ಯಾರೇ ಬಂದರೂ ನಾನೇ ನಂ 1 ಅಂತಿದೆ ಈ ಸೀರಿಯಲ್; ಟಿಆರ್‌ಪಿಯಲ್ಲಿ ಈ ವಾರದ ಟಾಪ್ 10 ಧಾರಾವಾಹಿಗಳಿವು
Kannada Serial TRP Rating: ಕನ್ನಡ ಕಿರುತೆರೆ ಧಾರಾವಾಹಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಟಿಆರ್‌ಪಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಏರಿಳಿತ ಕಂಡು ಬರುತ್ತಿದೆ. ಹಾಗಾದರೆ, ಈ ವಾರದ ಟಿಆರ್‌ಪಿಯಲ್ಲಿ ಟಾಪ್ 10 ಸ್ಥಾನ ಪಡೆದ ಸೀರಿಯಲ್‌ಗಳ ಮಾಹಿತಿ ಇಲ್ಲಿದೆ.
Kannada Serial TRP: ಕನ್ನಡ ಕಿರುತೆರೆಯಲ್ಲೀ ಒಂದಾದ ಮೇಲೊಂದು ಹೊಸ ಧಾರಾವಾಹಿಗಳ ಆಗಮನವಾಗುತ್ತಿದೆ. ಹೀಗಿರುವಾಗ, ಹಳೇ ಧಾರಾವಾಹಿಗಳ ನಡುವೆ ಹೊಸ ಮುಖಗಳು ಕೊಂಚ ಮಂಕಾಗಿವೆ. ಇತ್ತೀಚೆಗೆ ಬಂದ ಬ್ರಹ್ಮಗಂಟು ಧಾರಾವಾಹಿ ಇನ್ನೂ ಟಾಪ್ 10ರ ಪ್ರವೇಶ ಪಡೆದಿಲ್ಲ. ಆದರೆ, ಎರಡೂವರೆ ವರ್ಷದ ಹಿಂದಿನ ಹಳೇ ಸೀರಿಯಲ್ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ. ಇದೆಲ್ಲದರ ಜತೆಗೆ ಈ ವಾರದ ಧಾರಾವಾಹಿಗಳ ಟಿಆರ್‌ಪಿ ಲೆಕ್ಕಾಚಾರ ಏನೇನಾಗಿದೆ ಎಂಬುದನ್ನು ನೋಡೋಣ ಬನ್ನಿ.
ಪುಟ್ಟಕ್ಕನ ಮಕ್ಕಳು
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಯಾರೇ ಬರಲಿ, ಯಾರೇ ಬಿಡಲಿ ನಾನೇ ಮೊದಲು ಅನ್ನೋ ಲೆಕ್ಕದಲ್ಲಿ ಮುಂದೆ ಮುಂದೆಯೇ ಸಾಗುತ್ತಿದೆ. ಅದರಂತೆ ಈ ವಾರವೂ ಈ ಸೀರಿಯಲ್ ಮೊದಲ ಸ್ಥಾನದಲ್ಲಿಯೇ ಇದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈ ವಾರ 8.1 ಟಿಆರ್‌ಪಿ ರೇಟಿಂಗ್ ಪಡೆದುಕೊಂಡಿದೆ.
ಲಕ್ಷ್ಮೀ ನಿವಾಸ
ಜೀ ಕನ್ನಡದ ಮತ್ತೊಂದು ಸೀರಿಯಲ್ ಲಕ್ಷ್ಮೀ ನಿವಾಸ, ಆರಂಭದಿಂದಲೂ ಮೊದಲ ಸ್ಥಾನಕ್ಕೆ ಪೈಪೋಟಿ ನೀಡುತ್ತಲೇ ಬಂದಿದೆ. ಕೆಲವು ಸಲ ಪುಟ್ಟಕ್ಕನಿಗೆ ಟಕ್ಕರ್ ಕೊಟ್ಟಿದ್ದೂ ಉಂಟು. ಇದೀಗ ಇದೇ ಸೀರಿಯಲ್ ಈ ವಾರ ಪುಟ್ಟಕ್ಕನಿಗಿಂತ ತುಂಬ ಇಳಿಕೆ ಕಂಡಿದೆ. 7.4 ಟಿಆರ್‌ಪಿ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ.
ಶ್ರಾವಣಿ ಸುಬ್ರಹ್ಮಣ್ಯ
ಇತ್ತೀಚೆಗಷ್ಟೇ ಶುರುವಾದ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯೂ ನೋಡುಗರ ಗಮನ ಸೆಳೆಯುತ್ತಿದೆ. ಮುಖ್ಯಭೂಮಿಕೆಯಲ್ಲಿ ಹೊಸ ಕಲಾವಿದರಿರುವ ಈ ಧಾರಾವಾಹಿಗೆ ವೀಕ್ಷಕ ಫಿದಾ ಆಗಿದ್ದಾನೆ. ಅದರಂತೆ ಈ ಸೀರಿಯಲ್ ಈ ವಾರ 7.1 ರೇಟಿಂಗ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ.
ಸೀತಾರಾಮ
ಇನ್ನು ಸೀತಾ ರಾಮ ಧಾರಾವಾಹಿಯೂ ಸಹ ಆರಂಭದ ದಿನಗಳಲ್ಲಿ ಟಾಪ್ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಇನ್ನೇನು ಮೊದಲ ಸ್ಥಾನ ಅಲಂಕರಿಸಲಿದೆ ಎನ್ನುತ್ತಿದ್ದಂತೆ, ಕುಸಿತದ ಹಾದಿ ಹಿಡಿಯಿತು. ಇತ್ತೀಚಿನ ದಿನಗಳಲ್ಲಿ ಟಾಪ್ ಐದರಲ್ಲಿ ಕೊನೆಯಲ್ಲಿಯೇ ಹೆಚ್ಚು ಕಾಣಿಸುತ್ತಿದೆ ಈ ಸೀರಿಯಲ್. ಅದರಂತೆ ಈ ವಾರ 6.5 ರೇಟಿಂಗ್ ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ.
