‘ವರ್ತೂರ್ ಸಂತೋಷ್ ರೈತ ಅಲ್ಲ ಡೋಂಗಿ, ಬರೀ ಬಿಲ್ಡಪ್ ತಗೋತಿದಾನೆ’; ಮೋಸ ಹೋದ ಸ್ನೇಹಿತರ ಗಂಭೀರ ಆರೋಪ
ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ವರ್ತೂರ್ ಸಂತೋಷ್ ವಿರುದ್ಧ ಅವರ ಸ್ನೇಹಿತರೇ ತಿರುಗಿಬಿದ್ದಿದ್ದಾರೆ. ಹಣಕಾಸಿನ ವಿಚಾರವಾಗಿ ವಂಚನೆ ಮಾಡಿದ್ದಾರೆಂದು ಆರೋಪಿಸಿ, ವರ್ತೂರ್ ಸಂತೋಷ್ ಅವರ ಅಸಲಿ ಮುಖವನ್ನೂ ಅನಾವರಣ ಮಾಡಿದ್ದಾರೆ.
Varthur Santhosh: ಬಿಗ್‌ಬಾಸ್ ಮೂಲಕ ಹೆಚ್ಚು ಫೇಮಸ್ ಆಗಿರುವ ಹಳ್ಳಿಕಾರ್ ಒಡೆಯ ಎಂದೇ ಕರೆಸಿಕೊಳ್ಳುವ ವರ್ತೂರ್ ಸಂತೋಷ್, ಆಗಾಗ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕಾಂಟ್ರವರ್ಸಿ ವಿಚಾರಕ್ಕೂ ಮುನ್ನೆಲೆಗೆ ಬರುತ್ತಿರುತ್ತಾರೆ. ಇದೀಗ ಇದೇ ವರ್ತೂರು ಸಂತೋಷ್ ವಿರುದ್ಧ ಅವರ ಸ್ನೇಹಿತರೇ ತಿರುಗಿ ಬಿದ್ದಿದ್ದಾರೆ. ರೇಸ್ ನೆಪದಲ್ಲಿ ಹಣಕಾಸಿನ ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ವರ್ತೂರ್ ಸಂತೋಷ್ ರೈತನೇ ಅಲ್ಲ. ಅವನೊಬ್ಬ ಡೋಂಗಿ. ಹಳ್ಳಿಕಾರ್ ಅನ್ನೋ ಬ್ರಾಂಡ್ ಮಾಡಿಕೊಂಡಿದ್ದಾನೆ. 2 ಲಕ್ಷಕ್ಕೆ ಹೋರಿ ತಂದು 5 ಲಕ್ಷಕ್ಕೆ ಮಾರ್ತಿದ್ದಾನೆ. ಹಳ್ಳಿಕಾರನೂ ಅಲ್ಲ, ರೈತನೂ ಅಲ್ಲ. ದುಡ್ಡು ಮಾಡೋಕೆ ನಿಂತಿದ್ದಾನೆ ಎಂದು ಆರೋಪಿಸಿದ್ದಾರೆ ಹೊಸಕೋಟೆಯ ಬೀರೇಶ್ ಮತ್ತವರ ಸ್ನೇಹಿತರು.
ವರ್ತೂರ್ ಸಂತೋಷ್ ವಿರುದ್ಧದ ಆರೋಪಗಳೇನು?
