‘ಗಲಾಟೆ ಮಾಡಲ್ಲ, ಎಲ್ಲ ಟಾಸ್ಕ್ ಮಾಡ್ತೀನಿ, ಬಿಗ್‌ಬಾಸ್‌ಗೆ ಬರಲು ಅವಕಾಶ ಕೊಡಿ ಸುದೀಪ್ ಸರ್’ ಪರಿಪರಿಯಾಗಿ ಬೇಡಿದ ಹುಚ್ಚ ವೆಂಕಟ್ VIDEO
Bigg Boss Kannada season 11: ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಆರಂಭವಾದ ಬೆನ್ನಲ್ಲೇ ಸೀಸನ್ 3ರ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್, ಇದೀಗ ಹೊಸ ವಿಡಿಯೋ ಮೂಲಕ ಆಗಮಿಸಿದ್ದಾರೆ. ಇನ್ನೊಂದು ಚಾನ್ಸ್ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.
Bigg Boss Kannada season 11: ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್‌ಗೆ ಇನ್ನೇನು ಎರಡೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಹಳೇ ಸ್ಪರ್ಧಿಯ ಹೊಸ ವಿಡಿಯೋವೊಂದು ವೈರಲ್ ಆಗಿದೆ. ನಾನು ಮತ್ತೆ ಬಿಗ್‌ಬಾಸ್‌ಗೆ ಬರುವೆ. ನನಗೆ ಇನ್ನೊಂದು ಚಾನ್ಸ್ ಕೊಡಿ ಎಂದು ಅಂಗಲಾಚಿದ್ದಾರೆ. ಅಷ್ಟೇ ಅಲ್ಲ ಶೋ ನಿರೂಪಕ ಕಿಚ್ಚ ಸುದೀಪ್ ಅವರಿಗೂ ಮನವಿ ಮಾಡಿ, ಸರಿಯಾಗಿ ಟಾಸ್ಕ್ ಮಾಡ್ತಿನಿ ಎಂದಿದ್ದಾರೆ. ಅಷ್ಟಕ್ಕೂ ಯಾರವರು ಅಂದ್ರಾ? ಅವರೇ ಹುಚ್ಚ ವೆಂಕಟ್.
ಹುಚ್ಚ ವೆಂಕಟ್ ಕೆಲ ವರ್ಷಗಳ ಹಿಂದೆ ಸಿನಿಮಾ ಮತ್ತು ರಿಯಾಲಿಟಿ ಶೋ ವಿಚಾರಕ್ಕೆ ದೊಡ್ಡ ಸದ್ದು ಮಾಡಿದ್ದರು. 2015ರಲ್ಲಿ ನಡೆದ ಬಿಗ್ ಬಾಸ್ ಸೀಸನ್ 3ರಲ್ಲಿ ಭಾಗವಹಿಸಿ, ಸಹ ಸ್ಪರ್ಧಿ ಮೇಲೆ ಮ್ಯಾನ್ ಹ್ಯಾಂಡಲಿಂಗ್ ಮಾಡಿದ ಆರೋಪದ ಮೇಲೆ ಹುಚ್ಚ ವೆಂಕಟ್ ಅವರನ್ನು ಮನೆಯಿಂದ ನೇರವಾಗಿ ಹೊರಹಾಕಲಾಗಿತ್ತು. ಬಿಗ್ ಬಾಸ್ ಇತಿಹಾಸದಲ್ಲಿಯೇ ನೇರವಾಗಿ ಮನೆಯಿಂದ ಹೊರ ನಡೆದ ಮೊದಲ ಸ್ಪರ್ಧಿ ಅವರಾಗಿದ್ದರು. ಈಗ ಇದೇ ಹುಚ್ಚ ವೆಂಕಟ್ ಮತ್ತೆ ಬಂದಿದ್ದಾರೆ. ವಿಡಿಯೋ ಮೂಲಕ ನಾನು ಮತ್ತೆ ಬಿಗ್‌ಬಾಸ್‌ಗೆ ಬರುವೆ ಎಂದಿದ್ದಾರೆ.
ಶುರುವಾಗಿದೆ ಸೀಸನ್ 11ರ ತಯಾರಿ
ಸೆ. 29ರಿಂದ ಬಿಗ್‌ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ನಡುವೆ ಒಂದಷ್ಟು ಸ್ಪರ್ಧಿಗಳ ಹೆಸರುಗಳೂ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆಯಾದರೂ, ಇನ್ನೂ ಅಧಿಕೃತವಾಗಿಲ್ಲ. ನಾಳೆ ಅಂದರೆ, ರಾಜಾ ರಾಣಿ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಈ ಸಲದ ಬಿಗ್‌ಬಾಸ್‌ಗೆ ಹೋಗುವ ಆಯ್ದ ಕೆಲವರನ್ನು ಬಹಿರಂಗಗೊಳಿಸಲಿದೆ. ಸ್ವರ್ಗ ನರಕ ಪರಿಕಲ್ಪನೆಯೂ ಈ ಸಲದ ಶೋನ ಹೈಲೈಟ್. ಹೀಗಿರುವಾಗಲೇ ಈಗ ಸುದೀಪ್ ಬಳಿ ಮನವಿ ಮಾಡಿದ್ದಾರೆ ಹುಚ್ಚ ವೆಂಕಟ್.
