ಅಣ್ಣಯ್ಯನಿಂದಾಗಿ ಬದಲಾಯ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸಮಯ; ಈ ಬದಲಾವಣೆಯಿಂದ ಕೊನೆಯಾಗುತ್ತಾ ಮತ್ತೊಂದು ಸೀರಿಯಲ್!?
ಅಣ್ಣಯ್ಯ ಸೀರಿಯಲ್ ಆಗಮನದಿಂದ ಒಂದಷ್ಟು ಸೀರಿಯಲ್‌ಗಳ ಸಮಯ ಅದಲು ಬದಲಾಗಿದೆ. ಈ ಮೊದಲು 7:30ಕ್ಕೆ ಪ್ರಸಾರ ಕಾಣುತ್ತಿದ್ದ ಪುಟ್ಟಕ್ಕನ ಮಕ್ಕಳು ಸಮಯದಲ್ಲಿಯೂ ಇದೀಗ ಬದಲಾವಣೆ ಆಗಿದೆ. ಜತೆಗೆ ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಗಿಯುವ ಹಂತಕ್ಕೆ ಬಂದಿದೆ ಎಂದೂ ಹೇಳಲಾಗುತ್ತಿದೆ.
Puttakkana Makkalu serial new timings: ಅಣ್ಣಯ್ಯ ಧಾರಾವಾಹಿ ಬರ್ತಾಯಿದ್ದಂತೆ, ಜೀ ಕನ್ನಡದ ಧಾರಾವಾಹಿಗಳ ಸಮಯದಲ್ಲಿ ಸಾಕಷ್ಟು ಏರಿಳಿತ ಕಂಡು ಬಂದಿದೆ. ಪ್ರೋಮೋ ಮೂಲಕವೇ ಗಮನ ಸೆಳೆದಿದ್ದ ಈ ಸೀರಿಯಲ್, ಯಾವ ಸಮಯಕ್ಕೆ ಬರಲಿದೆ ಎಂಬುದೇ ಎಲ್ಲರ ಯಕ್ಷ ಪ್ರಶ್ನೆಯಾಗಿತ್ತು. ಏಕೆಂದರೆ, ಒಂದು ಹೊಸ ಸೀರಿಯಲ್ ಆಗಮವಾಗ್ತಿದೆ ಎಂದರೆ, ಅಲ್ಲಿ ಇನ್ನೊಂದು ಸೀರಿಯಲ್ ಅಂತ್ಯವಾಗಲೇಬೇಕು. ಈ ನಡುವೆ ರಾತ್ರಿ 8ರಿಂದ 9ರ ವರೆಗೂ ಲಕ್ಷ್ಮೀ ನಿವಾಸ ಪ್ರಸಾರವಾಗ್ತಿತ್ತು. ಆ ಧಾರಾವಾಹಿಯ ಸಮಯ ಅರ್ಧಗಂಟೆಗೆ ಇಳಿಯಬಹುದಾ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಚ್ಚರಿಯ ರೀತಿಯಲ್ಲಿ ಅಣ್ಣಯ್ಯನಿಗೆ 7;30ರ ಸ್ಲಾಟ್‌ಗೆ ಸಿಕ್ಕಿತ್ತು.
ಹಾಗಾದರೆ, 7;30ಕ್ಕೆ ಬರ್ತಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಯಾವ ಸಮಯಕ್ಕೆ? ಈ ಕುತೂಹಲ ಎಲ್ಲರಲ್ಲೂ ಇತ್ತು. ಇನ್ನು ಕೆಲವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯೇ ಅಂತ್ಯವಾಯ್ತು ಎಂದೂ ಮಾತನಾಡಿಕೊಂಡಿದ್ದರು. ಆದರೆ, ಸದ್ಯ ಟಿಆರ್‌ಪಿಯಲ್ಲಿ ನಂ 1 ಸ್ಥಾನದಲ್ಲಿರುವ ಈ ಸೀರಿಯಲ್, ಮುಂದುವರಿಯುವ ಸೂಚನೆ ಸಿಕ್ಕಿದೆ. ಅಂದರೆ, ಇನ್ಮುಂದೆ ಬದಲಾದ ಸಮಯದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರವಾಗಲಿದೆ. ವಾಹಿನಿಯ ಈ ನಿರ್ಧಾರಕ್ಕೆ ಸೀರಿಯಲ್ ಪ್ರಿಯರಿಂದ ಅಸಮಾಧಾನ ಕೇಳಿಬಂದಿದೆ.
ಪುಟ್ಟಕ್ಕನ ಮಕ್ಕಳು ಬರೋದು ಎಷ್ಟೊತ್ತಿಗೆ?
