Seetha Rama Serial: ಹಿಂದಿ ಭಾಷೆಗೂ ರಿಮೇಕ್ ಆಗಲು ಹೊರಟು ನಿಂತ ಸೀತಾ ರಾಮ ಧಾರಾವಾಹಿ; ಹೀಗಿದೆ ಶೀರ್ಷಿಕೆ, ಪಾತ್ರವರ್ಗದ ವಿವರ
ಮರಾಠಿಯ ಮನಸ್ಸುಗಳನ್ನು ಗೆದ್ದು, ಕರುನಾಡ ಮನೆ ಮಂದಿಯ ಗಮನ ಸೆಳೆದ ಸೀತಾ ರಾಮ ಈಗ ಹಿಂದಿಗೂ ಹೊರಟು ನಿಂತಿದೆ. ಮರಾಠಿ, ಕನ್ನಡದ ಬಳಿಕ ಈಗ ಇದೇ ಕಥೆ ಹಿಂದಿಯಲ್ಲಿ ಮೈ ಹೂ ಸಾಥ್ ತೇರೆ ಹೆಸರಲ್ಲಿ ರಿಮೇಕ್ ಆಗುತ್ತಿದೆ. ಹೀಗಿದೆ ಆ ಸೀರಿಯಲ್ ಪ್ರೋಮೋ.
Seetha Rama Serial: ಈಗಾಗಲೇ ಜೀ ಕನ್ನಡದಲ್ಲಿ ಮೋಡಿ ಮಾಡುತ್ತಿರುವ ಸೀತಾ ರಾಮ ಸೀರಿಯಲ್, ಕರುನಾಡ ಮನೆ ಮಂದಿಯ ಗಮನ ಸೆಳೆದಿದೆ. ಮುದ್ದು ಸಿಹಿಯ ಮಾತು, ಸೀತಾಳ ಮುಗ್ಧತೆ, ರಾಮನ ಒಳ್ಳೆಯತನ, ಸ್ನೇಹಕ್ಕೆ ಇನ್ನೊಂದು ಹೆಸರಾಗಿರುವ ಅಶೋಕ ಮತ್ತು ಪ್ರಿಯಾಳ ಪಾತ್ರಗಳು ನೋಡುಗರಿಗೆ ಹತ್ತಿರವಾಗಿವೆ. ಈಗ ಇದೇ ಸೀರಿಯಲ್‌ನಲ್ಲಿ ಪ್ರೇಮಾಯಣಕ್ಕೆ ಶರಾ ಬಿದ್ದಿದೆ. ಸೀತಾ ರಾಮ ಮತ್ತು ಪ್ರಿಯಾ ಅಶೋಕ ಜೋಡಿಗಳೀಗ ಪ್ರೀತಿಯಲ್ಲಿ ಬಿದ್ದಿವೆ. ಇದೀಗ ಇನ್ನೊಂದು ವಿಚಾರ ಏನೆಂದರೆ, ಇದೇ ಸೀರಿಯಲ್ ಹಿಂದಿಗೆ ಈಗ ರಿಮೇಕ್ ಆಗಲು ಹೊರಟಿದೆ.
ಕನ್ನಡದಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ಮುಖ್ಯಮಂತ್ರಿ ಚಂದ್ರು, ಪೂಜಾ ಲೋಕೇಶ್, ರೀತು ಸಿಂಗ್, ಅಶೋಕ್ ಶರ್ಮಾ, ಮೇಘನಾ ಶಂಕರಪ್ಪ ಮುಖ್ಯಭೂಮಿಕೆಯಲ್ಲಿರುವ ಸೀತಾ ರಾಮ ಸೀರಿಯಲ್, ಟಿಆರ್‌ಪಿ ವಿಚಾರದಲ್ಲೂ ಒಳ್ಳೆಯ ಅಂಕಿಯನ್ನೇ ಪಡೆದುಕೊಳ್ಳುತ್ತಿದೆ. ಹೀಗಿರುವ ಈ ಸೀರಿಯಲ್ ಮೇಲಿಗ ಹಿಂದಿ ಕಿರುತೆರೆಯ ಕಣ್ಣೂ ಬಿದ್ದಿದೆ. ಅಂದರೆ, ಸೀತಾ ರಾಮ ಸೀರಿಯಲ್‌ಗೆ ಸಿಗ್ತಿರೋ ಯಶಸ್ಸು ಕಂಡು ಇದೇ ಸೀರಿಯಲ್ ಅನ್ನು ಹಿಂದಿಗೂ ‘ಮೇ ಹೂ ಸಾತ್ ತೇರೆ’ ಹೆಸರಿನಲ್ಲಿ ರಿಮೇಕ್ ಮಾಡಲಾಗುತ್ತಿದೆ.