ಈ ಬಗ್ಗೆ ಬೆಂಗಳೂರು ಗ್ರಾಮಾಂತರದ ಹೊಸಕೋಟೆಯ ಬೀರೇಶ್ ಮತ್ತವರ ಸ್ನೇಹಿತರು ಹಣಕಾಸಿನ ವಿಚಾರದಲ್ಲಿ ನಾವು ವಂಚನೆಗೊಳಗಾಗಿದ್ದೇವೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಜನಶಕ್ತಿ ನ್ಯೂಸ್ ಕನ್ನಡ ಯೂಟ್ಯೂಬ್ ಚಾನೆಲ್ ಜತೆಗೆ ಬೀರೇಶ್ ಮಾತನಾಡಿದ್ದಾರೆ. "ವರ್ತೂರು ಸಂತೋಷ್ ನನಗೆ ಹಳೇ ಸ್ನೇಹಿತ ಅಲ್ಲ. ಎರಡು ವರ್ಷಗಳ ಹಿಂದೆ ಪರಿಚಯ ಆಗಿತ್ತು. ಆಗ ಗಣಪತಿ ಫಂಕ್ಷನ್‌ಗೆ ಎತ್ತುಗಳ ಮೆರವಣಿಗೆ ಮಾಡಿದ್ವಿ ಅಲ್ಲಿ ನಮ್ಮ ಅವರ ಮೊದಲ ಮುಖಾಮುಖಿ. ಆಗ ಇಲ್ಲಿ (ಹೊಸಕೋಟೆ) ರೇಸ್ ಮಾಡಬೇಕು, ನಿಮ್ಮೆಲ್ಲ ಸಹಕಾರ ಬೇಕು ಅಂತ ಕೇಳಿದ್ರು. ಅದಕ್ಕೆ ನಾವೂ ಓಕೆ ಅಂದ್ವಿ"
"ರೇಸ್‌ಗೆ ಏನೆಲ್ಲ ಬೇಕೋ.. ಪೊಲೀಸ್ ಸ್ಟೇಷನ್ ಪರ್ಮಿಷನ್, ಫೈರ್ ಇಂಜಿನ್, ಆಸ್ಪತ್ರೆಯ ಪರ್ಮಿಷನ್ ತೆಗೊಂಡು, ನನ್ನ ಹೆಸರಿನಲ್ಲಿಯೇ ದಾಖಲೆ ರೆಡಿ ಮಾಡಿದ್ದೆ. ರೇಸ್‌ಗೆ ಏನೆಲ್ಲ ವ್ಯವಸ್ಥೆ ಬೇಕೋ ಅದೆಲ್ಲವನ್ನೂ ಮಾಡಿಕೊಡ್ತಿವಿ. ನಮ್ಮ ಯಜಮಾನ್ರಿಂದ 10 ಲಕ್ಷ ಹಣ ಕೊಡಿಸಿದ್ದೀನಿ. ನಾನೂ ನನ್ನ ವೈಯಕ್ತಿಕ ಹಣವನ್ನೂ ಖರ್ಚು ಮಾಡಿದ್ದೇನೆ. ಅವ್ನು (ವರ್ತೂರು ಸಂತೋಷ್) ವಿಡಿಯೋದಲ್ಲಿ ಹೇಳ್ತಾನೆ, ಕರೆಂಟ್ ವೈರ್‌ಗೆ 50 ಸಾವಿರ ಕೊಡ್ತೀನಿ ಅಂತಾನೆ. ಆ ಹಣ ನನ್ನ ಖಾತೆಯಿಂದ ಹೋಗುತ್ತೆ. ಬ್ಯಾನರ್‌ಗೆ 60 ಸಾವಿರ ಕೊಡ್ತೀನಿ ಅಂತಾನೆ. ಆಗಲೂ ನಾನೇ ದುಡ್ಡು ಕೊಟ್ಟಿದ್ದು"
"ಇದೆಲ್ಲವನ್ನು ಹೇಳಿ ನಾನು ಹೈಲೈಟ್ ಆಗಬೇಕು ಅಂತ ಬಂದಿಲ್ಲ. ವರ್ತೂರು ಸಂತೋಷ್ ಮಾಡ್ತಿರುವ ಅನಾಚಾರ ಎಲ್ಲರಿಗೂ ಗೊತ್ತಾಗಬೇಕು. ಅವನಿಗೆ ಈಗ ಬಂದಿರುವ ಅಹಂ ಅನ್ನು ಇಳಿಸಬೇಕು. ಅವನು ರೈತ ಅಲ್ಲ. ಅವನ್ನೊಬ್ಬ ಡೋಂಗಿ. ಅದನ್ನು ಹೇಳುವ ಸಲುವಾಗಿಯೇ ನಾನಿಲ್ಲಿ ಬಂದಿದ್ದೇನೆ. ರೇಸ್ ಮಾಡಿದ ಮೇಲೆ ದುಡ್ಡು ಹಾಕ್ತಿನಿ ಅಂದ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ.
ಸತ್ರೆ ಸಾಯಿಲಿ ಅಂದುಬಿಡೋದಾ..
