ಶ್ರೀಗೌರಿ ಸೀರಿಯಲ್‌ ವಿಲನ್‌ ಈಗ ಸಿನಿಮಾ ಹೀರೋ; ರಾಯಲ್ ಚಂಡೆ ಹುಡುಗ್ರ ಪೀಟರ್‌ ಚಿತ್ರಕ್ಕೆ ವಿಜಯ್‌ ಸೇತುಪತಿ, ಡಾಲಿ ಧನಂಜಯ್‌ ಬಲ!
ಕನ್ನಡ ಸುದ್ದಿ  /  ಮನರಂಜನೆ  /  ಶ್ರೀಗೌರಿ ಸೀರಿಯಲ್‌ ವಿಲನ್‌ ಈಗ ಸಿನಿಮಾ ಹೀರೋ; ರಾಯಲ್ ಚಂಡೆ ಹುಡುಗ್ರ ಪೀಟರ್‌ ಚಿತ್ರಕ್ಕೆ ವಿಜಯ್‌ ಸೇತುಪತಿ, ಡಾಲಿ ಧನಂಜಯ್‌ ಬಲ!

ಶ್ರೀಗೌರಿ ಸೀರಿಯಲ್‌ ವಿಲನ್‌ ಈಗ ಸಿನಿಮಾ ಹೀರೋ; ರಾಯಲ್ ಚಂಡೆ ಹುಡುಗ್ರ ಪೀಟರ್‌ ಚಿತ್ರಕ್ಕೆ ವಿಜಯ್‌ ಸೇತುಪತಿ, ಡಾಲಿ ಧನಂಜಯ್‌ ಬಲ!

Shreegowri Serial Rajesh Dhruva: ಸುಕೇಶ್ ಶೆಟ್ಟಿ ನಿರ್ದೇಶನದ, ಶ್ರೀಗೌರಿ ಸೀರಿಯಲ್‌ ನಟ ರಾಜೇಶ್‌ ಧ್ರುವ ನಟನೆಯ 'ಪೀಟರ್' ಸಿನಿಮಾ ಘೋಷಣೆ ಆಗಿದೆ. ಪೀಟರ್ ಟೈಟಲ್ ಅನ್ನು ನಟರಾಕ್ಷಸ ಡಾಲಿ ಧನಂಜಯ್ ಹಾಗೂ ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ಪೀಟರ್‌ ಚಿತ್ರದ ಶೀರ್ಷಿಕೆ ಪೋಸ್ಟರ್‌ ಅನಾವರಣ
ಪೀಟರ್‌ ಚಿತ್ರದ ಶೀರ್ಷಿಕೆ ಪೋಸ್ಟರ್‌ ಅನಾವರಣ

Peter Kannada Movie: ಸದ್ಯ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ ನಟ ರಾಜೇಶ್‌ ಧ್ರುವ. ಈಗಾಗಲೇ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀಗೌರಿ ಸೀರಿಯಲ್‌ನಲ್ಲಿ ವಿಲನ್‌ ಆಗಿ ನಟಿಸುತ್ತಿದ್ದಾರೆ. ಇದೀಗ ಅದರ ಜತೆಗೆ ಮತ್ತೆ ಸಿನಿಮಾದತ್ತ ಮುಖಮಾಡಿದ್ದಾರೆ. ಅದೂ ನಾಯಕ ನಟನಾಗಿ ಎಂಬುದು ವಿಶೇಷ. ಹಾಗಾದರೆ, ರಾಜೇಶ್‌ ಶ್ರುವ ನಾಯಕನಾಗಿ ನಟಿಸುತ್ತಿರುವ ಸಿನಿಮಾ ನಿರ್ದೇಶನ ಮಾಡುವವರು ಯಾರು, ಚಿತ್ರದಲ್ಲಿ ಯಾರೆಲ್ಲ‌ ನಟಿಸುತ್ತಿದ್ದಾರೆ, ತಾಂತ್ರಿಕ ವರ್ಗದ ಮಾಹಿತಿ ಇಲ್ಲಿದೆ.

ದೂರದರ್ಶನ ಸಿನಿಮಾ ಮೂಲಕ ಗಟ್ಟಿ ಕಥೆ ಹೇಳಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಎರಡನೇ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಮತ್ತೊಂದು ಫ್ರೆಶ್ ಕಥಾಹಂದರವನ್ನು ಪ್ರೇಕ್ಷಕರಿಗೆ ಹರವಿಡಲು ಹೊರಟಿದ್ದಾರೆ. ಅದರ ಮೊದಲ ಭಾಗವೆಂಬಂತೆ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಭಾರತೀಯ ಚಿತ್ರರಂಗದ ದಿಗ್ಗಜ ನಟರಿಬ್ಬರು ಸುಕೇಶ್ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.