ಹಿಂದಿ ಪ್ರೋಮೋ ಬಿಡುಗಡೆ
ಹಿಂದಿ ಸೀರಿಯಲ್‌ನಲ್ಲಿ ಕಥೆಯಲ್ಲಿ ಚೂರು ಬದಲಾವಣೆ ಮಾಡಿದೆ. ಕನ್ನಡದಲ್ಲಿ ಐಟಿ ಕಂಪನಿಯ ಉದ್ಯೋಗಿಯಾಗಿ ಸೀತಾ ಕಾಣಿಸಿಕೊಂಡರೆ, ಹಿಂದಿಯಲ್ಲಿ ಉಲ್ಕಾ ಗುಪ್ತ ಕಥಾನಾಯಕಿ. ಆಕೆಗೆ ಗಾಯಕಿ ಆಗಬೇಕೆಂಬ ಕನಸು. ಅದೇ ರೀತಿ ಕನ್ನಡದಲ್ಲಿ ಪುಟಾಣಿಯ ಪಾತ್ರವನ್ನು ರೀತು ಸಿಂಗ್ ಮಾಡಿದರೆ, ಹಿಂದಿಯಲ್ಲಿ ಪುಟಾಣಿ ಪೋರ ನಟಿಸುತ್ತಿದ್ದಾನೆ. ಕರಣ್ ವೋಹ್ರಾ ಕಥಾನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಇಲ್ಲಿಯೂ ಉದ್ಯಮಿಯಾಗಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ, ಕನ್ನಡದ ಪ್ರೋಮೋವನ್ನೇ ಶೂಟ್ ಮಾಡಿದ ಸ್ಥಳದಲ್ಲಿ, ಅದೇ ಕೋನಗಳಲ್ಲಿಯೇ ಚಿತ್ರೀಕರಣ ಮಾಡಿದ್ದು ವಿಶೇಷ. ಅಂದಹಾಗೆ, ಈ ಸೀರಿಯಲ್ ಏಪ್ರಿಲ್‌ನಿಂದ ಪ್ರಸಾರ ಆರಂಭಿಸಲಿದೆ.
ಅಷ್ಟಕ್ಕೂ ಇದು ಮೂಲ ಮರಾಠಿ ಕಥೆ..
ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಸೀರಿಯಲ್, ಮೂಲ ಮರಾಠಿಯ ರಿಮೇಕ್. ‘ಮಜಿ ತುಜಿ ರೆಶಿಮಗತ್’ ಸೀರಿಯಲ್ ಅನ್ನೇ ಕನ್ನಡಕ್ಕೂ ರಿಮೇಕ್ ಮಾಡಲಾಗಿದೆ. ಜೀ ಮರಾಠಿ ವಾಹಿನಿಯಲ್ಲಿ 2021ರಿಂದ 2023 ಆಗಸ್ಟ್ ವರೆಗೂ ಈ ಸೀರಿಯಲ್ ಪ್ರಸಾರ ಕಂಡು ಮೆಚ್ಚುಗೆ ಪಡೆದುಕೊಂಡಿದೆ. ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಮತ್ತು ಪ್ರಾಥನಾ ಬೆಹೆರೆ ನಾಯಕ ನಾಯಕಿಯ ಪಾತ್ರದಲ್ಲಿದ್ದರು. ಅಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸೀರಿಯಲ್ ಕನ್ನಡದಲ್ಲೂ ಮೋಡಿ ಮಾಡುತ್ತಿದೆ. ಹಿಂದಿಗೂ ಹೊರಟು ನಿಂತಿದೆ.
ಕನ್ನಡದಲ್ಲಿ ಕಥೆ ಏನು?
ಈಗಾಗಲೇ ಕನ್ನಡದಲ್ಲಿ ಸಿಂಗಲ್ ಪೇರಂಟ್ ತಾಯಿಯೊಬ್ಬಳ ಬದುಕು ಬವಣೆ, ಆಗರ್ಭ ಶ್ರೀಮಂತ ಯುವಕನ ಒಳ್ಳೆಯತನದ ಸುತ್ತ ಸೀತಾ ರಾಮ ಸೀರಿಯಲ್ ಸುತ್ತಿತ್ತಿದೆ. ತಾನಾಯ್ತು ತನ್ನ ಮಗಳಾಯ್ತು ಎಂದಷ್ಟೇ ಜೀವನ ಸಾಗಿಸುತ್ತಿದ್ದ ಸೀತಾಳ ಬಾಳಲ್ಲಿ ಅಚಾನಕ್ ಆಗಿ ಆಗರ್ಭ ಶ್ರೀಮಂತ ಶ್ರೀರಾಮನ ಎಂಟ್ರಿಯಾಗುತ್ತದೆ. ಆಕೆಯ ಸಲುವಾಗಿ ತಾನು ಬಾಸ್ ಎಂಬುದನ್ನು ಮರೆತು ನಾರ್ಮಲ್ ಎಂಪ್ಲಾಯಿಯಾಗಿ ಕೆಲಸವನ್ನೂ ಮಾಡ್ತಾನೆ. ಹೀಗೆ ಸಾಗಿದ ಕಥೆ ಈಗ ಈ ಜೋಡಿಯ ನಡುವೆ ಪ್ರೀತಿ ಚಿಗುರಿದೆ.