ಮುದ್ದು ಸೊಸೆ: ಸಾಲ ತೀರಿಸಲು ಸಮಯ ಕೊಡುವಂತೆ ಭದ್ರನ ಬಳಿ ವಿದ್ಯಾ ಮನವಿ; ಈಶ್ವರಿ ಡಬಲ್ ಗೇಮ್ ಆಟ ತಿಳಿದು ಸಿಟ್ಟಾದ ಸಾವಿತ್ರಿ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ ಎಪಿಸೋಡ್ 13ರಲ್ಲಿ ಮನೆಯವರ ಬಳಿ ಮಾತನಾಡಿ ಸಾಲ ತೀರಿಸಲು ಸಮಯ ಕೊಡಿಸಿ ಎಂದು ರತ್ನಾ ಹಾಗೂ ವಿದ್ಯಾ ಇಬ್ಬರೂ ಭದ್ರನ ಬಳಿ ಮನವಿ ಮಾಡುತ್ತಾರೆ. (ಬರಹ: ರಕ್ಷಿತಾ)

ಮುದ್ದು ಸೊಸೆ ಧಾರಾವಾಹಿ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 13ನೇ ಎಪಿಸೋಡ್ ಕಥೆ ಹೀಗಿದೆ. ಶಿವರಾಮೇಗೌಡ ತನ್ನ ಕುಟುಂಬದೊಂದಿಗೆ ರಾಜೇಗೌಡನ ಮನೆಗೆ ಹೆಣ್ಣು ನೋಡಲು ಹೋಗುತ್ತಾನೆ. ಸಾವಿತ್ರಿ ಹಾಗೂ ಮಗಳು ವಿನಂತಿ ಮಾತ್ರ ಮನೆಯಲ್ಲೇ ಉಳಿಯುತ್ತಾರೆ. ಅಪ್ಪನ ಮನಸ್ಸಿಗೆ ನೋವಾಗಬಾರದು ಎಂಬ ಕಾರಣಕ್ಕೆ ಭದ್ರ ಅಪ್ಪನ ತೀರ್ಮಾನವೇ ನನ್ನ ತೀರ್ಮಾನ ಎನ್ನುತ್ತಾನೆ. ತನಗಾಗಿ ಮಗ ಪ್ರೀತಿಯನ್ನೇ ತ್ಯಾಗ ಮಾಡುತ್ತಿದ್ದಾನೆ ಎಂಬ ವಿಚಾರ ಶಿವರಾಮೇಗೌಡನಿಗೆ ತಿಳಿಯುತ್ತದೆ. ಮತ್ತೊಂದೆಡೆ, ಮನೆ ಬಳಿ ಬಂದ ರತ್ನಳಿಗೆ ಸಾವಿತ್ರಿ ಬಾಯಿಗೆ ಬಂದಂತೆ ಬೈದು 3 ಲಕ್ಷ ರೂ ವಾಪಸ್ ನೀಡುವಂತೆ ಎಚ್ಚರಿಸುತ್ತಾಳೆ.
