ಅಣ್ಣಯ್ಯ ಧಾರಾವಾಹಿ: ರತ್ನಳಿಗಾಗಿ ಆಕ್ಸಿಡೆಂಟ್ ನಾಟಕವಾಡಿದ ಪರಶು; ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆ ತಂದ ಶಿವು
Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ 173ನೇ ಎಪಿಸೋಡ್‌ನಲ್ಲಿ ರತ್ನ ಮನ ಒಲಿಸಿಕೊಳ್ಳಲು ಪರಶು ಆಕ್ಸಿಡೆಂಟ್ ನಾಟಕವಾಡುತ್ತಾನೆ, ರಸ್ತೆಯಲ್ಲಿ ಬಿದ್ದಿದ್ದ ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಶಿವು ಅಲ್ಲಿಂದ ತನ್ನ ಮನೆಗೆ ಕರೆ ತರುತ್ತಾನೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 173ನೇ ಎಪಿಸೋಡ್ ಕಥೆ ಹೀಗಿದೆ. ಶಿವುವನ್ನು ಹೇಗಾದರೂ ಮಾಡಿ ಕೊಲೆ ಮಾಡಿ ಪಾರ್ವತಿಯನ್ನು ಸೋಮೇಗೌಡನಿಗೆ ಒಪ್ಪಿಸಬೇಕೆಂದು ವೀರಭದ್ರ ಹಾಗೂ ಪರಶು ಪ್ಲ್ಯಾನ್ ಮಾಡುತ್ತಲೇ ಇದ್ದಾರೆ. ವೀರಭದ್ರ ಸ್ವಂತ ಮಗಳ ಜೀವನ ಹಾಳು ಮಾಡಲು ನಾಗೇಗೌಡನ ಜೊತೆ ಕೈ ಜೋಡಿಸಿದ್ದಾನೆ. ಇತ್ತ ಪೊಲೀಸ್ ಸ್ಟೇಷನ್‌ನಿಂದ ಮನೆಗೆ ಬರುವ ಪಾರು ತನ್ನ ಪ್ರೀತಿಯ ಮಾವನ ಬಳಿ ಮುತ್ತು ಕೇಳುತ್ತಾಳೆ. ಆದರೆ ಶಿವು ಮುತ್ತು ಕೊಡದೆ ಸತಾಯಿಸುತ್ತಾನೆ.
ಶಿವು-ಪಾರ್ವತಿಗೆ ರಕ್ತದಲ್ಲಿ ಬರೆದ ಫೋಟೋ ಗಿಫ್ಟ್ ಕೊಟ್ಟ ಅಂಗಡಿ ಸಹಾಯಕರು
ಮರುದಿನ ಪಾರು ಮತ್ತೆ ಶಿವು ಬಳಿ ಮುತ್ತು ಕೇಳುತ್ತಾಳೆ. ಅದಕ್ಕೆ ಶಿವು ನಾಚಿ ರೂಮ್‌ನಿಂದ ಹೊರಗೆ ಓಡಿ ಬರುತ್ತಾನೆ. ಅವರನ್ನು ನೋಡಿದ ರತ್ನ, ರಾಣಿ ಏನಾಯ್ತು ಎನ್ನುತ್ತಾರೆ. ನಿನ್ನೆ ರಾತ್ರಿ ನಿಮ್ಮ ಅಣ್ಣ ನನಗೆ ಏನೋ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು, ಆದರೆ ಈಗ ಅದನ್ನು ಕೊಡದೆ ಸತಾಯಿಸುತ್ತಿದ್ದಾರೆ ಎನ್ನುತ್ತಾಳೆ. ಮಾರಿಗುಡಿ ಶಿವು ಎಂದರೆ ಪ್ರಾಣ ಹೋದರೂ ಕೊಟ್ಟ ಮಾತನ್ನು ಉಳಿಸಿಕೊಡುವ ವ್ಯಕ್ತಿತ್ವದವನು ಎಂದು ಎಲ್ಲರೂ ಕರೆಯುತ್ತಾರೆ. ಅಂತದರಲ್ಲಿ ಸ್ವಂತ ಹೆಂಡತಿಗೆ ಮಾತು ಕೊಟ್ಟು ಅದನ್ನು ತಪ್ಪುವುದು ಸರಿಯಲ್ಲ ಎಂದು ರಾಣಿ ಹೇಳುತ್ತಾಳೆ. ಆದರೆ ರತ್ನ ಅದನ್ನು ಒಪ್ಪುವುದಿಲ್ಲ, ಈಗಲೇ ಯಾವ ನಿರ್ಧಾರಕ್ಕೂ ಬರುವುದು ಬೇಡ, ಇರು ಅದೇನೆಂದು ಕೇಳೋಣ, ಏನು ಕೊಡುತ್ತೇನೆ ಎಂದು ಹೇಳಿದ್ದೆ ಅಣ್ಣ ಎಂದು ಶಿವುವನ್ನು ಕೇಳುತ್ತಾಳೆ.
