Kannada Serial TRP: ಸೀತಾ ರಾಮ ಮದುವೆಗೆ ಹೆಚ್ಚಾಯ್ತು ಟಿಆರ್‌ಪಿ; ಎರಡು ಧಾರಾವಾಹಿಗಳಿಗೆ ಸಿಕ್ತು ಮೊದಲ ಸ್ಥಾನ, ಟಾಪ್ ಯಾರು?
ಕನ್ನಡ ಕಿರುತೆರೆಯಲ್ಲಿ ಈ ವಾರದ ಟಿಆರ್‌ಪಿಯಲ್ಲಿ ಯಾವ ಸೀರಿಯಲ್ ಮೊದಲ ಸ್ಥಾನದಲ್ಲಿದೆ. ಟಾಪ್ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ ಇಲ್ಲಿದೆ ಮಾಹಿತಿ.

Kannada Serial TRP: ಕನ್ನಡ ಕಿರುತೆರೆಯಲ್ಲೀಗ ಹೊಸತನದ ಕಥೆಗಳ ಅಬ್ಬರ ಶುರುವಾಗಿದೆ. ವೀಕ್ಷಕರನ್ನು ಸೆಳೆಯುವ ಸಲುವಾಗಿ ತರಹೇವಾರಿ ಪ್ರಯೋಗಗಳನ್ನು ಮಾಡುತ್ತ, ಟ್ವಿಸ್ಟ್ ಮೇಲೆ ಟ್ವಿಸ್ಟ್ ನೋಡುವ ಕೆಲಸವೂ ಆಗುತ್ತಿದೆ. ಈ ನಡುವೆ ಈ ವಾರದ (ಜುಲೈ 2ನೇ ವಾರದ) ಟಿಆರ್‌ಪಿ ಹೊರಬಿದ್ದಿದೆ. ಆ ಪೈಕಿ ಯಾವೆಲ್ಲ ಸೀರಿಯಲ್‌ಗಳು ಮೊದಲ ಸ್ಥಾನದಲ್ಲಿವೆ ಎಂಬುದನ್ನು ಇಲ್ಲಿ ನೋಡೋಣ.
ಪುಟ್ಟಕ್ಕನ ಮಕ್ಕಳು
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈ ವಾರವೂ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ. ಬಂಗಾರಮ್ಮನ ಜತೆಗೆ ಸಿಂಗಾರಮ್ಮನ ಆಗಮನವಾಗಿದ್ದು, ಕೌತುಕ ದುಪ್ಪಟ್ಟಾಗಿದೆ. ಈ ಸೀರಿಯಲ್ ಶುರುವಾದಾಗಿನಿಂದ ಹೆಚ್ಚು ಸಲ ಮೊದಲ ಸ್ಥಾನವನ್ನೇ ಪಡೆದಿತ್ತು. ಎರಡು ವರ್ಷಗಳ ಮೇಲಾದರೂ ಅಗ್ರಸ್ಥಾನದಲ್ಲಿಯೇ ಮುಂದುವರಿಯುತ್ತಿದೆ. ಈ ವಾರವೂ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ.
ಲಕ್ಷ್ಮೀ ನಿವಾಸ
ಈ ನಡುವೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಟಕ್ಕರ್ ಕೊಟ್ಟ ಮತ್ತೊಂದು ಧಾರಾವಾಹಿ ಎಂದರೆ ಅದು ಲಕ್ಷ್ಮೀ ನಿವಾಸ. ಹಲವು ಕೋನಗಳಲ್ಲಿ ತೆರೆದುಕೊಳ್ಳುವ ಈ ಧಾರಾವಾಹಿ, ನೋಡುಗರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಕೆಲಸ ಕಳೆದುಕೊಂಡ ಶ್ರೀನಿವಾಸನ ಮುಂದಿನ ನಡೆ ಏನು ಎಂಬ ಕುತೂಹಲ ಒಂದೆಡೆಯಾದರೆ, ಭಾವನಾ ಮತ್ತು ಸಿದ್ದೇಗೌಡರ ನಡುವಿನ ತಾಳಿ ಪ್ರಸಂಗವೂ ನೋಡುಗರನ್ನು ಹಿಡಿದಿಟ್ಟುಕೊಂಡಿದೆ. ಈ ಧಾರಾವಾಹಿಯೂ ಪುಟ್ಟಕ್ಕನ ಮಕ್ಕಳು ಸೀರಿಯಲ್ ಜತೆಗೆ ಮೊದಲ ಸ್ಥಾನದಲ್ಲಿದೆ.