ತನ್ನ ಮೇಲೆ ಭದ್ರ ಇಟ್ಟಿರುವ ಪ್ರೀತಿ ತಿಳಿದು ಭಾವುಕನಾದ ಶಿವರಾಮೇಗೌಡ
ಹೆಣ್ಣು ನೋಡಿ ಮನೆಗೆ ವಾಪಸ್ ಬಂದ ನಂತರ ಕ್ವಾಟ್ಲೆ ಹಾಗೂ ಭದ್ರ ಒಂದು ರೂಮ್‌ನಲ್ಲಿ ಕುಳಿತು ಅದೇ ವಿಚಾರವಾಗಿ ಮಾತನಾಡುತ್ತಾರೆ. ವಿದ್ಯಾಳನ್ನು ಅಷ್ಟು ಪ್ರೀತಿಸುವ ನೀನು ಅವಳನ್ನು ಮರೆತು ಅದು ಹೇಗೆ ಈ ಹೆಣ್ಣನ್ನು ಒಪ್ಪಿಕೊಂಡೆ ಎಂದು ಕ್ವಾಟ್ಲೆ ಕೇಳುತ್ತಾನೆ. ನನ್ನ ಅಪ್ಪನಿಗೆ ಈ ಜಿಲ್ಲೆಯಲ್ಲಿ ಒಳ್ಳೆ ಹೆಸರಿದೆ. ದೊಡ್ಡ ದೊಡ್ಡ ಮನುಷ್ಯರೆಲ್ಲಾ ಅಪ್ಪನ ಮುಂದೆ ಕೈ ಕಟ್ಟಿ ನಿಲ್ಲುತ್ತಾರೆ. ಅಂತದರಲ್ಲಿ ನಾನು ಅವರ ಮಾತು ಮೀರಿದರೆ ಅಪ್ಪನ ಮಾತು ಕೇಳದೆ ಮಗ ಪ್ರೀತಿ ಹಿಂದೆ ಹೋದ ಎಂದು ಮಾತನಾಡಿಕೊಳ್ಳುತ್ತಾರೆ. ಇಷ್ಟು ವರ್ಷಗಳ ಕಾಲ ಉಳಿಸಿಕೊಂಡು ಬಂದ ಅವರ ಮರ್ಯಾದೆಯನ್ನು ಕಳೆಯಲು ಇಷ್ಟವಿಲ್ಲ. ನನಗೆ ನನ್ನ ಪ್ರೀತಿಗಿಂತ ಅಪ್ಪಯ್ಯನ ಆಸೆಯೇ ದೊಡ್ಡದು ಎನ್ನುತ್ತಾನೆ. ಮಗ ತನಗಾಗಿ ಮಾಡುತ್ತಿರುವ ತ್ಯಾಗ, ತನ್ನ ಮೇಲೆ ಇಟ್ಟಿರುವ ಗೌರವ ಕಂಡು ಶಿವರಾಮೇಗೌಡ ಭಾವುಕನಾಗುತ್ತಾನೆ. ಈ ವಿಚಾರವನ್ನು ತಮ್ಮ ಹಾಗೂ ಹೆಂಡತಿ ಬಳಿ ಹೇಳುತ್ತಾನೆ.
ರಾತ್ರಿ ಭದ್ರ ತೋಟದ ಬಳಿ ಕುಳಿತಿರುತ್ತಾನೆ. ಅವನನ್ನು ಕ್ವಾಟ್ಲೆ ಹುಡುಕಿ ಬರುತ್ತಾನೆ. ಗಿರಿಯಣ್ಣನ ಮಕ್ಕಳು ಸಿಕ್ಕಿದ್ದರು ಅವರು ನನ್ನ ಬಳಿ ಒಂದು ವಿಚಾರ ಹೇಳಿದರು. ಅದನ್ನು ಕೇಳಿ ನನಗೆ ಬಹಳ ಬೇಸರವಾಯ್ತು, ನಾವು ಹೆಣ್ಣು ನೋಡಲು ಹೋಗಿದ್ದ ಸಮಯದಲ್ಲಿ ವಿದ್ಯಾ ತಾಯಿ ರತ್ನ ನಮ್ಮ ಮನೆ ಬಳಿ ಬಂದಿದ್ದಾರೆ. ಆಗ ನಿಮ್ಮ ಅತ್ತೆ ಸಾವಿತ್ರಿ ಹಾಗೂ ವಿನಂತಿ ಇಬ್ಬರೂ ಅವರಿಗೆ ಬಾಯಿಗೆ ಬಂದಂತೆ ಬೈದು ಅವಮಾನ ಮಾಡಿದ್ದಾರೆ ಎನ್ನುತ್ತಾನೆ. ಅದನ್ನು ಕೇಳಿ ಭದ್ರನಿಗೆ ಬೇಸರವಾಗುತ್ತದೆ. ರತ್ನ ಬಳಿ ಕ್ಷಮೆ ಕೇಳಬೇಕೆಂದು ಭದ್ರ, ಮರುದಿನ ಅವಳ ಮನೆಗೆ ಬರುತ್ತಾನೆ. ಭದ್ರೇಗೌಡ ಇಲ್ಲಿವರೆಗೂ ಬಂದಿರುವುದನ್ನು ನೋಡಿ ರತ್ನ ಖುಷಿಯಾಗುತ್ತಾಳೆ. ಜೊತೆಗೆ ಗಾಬರಿಯೂ ಆಗುತ್ತಾಳೆ.