ಹುಚ್ಚ ವೆಂಕಟ್ ವಿಡಿಯೋದಲ್ಲಿ ಏನಿದೆ?
ಈ ಮೇಸೆಜ್ ಕಲರ್ಸ್ ಕನ್ನಡದವರಿಗೆ ಮತ್ತು ಕಿಚ್ಚ ಸುದೀಪ್ ಅವರಿಗೂ ಕೂಡ. ಮತ್ತೆ ಬಿಗ್ ಬಾಸ್ ಮನೆಗೆ ಬರೋದಕ್ಕೆ ನನಗೆ ಒಂದು ಅವಕಾಶವನ್ನು ನೀಡಿ. ಖಂಡಿತಾ ಯಾವುದೇ ಥರದ ಗಲಾಟೆ ಮಾಡಲ್ಲ. ಎಲ್ಲಾ ಟಾಸ್ಕ್‌ಗಳನ್ನು ಮಾಡುತ್ತೇನೆ. ಒಂದು ಅವಕಾಶ ಪ್ಲೀಸ್ ನನಗೆ ಕೊಡಿ. ಒಂದು ದಿನಕ್ಕೆ ಕರೆದರೂ ನಾನು ಬರುತ್ತೇನೆ. ಒಂದು ವಾರ ಅಥವಾ ಇಡೀ ಸೀಸನ್ ಇರಬೇಕು ಎಂದರೂ ನಾನು ಬರ್ತೀನಿ. ಕೊನೆಗೆ ಫಿನಾಲೆಗೆ ಕರೆದರೂ ನಾನು ಬರುತ್ತೇನೆ.
ಒಟ್ಟಿನಲ್ಲಿ ನನ್ನನ್ನು ಕರೆಯಿರಿ. ಏಕೆಂದರೆ ಎಲ್ರೂ ನನ್ನನ್ನು ಬಿಗ್ ಬಾಸ್ ಹುಚ್ಚ ವೆಂಕಟ್.. ಬಿಗ್ ಬಾಸ್ ಹುಚ್ಚ ವೆಂಕಟ್.. ಎಂದು ಕರೀತಿದ್ದಾರೆ. ಬಿಗ್ ಬಾಸ್ ಶುರುವಾಗುವ ಟೈಮ್‌ಗೆ, ನೀವು ಬಿಗ್ ಬಾಸ್‌ಗೆ ಹೋಗಲ್ವಾ?? ನೀವು ಬಿಗ್ ಬಾಸ್‌ಗೆ ಹೋಗಲ್ವಾ ಎಂದು ಕೇಳುತ್ತಿದ್ದಾರೆ. ಸುದೀಪ್ ಅವರೇ, ಇದು ನನ್ನ ಮನವಿ. ಪ್ಲೀಸ್ ನನಗೆ ಒಂದು ಅವಕಾಶ ನೀಡಿ. ನಾನು ಯಾವುದೇ ರೀತಿಯ ಗಲಾಟೆ ಮಾಡಲ್ಲ. ನೀವು ಮನಸ್ಸು ಮಾಡಿದರೆ ಆಗುತ್ತದೆ. ಬೈ ಫ್ರಂ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಮೂರೂರು ರವಿ ಮೇಲೆ ವೆಂಕಟ್ ಹಲ್ಲೆ
ಬಿಗ್ ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಗಾಯಕ ಮತ್ತು ಸಂಗೀತ ನಿರ್ದೇಶಕ ಮೂರೂರು ರವಿ ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದರು. ವಾರದ ಕಥೆ ಕಿಚ್ಚನ ಜತೆ ನಡೆಯುತ್ತಿದ್ದಾಗಲೇ, ಸುದೀಪ್ ಜತೆ ಹುಚ್ಚ ವೆಂಕಟ್ ವರ್ತನೆ ಬಗ್ಗೆ ರವಿ ಮೂರೂರು ಮಾತನಾಡುತ್ತಿದ್ದರು. ಇದೇ ವೇಳೆ ಅಲ್ಲೇ ಇದ್ದ ವೆಂಕಟ್ ರವಿ ಮೇಲೆ ಹಲ್ಲೆ ಮಾಡಿದ್ದರು. ಆ ಕ್ಷಣವೇ ಗಾರ್ಡ್ಸ್‌ಗಳು ಬಂದು ವೆಂಕಟ್ ಅವರನ್ನು ಮನೆಯಿಂದ ಹೊರ ಕಡೆದುಕೊಂಡು ಹೋಗಿದ್ದರು.