ನಾನೇ ಹೇಳುವೆ ಬಿಡು ಎಂದು ಪಾರು ಏನೋ ಹೇಳಲು ಮುಂದಾಗುತ್ತಾಳೆ. ಅಷ್ಟರಲ್ಲಿ ಅಂಗಡಿ ಸಹಾಯಕರಾದ ಗೋಡಂಬಿ ಹಾಗೂ ಗೊರ್ಕೆ ಇಬ್ಬರೂ ಅಲ್ಲಿಗೆ ಬರುತ್ತಾರೆ. ಒಳ್ಳೆ ಸಮಯಕ್ಕೆ ಬಂದು ನನ್ನನ್ನು ಉಳಿಸಿದಿರಿ ಎಂದು ಶಿವು ನಿಟ್ಟುಸಿರು ಬಿಡುತ್ತಾನೆ. ಅವರಿಬ್ಬರೂ ಶಿವು ಹಾಗೂ ಪಾರ್ವತಿಯನ್ನು ಪಕ್ಕಕ್ಕೆ ನಿಲ್ಲಿಸಿ ಒಂದು ಗಿಫ್ಟ್ ಕೊಟ್ಟು ನೀವಿಬ್ಬರೂ ನೂರು ಕಾಲ ಸಂತೋಷವಾಗಿ ಬಾಳಿ ಎಂದು ಹಾರೈಸುತ್ತಾರೆ. ಗಿಫ್ಟ್ ತೆಗೆದು ನೋಡಿದಾಗ ಅದರಲ್ಲಿ ಶಿವು, ಪಾರು ಫೋಟೋ ಇರುತ್ತದೆ, ಆದರೆ ಫೋಟೋ ಕೆಂಪು ಬಣ್ಣದಲ್ಲಿ ಇರುವುದನ್ನು ನೋಡಿ ಪಾರುಗೆ ಅನುಮಾನ ಉಂಟಾಗುತ್ತದೆ, ನಿಜ ಹೇಳಿ ಇದನ್ನು ಯಾವುದರಲ್ಲಿ ಬರೆಸಿದ್ದು ಎಂದು ಕೇಳುತ್ತಾಳೆ. ಅದನ್ನು ಗೋಡಂಬಿ, ತನ್ನ ರಕ್ತದಲ್ಲಿ ಬರೆಸಿದ್ದು ಎಂದು ಕೇಳಿ ಶಿವು ಹಾಗೂ ಪಾರ್ವತಿ ಭಾವುಕರಾಗುತ್ತಾರೆ, ಶಿವು ಅವರಿಬ್ಬರನ್ನೂ ಅಪ್ಪಿಕೊಳ್ಳುತ್ತಾನೆ.
ರತ್ನಳ ಮನ ಒಲಿಸಿಕೊಳ್ಳಲು ಆಕ್ಸಿಡೆಂಟ್ ನಾಟಕವಾಡಿದ ಪರಶು
ಗೋಡಂಬಿ ಹಾಗೂ ಗೊರ್ಕೆ ಮನೆಯಿಂದ ಹೊರಟ ನಂತರ ಶಿವು ತನ್ನ ತಂಗಿ ರತ್ನಳನ್ನು ಸ್ಕೂಲ್‌ಗೆ ಬಿಡಲು ಕರೆದೊಯ್ಯುತ್ತಾನೆ, ಇತ್ತ ರತ್ನಳ ಮನ ಒಲಿಸಿಕೊಳ್ಳಲು ಪರಶು ತಾನು ಒಳ್ಳೆಯವನಂತೆ ನಟಿಸಲು ನಿರ್ಧರಿಸುತ್ತಾನೆ. ಅದಕ್ಕೆ ಆಕ್ಸಿಡೆಂಟ್ ನಾಟಕವಾಡಲು ಪ್ಲ್ಯಾನ್ ಮಾಡುತ್ತಾನೆ. ತನಗೆ ಗೊತ್ತಿರುವ ಒಬ್ಬ ವ್ಯಕ್ತಿಯನ್ನು ಕರೆತಂದು ನನ್ನ ಹುಡುಗಿ ಇದೇ ದಾರಿಯಲ್ಲಿ ಬರುತ್ತಾಳೆ. ಅವಳು ಬರುತ್ತಿದ್ದಂತೆ ನಾನು ಸಿಗ್ನಲ್ ಕೊಡುತ್ತೇನೆ, ಆಗ ನೀನು ಬಂದು ನನಗೆ ಆಕ್ಸಿಡೆಂಟ್ ಮಾಡು, ಅದರೆ ಜಾಗ್ರತೆ ಹೆಚ್ಚು ಪೆಟ್ಟು ಮಾಡಬೇಡ, ನನ್ನನ್ನು ತಳ್ಳಿ ನೀನು ಸ್ಕೂಟರ್ ನಿಲ್ಲಿಸದೇ ಇಲ್ಲಿಂದ ಹೊರಟುಬಿಡು ಎನ್ನುತ್ತಾನೆ.
