ಅಣ್ಣಯ್ಯ: ಕೂಸುಮರಿ ಮಾಡಿ ಪಾರ್ವತಿ ಬಳಿ ಕ್ಷಮೆ ಕೇಳಿದ ಶಿವು; ಮಗಳ ಮೆಡಿಕಲ್ ಸರ್ಟಿಫಿಕೇಟ್ ಹರಿದು ಖುಷಿಪಟ್ಟ ವೀರಭದ್ರ
ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 196ನೇ ಎಪಿಸೋಡ್‌ನಲ್ಲಿ ಪಾರ್ವತಿ ಡಾಕ್ಟರ್ ಆಗಬಾರದು ಎಂಬ ಕೆಟ್ಟ ಉದ್ದೇಶದಿಂದ ವೀರಭದ್ರ, ಅವಳ ಮೆಡಿಕಲ್ ಸರ್ಟಿಫಿಕೇಟ್ ಹರಿಯುತ್ತಾನೆ. (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 196ನೇ ಎಪಿಸೋಡ್ ಕಥೆ ಹೀಗಿದೆ. ಪಾರ್ವತಿ ಡಾಕ್ಟರ್ ಕೆಲಸಕ್ಕೆ ಹೋಗಬೇಕು ಅನ್ನೋದು ಶಿವು ಆಸೆಯಾದರೆ ಪಾರು ಉದ್ಧೇಶವೇ ಬೇರೆ ಆಗಿದೆ. ಅಂಗಡಿಗೆ ಹೋಗಿ ಶಿವುಗೆ ಸಹಾಯ ಮಾಡುವ ಪಾರ್ವತಿ, ತನ್ನ ಅತ್ತೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ನಿನ್ನ ತಾಯಿ ಬಗ್ಗೆ ಎಷ್ಟು ಗೊತ್ತೋ ಅಷ್ಟು ಹೇಳು ಎಂದು ಪಾರ್ವತಿ ಹೇಳಿದಾಗ ಶಿವು ಸಿಟ್ಟಾಗುತ್ತಾನೆ. ನನ್ನ ಮುಂದೆ ಅವರ ಬಗ್ಗೆ ಮಾತನಾಡಬೇಡ ಎಂದು ಕೋಪದಿಂದ ಟೇಬಲ್ ಮೇಲಿದ್ದ ವಸ್ತುಗಳನ್ನು ತಳ್ಳಿ ಅಲ್ಲಿಂದ ಹೊರಡುತ್ತಾನೆ.
ದಾರಿಯಲ್ಲಿ ಬರುವಾಗ ಪಾರ್ವತಿ ಮಾತುಗಳನ್ನೇ ಶಿವು ನೆನಪಿಸಿಕೊಳ್ಳುತ್ತಾನೆ. ಪಾರ್ವತಿ ಮೇಲೆ ನಾನು ಆ ರೀತಿ ಕೋಪ ತೋರಿಸಬಾರದಿತ್ತು. ನನ್ನ ಜೀವಕ್ಕೆ ಜೀವ ಆದ ಪಾರುವನ್ನು ಬೈಯ್ಯಬಾರದಿತ್ತು. ಪಾಪ ಅವಳಿಗೇನು ಗೊತ್ತು ನನ್ನ ತಾಯಿ ಬಗ್ಗೆ, ಓಡಿಹೋದವರ ಮಕ್ಕಳು ಎಂದು ಊರಿನವರು ನನ್ನನ್ನು ವ್ಯಂಗ್ಯ ಮಾಡುವಾಗಲೇ ನಾನು ಸುಮ್ಮನಿರುತ್ತೇನೆ, ಅಂತದರಲ್ಲಿ ತಾಯಿ ಬಗ್ಗೆ ತಿಳಿದುಕೊಳ್ಳಬೇಕು ಎಂದು ಆಸೆ ಪಟ್ಟ ಪಾರುಗೆ ನಾನು ಆ ರೀತಿ ಮಾತನಾಡಬಾರದಿತ್ತು ಎಂದು ಪಶ್ಚಾತಾಪ ಪಡುತ್ತಾನೆ. ಹೆಂಡತಿಯನ್ನು ನೆನಪಿಸಿಕೊಂಡು ಪಕ್ಕ ತಿರುಗಿ ನೋಡಿದರೆ ಅಲ್ಲಿ ಪಾರು ನಿಂತಿರುತ್ತಾಳೆ. ಪಾರ್ವತಿಯನ್ನು ನೋಡುತ್ತಲೇ ಶಿವು ಓಡಿಹೋಗಿ ಅವಳನ್ನು ಅಪ್ಪಿಕೊಳ್ಳುತ್ತಾನೆ.
