ಅಣ್ಣಯ್ಯ ಸೀರಿಯಲ್‌: ಪಾರ್ವತಿಗೆ ಜೇನುತುಪ್ಪ ತಿನ್ನಿಸಿದ ಶಿವು; ಡೆತ್‌ನೋಟ್‌ನಲ್ಲಿ ಜಿಮ್‌ ಸೀನನ ಹೆಸರು ಬರೆದು ವಿಷ ಕುಡಿಯಲು ಮುಂದಾದ ಪಿಂಕಿ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಸೀರಿಯಲ್‌: ಪಾರ್ವತಿಗೆ ಜೇನುತುಪ್ಪ ತಿನ್ನಿಸಿದ ಶಿವು; ಡೆತ್‌ನೋಟ್‌ನಲ್ಲಿ ಜಿಮ್‌ ಸೀನನ ಹೆಸರು ಬರೆದು ವಿಷ ಕುಡಿಯಲು ಮುಂದಾದ ಪಿಂಕಿ

ಅಣ್ಣಯ್ಯ ಸೀರಿಯಲ್‌: ಪಾರ್ವತಿಗೆ ಜೇನುತುಪ್ಪ ತಿನ್ನಿಸಿದ ಶಿವು; ಡೆತ್‌ನೋಟ್‌ನಲ್ಲಿ ಜಿಮ್‌ ಸೀನನ ಹೆಸರು ಬರೆದು ವಿಷ ಕುಡಿಯಲು ಮುಂದಾದ ಪಿಂಕಿ

ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 197ನೇ ಎಪಿಸೋಡ್‌ನಲ್ಲಿ ಶಿವು ಪ್ರೀತಿಯಿಂದ ಪಾರ್ವತಿಗೆ ಜೇನುತುಪ್ಪ ತಂದುಕೊಡುತ್ತಾನೆ. ಸೀನನ ಹೆಸರು ಬರೆದು ಪಿಂಕಿ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಅತ್ತೆ ಶಾರದಾ ಬಗ್ಗೆ ಪಾರ್ವತಿ ಮತ್ತೆ ಶಿವು ಬಳಿ ಕೇಳುತ್ತಾಳಾ? ಪಿಂಕಿ ವಿಚಾರದಲ್ಲಿ ಸೀನ ಏನು ನಿರ್ಧಾರ ತೆಗೆದುಕೊಳ್ಳುತ್ತಾನೆ? (ಬರಹ: ರಕ್ಷಿತಾ)

ಅಣ್ಣಯ್ಯ ಸೀರಿಯಲ್‌: ಪಾರ್ವತಿಗೆ ಜೇನುತುಪ್ಪ ತಿನ್ನಿಸಿದ ಶಿವು
ಅಣ್ಣಯ್ಯ ಸೀರಿಯಲ್‌: ಪಾರ್ವತಿಗೆ ಜೇನುತುಪ್ಪ ತಿನ್ನಿಸಿದ ಶಿವು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 197ನೇ ಎಪಿಸೋಡ್‌ ಕಥೆ ಹೀಗಿದೆ. ತಾಯಿ ಬಗ್ಗೆ ಕೇಳಿದ ಪಾರ್ವತಿ ಮೇಲೆ ಶಿವು ಸಿಟ್ಟಾಗುತ್ತಾನೆ. ನಂತರ ತನ್ನ ತಪ್ಪಿನ ಅರಿವಾಗಿ ಅವಳ ಬಳಿ ಕ್ಷಮೆ ಕೇಳುತ್ತಾನೆ. ಪಾರ್ವತಿ ಬೇಡಿಕೆಯ ಮೇರೆಗೆ ಅವಳನ್ನು ಪುಟ್ಟ ಮಕ್ಕಳಂತೆ ಅಂಗಡಿವರೆಗೂ ಕೂಸುಮರಿ ಹೊತ್ತು ಹೋಗುತ್ತಾನೆ. ಇವರಿಬ್ಬರ ಪ್ರೀತಿ ಕಂಡು ಗೊರಕೆ ಖುಷಿಯಾಗುತ್ತಾನೆ. ಮತ್ತೊಂದೆಡೆ ವೀರಭದ್ರ, ಮಗಳು ಪಾರ್ವತಿ ಡಾಕ್ಟರ್‌ ಆಗಬಾರದು ಎಂಬ ಕಾರಣಕ್ಕೆ ಅವಳ ಮೆಡಿಕಲ್‌ ಸರ್ಟಿಫಿಕೇಟ್‌ ಹರಿಯುತ್ತಾನೆ.