ಭದ್ರನ ಬಳಿ ಮನವಿ ಮಾಡಿದ ವಿದ್ಯಾ, ರತ್ನ
ನಿಮ್ಮಂಥವರು ನಮ್ಮ ಮನೆ ಬಳಿ ಬರುವುದು ನಮ್ಮ ಸೌಭಾಗ್ಯ, ಆದರೆ ಅದರ ಜೊತೆಗೆ ನನಗೆ ಭಯವೂ ಆಗುತ್ತಿದೆ. ನಿಮ್ಮ ಮನೆಯವರ ಬಳಿ ನಾನು ಪದೇ ಪದೆ ಅವಮಾನ ಮಾಡಿಸಿಕೊಳ್ಳಲು ಆಗುವುದಿಲ್ಲ. ನಾವು ಬಡವರೇ ಇರಬಹುದು, ಆದರೆ ಮಾನ ಮರ್ಯಾದೆಗೆ ಹೆದರುವ ಜನರು. ನಿಮ್ಮನ್ನು ಇಲ್ಲಿ ನೋಡಿದರೆ ನಿಮ್ಮ ಮನೆಯವರು ಬೇರೆ ಏನಾದರೂ ಮಾತನಾಡಿದರೆ ಕಷ್ಟ ನಿಮಗೆ ನಿಜವಾಗಲೂ ನಮಗೆ ಸಹಾಯ ಮಾಡುವ ಮನಸ್ಸಿದ್ದರೆ ನಿಮ್ಮ ಮನೆಯವರ ಜೊತೆ ಮಾತನಾಡಿ ದಯವಿಟ್ಟು ಸಾಲ ತೀರಿಸಲು ಸಮಯ ಕೊಡಿಸಿ ಎಂದು ಮನವಿ ಮಾಡುತ್ತಾಳೆ. ಭದ್ರ ಬೇಸರದಿಂದಲೇ ಅಲ್ಲಿಂದ ಹೊರಡುತ್ತಾಳೆ. ವಿದ್ಯಾ ಶಾಲೆಗೆ ಹೋಗುವಾಗ ಭದ್ರ ಎದುರಾಗುತ್ತಾನೆ. ನಿಮ್ಮ ಸಹಾಯವನ್ನು ನಾನು ಕೊನೆಯವರೆಗೂ ಮರೆಯುವುದಿಲ್ಲ. ಮನೆಯಲ್ಲಿ ಅಮ್ಮ ಒಬ್ಬರೇ ದುಡಿಯುತ್ತಿರುವುದು, ದಯವಿಟ್ಟು ನಿಮ್ಮ ಸಾಲ ತೀರಿಸಲು ನಮಗೆ ಸ್ವಲ್ಪ ಸಮಯ ಕೊಡಿ ಎಂದು ಕೈ ಮುಗಿಯುತ್ತಾಳೆ. ಪ್ರೀತಿಸಿದ ಹುಡುಗಿ ಹೀಗೆ ಮನವಿ ಮಾಡುತ್ತಿರುವುದನ್ನು ಸಹಿಸದ ಭದ್ರ, ಸರಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ.
ಚಿಕ್ಕೇಗೌಡ ಹಾಗೂ ಶಿವರಾಮೇಗೌಡ ಇಬ್ಬರೂ ಭದ್ರನ ಮದುವೆ ಬಗ್ಗೆಯೇ ಮಾತನಾಡಿಕೊಳ್ಳುತ್ತಾರೆ. ಭದ್ರನ ಮದುವೆ ವಿಚಾರವಾಗಿ ನನಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ ಚಿಕ್ಕಪ್ಪ ಎಂದು ಚಿಕ್ಕೇಗೌಡನ ಬಳಿ ಹೇಳಿಕೊಳ್ಳುತ್ತಾನೆ. ಅವರ ಮನೆಯಲ್ಲಿ ಅವರ ಅಪ್ಪನದ್ದೇ ಸಮಸ್ಯೆ ಅದನ್ನು ಬಿಟ್ಟು ರತ್ನ ತನ್ನ ಮಕ್ಕಳನ್ನು ಬಹಳ ಕಷ್ಟಪಟ್ಟು ಬೆಳೆಸಿದ್ದಾಳೆ. ಆ ಮಕ್ಕಳ ಬಗ್ಗೆ ಯಾರೂ ಏನೂ ಮಾತನಾಡುವಂತಿಲ್ಲ ಎನ್ನುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಈಶ್ವರಿ, ನೀವು ಹೆಣ್ಣು ನೋಡಿ ಬಂದ ನಂತರ ಮನೆಯಲ್ಲಿ ಯಾರೂ ಖುಷಿಯಾಗಿಲ್ಲ, ಭದ್ರ ಕೂಡಾ ಬೇಸರದಲ್ಲೇ ಇದ್ದಾನೆ, ಅವನ ಪ್ರೀತಿ, ಖುಷಿ , ಸಂತೋಷ ಎಲ್ಲವೂ ಆ ಹುಡುಗಿಯೇ ಆಗಿದ್ದಾಳೆ. ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ ಭಾವ ಎನ್ನುತ್ತಾಳೆ.