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೀ ಕನ್ನಡ, ಇನ್ಮುಂದೆ ಬದಲಾದ ಸಮಯದಲ್ಲಿ ನಿಮ್ಮ ಮನೆಗೆ ಬರಲಿದ್ದಾರೆ ಪುಟ್ಟಕ್ಕ & ಮಕ್ಕಳು! ಪುಟ್ಟಕ್ಕನ ಮಕ್ಕಳು ಆಗಸ್ಟ್ 12ರಿಂದ ಪ್ರತಿದಿನ ಸಂಜೆ 6:30ಕ್ಕೆ ಎಂದು ಪೋಸ್ಟ್ ಹಂಚಿಕೊಂಡಿದೆ. ಈ ಮೂಲಕ ಒಂದು ಗಂಟೆ ಮುಂಚಿತವಾಗಿ ಈ ಸೀರಿಯಲ್ ನೋಡುಗರಿಗೆ ಸಿಗಲಿದೆ. ಅಣ್ಣಯ್ಯನಿಗಾಗಿ ಪುಟ್ಟಕ್ಕ ತನ್ನ 7;30ರ ಸ್ಲಾಟ್ ಬಿಟ್ಟುಕೊಟ್ಟಿದ್ದಾಳೆ. ಹಾಗಾದರೆ, ಇಲ್ಲಿಯವರೆಗೂ 6:30ಕ್ಕೆ ಪ್ರಸಾರ ಕಾಣುತ್ತಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್ ಕಥೆ ಏನು? ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ವಾಹಿನಿಯಿಂದ ಹೊರಬೀಳಬೇಕಿದೆ.
ಶ್ರೀರಸ್ತು ಶುಭಮಸ್ತು ಮುಗಿಯುತ್ತಾ?
ಕಳೆದ ವಾರವಷ್ಟೇ ತನ್ನ ಕೊನೇ ಸಂಚಿಕೆಗಳನ್ನು ಪ್ರಸಾರ ಮಾಡಿದ್ದ ಭೂಮಿಗೆ ಬಂದ ಭಗವಂತ ಎಲ್ಲರಿಗೂ ಧನ್ಯವಾದ ಹೇಳಿ ಸೀರಿಯಲ್ ಕೊನೆಗಾಣಿಸಿತ್ತು. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ ಪ್ರಸಾರ ಕಾಣುತ್ತಿದ್ದ 6:30ಕ್ಕೆ ಪುಟ್ಟಕ್ಕನ ಮಕ್ಕಳು ಆಗಮನವಾಗ್ತಿರುವುದರಿಂದ, ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಕ್ತಾಯವಾಗಲಿದೆಯೇ ಅಥವಾ ಅದಕ್ಕೂ ಹೊಸದೊಂದು ಸ್ಲಾಟ್ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿಅಣ್ಣಯ್ಯ ಸೀರಿಯಲ್ ಆಗಮನದಿಂದ ಎರಡ್ಮೂರು ಧಾರಾವಾಹಿಗಳಿಗಂತೂ ತುಂಬಾನೇ ಡಿಸ್ಟರ್ಬ್ ಆಗಿದೆ.
ಏನಿದು ಅಣ್ಣಯ್ಯ ಕಥೆ?
ಬಹುತಾರಾಗಣದ ಮತ್ತು ತಂಗಿಯರ ಪ್ರೀತಿಯ ಅಣ್ಣನ ಕಥೆ ಹೇಳಲು ಅಣ್ಣಯ್ಯ ಸೀರಿಯಲ್ ಪ್ರಸಾರ ಆರಂಭಿಸಲಿದೆ. ನಾಲ್ವರು ತಂಗಿಯರ ಮುದ್ದಿನ ಅಣ್ಣ ಶಿವ. ತಂಗಿಯರ ಪಾಲಿಗೆ ಅವನೇ ಶ್ರೀರಕ್ಷೆ. ತನ್ನ ತಂಗಿಯರ ಮೇಲೆ ಕೆಟ್ಟವರ ಕಣ್ಣೂ ಬೀಳದಂತೆ ಅವರ ಜತೆ ನಿಂತ ಶಿವನ ಕಥೆಯಿದು. ಈ ಶಿವನಿಗೆ ಪಾರ್ವತಿಯೂ ಇರಬೇಕಲ್ಲವೇ? ಆ ಪಾರ್ವತಿ ಯಾರು ಎಂಬ ಕುತೂಹಲಕ್ಕೂ ತೆರೆಬಿದ್ದಿದ್ದು, ಪಾರ್ವತಿಯ ಪಾತ್ರ ಹೇಗಿರಲಿದೆ? ಅಣ್ಣಯ್ಯನಿಗೂ ಪಾರ್ವತಿಗೂ ಇರುವ ಸಂಬಂಧ ಎಂಥದ್ದು ಎಂಬುದನ್ನು ಹೊಸ ಪ್ರೋಮೋ ಮೂಲಕ ಅನಾವರಣ ಮಾಡಲಾಗಿತ್ತು. ಕಳೆದ ವರ್ಷವೇ ಗಟ್ಟಿಮೇಳ ಸೀರಿಯಲ್ ಮುಕ್ತಾಯವಾಗಿತ್ತು. ಆ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ನಿಶಾ ರವಿಕೃಷ್ಣನ್ ಇದೀಗ ಅಣ್ಣಯ್ಯ ಸೀರಿಯಲ್ ಮೂಲಕ ಆಗಮಿಸುತ್ತಿದ್ದಾರೆ. ಕಿರುತೆರೆಯಲ್ಲಿ ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಹೊಂದಿರುವ ನಿಶಾ, ಪಾರ್ವತಿಯ ಪಾತ್ರದಲ್ಲಿ ವೈದ್ಯೆಯಾಗಿ ಕಾಣಿಸಿಕೊಂಡಿದ್ದಾರೆ.
ವಿಭಾಗ