ರಾಮಾಚಾರಿ
ಕಲರ್ಸ್ ಕನ್ನಡದ ಟಾಪ್ ಸೀರಿಯಲ್ ರಾಮಾಚಾರಿ ಈ ಸಲ ಒಟ್ಟಾರೆ ಕನ್ನಡ ಕಿರುತೆರೆಯ ಸೀರಿಯಲ್‌ಗಳ ಟಿಆರ್‌ಪಿ ಲೆಕ್ಕಾಚಾರದಲ್ಲಿ ಟಾಪ್ ಐದರಲ್ಲಿ ಸ್ಥಾನ ಪಡೆದಿದೆ. ರಾಮಾಚಾರಿ ಧಾರಾವಾಹಿ 6.1 ಟಿಆರ್‌ಪಿ ಪಡೆದು ಐದನೇ ಪ್ಲೇಸ್‌ನಲ್ಲಿದೆ.
ಲಕ್ಷ್ಮೀ ಬಾರಮ್ಮ
ಇನ್ನು ಕಲರ್ಸ್ ಕನ್ನಡದ ಮತ್ತೊಂದು ಸೀರಿಯಲ್ ಲಕ್ಷ್ಮೀ ಬಾರಮ್ಮ ಸಹ ನೋಡುಗರನ್ನು ಆಕರ್ಷಿಸುತ್ತಿದೆ. ಅದರಂತೆ, ಟಿಆರ್‌ಪಿಯಲ್ಲಿಯೂ ಕಲರ್ಸ್ ಕನ್ನಡದ ಎರಡನೇ ಟಾಪ್ ಸೀರಿಯಲ್ ಎನಿಸಿಕೊಂಡಿದೆ. ಅಂದಹಾಗೆ ಈ ಸೀರಿಯಲ್ ಈ ವಾರ 5.8 ಟಿಆರ್‌ಪಿ ಪಡೆಯುವ ಮೂಲಕ ಆರನೇ ಸ್ಥಾನದಲ್ಲಿದೆ.
ಅಮೃತಧಾರೆ
ಜೀ ಕನ್ನಡದ ಅಮೃತಧಾರೆ ಸೀರಿಯಲ್ ಈ ಮೊದಲು ಟಾಪ್ 5ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿತ್ತು. ಆದರೆ, ಇತ್ತೀಚಿನ ಕೆಲ ವಾರಗಳಿಂದ ಟಾಪ್ 5ರಲ್ಲಿಯೂ ಕಾಣಿಸುತ್ತಿಲ್ಲ. ಧಾರಾವಾಹಿಯಲ್ಲಿನ ಟ್ವಿಸ್ಟ್ ಟರ್ನ್‌ಗಳು ರೋಚಕ ಎನಿಸಿದರೂ, ನೋಡುಗರ ಮಾತ್ರ ಇಳಿಕೆಯಾಗುತ್ತಿದ್ದಾರೆ. ಅಂದಹಾಗೆ ಈ ಧಾರಾವಾಹಿ ಈ ವಾರ 5.4 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.
ಭಾಗ್ಯಲಕ್ಷ್ಮೀ
ಅದೇ ರೀತಿ ಕಲರ್ಸ್ ಕನ್ನಡದ ಇನ್ನೊಂದು ಪ್ರಮುಖ ಸೀರಿಯಲ್ ಎಂದರೆ ಅದು ಭಾಗ್ಯಲಕ್ಷೀ. ದಂಪತಿಯ ಕಿತ್ತಾಟದ ಜತೆಗೆ ಗಂಡನ ಅಹಂ ಇಳಿಸುವ ಈ ಸೀರಿಯಲ್‌ಗೂ ಅಪಾರ ವೀಕ್ಷಕ ಅಭಿಮಾನಿಗಳಿದ್ದಾರೆ. ಈ ಸೀರಿಯಲ್ ಈ 5.3 ರೇಟಿಂಗ್ ಪಡೆದು ಎಂಟನೇ ಸ್ಥಾನದಲ್ಲಿದೆ.
ನಿನಗಾಗಿ
ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಶುರುವಾಗಿರುವ, ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಮುಖ್ಯಭೂಮಿಕೆಯಲ್ಲಿರುವ ನಿನಗಾಗಿ ಧಾರಾವಾಹಿ, ಟಾಪ್ 10ರಲ್ಲಿ ಸ್ಥಾನ ಪಡೆದಿದೆ. ಈ ವಾರ ಈ ಸೀರಿಯಲ್ 5.2 ರೇಟಿಂಗ್ ಪಡೆಯುವ ಮೂಲಕ ಒಂಭತ್ತನೇ ಸ್ಥಾನದಲ್ಲಿದೆ.
ಕರಿಮಣಿ
ಕಲರ್ಸ್ ಕನ್ನಡದ ಮತ್ತೊಂದು ಧಾರಾವಾಹಿ ಕರಿಮಣಿ ಈ ವಾರ ಟಾಪ್ 10ರಲ್ಲಿದೆ. ಈ ಸೀರಿಯಲ್ 5.0 ಟಿಆರ್‌ಪಿ ಪಡೆಯುವ ಮೂಲಕ 10ನೇ ಸ್ಥಾನದಲ್ಲಿದೆ.
ವಿಭಾಗ