ಈಶ್ವರಿಯನ್ನು ಮನಸ್ಸಿನಲ್ಲೇ ಬೈದುಕೊಂಡ ಸಾವಿತ್ರಿ
ಅಣ್ಣನ ಬಳಿ ಈಶ್ವರಿ ಮಾತನಾಡುವುದನ್ನು ಸಾವಿತ್ರಿ ಕೇಳಿಸಿಕೊಳ್ಳುತ್ತಾಳೆ. ಅವಳು ಒಳಗೆ ಬಂದ ಕೂಡಲೇ ಅಣ್ಣನ ಬಳಿ ಏನು ಮಾತನಾಡುತ್ತಿದ್ದೆ ಅತ್ತಿಗೆ ಎಂದು ಕೇಳುತ್ತಾಳೆ. ನಿನ್ನ ಮಗಳು ವಿನಂತಿ ಹಾಗೂ ಭದ್ರನ ಮದುವೆ ವಿಚಾರವನ್ನೇ ಮಾತನಾಡುತ್ತಿದ್ದೆ, ನನ್ನ ಪ್ರಯತ್ನ ನಾನು ಮಾಡಿದ್ದೇನೆ, ಎಲ್ಲವೂ ಭಾವನ ನಿರ್ಧಾರದ ಮೇಲೆ ನಿಂತಿದೆ ಎಂದು ಈಶ್ವರಿ ನಾಟಕವಾಡುತ್ತಾಳೆ. ಅತ್ತಿಗೆ ಮಾತು ಕೇಳಿ ಸಾವಿತ್ರಿ ಸಿಟ್ಟಾಗುತ್ತಾಳೆ. ಲೇ ಈಶ್ವರಿ ನಿನ್ನ ಮನಸ್ಸಿನಲ್ಲಿ ಎಷ್ಟು ವಿಷ ಇದೆ ಎಂದು ನನಗೆ ಗೊತ್ತು. ಅದು ಗೊತ್ತಿದ್ದೂ ನಾನು ಸುಮ್ಮನಿರುವುದಿಲ್ಲ, ಮುಂದೆ ಏನು ಮಾಡಬೇಕೆಂದು ನನಗೆ ಗೊತ್ತು, ನಾನೇ ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ಮನಸ್ಸಿನಲ್ಲೇ ಸಾವಿತ್ರಿ ಮಾತನಾಡಿಕೊಳ್ಳುತ್ತಾಳೆ.
ವಿದ್ಯಾ ಹಾಗೂ ರತ್ನಾ ಮನವಿ ಮಾಡಿದಂತೆ ಸಾಲದ ವಿಚಾರವಾಗಿ ಭದ್ರ ತನ್ನ ಅಪ್ಪನ ಬಳಿ ಮಾತನಾಡುತ್ತಾನಾ? ಮಗನಿಗಾಗಿ ಶಿವರಾಮೇಗೌಡ ತನ್ನ ಘನತೆ, ಗೌರವವನ್ನು ಬದಿಗೆ ಇಡುತ್ತಾನಾ? ಸಾವಿತ್ರಿ ಮುಂದೇನು ಮಾಡುತ್ತಾಳೆ? ಅಣ್ಣಯ್ಯ ಧಾರಾವಾಹಿ ಮುಂದಿನ ಸಂಚಿಕೆಗಳಲ್ಲಿ ಉತ್ತರ ದೊರೆಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರೂ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