ಮುದ್ದು ಸೊಸೆ: ವಿದ್ಯಾ ಮನೆಗೆ ಬಂದು ಮದುವೆ ನಿಲ್ಲಿಸುವಂತೆ ರಂಪಾಟ ಮಾಡಿದ ವಿನಂತಿ: ಅತ್ತೆ ಮಗಳಿಗೆ ಎಚ್ಚರಿಕೆ ಕೊಟ್ಟ ಭದ್ರೇಗೌಡ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ವಿದ್ಯಾ ಮನೆಗೆ ಬಂದು ಮದುವೆ ನಿಲ್ಲಿಸುವಂತೆ ರಂಪಾಟ ಮಾಡಿದ ವಿನಂತಿ: ಅತ್ತೆ ಮಗಳಿಗೆ ಎಚ್ಚರಿಕೆ ಕೊಟ್ಟ ಭದ್ರೇಗೌಡ

ಮುದ್ದು ಸೊಸೆ: ವಿದ್ಯಾ ಮನೆಗೆ ಬಂದು ಮದುವೆ ನಿಲ್ಲಿಸುವಂತೆ ರಂಪಾಟ ಮಾಡಿದ ವಿನಂತಿ: ಅತ್ತೆ ಮಗಳಿಗೆ ಎಚ್ಚರಿಕೆ ಕೊಟ್ಟ ಭದ್ರೇಗೌಡ

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 39 ನೇ ಸಂಚಿಕೆಯಲ್ಲಿ ವಿದ್ಯಾ ಮನೆಗೆ ಬರುವ ವಿನಂತಿ ಈ ಮದುವೆ ಬೇಡ ಎಂದು ಹೇಳಿ ಊರು ಬಿಟ್ಟು ಹೋಗುವಂತೆ ವಿದ್ಯಾಗೆ ಧಮ್ಕಿ ಹಾಕುತ್ತಾಳೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ವಿದ್ಯಾ ಮನೆಗೆ ಬಂದು ಮದುವೆ ನಿಲ್ಲಿಸುವಂತೆ ರಂಪಾಟ ಮಾಡಿದ ವಿನಂತಿ
ಮುದ್ದು ಸೊಸೆ: ವಿದ್ಯಾ ಮನೆಗೆ ಬಂದು ಮದುವೆ ನಿಲ್ಲಿಸುವಂತೆ ರಂಪಾಟ ಮಾಡಿದ ವಿನಂತಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 39ನೇ ಎಪಿಸೋಡ್‌ ಕಥೆ ಹೀಗಿದೆ. ತನ್ನ ಬಳಿ ಮೊಬೈಲ್‌ ತೆಗೆದುಕೊಂಡು ಪೊಲೀಸರಿಗೆ ಫೋನ್‌ ಮಾಡಿದ್ದು ವಿನಂತಿ ಎಂದು ನೆನಪಿದ್ದರೂ ಲೋಕೇಶ ಮಾತ್ರ ದುಡ್ಡಿನ ಆಸೆಗೆ ಈ ಹುಡುಗಿ ಅಲ್ಲ ಎನ್ನುತ್ತಾನೆ. ನಂತರ ವಿನಂತಿಗೆ ಕರೆ ಮಾಡಿ ದುಡ್ಡಿಗಾಗಿ ಬೇಡಿಕೆ ಇಡುತ್ತಾನೆ. ಮತ್ತೊಂದೆಡೆ, ಚೆಲುವ ತಾನು ಕೂಡಿಟ್ಟ ಹಣದಲ್ಲಿ ವಿದ್ಯಾಗೆ ಚಿನ್ನದ ಉಂಗುರ ತಂದುಕೊಡುತ್ತಾನೆ. ಅಪ್ಪನ ಪ್ರೀತಿ ಕಂಡು ವಿದ್ಯಾ ಭಾವುಕಳಾಗುತ್ತಾಳೆ.

ಮನೆ ಜವಾಬ್ದಾರಿಯನ್ನು ಮಗನಿಗೆ ಒಪ್ಪಿಸಿದ ಶಿವರಾಮೇಗೌಡ

ಮದುವೆ ಹಿಂದಿನ ದಿನ ಶಿವರಾಮೇಗೌಡ, ಮನೆಯಲ್ಲಿ ಪೂಜೆ ಮಾಡಿ ಎಲ್ಲರಿಗೂ ಆರತಿ ಕೊಡುತ್ತಾನೆ. ತನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಮಗನ ಕೊರಳಿಗೆ ಹಾಕುತ್ತಾನೆ. ಇದೆಲ್ಲಾ ಈಗ ಏಕೆ ಅಪ್ಪಯ್ಯ ಎಂದು ಭದ್ರ ಕೇಳುತ್ತಾನೆ. ನನ್ನ ನಂತರ ಈ ಮನೆಗೆ ನೀನೆ ಉತ್ತರಾಧಿಕಾರಿ, ನಾನು ಮಾಡುತ್ತಿರುವುದು ನಿನ್ನ ಖುಷಿಗಾಗಿ, ನೀನು ನನ್ನ ಹೆಸರು ಉಳಿಸಿಕೊಂಡು ಹೋಗುತ್ತಿದ್ದೀಯ, ನನ್ನ ಎಲ್ಲಾ ಸ್ಥಾನ, ಮಾನವನ್ನು ನಿಭಾಯಿಸಿಕೊಂಡು ಹೋಗುವ ಸಂಕೇತವೇ ಈ ಸರ, ಇನ್ಮುಂದೆ ನೀನೇ ಮನೆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಹೇಳುತ್ತಾನೆ. ನೀನು ಈ ಮನೆಗೆ ರಾಜ ಇದ್ದಂತೆ ನೀನು ಇರುವಾಗ ನನಗೆ ಈ ಜವಾಬ್ದಾರಿ ಬೇಡ ಅಪ್ಪ ಎಂದು ಭದ್ರ ಹೇಳುತ್ತಾನೆ. ಅದನ್ನು ನೋಡಿ ಈಶ್ವರಿ ಸಿಟ್ಟಾಗುತ್ತಾಳೆ. ನೀನು ನನ್ನ ಗಂಡನನ್ನು ಗುಲಾಮನಾಗಿ ಮಾಡಿಕೊಂಡಂತೆ ನಿನ್ನ ಮಗ, ನನ್ನ ಮಗನನ್ನು ಗುಲಾಮನನ್ನಾಗಿ ಮಾಡಿಕೊಳ್ಳಲು ನಾನು ಬಿಡುವುದಿಲ್ಲ, ಎಲ್ಲಾ ಅಧಿಕಾರವನ್ನು ನಾನು ಕಿತ್ತುಕೊಳ್ಳುತ್ತೇನೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ.

ಇತ್ತ ಚೆಲುವ ಬಾಲ ಸುಟ್ಟ ಬೆಕ್ಕಿನಂತೆ ಓಡಾಡುತ್ತಾ ಭದ್ರನ ಪೋನ್‌ಗಾಗಿ ಕಾಯುತ್ತಿರುತ್ತಾನೆ. ಇಷ್ಟು ಹೊತ್ತಾದರೂ ಭದ್ರನಿಂದ ಕರೆ ಬರದಿದ್ದಕ್ಕೆ ತಾನೇ ಅವನಿಗೆ ಕರೆ ಮಾಡುತ್ತಾನೆ. ಹೋದ ಕೆಲಸ ಏನಾಯ್ತು? ಪೋನ್‌ ಮಾಡಿದ್ದು ಯಾರು ಅಂತ ಗೊತ್ತಾಯ್ತಾ ಎಂದು ಕೇಳುತ್ತಾನೆ. ಗೊತ್ತಾಯ್ತು ಮಾವಯ್ಯ, ಕರೆ ಮಾಡಿದ್ದು ಒಂದು ಹುಡುಗಿ, ಆದರೆ ಆ ಹುಡುಗಿ ಯಾರು ಅನ್ನೋದಷ್ಟೇ ಗೊತ್ತಾಗಬೇಕಿದೆ ಅಷ್ಟೇ ಎನ್ನುತ್ತಾನೆ. ಫೋನ್‌ ಮಾಡಿದ್ದು ಹುಡುಗಿ ಎಂದು ಭದ್ರ ಹೇಳುತ್ತಿದ್ದಂತೆ ಚೆಲುನಿಗೆ ಭಯ ಶುರುವಾಗುತ್ತದೆ. ಅ ವಿಚಾರದ ಬಗ್ಗೆ ವಿವರವಾಗಿ ಕೇಳಬೇಕು ಎನ್ನುವಷ್ಟರಲ್ಲಿ ಭದ್ರ ನಾನು ಮತ್ತೆ ಫೋನ್‌ ಮಾಡುತ್ತೇನೆ, ನೀವು ಮದುವೆ ಕೆಲಸದ ಕಡೆ ಗಮನ ಕೊಡಿ ಎಂದು ಹೇಳುತ್ತಾನೆ. ಫೋನ್‌ ಮಾಡಿದ್ದು ಹುಡುಗಿ ಅಂತ ಇವರಿಗೆ ಹೇಗೆ ಗೊತ್ತಾಯ್ತು ಎಂಬ ಯೋಚನೆಯಲ್ಲೇ ಚೆಲುವ ಮದುವೆ ಕೆಲಸ ಮುಂದುವರೆಸುತ್ತಾನೆ.

ಚೆಲುವನ ಮನೆಯವರಿಗೆ ಧಮ್ಕಿ ಹಾಕಿದ ವಿನಂತಿ

ವಿದ್ಯಾ ಮನೆಗೆ ಮದುವೆ ಶಾಸ್ತ್ರ ಮಾಡಲು ನೆರೆಹೊರೆಯವರು ಬರುತ್ತಾರೆ. ವಿದ್ಯಾ ದೇವರಿಗೆ ಕೈ ಮುಗಿದು ಪೂಜೆ ಮಾಡುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ವಿನಂತಿ ಬರುತ್ತಾಳೆ. ಅವಳನ್ನು ನೋಡಿ ಚೆಲುವ ಖುಷಿಯಾಗುತ್ತಾನೆ. ಇವಳು ನಮ್ಮ ಬೀಗರ ಸೋದರ ಸೊಸೆ ಎಂದು ಎಲ್ಲರಿಗೂ ಹೇಳುತ್ತಾನೆ. ಸೋದರ ಸೊಸೆ ಅಲ್ಲ ಸೊಸೆ. ಆಗದಿರುವ ಮದುವೆಗೆ ಇಷ್ಟೆಲ್ಲಾ ಶಾಸ್ತ್ರ ಬೇಕಾ ಎಂದು ಮೊರದಲ್ಲಿದ್ದ ಭತ್ತವನ್ನು ಕಾಲಿನಿಂದ ಒದೆಯುತ್ತಾಳೆ. ರತ್ನ, ಕಾಳವ್ವ ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿದರೂ ವಿನಂತಿ ಯಾರ ಮಾತನ್ನೂ ಕೇಳುವುದಿಲ್ಲ. ನೀನು ಈಗ ಮದುವೆ ಮಾಡಿಕೊಂಡು ನನ್ನ ಮಾವನೊಂದಿಗೆ ಬದುಕಲು ಬರುತ್ತಿದ್ದೀಯ, ಆದರೆ ನಾನು ಆಗಲೇ ಮಾನಸಿಕವಾಗಿ ಅವರೊಂದಿಗೆ ಬದುಕುತ್ತಿದ್ದೇನೆ ಚಿಕ್ಕ ವಯಸ್ಸಿನಿಂದ ಭದ್ರ ಮಾಮನೇ ನನ್ನ ಗಂಡ ಎಂದುಕೊಂಡಿದ್ದೇನೆ, ಅಂತದರಲ್ಲಿ ನಿಮ್ಮ ಮಗಳು, ಭದ್ರ ಮಾಮನನ್ನು ಮದುವೆ ಆಗಲು ನಾನು ಬಿಡುತ್ತೀನಾ ಎಂದು ರಂಪಾಟ ಮಾಡುತ್ತಾಳೆ.

ಭದ್ರನಿಗೆ ಕರೆ ಮಾಡಿ ಚೆಲುವ ಎಲ್ಲಾ ವಿಚಾರವನ್ನು ತಿಳಿಸುತ್ತಾನೆ. ಫೋನಿನಲ್ಲಿ ಮಾತನಾಡು ಎಂದು ವಿನಂತಿಗೆ ಕೊಡುತ್ತಾನೆ. ನೀನು ಅಲ್ಲಿಗೆ ಹೋಗಿ ಈ ರೀತಿ ಮಾಡುತ್ತಿರುವುದು ತಪ್ಪು, ನೀನು ನನ್ನ ಹೆಂಡತಿ ಆಗುವವಳ ಮನೆಗೆ ಹೋಗಿ ಅವರಿಗೆ ಅವಮಾನ ಮಾಡುತ್ತಿದ್ದೀಯ, ನೀನು ಮಾಡಿದ ತಪ್ಪನ್ನು ನೀನೇ ಸರಿ ಮಾಡಬೇಕು, ಅವರಿಗೆಲ್ಲಾ ಕ್ಷಮೆ ಕೇಳಿ ಈಗಲೇ ಅಲ್ಲಿಂದ ಹೊರಟು ಬಾ ಎಂದು ಎಚ್ಚರಿಕೆ ಕೊಡುತ್ತಾನೆ. ವಿನಂತಿ ಕೋಪದಿಂದಲೇ ಎಲ್ಲರಿಗೂ ಕ್ಷಮೆ ಕೇಳಿ ಮನೆಗೆ ಬರುತ್ತಾಳೆ. ನೀನು ನನ್ನ ಅತ್ತೆ ಮಗಳು, ಚಿಕ್ಕಂದಿನಿಂದ ಜೊತೆಗೆ ಬೆಳೆದವಳು ಎಂಬ ಕಾರಣಕ್ಕೆ ಸುಮ್ಮನಿದ್ದೇನೆ, ನಾನು ಮದುವೆ ಎಂದು ಆಗುವುದಾದರೆ ಅದು ವಿದ್ಯಾಳನ್ನೇ, ಯಾವುದೇ ಕಾರಣಕ್ಕೂ ನಿನ್ನನ್ನು ನಾನು ಮದುವೆ ಆಗುವುದಿಲ್ಲ ನೆನಪಿನಲ್ಲಿಟ್ಟುಕೋ ಎಂದು ಭದ್ರ ಎಚ್ಚರಿಕೆ ಕೊಡುತ್ತಾನೆ. ಸಾವಿತ್ರಿ, ಮಗಳನ್ನು ರೂಮ್‌ಗೆ ಕರೆದೊಯ್ದು ಸಮಾಧಾನ ಮಾಡುತ್ತಾಳೆ. ಈ ಮದುವೆಯನ್ನು ಖಂಡಿತ ನಿಲ್ಲಿಸುತ್ತೇನೆ ಎಂದು ಲೋಕೇಶನಿಗೆ ಕರೆ ಮಾಡಿ, ಅವನಿಗೆ ದುಡ್ಡಿನ ಆಸೆ ತೋರಿಸಿ, ವಿನಂತಿ ಮಾಡಿರುವ ತಪ್ಪನ್ನು ವಿದ್ಯಾ ತಲೆಗೆ ಕಟ್ಟಲು ಪ್ರಯತ್ನಿಸುತ್ತಾಳೆ.

ಸಾವಿತ್ರಿ, ವಿನಂತಿ ಈ ಬಾರಿಯೂ ಮದುವೆ ನಿಲ್ಲಿಸಲಿದ್ದಾರಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರಸ್ವತಿ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in