ಅಣ್ಣಯ್ಯ: ಪರಶು ನಾಟಕ ಗೊತ್ತಾಗಿ ಗ್ರಹಚಾರ ಬಿಡಿಸಿದ ರತ್ನ; ಜಿಮ್‌ ಶುರು ಮಾಡಲು ಮಗನಿಗೆ ಒಪ್ಪಿಗೆ ಕೊಟ್ಟೇ ಬಿಟ್ಟ ಮಿಲ್ಟ್ರಿ ಮಾದಪ್ಪ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ: ಪರಶು ನಾಟಕ ಗೊತ್ತಾಗಿ ಗ್ರಹಚಾರ ಬಿಡಿಸಿದ ರತ್ನ; ಜಿಮ್‌ ಶುರು ಮಾಡಲು ಮಗನಿಗೆ ಒಪ್ಪಿಗೆ ಕೊಟ್ಟೇ ಬಿಟ್ಟ ಮಿಲ್ಟ್ರಿ ಮಾದಪ್ಪ

ಅಣ್ಣಯ್ಯ: ಪರಶು ನಾಟಕ ಗೊತ್ತಾಗಿ ಗ್ರಹಚಾರ ಬಿಡಿಸಿದ ರತ್ನ; ಜಿಮ್‌ ಶುರು ಮಾಡಲು ಮಗನಿಗೆ ಒಪ್ಪಿಗೆ ಕೊಟ್ಟೇ ಬಿಟ್ಟ ಮಿಲ್ಟ್ರಿ ಮಾದಪ್ಪ

Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ 174ನೇ ಎಪಿಸೋಡ್‌ನಲ್ಲಿ ಪರಶುವನ್ನು ಮನೆಗೆ ಕರೆತಂದಿದ್ದಕ್ಕೆ ಪಾರು ಕೋಪಗೊಳ್ಳುತ್ತಾಳೆ. ರತ್ನ ಕೂಡಾ ಅವನ ಬುದ್ಧಿ ತಿಳಿದು ಮತ್ತೆ ನನ್ನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸುತ್ತಾಳೆ. (ಬರಹ: ರಕ್ಷಿತಾ ಸೌಮ್ಯ)

ಅಣ್ಣಯ್ಯ ಧಾರಾವಾಹಿ ಏಪ್ರಿಲ್ 11ರ ಸಂಚಿಕೆ
ಅಣ್ಣಯ್ಯ ಧಾರಾವಾಹಿ ಏಪ್ರಿಲ್ 11ರ ಸಂಚಿಕೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 174ನೇ ಎಪಿಸೋಡ್‌ ಕಥೆ ಹೀಗಿದೆ. ಒಂದೆಡೆ ಶಿವು ಜೀವಕ್ಕೆ ಸಂಚಕಾರ ತರಬೇಕು, ಪಾರ್ವತಿಯನ್ನು ಸೋಮೇಗೌಡನಿಗೆ ಒಪ್ಪಿಸಬೇಕು, ಅದರ ಜೊತೆ ಜೊತೆಗೆ ತಾನು ಇಷ್ಟ ಪಟ್ಟ ಶಿವು ತಂಗಿ ರತ್ನಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆಯಿಂದ ಪರಶು ಆಕ್ಸಿಡೆಂಟ್‌ ನಾಟಕವಾಡುತ್ತಾನೆ, ರಸ್ತೆಯಲ್ಲಿ ಬಿದ್ದಿದ್ದ ಪರಶುವನ್ನು ಶಿವು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅಲ್ಲಿಂದ ತನ್ನ ಮನೆಗೆ ಕರೆದೊಯ್ಯುತ್ತಾನೆ.

