಡುವುದು ನನ್ನ ಗಂಡ ಜೊತೆಯಲ್ಲಿದ್ದಿದ್ದರೆ ನಾನು ನಿಮ್ಮೆಲ್ಲರಿಂದ ಈ ಮಾತು ಕೇಳಿಸಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬೇಸರಗೊಂಡವಳಂತೆ ಸಾವಿತ್ರಿ ನಾಟಕ ಮಾಡುತ್ತಾಳೆ.

ಮಗಳನ್ನು ರೂಮ್‌ಗೆ ಕರೆದೊಯ್ಯುವ ಸಾವಿತ್ರಿ, ಪೊಲೀಸರಿಗೆ ಫೋನ್‌ ಮಾಡಿದ್ದು ನೀನೇ ಎಂದು ಹೇಳುತ್ತಿದ್ದೀಯ, ಆದರೆ ಆ ಹುಡುಗ ನೋಡಿದರೆ ನೀನಲ್ಲ ಎನ್ನುತ್ತಿದ್ದಾನೆ? ನನಗೆ ಒಂದೂ ಅರ್ಥವಾಗುತ್ತಿಲ್ಲ ಎನ್ನುತ್ತಾಳೆ. ಬಹುಶ: ಅವನು ನನ್ನನ್ನು ಮರೆತಿರಬೇಕು ಎಂದು ವಿನಂತಿ ಖುಷಿಯಾಗುತ್ತಾಳೆ. ಅಷ್ಟರಲ್ಲಿ ವಿನಂತಿ ಮೊಬೈಲ್‌ಗೆ ಲೋಕೇಶ ಕರೆ ಮಾಡುತ್ತಾನೆ. ನನ್ನ ನಂಬರ್‌ ನಿನಗೆ ಯಾರು ಕೊಟ್ಟಿದ್ದು ಎಂದು ವಿನಂತಿ ಗಾಬರಿ ಆಗುತ್ತಾಳೆ. ಒಂದು ಫೋನ್ ಕಾಲ್‌ ಮಾಡಿದ್ದಕ್ಕೆ ನೀನು ನನಗೆ ಒಂದು ಸಾವಿರ ದುಡ್ಡು ಕೊಟ್ಟಾಗಲೇ ನೀನು ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ನನಗೆ ಅರ್ಥವಾಯ್ತು, ಯಾವುದಕ್ಕೂ ಇರಲಿ ಎಂದು ನಿನ್ನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೆ. ಗೌಡರ ಬಳಿ ನಿಜ ಹೇಳಬಾರದು ಎಂದಾದರೆ ನೀವು ನನಗೆ ಹಣ ಕೊಡಬೇಕು ಎಂದು ಬ್ಲ್ಯಾಕ್‌ಮೇಲ್‌ ಮಾಡುತ್ತಾಳೆ. ಕೊಡುತ್ತೇವೆ ಎಂದು ಸಾವಿತ್ರಿ ಒಪ್ಪಿಕೊಳ್ಳುತ್ತಾಳೆ.

ಮಗಳಿಗೆ ತಾನು ಮಾಡಿಸಿದ ಉಂಗುರ ತೊಡಿಸಿದ ಚೆಲುವ

ಇತ್ತ ವಿದ್ಯಾ ಬಟ್ಟೆಗಳನ್ನು ಪ್ಯಾಕ್‌ ಮಾಡಿಕೊಳ್ಳುತ್ತಾಳೆ. ನಾಳೆಯಿಂದ ಈ ರೂಮ್‌ನಲ್ಲಿ ಒಬ್ಬಳೇ ಇರಬೇಕು ಅನ್ನೋದನ್ನು ನೆನಪಿಸಿಕೊಂಡರೆ ಬೇಸರವಾಗುತ್ತಿದೆ ಎಂದು ಸರಸ್ವತಿ ಹೇಳುತ್ತಾಳೆ. ನೀನು ಚಿಕ್ಕವಳಾದರೂ ಬಹಳ ಜವಾಬ್ದಾರಿಯಿಂದ ಇದ್ದೆ, ನೀನು ಮನೆಯಲ್ಲಿದ್ದಾಗ ನನಗೆ ಬಹಳ ಧೈರ್ಯ ಇತ್ತು, ನಾಳೆ ನಿನ್ನ ಮದುವೆ. ನೀನು ಹೋದರೆ ಮನೆಯಲ್ಲಾ ಖಾಲಿ ಎನಿಸುತ್ತದೆ ಎಂದು ರತ್ನ ಕೂಡಾ ಬೇಸರಗೊಳ್ಳುತ್ತಾಳೆ. ಹೆಣ್ಣಾಗಿ ಹುಟ್ಟಿದ ನಂತರ ಯಾವತ್ತಿದ್ದರೂ ಗಂಡನ ಮನೆಗೆ ಹೋಗಬೇಕು ತಾನೇ, ಗಂಡನ ಮನೆಯಲ್ಲಿ ಹೇಗಿರಬೇಕು ಅನ್ನೋದನ್ನು ಹೇಳಿಕೊಡು ಎಂದು ಕಾಳವ್ವ ಹೇಳುತ್ತಾಳೆ. ಹೌದು ಪ್ರತಿ ಹೆಣ್ಣು ಕೂಡಾ ಗಂಡ, ಮನೆ, ಸಂಸಾರ ಎಂದು ಬದುಕಿದರೆ ಅವಳ ಬದುಕಿಗೆ ಒಂದು ಅರ್ಥ ಎಂದು ರತ್ನ ಹೇಳುತ್ತಾಳೆ. ಒಂದೆಡೆ ಇಷ್ಟವಿಲ್ಲದ ಮದುವೆ, ಮತ್ತೊಂದೆಡೆ ಮನೆಯವರನ್ನು ಬಿಟ್ಟು ಹೋಗಬೇಕೆಂಬ ನೋವಿನಿಂದ ವಿದ್ಯಾ ಕಣ್ಣೀರಿಡುತ್ತಾಳೆ.