ಹೆಂಡತಿಯನ್ನು ಮಕ್ಕಳಂತೆ ಕೂಸುಮರಿ ಮಾಡಿದ ಶಿವು
ತಪ್ಪಾಯ್ತು ಪಾರು ದಯವಿಟ್ಟು ನನ್ನನ್ನು ಕ್ಷಮಿಸಿಬಿಡು, ನನ್ನ ಕಂದ ನೀನು, ನನ್ನ ಬಂಗಾರದ ಗೊಂಬೆ ನೀನು, ನಿನ್ನ ಮೇಲೆ ರೇಗಿಬಿಟ್ಟೆನಲ್ಲಾ ನಾನು ಪಾಪಿ ಎಂದು ಶಿವು ಕೆನ್ನೆಗೆ ಹೊಡೆದುಕೊಳ್ಳುತ್ತಾನೆ, ಶಿವುನನ್ನು ಪಾರು ಸಮಾಧಾನ ಮಾಡುತ್ತಾಳೆ. ತುಂಬಾ ಬೇಜಾರಾಯ್ತಾ ಎಂದು ಶಿವು ಕೇಳುತ್ತಾನೆ. ಆಗ ಪಾರು ಚಿಕ್ಕ ಮಕ್ಕಳಂತೆ ಅಳುತ್ತಾಳೆ. ಅಂಗಡಿಯಲ್ಲಿ ಎಲ್ಲರ ಮುಂದೆ ನನ್ನ ಏಕೆ ಆ ರೀತಿ ಬೈದೆ, ನಾನು ಏನು ತಪ್ಪು ಮಾಡಿದೆ? ಏನು ಅನ್ಯಾಯ ಮಾಡಿದೆ ಎಂದು ಬಿಕ್ಕಳಿಸಿಕೊಂಡು ಅಳುವಂತೆ ನಾಟಕ ಮಾಡುತ್ತಾಳೆ. ಕೋಪದಲ್ಲಿ ಏನು ಮಾತನಾಡಿದೆ ಎಂದು ನನಗೆ ಗೊತ್ತಾಗುತ್ತಿಲ್ಲ ಪಾರು, ತಪ್ಪಾಯ್ತು ಎಂದು ಶಿವು ಮತ್ತೆ ಕ್ಷಮೆ ಕೇಳುತ್ತಾನೆ. ತಪ್ಪಾಯ್ತು ಎಂದರೆ ಎಲ್ಲಾ ಸರಿ ಆಗುತ್ತಾ? ನನ್ನ ಜೀವನದಲ್ಲೇ ನನಗೆ ಈ ರೀತಿ ಅಗಿರಲಿಲ್ಲ ಎಂದು ಗೋಳಾಡುತ್ತಾಳೆ.
ನಾನು ಸಮಾಧಾನವಾಗಬೇಕಾದರೆ ನೀನು ನನ್ನನ್ನು ಮುದ್ದು ಮಾಡಬೇಕು ಎಂದು ಪಾರು ಹೇಳುತ್ತಾಳೆ. ಹೆಂಡತಿ ಮಾತು ಕೇಳಿ ಶಿವು ನಾಚಿಕೊಳ್ಳುತ್ತಾನೆ. ರಸ್ತೆಯಲ್ಲಿ ಹೇಗೆ ಮುದ್ದು ಮಾಡುವುದು, ಮನೆಯಲ್ಲಿ ಮುದ್ದು ಮಾಡುತ್ತೇನೆ ಎನ್ನುತ್ತಾನೆ. ಹಾಗಾದರೆ ನನ್ನ ಕೂಸುಮರಿ ಮಾಡು ಎಂದು ಪಾರು ಕೇಳುತ್ತಾಳೆ. ಶಿವು ನಾಚುತ್ತಲೇ ಪಾರುವನ್ನು ಕೂಸುಮರಿ ಮಾಡಿಕೊಂಡು ಉಪ್ಪು ಮೂಟೆ ಬೇಕಾ ಎಂದು ಹೇಳಿಕೊಂಡು ರಸ್ತೆಯಲ್ಲಿ ಸಾಗುತ್ತಾನೆ. ರಸ್ತೆಯಲ್ಲಿ ಎಲ್ಲರೂ ಅವರಿಬ್ಬರನ್ನೇ ನೋಡುತ್ತಾರೆ. ಪಾರ್ವತಿಯನ್ನು ಎತ್ತಿಕೊಂಡು ಶಿವು ಅಂಗಡಿವರೆಗೂ ಬರುತ್ತಾನೆ. ಅವರನ್ನು ನೋಡಿ ಸದ್ಯ ಇವರಿಬ್ಬರು ಒಂದಾದರಲ್ಲ ಎಂದು ಗೊರಕೆ ಸಮಾಧಾನಗೊಳ್ಳುತ್ತಾನೆ. ಅಲ್ಲಿಂದ ಪಾರು ಹಾಗೂ ಶಿವು ಮನೆಗೆ ಹೋಗುತ್ತಾರೆ.
