ಕನ್ನಡ ಸುದ್ದಿ  /  Entertainment  /  Television News Udaya Tv Serials Janani Kannada Dharavahi Completes 500 Episodes Janani Team Celebration Mnk

Janani Serial: 500 ಸಂಚಿಕೆಗಳನ್ನು ಪೂರೈಸಿದ ಜನನಿ ಧಾರಾವಾಹಿ; ಕೇಕ್‌ ಕತ್ತರಿಸಿ ಸಂಭ್ರಮಿಸಿದ ಸೀರಿಯಲ್‌ ಬಳಗ

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನನಿ ಸೀರಿಯಲ್‌ ಇದೀಗ 500 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಖುಷಿಯ ಕ್ಷಣವನ್ನು ಕೇಕ್‌ ಕತ್ತರಿಸಿ ಸಂಭ್ರಮಿಸಿದೆ ಇಡೀ ಧಾರಾವಾಹಿ ತಂಡ.

Janani Serial: 500 ಸಂಚಿಕೆಗಳನ್ನು ಪೂರೈಸಿದ ಜನನಿ ಧಾರಾವಾಹಿ; ಕೇಕ್‌ ಕತ್ತರಿಸಿ ಸಂಭ್ರಮಿಸಿದ ಸೀರಿಯಲ್‌ ಬಳಗ
Janani Serial: 500 ಸಂಚಿಕೆಗಳನ್ನು ಪೂರೈಸಿದ ಜನನಿ ಧಾರಾವಾಹಿ; ಕೇಕ್‌ ಕತ್ತರಿಸಿ ಸಂಭ್ರಮಿಸಿದ ಸೀರಿಯಲ್‌ ಬಳಗ

Janani Kannada Serial: ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನನಿ ಧಾರಾವಾಹಿಯು ಇದೀಗ ಹೊಸ ಮೈಲಿಗಲ್ಲು ತಲುಪಿದೆ. ಐನೂರರ ಗಡಿ ದಾಟಿ ಮುನ್ನುಗ್ಗುತ್ತಿದೆ. ತನ್ನ ಅಪ್ಪನ ಆಸೆಯಂತೆ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿ ಸ್ವಾವಲಂಬಿ ಜೀವನವನ್ನು ಕಟ್ಟಿಕೊಂಡು ಸ್ವಾಭಿಮಾನದಿಂದ ಬದುಕಬೇಕು ಅಂತ ಕನಸು ಕಾಣುವ ಹೆಣ್ಣುಮಗಳ ಕಥೆಯೇ ಈ ಜನನಿ.

ಆದರೆ ವಿಧಿಯಾಟದ ಕೈಗೊಂಬೆಯಾಗಿ ತನ್ನ ಕನಸುಗಳಿಗೆ ಬರುವ ಅಡೆತಡೆಗಳನ್ನು ಪುರುಷ ಪ್ರಧಾನ ವ್ಯವಸ್ಥೆಯ ದೌರ್ಜನ್ಯವನ್ನು ಎದುರಿಸಿ ಕಥಾನಾಯಕಿ ಹೇಗೆ ಸಾಧನೆಯ ದಡವನ್ನು ಸೇರುತ್ತಾಳೆ ಎನ್ನುವುದೇ ಜನನಿ ಧಾರಾವಾಹಿಯ ಒಂದೆಳೆ. ಅಪ್ಪನ ಬೆಂಬಲದೊಂದಿಗೆ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸುವ ಜನನಿ, ಅನೀರಿಕ್ಷಿತವಾಗಿ ಮೂರು ಗಂಟುಗಳಿಗೆ ಕೊರಳೊಡ್ಡುವ ಪರಿಸ್ಥಿತಿ ಎದುರಾಗುತ್ತದೆ.

ಮದುವೆಯಾಗಿ ಗಂಡನ ಮನೆಗೆ ಬರುವ ಜನನಿಯ ಜೀವನ ಪ್ರಯಾಣ ಮುಳ್ಳಿನ ಹಾದಿಯಲ್ಲೇ ಆರಂಭಗೊಳ್ಳುತ್ತದೆ. ನಾಲ್ಕು ಜನ ಸಹೋದರರ ಕುಟುಂಬಕ್ಕೆ ಸೊಸೆಯಾಗುವ ಜನನಿಗೆ ತನ್ನ ಗಂಡ ಪೃಥ್ವಿಯ ಹಿರಿಯಣ್ಣ ಧರ್ಮರಾಜನ ಕಪಿಮುಷ್ಠಿಯಲ್ಲಿ ಎಲ್ಲರೂ ಸಿಲುಕಿದ್ದಾರೆ ಎಂಬ ಸತ್ಯ ಆರಂಭದಲ್ಲೇ ಅರ್ಥವಾಗುತ್ತದೆ.