ಪರಶುಗೆ ಎಚ್ಚರಿಕೆ ಕೊಟ್ಟ ರತ್ನ

ಅಣ್ಣನನ್ನು ನೋಡುತ್ತಿದ್ದಂತೆ ಪಾರು ಸಿಟ್ಟಾಗುತ್ತಾಳೆ. ಅಯ್ಯೋ ಏನಾಯ್ತೋ ಅಣ್ಣ, ಅದಕ್ಕೆ ಎಲ್ಲರ ಬಳಿ ದ್ವೇಷ ಕಟ್ಟಿಕೊಳ್ಳಬಾರದು ಅನ್ನೋದು, ಇಂದು ಯಾರೋ ಬಂದು ಆಕ್ಸಿಡೆಂಟ್‌ ಮಾಡಿದ, ಇದು ಹೀಗೇ ಮುಂದುವರೆದರೆ ಯಾರೋ ಬಂದು ಗಾಡಿ ಹತ್ತಿಸಿಕೊಂಡು ಹೋಗ್ತಾನೆ, ನಂತರ ನಾಲ್ಕು ಜನರು ಬಂದು ಹೊತ್ತುಕೊಂಡು ಹೋಗ್ತಾರೆ ಅಷ್ಟೇ ಎಂದು ವ್ಯಂಗ್ಯವಾಡುತ್ತಾಳೆ. ಸ್ವಂತ ಅಣ್ಣನಿಗೆ ಪಾರು ಈ ರೀತಿ ಮಾತನಾಡುವುದನ್ನು ಕಂಡು ಶಿವು ಬೇಸರವಾಗುತ್ತಾನೆ, ಮನೆಗೆ ಬಂದವರೊಂದಿಗೆ ಹೀಗೆಲ್ಲಾ ಮಾತನಾಡಬಾರದು ಎಂದು ಬುದ್ಧಿ ಹೇಳುತ್ತಾನೆ. ಪರಶುಗೆ ಸುಸ್ತಾಗಿದೆ ಅವನನ್ನು ರೂಮ್‌ಗೆ ಕರೆದುಕೊಂಡು ಹೋಗು ರೆಸ್ಟ್‌ ಮಾಡಲಿ ಎಂದು ಶಿವು, ತನ್ನ ತಂಗಿ ರತ್ನಗೆ ಹೇಳಿ, ಕಾಫಿ ಮಾಡಿಕೊಡುವಂತೆ ರಾಣಿಗೆ ಹೇಳುತ್ತಾನೆ.

ಪರಶು ಕಂಡರೆ ಇಷ್ಟವಿಲ್ಲದಿದ್ದರೂ ಅಣ್ಣ ಹೇಳಿದ ಎಂಬ ಕಾರಣಕ್ಕೆ ಪರಶು ಕೈ ಹಿಡಿದು ರತ್ನ ರೂಮ್‌ಗೆ ಕರೆದೊಯ್ಯುತ್ತಾಳೆ. ಪರಶು ಒಳಗೊಳಗೇ ಖುಷಿಪಡುತ್ತಾನೆ. ಇದು ಹೆಣ್ಣು ಮಕ್ಕಳಿರುವ ಮನೆ, ಅಂಥದರಲ್ಲಿ ಪರಶುವನ್ನು ರೂಮ್‌ಗೆ ಕರೆದುಕೊಂಡು ಹೋಗು ಅಂತ ನೀನು ರತ್ನಗೆ ಹೇಳುವುದು ಸರಿಯಲ್ಲ ಎಂದು ಪಾರು ಹೇಳುತ್ತಾಳೆ. ನಾನು, ನೀನು, ಪರಶು, ರತ್ನ ಎಲ್ಲರೂ ಚಿಕ್ಕ ವಯಸ್ಸಿನಿಂದ ಒಟ್ಟಿಗೆ ಬೆಳೆದವರು, ನಮ್ಮೆಲ್ಲರ ನಡುವೆ ಅಂಥ ಭಾವನೆ ಇರುವುದಿಲ್ಲ. ನಮ್ಮ ಪರಶು, ಅವನು ನಿಮ್ಮ ಅಣ್ಣ ಹಾಗೆಲ್ಲಾ ಮಾತನಾಡಬಾರದು ಎಂದು ಶಿವು ಹೇಳುತ್ತಾನೆ, ಮಾವನ ಒಳ್ಳೆತನ ಕಂಡು, ನಿನ್ನಂಥ ಮನುಷ್ಯನಿಗೆ ಎಲ್ಲರೂ ಮೋಸ ಮಾಡಲು ಪ್ರಯತ್ನಿಸುತ್ತಾರೆ ಅದೇ ನನಗೆ ಬೇಸರ ಎಂದು ಪಾರು ಮನಸ್ಸಿನಲ್ಲಿ ಹೇಳಿಕೊಂಡು ನೊಂದುಕೊಳ್ಳುತ್ತಾಳೆ.