ಪಾರ್ವತಿ ಡಾಕ್ಟರ್ ಲೈಸನ್ಸ್ ಹರಿದು ಎಸೆದ ವೀರಭದ್ರ
ಇತ್ತ ವೀರಭದ್ರ, ಮಗಳ ಮೆಡಿಕಲ್ ಸರ್ಟಿಫಿಕೇಟ್ ಹಿಡಿದುಕೊಂಡು ಅವಳ ಬಗ್ಗೆ ಪರಶು ಹಾಗೂ ಛತ್ರಿ ಬಳಿ ಮಾತನಾಡುತ್ತಾನೆ. ಪಾರ್ವತಿಗೆ ನಾನು ಡಾಕ್ಟರ್ ಓದಿಸಿದ್ದು ಶಿವು ಮನೆ ಉದ್ದಾರ ಮಾಡಲಿ ಅಂತ ಅಲ್ಲ, ಮದುವೆ ಆಹ್ವಾನ ಪತ್ರಿಕೆ ಮೇಲೆ ಎಂಬಿಬಿಎಸ್ ಎಂದು ಬರೆಸಲು, ಆದರೆ ಅದೂ ಕೂಡಾ ಸಾಧ್ಯವಾಗಲಿಲ್ಲ. ಪಾರ್ವತಿ ಡಾಕ್ಟರ್ ಆಗಿ ಯಾರನ್ನೋ ಉದ್ಧಾರ ಮಾಡುವ ಅವಶ್ಯಕತೆ ಇಲ್ಲ ಎನ್ನುತ್ತಾನೆ. ಹಾಗಾದರೆ ಇದನ್ನು ಸ್ಟೋರ್ ರೂಮ್‌ನಲ್ಲಿ ಇಟ್ಟುಬಿಡಿ ಎಂದು ಛತ್ರಿ ಹೇಳುತ್ತಾನೆ. ಮೆಡಿಕಲ್ ಸರ್ಟಿಫಿಕೇಟ್ ಇಲ್ಲಿಗೆ ಬಂದಿರುವ ವಿಚಾರ ಗೊತ್ತಿರುವುದು ನಮ್ಮ ಮೂರು ಜನಕ್ಕೆ ಮಾತ್ರ, ಪಾರ್ವತಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ, ಆದ್ದರಿಂದ ಇದಕ್ಕೆ ಒಂದು ಗತಿ ಕಾಣಿಸುತ್ತೇನೆ ಎಂದು ಅದನ್ನು ಹರಿಯಲು ನಿರ್ಧರಿಸುತ್ತಾನೆ.
ಇದನ್ನು ಹರಿದರೆ ಅವಳಿಗೆ ಮತ್ತೊಂದು ದೊರೆಯುತ್ತದೆ ಎಂದು ಪರಶು ಹೇಳುತ್ತಾನೆ. ಲೈಸನ್ಸ್ ಸಿಗುವುದು ಅಷ್ಟು ಸುಲಭದ ಮಾತಲ್ಲ, ಅವಳು ಮತ್ತೊಮ್ಮೆ ಸರ್ಟಿಫಿಕೇಟ್ ಪಡೆಯಬೇಕಾದರೆ ಮತ್ತೆ ಡಾಕ್ಟರ್ ಓದಿದಷ್ಟೇ ಕಷ್ಟ ಪಡಬೇಕು, ವರ್ಷಗಟ್ಟಲೆ ಕಾಯಬೇಕು ಎಂದು ವೀರಭದ್ರ ಹೇಳುತ್ತಾನೆ. ಅದನ್ನು ಕೇಳಿ ಪರಶು ಖುಷಿಯಾಗುತ್ತಾನೆ. ಶಿವು ಮೇಲಿನ ಕೋಪಕ್ಕೆ ವೀರಭದ್ರ ಮಗಳ ಮೆಡಿಕಲ್ ಸರ್ಟಿಫಿಕೇಟ್ ಹರಿದು ಎಸೆಯುತ್ತಾನೆ.
ಪಾರ್ವತಿ ಡಾಕ್ಟರ್ ಆಗಬೇಕು ಎಂಬ ಶಿವು ಆಸೆ ಕನಸಾಗಿ ಉಳಿದುಕೊಳ್ಳುವುದಾ? ಮೆಡಿಕಲ್ ಸರ್ಟಿಫಿಕೇಟ್ ಮನೆಗೆ ಬಂದಿರುವ ವಿಚಾರ ಪಾರ್ವತಿಗೆ ಗೊತ್ತಾಗುವುದಾ? ಅಣ್ಣಯ್ಯ ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್