ಗಂಡನ ಮನೆಯಲ್ಲಿ ಎದುರಾಗುವ ಪುರುಷ ಪ್ರಧಾನ ದರ್ಪವನ್ನು ಎದುರಿಸಲು ಪಣ ತೊಡುವ ಜನನಿಗೆ ತನ್ನಂತೆಯೇ ಸುಶಿಕ್ಷಿತ ಸೊಸೆಯಂದಿರು ಜೊತೆಯಾಗಿತ್ತಾರೆ. ಹೆಣ್ಣುಮಕ್ಕಳನ್ನು ಮನೆಗೆಲಸದವರಿಗಿಂತ ಕೀಳಾಗಿ ಕಾಣುವ ಗಂಡಸರ ಮನಸ್ಥಿತಿಗೆ ಸವಾಲೊಡ್ಡುವ ಜನನಿ ಕುಟುಂಬದಲ್ಲಿ ಧರ್ಮರಾಜನ ದೌರ್ಜನ್ಯದ ವಿರುದ್ಧ ದನಿಯೆತ್ತುತ್ತಾಳೆ.

ಕಾಲಾಂತರದಲ್ಲಿ ತನ್ನ ತಪ್ಪುಗಳನ್ನು ಅರ್ಥ ಮಾಡಿಕೊಂಡು ಬದಲಾಗುವ ಪೃಥ್ವಿ, ಜನನಿಯ ಹೋರಾಟಕ್ಕೆ ಜೊತೆಯಾಗುತ್ತಾನೆ. ಜನನಿಯ ಪ್ರಭಾವದಿಂದ ಉಳಿದ ಸೊಸೆಯಂದಿರೂ ಮನೆಯ ಗಂಡಸರ ದಬ್ಬಾಳಿಕೆಯ ವಿರುದ್ಧ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತುತ್ತಾರೆ. ನಿತ್ಯ ಹಲವಾರು ಸಮಸ್ಯೆಗಳನ್ನು ಎದುರಿಸಿ ನಿಲ್ಲುವ ಜನನಿಗೆ ಸದ್ಯ ತನ್ನ ಅಜ್ಜಿಯ ಆಸ್ತಿಯನ್ನು ರಕ್ಷಣೆ ಮಾಡುವ ಜವಾಬ್ದಾರಿ ಹೆಗಲೇರಿದೆ.

ಅಜ್ಜಿಯ ಆಸ್ತಿಯ 40 ಪ್ರತಿಶತ ಭಾಗವನ್ನು ತನ್ನದಾಗಿ ಮಾಡಿಕೊಳ್ಳಲು ಹೊಂಚು ಹಾಕ್ತಿರೋ ಧರ್ಮರಾಜನ ಪ್ರತಿಯೊಂದು ಕುತಂತ್ರವನ್ನು ಜನನಿ ಎದುರಿಸುತ್ತಲೇ ಬಂದಿದ್ದಾಳೆ. ಅಜ್ಜಿಯ ಆಸ್ತಿಗಾಗಿ ನಡೆದಿರೋ ಕುತಂತ್ರಗಳ ಸ್ಫರ್ಧೆಯಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರೋ ಜೀವಾನಂದನ ಹುಡುಕಾಟದಲ್ಲಿರುವ ಜನನಿಗೆ ಸದ್ಯ ನಡೆದಲ್ಲೆಲ್ಲಾ ಮುಳ್ಳಿನ ಹಾದಿ.

ಯಶಸ್ವಿಯಾಗಿ 500 ಸಂಚಿಕೆಗಳನ್ನು ಪೂರೈಸಿರುವ ಜನನಿ ಧಾರಾವಾಹಿಯು ಮಹಿಳಾಮುಖಿ ಕಥಾಹಂದರದೊಂದಿಗೆ ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶವನ್ನು ನೀಡುತ್ತಾ ಕನ್ನಡಿಗರ ಮನೆಮಾತಾಗಿದೆ. ಇನ್ನು 500 ಸಂಚಿಕೆಗಳ ಸಂತಸದಲ್ಲಿರುವ ಜನನಿ ತಂಡ 500ರ ಯಶಸ್ಸನ್ನು ಕೇಕ್‌ ಕತ್ತರಿಸುವುದರ ಮೂಲಕ ಸಂಭ್ರಮಿಸಿತು.

ಧಾರಾವಾಹಿಯ ಯಶಸ್ಸಿಗೆ ಕಾರಣರಾದ ಉದಯ ವಾಹಿನಿಯ ವೀಕ್ಷಕರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿತು. ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ವರ್ಷಿಕಾ ನಾಯಕ್‌, ಮುನಿರಾಜು, ಭವೀಶ್ ಗೌಡ,‌ ಅರುಣ್‌ ಹೆಗಡೆ, ಪುಷ್ಪಾ ಸ್ವಾಮಿ, ಶ್ವೇತಾ, ವರ್ಷಿತಾ ಮುಂತಾದ ಕಲಾವಿದರ ತಾರಾಬಳಗವೇ ಇದೆ. ಹೊನ್ನೇಶ್‌ ರಾಮಚಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜನನಿ ಧಾರಾವಾಹಿಯು ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರಗೊಳ್ಳುತ್ತದೆ.