ರೊಮ್ಯಾಂಟಿಕ್‌ ಕನಸು ಕಾಣುವ ಪಾರ್ವತಿ

ಅಂಗಡಿ ಮುಚ್ಚಿ ಪಾರು, ಶಿವು ಮನೆಗೆ ಬರುತ್ತಾರೆ. ಗೋಡಂಬಿಗೆ ಮೆಡಿಸನ್‌ ಕೊಟ್ಟು ಪಾರ್ವತಿ ರೂಮ್‌ ಒಳಗೆ ಬರುತ್ತಾಳೆ. ಮನೆಗೆ ಹೋದ ಕೂಡಲೇ ನನ್ನನ್ನು ಮುದ್ದಾಡುತ್ತೇನೆ ಎಂದು ಹೇಳಿದ್ದೆ ತಾನೇ, ಈಗ ಮುದ್ದಾಡು ಎಂದು ಶಿವು ಬಳಿ ಹೇಳುತ್ತಾಳೆ. ಶಿವು ನಾಚಿಕೆಯಿಂದಲೇ ಮಗುವನ್ನು ಮುದ್ದಾಡುವಂತೆ ಅವಳ ಕೆನ್ನೆ ಹಿಡಿದು ಮುದ್ದಾಡಿ ಈಗ ಖುಷಿ ಆಯ್ತಾ ಎಂದು ಕೇಳುತ್ತಾನೆ. ಇಷ್ಟೇ ಸಾಕಾ ಎಂದು ಪಾರು ಕೇಳುತ್ತಾಳೆ. ಈಗಷ್ಟೇ ಶುರು ಮಾಡಿದ್ದೇನೆ, ಇನ್ಮುಂದೆ ಕಲಿಯುತ್ತೇನೆ ಮ್ಯಾಮ್‌ ಎನ್ನುತ್ತಾನೆ. ಶಿವು ಸಮಾಧಾನವಾಗಿರುವುದನ್ನು ಖಚಿತಪಡಿಸಿಕೊಂಡ ಪಾರು, ಮಾವ ನಿನ್ನ ಬಳಿ ಏನೋ ಕೇಳಬೇಕು ಎನ್ನುತ್ತಾಳೆ. ಪಾರು ನನ್ನ ತಾಯಿ ವಿಷಯ ಬಿಟ್ಟು ಬೇರೆ ಏನಾದರೂ ಕೇಳು ಎಂದು ಹೇಳುತ್ತಾನೆ. ನಿನ್ನ ತಾಯಿ ಬಗ್ಗೆ ಆಗಲೇ ಕೇಳಿದ್ದಕ್ಕೆ ಕೋಪ ಮಾಡಿಕೊಂಡೆ, ಆದರೆ ಈಗ ತಾಳ್ಮೆಯಿಂದ ಮಾತನಾಡುತ್ತಿದ್ದೀಯ, ಇದೇ ರೀತಿ ನಿನ್ನ ಕೋಪವನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ನಂತರ ನಿನ್ನ ತಾಯಿ ಬಗ್ಗೆ ಕೇಳುತ್ತೇನೆ ಎಂದು ಮನಸ್ಸಿನಲ್ಲಿ ಮಾತನಾಡಿಕೊಳ್ಳುತ್ತಾಳೆ.

ಮರುದಿನ ಶಿವು, ಮನೆಗೆ ಜೇನುತುಪ್ಪ ತರುತ್ತಾನೆ. ನಿಮ್ಮ ಅತ್ತಿಗೆ ಎಂದಿಗೂ ಫ್ರೆಶ್‌ ಆಗಿ ಜೇನುತುಪ್ಪ ತಿಂದಿಲ್ಲ, ಅದಕ್ಕೆ ಎಲ್ಲರಿಗೂ ಜೇನುತುಪ್ಪ ತಂದಿದ್ದೇನೆ ಎನ್ನುತ್ತಾನೆ, ನಾವಾದರೆ ಎಷ್ಟೋ ಸಾರಿ ತಿಂದಿದ್ದೇವೆ ಅತ್ತಿಗೆ ಒಮ್ಮೆಯೂ ಇದನ್ನು ತಿಂದಿಲ್ಲ, ಅವಳಿಗೇ ಕೊಡು ಎಂದು ರಾಣಿ ಹೇಳುತ್ತಾಳೆ. ಇಲ್ಲ ಅವಳಿಗೆ ಮಾತ್ರ ಕೊಟ್ಟು ನಿಮಗೆ ಕೊಡದಿದ್ದರೆ ಮಾಕಾಳವ್ವ ಮೆಚ್ಚುವುದಿಲ್ಲ. ನೀವೂ ತಿನ್ನಿ ಎಂದು ರಾಣಿ ಕೈಗೆ ಒಂದು ಜೊನ್ನೆ ಕೊಟ್ಟು ಮತ್ತೊಂದನ್ನು ಪಾರ್ವತಿಗೆ ಕೊಡುತ್ತಾನೆ. ನಾನೇ ಜೇನು ಬಿಡಿಸಿದ್ದು ರುಚಿ ನೋಡು ಎಂದು ಶಿವು ಹೇಳುತ್ತಾನೆ. ಜೇನುತುಪ್ಪ ಕುಡಿಯುವ ಪಾರ್ವತಿ ನಿನಗೆ ಬೇಡವಾ ಎಂದು ಕೇಳುತ್ತಾಳೆ. ಪಾರು ತುಟಿ ಮೇಲೆ ಬಿದ್ದ ಜೇನುತುಪ್ಪವನ್ನು ಸವರುವ ಶಿವು ಇಲ್ಲೇ ಇದೆಯಲ್ಲ‌ ಎಂದು ರೊಮ್ಯಾಂಟಿಕ್‌ ಆಗಿ ಮಾತನಾಡುವಂತೆ ಪಾರು ಕನಸು ಕಾಣುತ್ತಾಳೆ. ಆದರೆ ಅದು ಕನಸು ಎಂದು ತಿಳಿದು ನಿರಾಶಳಾಗುತ್ತಾಳೆ. ಶಿವು ಕೊಟ್ಟ ಜೇನುತುಪ್ಪದ ರುಚಿ ನೋಡಿ ಚೆನ್ನಾಗಿದೆ ಎಂದು ಹೇಳಿ ಮುನಿಸಿನಿಂದ ರೂಮ್‌ನಿಂದ ಹೊರಗೆ ಹೋಗುತ್ತಾಳೆ.

ಡೆತ್‌ನೋಟ್‌ನಲ್ಲಿ ಜಿಮ್‌ ಸೀನ, ರಶ್ಮಿ ಹೆಸರು ಬರೆದ ಪಿಂಕಿ

ಇತ್ತ ಜಿಮ್‌ ಓಪನ್‌ ಮಾಡುವ ಖುಷಿಯಲ್ಲಿ ಸೀನ ಹಾಡು ಹಾಡಿಕೊಂಡು ಕಾಯಿ ಸುಲಿಯುತ್ತಾನೆ. ಮಗನ ಬಳಿ ಬರುವ ಲೀಲಾ, ಚಿನ್ನುಮರಿ ಎಂದು ಕರೆಯುತ್ತಾಳೆ. ಏನಮ್ಮಾ ನೀನು ನನ್ನನ್ನು ಈ ರೀತಿ ಕರೆಯುತ್ತಿದ್ದೀಯ ಎಂದು ಕೇಳುತ್ತಾನೆ. ನಾನು ಕರೆಯಲಿಲ್ಲ, ನೀನು ಆ ಡುಮ್ಮಿಯನ್ನು ಏಕೆ ಚಿನ್ನುಮರಿ ಎಂದು ಕರೆಯುತ್ತಿದ್ದೆ ಅದನ್ನು ಹೇಳು ಎನ್ನುತ್ತಾಳೆ. ಇರು ಈ ವಿಚಾರವನ್ನು ಪಿಂಕಿಗೆ ಹೇಳುತ್ತೇನೆ ಎಂದು ಪಿಂಕಿಗೆ ಕರೆ ಮಾಡುತ್ತಾಳೆ. ನಿನ್ನೆ ನಿದ್ರೆ ಕಣ್ಣಿನಲ್ಲಿ ರಶ್ಮಿ ಮೇಲೆ ಕೈ ಹಾಕಿದ್ದು ಅಲ್ಲದೆ, ಅವಳನ್ನು ಚಿನ್ನುಮರಿ ಎಂದು ಕರೆದು ಅಪ್ಪಿಕೊಂಡು ಕುಣಿದಾಡಿದ್ದಾನೆ ಎನ್ನುತ್ತಾಳೆ. ಲೀಲಾ ಮಾತು ಕೇಳಿ ಪಿಂಕಿ ಕೋಪಗೊಳ್ಳುತ್ತಾಳೆ. ಸೀನನ ಕೈಗೆ ಪೋನ್‌ ಕೊಡಲು ಹೇಳುತ್ತಾಳೆ. ನಾನು ಹೇಳಿದ ಸ್ಥಳಕ್ಕೆ ಇನ್ನು ಅರ್ಧ ಗಂಟೆಯಲ್ಲಿ ಬರದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸುತ್ತಾಳೆ. ಹೆದರಿದ ಸೀನ, ಅವಳು ಹೇಳಿದ ಸ್ಥಳಕ್ಕೆ ಹೋಗುತ್ತಾನೆ.

ಇತ್ತ ಸೀನನಿಗೆ ಕಾದು ನಿಂತ ಪಿಂಕಿ, ಇನ್ನು ಅವನು ಬರುವುದಿಲ್ಲ. ನನಗೆ ಮೋಸ ಮಾಡಿ ಅವನೂ ಸುಖವಾಗಿ ಇರಬಾರದು ಎಂದು ಡೆತ್‌ನೋಟ್‌ ಬರೆದು ವಿಷ ಕುಡಿಯಲು ಮುಂದಾಗುತ್ತಾಳೆ. ಅಷ್ಟರಲ್ಲಿ ಸೀನ ಅಲ್ಲಿಗೆ ಬಂದು ವಿಷದ ಬಾಟಲಿಯನ್ನು ಎಸೆಯುತ್ತಾನೆ. ಪಿಂಕಿ ಬರೆದ ಡೆತ್‌ನೋಟನ್ನು ಓದುತ್ತಾನೆ. ಸೀನ ನನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿ ಶಿವು ತಂಗಿ ರಶ್ಮಿಯನ್ನು ಮದುವೆ ಆಗಿದ್ದಾನೆ. ಇದರಿಂದ ಮನನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ಜಿಮ್‌ ಸೀನ ಹಾಗೂ ರಶ್ಮಿ ಇಬ್ಬರೂ ಕಾರಣ ಎಂದು ಪಿಂಕಿ ಬರೆದಿರುತ್ತಾಳೆ. ಅದನ್ನು ನೋಡಿ ಸೀನ ಬೇಸರಗೊಳ್ಳುತ್ತಾನೆ. ನನ್ನನ್ನು ಶತ್ರುವಿನಂತೆ ಕಾಣುತ್ತಿದ್ದೀಯ ಎನ್ನುತ್ತಾನೆ.

ಅತ್ತೆ ಶಾರದಾ ಬಗ್ಗೆ ಪಾರ್ವತಿ ಮತ್ತೆ ಶಿವು ಬಳಿ ಕೇಳುತ್ತಾಳಾ? ಪಿಂಕಿ ವಿಚಾರದಲ್ಲಿ ಸೀನ ಏನು ನಿರ್ಧಾರ ತೆಗೆದುಕೊಳ್ಳುತ್ತಾನೆ? ಅಣ್ಣಯ್ಯ ಧಾರಾವಾಹಿಯ ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in