ಇವ್ನು ರೈತ ರೈತ ಅಂತಾನಲ್ಲ, ಇದಕ್ಕೂ ಒಂದು ಸಾಕ್ಷಿ ಇದೆ. ರೇಸ್ ನಡೆಯುವಾಗಲೇ ರೈತರೊಬ್ಬರ ಮೇಲೆ ಬಂಡಿ ಹತ್ತಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೇಸ್ ಕೆಲಸದ ನಡುವೆಯೂ ನಾನೇ ಆಸ್ಪತ್ರೆಗೆ ಹೋಗಿ, ಕಷ್ಟ ಸುಖ ವಿಚಾರಿಸಿ, ಇದರ ಖರ್ಚು ಏನೇ ಬರಲಿ, ನಾನು ನೋಡಿಕೊಳ್ತೆನೆ ಎಂದು ಹೇಳಿ ಬಂದಿದ್ದೆ. ಅದಾದ ಬಳಿಕ ರೇಸ್ ಮುಗಿಯುತ್ತೆ. ಸಂತೋಷ್‌ಗೆ ಪೋನ್ ಮಾಡ್ತಿನಿ. ಬನ್ನಿ ಆಸ್ಪತ್ರೆಗೆ ಹೋಗಿ ಬರೋಣ ಅಂತಿನಿ. ಆಗ ಅವನು ಸತ್ರೆ ಸಾಯಲಿ ಬಿಡಣ್ಣೋ, ಅವನಿಗ್ಯಾರು ಅಡ್ಡ ಬರೋಕೆ ಹೇಳಿದ್ದು ಅಂತಾನೆ. ಆಗಲೇ ನನಗೂ ಅವರಿಗೂ ಮನಸ್ಥಾಪ ಶುರುವಾಯ್ತು.
ಬರೀ ಖಾಲಿ ಪಲಾವ್, ಬರೀ ಬಿಲ್ಡಪ್ ತಗೋಂತವ್ನೆ
ಇಡೀ ರೇಸ್‌ನ ಉಸ್ತುವಾರಿ ನಂದಾಗಿತ್ತು. ಕೊನೆಗೆ ಗ್ರಾಮಸ್ಥರೆಲ್ಲರೂ ನನ್ನ ವಿರುದ್ಧ ತಿರುಗಿ ಬಿದ್ದರು. ಕೊನೆಗೆ ಸಂತೋಷ್ ಬಂದು ಇದ್ಯಾವ ಕರ್ಮ ಎಂದು ಗೊಣಗಿದ. ಆ ರೈತನ ಕುಟುಂಬಕ್ಕೆ ನಾನೇ 50 ಸಾವಿರ ಹಣ ನೀಡಿದೆ. ಪೊಲೀಸರಿಗೆ ಸನ್ಮಾನ, ಊಟ ಎಲ್ಲದಕ್ಕೂ ಒಟ್ಟಾರೆ 1 ಲಕ್ಷ ಖರ್ಚಾಗಿದೆ ಆ ದುಡ್ಡು ಕೊಡು ಎಂದು ಸಂತೋಷ್‌ಗೆ ಹೇಳಿದೆ. ಇವತ್ತಿಗೂ ಆ ದುಡ್ಡು ಕೊಟ್ಟಿಲ್ಲ. ಎಲ್ಲ ಖರ್ಚು ನಾನೇ ಮಾಡಿದೆ. ಇದನ್ನ ಯಾಕೆ ಹೇಳ್ತಿದ್ದೀನಿ ಅಂದರೆ, ವರ್ತೂರು ಸಂತೋಷ್ ಬರೀ ಖಾಲಿ ಪಲಾವ್, ಬರೀ ಬಿಲ್ಡಪ್ ತಗೋಂತವ್ನೆ.
ವರ್ತೂರು ದುಡ್ಡು ಮಾಡೋಕೆ ನಿಂತಿದ್ದಾನೆ
ಹಳ್ಳಿಕಾರ್ ಅನ್ನೋ ಬ್ರಾಂಡ್ ಮಾಡಿಕೊಂಡಿದ್ದಾನೆ. 2 ಲಕ್ಷಕ್ಕೆ ಹೋರಿ ತಂದು 5 ಲಕ್ಷಕ್ಕೆ ಮಾರ್ತಿದ್ದಾನೆ. ಹಳ್ಳಿಕಾರ್ ಅಲ್ಲ, ರೈತನೂ ಅಲ್ಲ. ದುಡ್ಡು ಮಾಡೋಕೆ ನಿಂತಿದ್ದಾನೆ. ಡ್ರಾಮಾ ಮಾಡ್ತಿದ್ದಾನೆ. ಮೀಡಿಯಾದಲ್ಲಿಯೇ ಒಂದು ಮುಖ, ಮೀಡಿಯಾದಿಂದ ಆಚೆ ಬಂದರೆ ಇನ್ನೊಂದು ಮುಖ ಇದೆ ಅವನಿಗೆ" ಎಂದು ಆರೋಪಿಸಿದ್ದಾರೆ ಹೊಸಕೋಟೆಯ ಬೀರೇಶ್ ಮತ್ತವರ ಸ್ನೇಹಿತರು.
ವಿಭಾಗ