ಪರಶುವನ್ನು ರೂಮ್‌ಗೆ ಕರೆತರುವ ರತ್ನ‌ ಫ್ಯಾನ್‌ ಹಾಕುತ್ತಾಳೆ. ಪರಶು ಅವಳನ್ನೇ ದಿಟ್ಟಿಸಿ ನೋಡುತ್ತಾ ರತ್ನ ಎಂದು ಕರೆಯುತ್ತಾನೆ, ನಿನ್ನ ಬಾಯಿಂದ ನನ್ನ ಹೆಸರು ಕರೆಯಬೇಡ, ನಾಲಿಗೆ ಸೀಳಿಬಿಡುತ್ತೇನೆ, ನಿನ್ನ ನಾಟಕ ನನಗೆ ಗೊತ್ತಾಗುವುದಿಲ್ಲ ಎಂದುಕೊಳ್ಳಬೇಡ, ನೀನು ಅಣ್ಣನ ಜೀವನ ಹಾಳು ಮಾಡುತ್ತೇನೆಂದು ಮಾಸ್ತಿಕೊಪ್ಪಲು ಜಾತ್ರೆಯಲ್ಲಿ ಹೇಳಿದ ಮಾತು ನನಗೆ ಚೆನ್ನಾಗಿ ನೆನಪಿದೆ, ಆದರೆ ಇಂದು ನೀನು ರಸ್ತೆಯಲ್ಲಿ ಬಿದ್ದಿದ್ದಾಗ ನಿನ್ನನ್ನು ಉಪಚರಿಸಿದ್ದು ನನ್ನ ಅಣ್ಣ, ಅವನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನಿನ್ನನ್ನು ಇಲ್ಲಿಗೆ ಕರೆತಂದು ನೋಡಿಕೊಳ್ಳುತ್ತಿರುವುದು ನಿನ್ನ ಮೇಲಿನ ಪ್ರೀತಿಯಿಂದಲೋ , ಕಾಳಜಿಯಿಂದಲೋ ಅಲ್ಲ, ನನ್ನ ಅಣ್ಣ ಹೇಳಿದ ಎಂಬ ಒಂದೇ ಕಾರಣಕ್ಕೆ ಎನ್ನುತ್ತಾಳೆ. ಅಷ್ಟರಲ್ಲಿ ಪಾರು ಕೂಡಾ ಅಲ್ಲಿಗೆ ಬರುತ್ತಾಳೆ.

ಜಿಮ್‌ ಶುರು ಮಾಡಲು ಮಗನಿಗೆ ವ್ಯವಸ್ಥೆ ಮಾಡಿಕೊಟ್ಟ ಮಾದಪ್ಪ

ಮತ್ತೊಂದೆಡೆ ರಶ್ಮಿ ಹೇಳಿದ ಮಾತಿಗೆ ಬೆಲೆ ಕೊಟ್ಟು ಮಾದಪ್ಪ ತನ್ನ ಮಗ ಸೀನನಿಗೆ ಗೌರವ ಕೊಡುತ್ತಾನೆ. ಅಪ್ಪ ಪ್ರತಿ ಬಾರಿಯೂ ಸೀನ ಅವರೇ ಎಂದು ಬಹುವಚನದಲ್ಲಿ ಮಾತನಾಡುವಾಗಲೆಲ್ಲಾ ಸೀನ ಭಯಪಡುತ್ತಾನೆ, ಅಪ್ಪ ನೀನು ಹೀಗೆಲ್ಲಾ ಮಾತನಾಡಬೇಡ, ನೀನು ಬೈದರೆ ನನಗೆ ಸಮಾಧಾನ ಎನ್ನುತ್ತಾನೆ. ಅದೆಲ್ಲಾ ಇರಲಿ, ನಿನ್ನ ಬಳಿ ಒಂದು ಮಾತು ಕೇಳಬೇಕು, ಜೀವನದಲ್ಲಿ ನಿನಗೆ ಏನು ಬಹಳ ಇಷ್ಟ, ಏನು ಮಾಡಬೇಕೆಂದುಕೊಂಡಿದ್ದೀಯ ಎಂದು ಹೇಳು ಎನ್ನುತ್ತಾನೆ. ಕೇಳೋದು ಕೇಳುತ್ತಿದ್ದೀಯ ಪಿಂಕಿಯನ್ನೇ ಕೇಳಿಬಿಡು ಎಂದು ಸೀನನ ಅಮ್ಮ ಲೀಲಾ ಸನ್ನೆ ಮಾಡುತ್ತಾಳೆ. ನಾನು ಅವಳನ್ನು ಕೇಳಿದರೆ ಅಪ್ಪ ನನ್ನನ್ನು ಕಾಲಿನ ಕೆಳಗೆ ಹಾಕಿಕೊಂಡು ಹೊಸಕಿ ಹಾಕುತ್ತಾನೆ ಎಂದು ಸೀನ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾನೆ.