ಸುಕೇಶ್ ಶೆಟ್ಟಿ 'ಪೀಟರ್' ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಪೀಟರ್ ಟೈಟಲ್ ಅನ್ನು ಕನ್ನಡ ಚಿತ್ರರಂಗದ ನಟರಾಕ್ಷಸ ಡಾಲಿ ಧನಂಜಯ್ ಹಾಗೂ ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಪೀಟರ್ ಟೈಟಲ್ ಪೋಸ್ಟರ್ ಬಹಳ ಆಕರ್ಷಕವಾಗಿದೆ. ರಾಯಲ್ ಚಂಡೆ ಹುಡುಗರು, ಜೆಸ್ಸಿ ವಾಪಸ್ ಬಂದಿದ್ದಾಳೆ ಎಂಬ ಬರಹಗಳ ಜೊತೆಯಲ್ಲಿ ಯಮಹ ಬೈಕ್, ಹಳೆಯ ಕಬ್ಬಿಣದ ಚೇರ್ ಪೋಸ್ಟರ್‌ನಲ್ಲಿ ಹೈಲೆಟ್ಸ್.

ಚಂಡೆ ಮೇಳವೇ ಹೈಲೇಟ್‌

'ಪೀಟರ್' ಸಿನಿಮಾ ಸೆನ್ಸಿಟಿವ್ ಕ್ರೈಮ್ ಡ್ರಾಮಾ ಕಂಟೆಂಟ್ ಹೊಂದಿದ್ದು, ಅದರಲ್ಲಿಯೂ ಮುಖ್ಯವಾಗಿ ಚೆಂಡೆ ಮೇಳದ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ಪೀಟರ್ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಜಾನಪದ ವಾದ್ಯವಾಗಿರುವ ಚೆಂಡೆ ವಾದ್ಯವನ್ನು ಥಿಯೇಟರ್‌ನಲ್ಲಿ ಎಕ್ಸ್ ಪಿರಿಯನ್ಸ್ ಮಾಡುವುದೇ ಚೆಂದ. ಅದನ್ನು ಪೀಟರ್ ಸಿನಿಮಾದಲ್ಲಿ ನಿರ್ದೇಶಕ ಸುಕೇಶ್ ಹೇಗೆ ಅಳವಡಿಸಲಿದ್ದಾರೆ ಎಂಬ ಕುತೂಹಲವಿದೆ.

ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ?

ಚಿತ್ರದಲ್ಲಿ ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ, ಜಾಹ್ನವಿ ರಾಯಲ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ತಾರಾಬಳಗದಲ್ಲಿದ್ದಾರೆ. ಸದ್ದಿಲ್ಲದೇ ಚಿತ್ರತಂಡ ಈಗಾಗಲೇ 29 ದಿನಗಳ ಶೂಟಿಂಗ್ ಮುಗಿಸಿದೆ‌. ಮಡಿಕೇರಿಯ ಭಾಗಮಂಡಲದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದ್ಧೂರಿ ಸೆಟ್ ಹಾಕಿ‌ ಮಳೆಗಾಲದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಮುಂದಿನ ಉಳಿದ ಚಿತ್ರೀಕರಣಕ್ಕೆ ನಾಯಕ ಮತ್ತು ಇನ್ನೆರಡು ಪಾತ್ರಧಾರಿಗಳು ದೇಹದ ತೂಕ ಕಡಿಮೆ ಮಾಡಿಕೊಳ್ಳೋ ತಯಾರಿಯಲ್ಲಿದ್ದಾರೆ.

ತಾಂತ್ರಿಕ ವರ್ಗ ಹೇಗಿದೆ?

ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಲವ್, ಆಕ್ಷನ್, ಎಮೋಷನ್, ಸೆಂಟಿಮೆಂಟ್ ಎಲ್ಲರದ‌ ಮಿಶ್ರಣ ಪೀಟರ್ ಸಿನಿಮಾದ ಮಗದಷ್ಟು ಅಪ್ ಡೇಟ್ ಅನ್ನು ಚಿತ್ರತಂಡ‌ ಶೀಘ್ರದಲ್ಲೇ ನೀಡಲಿದೆ.

Whats_app_banner