ಅಷ್ಟರಲ್ಲಿ ಶಿವು ತನ್ನ ಸ್ಕೂಟರ್‌ನಲ್ಲಿ ರತ್ನಳನ್ನು ಕೂರಿಸಿಕೊಂಡು ಬರುವುದನ್ನು ಪರಶು ನೋಡುತ್ತಾನೆ, ಆ ವ್ಯಕ್ತಿಗೆ ಸಿಗ್ನಲ್ ಕೊಟ್ಟು ತಾನು ಯಾರ ಜೊತೆಗೋ ಮೊಬೈಲ್‌ನಲ್ಲಿ ಮಾತನಾಡುತ್ತಾ ಬರುವಂತೆ ನಾಟಕ ಮಾಡುತ್ತಾನೆ. ಮೊದಲೇ ಹೇಳಿದಂತೆ ಸ್ಕೂಟರ್ ಸವಾರ ಅವನಿಗೆ ಡ್ಯಾಶ್ ಹೊಡೆದಂತೆ ತಳ್ಳಿ ಅಲ್ಲಿಂದ ವೇಗವಾಗಿ ಹೋಗುತ್ತಾನೆ, ಪರಶು ಪ್ರಜ್ಞೆ ತಪ್ಪಿ ಬಿದ್ದವನಂತೆ ನಾಟಕ ಮಾಡುತ್ತಾನೆ, ಅವನನ್ನು ನೋಡಿ ಶಿವು ಗಾಬರಿಯಾಗಿ ಸ್ಕೂಟರ್ ನಿಲ್ಲಿಸುತ್ತಾನೆ, ಪ್ರಜ್ಞೆ ತಪ್ಪಿರಬಹುದು ಎಂದು ರತ್ನ ಹೇಳುತ್ತಾಳೆ. ಆದರೆ ಪರಶು ತನ್ನ ಮನಸ್ಸಿನಲ್ಲೇ ಇಲ್ಲ ರತ್ನ ನಾನು ಪ್ರಜ್ಞೆ ತಪ್ಪಿಲ್ಲ ಎಲ್ಲಾ ನಿನಗೋಸ್ಕರ ಮಾಡಿದ್ದು ಎಂದು ಮಾತಾಡಿಕೊಳ್ಳುತ್ತಾನೆ. ಶಿವು ಅತ್ತೆಯರು, ಮಾವನಿಗೆ ವಿಷಯ ಗೊತ್ತಾದರೆ ಅವರು ಗಾಬರಿಯಾಗುತ್ತಾನೆ. ಆಸ್ಪತ್ರೆಗೆ ಕರೆದೊಯ್ಯೋಣ ಎಂದು ತಂಗಿಗೆ ಹೇಳುತ್ತಾನೆ. ರತ್ನಗೆ ಇದೆಲ್ಲಾ ಇಷ್ಟವಿಲ್ಲದಿದ್ದರೂ ಪರಿಸ್ಥಿತಿಗೆ ಕಟ್ಟುಬಿದ್ದು ಸುಮ್ಮನಾಗುತ್ತಾಳೆ. ಆಸ್ಪತ್ರೆಯಲ್ಲಿ ಪರಶುಗೆ ಬ್ಯಾಂಡೇಜ್ ಹಾಕಿಸಿ ಶಿವು ತನ್ನ ಮನೆಗೆ ಕರೆದೊಯ್ಯುತ್ತಾನೆ.
ಪರಶು ತಾನು ಅಂದುಕೊಂಡಂತೆ ರತ್ನ ಮನಸ್ಸು ಗೆಲ್ಲುತ್ತಾನಾ? ಅಥವಾ ಅವನ ನಾಟಕ ರತ್ನ, ಪಾರ್ವತಿಗೆ ಗೊತ್ತಾಗುವುದಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಅಣ್ಯಯ್ಯ ಧಾರಾವಾಹಿ ಪ್ರಸಾರವಾಗುತ್ತಿದೆ. ಅಣ್ಣ ತಂಗಿಯರ ಬಾಂಧವ್ಯದ ಕಥೆ ಇರುವ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ಮಾರಿಗುಡಿ ಶಿವು, ತಾನು ಇಷ್ಟ ಪಟ್ಟ ಪಾರುವನ್ನು ಮದುವೆಯಾಗಿದ್ಧಾನೆ, ಪಾರು ಕೂಡಾ ಅವನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಆದರೆ ಅವರಿಬ್ಬರನ್ನೂ ದೂರ ಮಾಡಲು ಪಾರು ತಂದೆ ವೀರಭದ್ರ ಕಾಯುತ್ತಿದ್ದಾನೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್