ಅಷ್ಟರಲ್ಲಿ ಅಲ್ಲಿಗೆ ಚೆಲುವ ಬರುತ್ತಾನೆ. ಮಗಳನ್ನು ನೋಡಿ ಆತ ಕೂಡಾ ಭಾವುಕನಾಗುತ್ತಾನೆ. ಒಳ್ಳೆ ಮನೆ ಸೇರಿಕೊಳ್ಳುತ್ತೀಯ. ಪ್ರತಿ ತಂದೆಗೂ ಮಗಳು ರಾಣಿಯಂತೆ. ಆದ್ದರಿಂದ ಅವಳು ಹೋದ ಮನೆಯಲ್ಲೂ ಗಂಡನೊಂದಿಗೆ ಚೆನ್ನಾಗಿರಬೇಕು ಎಂದು ಬಯಸುತ್ತಾನೆ. ಆ ದೇವರು ನನ್ನ ಬೇಡಿಕೆಯನ್ನು ಕೇಳಿಸಿಕೊಂಡು ವರ ಕೊಟ್ಟಿದ್ದಾನೆ. ನಿನ್ನಿಂದ ನಮ್ಮ ದರಿದ್ರ ಬದುಕಿಗೆ ಮುಕ್ತಿ ಸಿಗುತ್ತಿದೆ. ಇನ್ಮುಂದೆ ನೀನು ಮಾತ್ರವಲ್ಲ ನಾವೆಲ್ಲರೂ ನೆಮ್ಮದಿಯಾಗಿರುತ್ತೇವೆ. ಚಿನ್ನದಂಥ ಗಂಡು ಸಿಕ್ಕ ಮಾತ್ರಕ್ಕೆ ಹೆಣ್ಣು ಮಕ್ಕಳಿಗೆ ಚಿನ್ನ ಮಾಡಿಸದಿದ್ದರೆ ಹೆತ್ತವರಿಗೆ ಸಂಕಟ ಆಗುತ್ತದೆ, ಅದಕ್ಕಾಗಿ ನಿನಗಾಗಿ ಪ್ರೀತಿಯಿಂದ ಒಂದು ಚಿಕ್ಕ ಉಡುಗೊರೆ ತಂದಿದ್ದೀನಿ ಎಂದು ಚೆಲುವ ತಾನು ತಂದ ಉಂಗುರವನ್ನು ವಿದ್ಯಾಗೆ ಕೊಡುತ್ತಾನೆ. ಇದನ್ನು ನಾನು ಕೂಡಿಟ್ಟ ದುಡ್ಡಿನಲ್ಲಿ ಮಾಡಿಸಿದ್ದು ಮಗಳೇ ಎಂದು ಚೆಲುವ ಹೇಳುತ್ತಾನೆ. ಆತನ ಮಾತಿಗೆ ಎಲ್ಲರೂ ಭಾವುಕರಾಗುತ್ತಾರೆ. ನಿನ್ನ ಕೈಯಾರೆ ನೀನೇ ಹಾಕು ಅಪ್ಪಯ್ಯ ಎಂದು ವಿದ್ಯಾ ಹೇಳುತ್ತಾಳೆ. ಚೆಲುವ ಮಗಳಿಗೆ ಉಂಗುರ ತೊಡಿಸುತ್ತಾನೆ.

ವಿನಂತಿ, ಸಾವಿತ್ರಿ ಬಳಿ ಒಮ್ಮೆ ಹಣ ಪಡೆದು ಲೋಕೇಶ ಸುಮ್ಮನಾಗುತ್ತಾನಾ? ಈ ಬಾರಿ ಮದುವೆ ನಿಲ್ಲಿಸಲು ವಿನಂತಿ ಬೇರೆ ಏನು ಪ್ಲ್ಯಾನ್‌ ಮಾಡುತ್ತಾಳೆ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರಸ್ವತಿ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in