ಸೀತಾ ರಾಮ
ಇನ್ನು ಸೀತಾ ರಾಮ ಧಾರಾವಾಹಿಯಲ್ಲೀಗ ಮದುವೆ ಸಂಭ್ರಮ. ಸೀತಾ ಕೊರಳಿಗೆ ರಾಮ ತಾಳಿ ಕಟ್ಟಿದ್ದಾನೆ. ಸಪ್ತಪದಿಯನ್ನೂ ತುಳಿದಿದ್ದಾರೆ. ಇದೇ ವೇಳೆ ಎಂಟನೇ ಪದಿಯಾಗಿ ಸಿಹಿಯೇ ತನ್ನ ಮಗಳೆಂದು ಘೋಷಣೆ ಮಾಡಿದ್ದಾನೆ ರಾಮ. ಸಿಹಿ ರಾಮನನ್ನು ಬಾಯ್ತುಂಬ ಅಪ್ಪ ಎಂದೂ ಕರೆದಿದ್ದಾಳೆ. ಆದರೆ, ಭಾರ್ಗವಿಯ ಸಂಚು ಮಾತ್ರ ಬೇರೆಯದ್ದೇ ಇದೆ. ಹೀಗೆ ಇಡೀ ವಾರ ಮದುವೆ ಸಂಚಿಕೆಗಳನ್ನು ನೋಡುಗರಿಗೆ ಬಡಿಸಿದ ಈ ಸೀರಿಯಲ್ ಎರಡನೇ ಸ್ಥಾನದಲ್ಲಿದೆ.
ಶ್ರಾವಣಿ ಸುಬ್ರಮಣ್ಯ
ಅಪ್ಪ ಅಂದರೆ ಪ್ರಾಣವನ್ನೇ ಕೊಡುವ ಶ್ರಾವಣಿಗೆ ಅದ್ಯಾಕೋ ಒಂದಾದ ಮೇಲೊಂದು ಟ್ವಿಸ್ಟ್ ಸಿಗುತ್ತಿದೆ. ಅಪ್ಪನ ಪ್ರೀತಿ ಸಿಕ್ಕೇ ಬಿಡ್ತು ಎನ್ನುವಷ್ಟರಲ್ಲಿ ಶ್ರಾವಣಿಗೆ ನಿರಾಸೆಯಾಗುತ್ತಿದೆ. ಹೀಗೆ ಮಧ್ಯಮ ವರ್ಗದ ಏಳುಬೀಳಿನ ಜತೆಗೆ ಪ್ರಭಾವಿ ರಾಜಕಾರಣಿಯ ಕುಟುಂಬದ ನಡುವೆ ಬೆಸೆದುಕೊಂಡ ಶ್ರಾವಣಿ ಸುಬ್ಬು ಕಥೆ ನೋಡುಗರಿಂದ ಮೆಚ್ಚುಗೆ ಪಡೆದಿದೆ. ಈ ಸೀರಿಯಲ್ ಈ ವಾರ ಮೂರನೇ ಸ್ಥಾನದಲ್ಲಿದೆ.
ಅಮೃತಧಾರೆ
ಆಷಾಢ ಬಂತು ಎಂಬ ಕಾರಣಕ್ಕೆ ಭೂಮಿಕೆ ತವರು ಮನೆಗೆ ಪ್ರಯಾಣ ಬೆಳೆಸಿದ್ದಾಳೆ. ಪತ್ನಿ ಇಲ್ಲದೇ ರಾತ್ರಿ ಕಳೆಯಲಾದ ಡುಮ್ಮ ಸರ್ ಗೌತಮ್, ನೇರವಾಗಿ ಭೂಮಿಕಾ ಮನೆಗೆ ತೆರಳಿ, ಆಕೆಯನ್ನು ಬಿಟ್ಟಿರಲು ಆಗ್ತಿಲ್ಲ, ಕಳಿಸಿಕೊಡಿ ಎಂದಿದ್ದಾನೆ. ಹೀಗೆ ನವಿರು ಪ್ರೀತಿಯೊಂದಿಗೆ ನೋಡಿಸಿಕೊಂಡು ಹೋಗುತ್ತಿದೆ ಅಮೃತಧಾರೆ ಸೀರಿಯಲ್. ಈ ಧಾರಾವಾಹಿ ಈ ವಾರ ನಾಲ್ಕನೇ ಸ್ಥಾನದಲ್ಲಿದೆ.
ಶ್ರೀರಸ್ತು ಶುಭಮಸ್ತು
ಮಧ್ಯ ವಯಸ್ಕ ಜೋಡಿಯ ಪ್ರೀತಿ, ಒಲುಮೆ, ಮತ್ತವರ ಕುಟುಂಬದ ಕಥೆಯೇ ಶ್ರೀರಸ್ತು ಶುಭಮಸ್ತು. ಸುಧಾರಾಣಿ ಮತ್ತು ಅಜಿತ್ ಹಂದೆ ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿ ಈ ವಾರ ಟಾಪ್ ಐದರಲ್ಲಿದೆ. ಐದನೇ ಸ್ಥಾನ ಪಡೆದುಕೊಂಡು, ನೋಡುಗರಿಗೆ ಇಷ್ಟವಾಗುತ್ತಿದೆ.
ಲಕ್ಷ್ಮೀ ಬಾರಮ್ಮ
ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಸಹ ಅಚ್ಚರಿಗಳ ಗುಚ್ಛವನ್ನೇ ನೋಡುಗರರಿಗೆ ನೀಡುತ್ತಿದೆ. ಈ ಸೀರಿಯಲ್ ಟಿಆರ್‌ಪಿ ಲೆಕ್ಕಾಚಾರದಲ್ಲಿ ಈ ವಾರ ಐದನೇ ಸ್ಥಾನದಲ್ಲಿದೆ.

ವಿಭಾಗ