ಅಪ್ಪ ನಾನು ಒಂದು ಜಿಮ್‌ ನಡೆಸಬೇಕು, ಅದಕ್ಕೆ ಓನರ್‌ ಆಗಬೇಕೆಂದು ಬಹಳ ದಿನಗಳ ಕನಸು, ನಿನಗೆ ಸಾಧ್ಯವಾದರೆ ನನಗೆ ಸಾಲ ತೆಗೆದುಕೊಡು ಉಳಿದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಾನೆ, ನನಗೆ ಗೊತ್ತು ನೀನು ಇದನ್ನೇ ಕೇಳುತ್ತೀಯ ಅಂತ, ಅದಕ್ಕೆ ನಾನು ಬೆಂಗಳೂರಿಗೆ ಹೋಗಿದ್ದೆ, ಜಿಮ್‌ಗೆ ಬೇಕಾದ ಎಲ್ಲಾ ಸಲಕರಣೆಗಳು 2 ದಿನಗಳಲ್ಲಿ ಇಲ್ಲಿಗೆ ಬರುತ್ತದೆ ಎಂದು ಹೇಳುತ್ತಾನೆ. ಅದನ್ನು ಕೇಳಿ ಸೀನ ಖುಷಿಯಾಗಿ ಅಪ್ಪನಿಗೆ ಥ್ಯಾಂಕ್ಸ್‌ ಹೇಳುತ್ತಾನೆ, ನನಗಲ್ಲ ನಿನ್ನ ಹೆಂಡತಿಗೆ ಧನ್ಯವಾದ ಹೇಳು ಎಂದು ಮಾದಪ್ಪ ಹೇಳುತ್ತಾನೆ. ರಶ್ಮಿ ಮೂಲಕ ಎಲ್ಲಾ ಕೆಲಸ ಮಾಡಿಸಿಕೊಟ್ಟು ಇವರಿಬ್ಬರನ್ನೂ ಒಂದು ಮಾಡಲು ನನ್ನ ಗಂಡ ಪ್ಲ್ಯಾನ್‌ ಮಾಡುತ್ತಿದ್ದಾನೆ, ಆದರೆ ಯಾವುದೇ ಕಾರಣಕ್ಕೂ ಇವರಿಬ್ಬರನ್ನೂ ಒಂದಾಗಲು ನಾನು ಬಿಡುವುದಿಲ್ಲ ಎಂದು ಲೀಲಾ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.

ರತ್ನ ಎಚ್ಚರಿಕೆಯನ್ನು ಅರ್ಥ ಮಾಡಿಕೊಂಡು ಪರಶು ಅವಳಿಂದ ದೂರ ಉಳಿಯುತ್ತಾನಾ? ಅಪ್ಪ ಮಾತು ಕೊಟ್ಟಂತೆ ಸೀನ ನಿಜಕ್ಕೂ ಜಿಮ್‌ ಓನರ್‌ ಆಗುತ್ತಾನಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಅಣ್ಯಯ್ಯ ಧಾರಾವಾಹಿ ಪ್ರಸಾರವಾಗುತ್ತಿದೆ. ಅಣ್ಣ ತಂಗಿಯರ ಬಾಂಧವ್ಯದ ಕಥೆ ಇರುವ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ಮಾರಿಗುಡಿ ಶಿವು, ತಾನು ಇಷ್ಟ ಪಟ್ಟ ಪಾರುವನ್ನು ಮದುವೆಯಾಗಿದ್ಧಾನೆ, ಪಾರು ಕೂಡಾ ಅವನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಆದರೆ ಅವರಿಬ್ಬರನ್ನೂ ದೂರ ಮಾಡಲು ಪಾರು ತಂದೆ ವೀರಭದ್ರ ಕಾಯುತ್ತಿದ್ದಾನೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner