ಅಣ್ಣಯ್ಯ: ಪುರೋಹಿತರು ಹೇಳಿದ್ದಕ್ಕೆ ಅಳಿಯ ಮಗಳ ಪಾದಪೂಜೆ ಮಾಡಿದ ವೀರಭದ್ರ; ನಿನ್ನ ಸಂಹಾರಕ್ಕೆ ಬಂದವಳು ನಾನು ಎಂದು ಅಪ್ಪನಿಗೆ ಹೇಳಿದ ಪಾರ್ವತಿ
Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ 175ನೇ ಎಪಿಸೋಡ್‌ನಲ್ಲಿ ದೇವಸ್ಥಾನಕ್ಕೆ ಬಂದ ಶಿವು ಹಾಗೂ ಪಾರ್ವತಿಗೆ ವೀರಭದ್ರ ಪಾದಪೂಜೆ ಮಾಡುತ್ತಾನೆ. ಅಪ್ಪನ ಕಿವಿ ಬಳಿ, ಈ ಊರಿನ ರಾಕ್ಷಸ ನೀನು, ನಿನ್ನನ್ನು ಸಂಹಾರ ಮಾಡಲು ಬಂದವಳು ನಾನು ಎಂದು ಪಾರು ಹೇಳುತ್ತಾಳೆ. (ಬರಹ: ರಕ್ಷಿತಾ ಸೌಮ್ಯ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 175ನೇ ಎಪಿಸೋಡ್ ಕಥೆ ಹೀಗಿದೆ. ರತ್ನ ಗಮನವನ್ನು ತನ್ನತ್ತ ತಿರುಗಿಸಲು ಪರಶು ತನಗೆ ಅಪಘಾತವಾದಂತೆ ನಾಟಕವಾಡುತ್ತಾನೆ. ದಾರಿ ಮಧ್ಯೆ ಪರಶುವನ್ನು ನೋಡುವ ಶಿವು ಅವನನ್ನು ಆಸ್ಪತ್ರೆಗೆ ಕರೆದೊಯ್ದು ನಂತರ ಮನೆಗೆ ಕರೆದೊಯ್ಯುತ್ತಾನೆ. ಪರಶು ಬುದ್ಧಿ ಅರಿತಿರುವ ರತ್ನ ಹಾಗೂ ಪಾರ್ವತಿ ಅವನಿಗೆ ಬೈಯ್ಯುತ್ತಾರೆ. ಅಷ್ಟಾದರೂ ಪರಶು ಮಾತ್ರ ತಾನು ಬದಲಾದಂತೆ ನಟಿಸಿ ಅವರ ಮಾತಿಗೆ ಏನೂ ಪ್ರತಿಕ್ರಿಯಿಸದೆ ಸುಮ್ಮನಾಗುತ್ತಾನೆ.
ಮಾಕಾಳವ್ವ ಆದೇಶದಂತೆ ಪಾರು ಜೊತೆ ದೇವಸ್ಥಾನಕ್ಕೆ ಬಂದ ಶಿವು
ಶಿವು ಹಾಗೂ ಪಾರ್ವತಿ ಮಾಕಾಳವ್ವನ ದೇವಸ್ಥಾನಕ್ಕೆ ಬರುತ್ತಾರೆ. ಇವತ್ತು ಏನು ವಿಶೇಷ ಮಾವ, ದೇವಸ್ಥಾನಕ್ಕೆ ಏಕೆ ಕರೆದುಕೊಂಡು ಬಂದೆ ಎಂದು ಪಾರ್ವತಿ ಕೇಳುತ್ತಾಳೆ. ನನಗೂ ಗೊತ್ತಿಲ್ಲ ಪಾರು, ನಿನ್ನೆ ನನ್ನ ಕನಸಿನಲ್ಲಿ ಮಾಕಾಳವ್ಬ ಬಂದು ಮಗ, ಸ್ವಲ್ಪ ಕೆಲಸ ಇದೆ ನೀನು ಗುಡಿಗೆ ಬಾ ಅಂದ್ಲು, ಅವತ್ತು ಮನೆ ಹರಾಜಿಗೆ ಬಂದಾಗ ಕೂಡಾ ದೇವಿ ನನ್ನನ್ನು ಕರೆದಂತೆ ಆಯ್ತು, ಆ ದಿನವೂ ನಾನು ದೇವಸ್ಥಾನಕ್ಕೆ ಬಂದಿದ್ದೆ, ನಂತರ ನನ್ನ ಮನೆ ಉಳಿಯಿತು. ಇವತ್ತು ಆ ದೇವಿ ನನ್ನನ್ನು ಯಾವ ಕಾರಣಕ್ಕೆ ಕರೆಸಿಕೊಂಡಳು ಅಂತ ಗೊತ್ತಿಲ್ಲ, ನೋಡೋಣ ಬಾ ಎಂದು ಇಬ್ಬರೂ ದೇವಸ್ಥಾನದ ಒಳಗೆ ಬರುತ್ತಾರೆ.
ಶಿವು-ಪಾರ್ವತಿಯನ್ನು ನೋಡುವ ಅರ್ಚಕರು, ಒಳ್ಳೆ ದಿನವೇ ಇಬ್ಬರೂ ದೇವಸ್ಥಾನಕ್ಕೆ ಬಂದಿದ್ದೀರ ಎನ್ನುತ್ತಾರೆ. ಇಂದು ಏನು ವಿಶೇಷ ಎಂದು ಪಾರ್ವತಿ ಕೇಳಿದಾಗ, ಬಹಳ ಜನರಿಗೆ ಇದು ಗೊತ್ತಿಲ್ಲ. ಸಾವಿರಾರು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಒಬ್ಬ ರಾಕ್ಷಸನಿದ್ದ. ಅವನ ಮಗಳು ಮಹಾನ್ ದೈವಭಕ್ತೆ, ಧರ್ಮವನ್ನು ಕಾಪಾಡಲು ಅವಳು ತಂದೆಯನ್ನೇ ವಿರೋಧಿಸುತ್ತಿದ್ದಳು. ನಂತರ ಬಂದ ಅಳಿಯನೂ ದೇವಿಯನ್ನು ಆರಾಧಿಸುತ್ತಿದ್ದ, ಆದರೆ ಆ ರಾಕ್ಷಸ ಇಬ್ಬರಿಗೂ ಬಹಳ ತೊಂದರೆ ಕೊಡುತ್ತಿದ್ದ, ಆಗ ಆ ದೇವಿ ಮಗಳ ರೂಪದಲ್ಲಿ ಅವನ ಅಹಂಕಾರವನ್ನು ಮಟ್ಟ ಹಾಕಿದ ವಿಶೇಷ ದಿನ ಇದು. ಅದನ್ನು ಕೇಳಿ ಶಿವು, ಆ ತಾಯಿಯ ಮಹಿಮೆ ಎಂಥದ್ದು ನೋಡು ಪಾರು ಎಂದು ಹೆಂಡತಿ ಬಳಿ ಹೇಳಿಕೊಂಡು ಖುಷಿಯಾಗುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ವೀರಭದ್ರ ಕೂಡಾ ಬರುತ್ತಾನೆ.
ಶಿವು-ಪಾರ್ವತಿ ಪಾದಪೂಜೆ ಮಾಡಿದ ವೀರಭದ್ರ
ವೀರಭದ್ರನನ್ನು ನೋಡುವ ಅರ್ಚಕರು ಇಂದು ನೀವೂ ಕೂಡಾ ದೇವಸ್ಥಾನಕ್ಕೆ ಬಂದಿದ್ದು ಒಳ್ಳೆಯದಾಯಿತು. ಊರಿನ ದಣಿಗಳಾದ ನೀವು ದಂಪತಿ ಸಹಿತ, ನಿಷ್ಕಲ್ಮಷ ಮನಸ್ಸಿನ ಬೇರೆ ದಂಪತಿಯ ಪಾದಪೂಜೆ ಮಾಡಿದರೆ ನಿಮಗೆ ಶ್ರೇಯಸ್ಸು ಉಂಟಾಗುತ್ತದೆ ಎನ್ನುತ್ತಾರೆ. ಅದನ್ನು ಕೇಳಿ ವೀರಭದ್ರನಿಗೆ ಮುಜುಗರವುಂಟಾಗುತ್ತದೆ. ಯಾರು ಬೇಕಾದರೂ ದಂಪತಿ ಪೂಜೆ ಮಾಡಬಹುದಾ ಎಂದು ಶಿವು ಕೇಳುತ್ತಾನೆ. ಇಲ್ಲ, ಊರಿನ ಹಿರಿಯರೇ ಮಾಡಬೇಕು. ಆ ರಾಕ್ಷಸನನ್ನು ದೇವಿ ಸಂಹಾರ ಮಾಡುವಾಗ ಅವನು ಮುಕ್ತಿ ಬೇಡುತ್ತಾನೆ. ನೀನು ನಿಮ್ಮ ಮಗಳು, ಅಳಿಯನ ಪಾದಪೂಜೆ ಮಾಡಿದರೆ ಪರಿಹಾರ ದೊರೆಯುತ್ತದೆ ಎಂದು ದೇವಿ ಹೇಳುತ್ತಾಳೆ. ಅಂದಿನಿಂದ ಈ ಊರಿನ ದೊರೆಗಳು ದಂಪತಿ ಪಾದಪೂಜೆ ಮಾಡುತ್ತಾ ಬರುತ್ತಿದ್ದಾರೆ ಎಂದು ಅರ್ಚಕರು ಹೇಳುತ್ತಾರೆ.
ಅರ್ಚಕರ ಮಾತು ಕೇಳುವ ವೀರಭದ್ರ, ಅಯ್ಯೋ ಇದೆಲ್ಲಾ ನನಗೆ ಏಕೆ? ನನ್ನ ಆಯಸ್ಸು, ಅಂತಸ್ತು ಎಲ್ಲವೂ ಆ ದೇವಿ ಕೊಟ್ಟಿರುವ ಭಿಕ್ಷೆ, ಮೇಲಾಗಿ ನಿಮ್ಮೆಲ್ಲರ ಪ್ರೀತಿ ದೊರೆತಿದೆ, ಅದಕ್ಕಿಂತ ಶ್ರೇಯಸ್ಸು ಬೇಕಾ? ಇವತ್ತು ವಿಶೇಷ ದಿನ ಆಗಿರುವುದರಿಂದ ಸೌಭಾಗ್ಯ ಪುಣ್ಯಕ್ಷೇತ್ರಕ್ಕೆ ಹೋಗಿದ್ದಾಳೆ. ಸುಶೀಲಾ ಮನೆಯಲ್ಲಿದ್ದಾಳೆ. ಎಂದು ವೀರಭದ್ರ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ಸುಶೀಲಾ ಅಲ್ಲಿಗೆ ಬರುತ್ತಾಳೆ. ನನ್ನ ಗಂಡನಿಗೆ ಒಳ್ಳೆಯದಾಗುತ್ತದೆ ಎಂದರೆ ನಾನು ಏನಾದರೂ ಮಾಡುತ್ತೇನೆ ಎನ್ನುತ್ತಾಳೆ. ಯಾರೋ ಏಕೆ? ಶಿವು ಹಾಗೂ ಪಾರ್ವತಿಗೇ ದಣಿಗಳು ಪಾದಪೂಜೆ ಮಾಡಲಿ ಎಂದು ಊರಿನ ಜನರು ಹೇಳುತ್ತಾರೆ. ಶಿವು ಹಾಗೂ ಪಾರ್ವತಿ ಇದಕ್ಕೆ ಒಪ್ಪುವುದಿಲ್ಲ. ಅದರೆ ಅರ್ಚಕರು ಹೇಳಿದ ನಂತರ ಒಪ್ಪಿಕೊಳ್ಳುತ್ತಾರೆ.
ವೀರಭದ್ರ ಒಲ್ಲದ ಮನಸ್ಸಿನಿಂದಲೇ ಹೆಂಡತಿ ಜೊತೆ ಶಿವು ಹಾಗೂ ಪಾರ್ವತಿ ಪಾದಪೂಜೆ ಮಾಡುತ್ತಾನೆ. ನಂತರ ಪಾರ್ವತಿ ಹಾಗೂ ಶಿವು ಹಿರಿಯರು ನಮ್ಮ ಪಾದ ಮುಟ್ಟಬಾರದು, ಕ್ಷಮಿಸಿ ಎಂದು ಅವರಿಬ್ಬರ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಅಪ್ಪನನ್ನು ಅಪ್ಪಿಕೊಳ್ಳುವಂತೆ ಹತ್ತಿರ ಬರುವ ಪಾರು, ನೀವು ಬರೋಕೆ ಮುಂಚೆ ಅರ್ಚಕರು ರಾಕ್ಷಸನ ಕಥೆ ಹೇಳುತ್ತಿದ್ದರು. ನೀವೇ ಆ ರಾಕ್ಷಸ, ನಾನೇ ಅವನ ಮಗಳು ಅನ್ನೋದು ಕನ್ಫರ್ಮ್ ಆಯ್ತು, ಮುಂದೊಂದು ದಿನ ನಿಮ್ಮ ಅಹಂಕಾರವನ್ನು ಮಟ್ಟ ಹಾಕೋಕೆ ನಾನೇ ದೇವಿ ರೂಪದಲ್ಲಿ ಬರುವಂಥ ಸ್ಥಿತಿಯನ್ನು ಸೃಷ್ಟಿ ಮಾಡಿಕೊಳ್ಳಬೇಡಿ ಎಂದು ಕಿವಿಯಲ್ಲಿ ಹೇಳುತ್ತಾಳೆ. ಅದನ್ನು ಕೇಳುವ ವೀರಭದ್ರ ಕೋಪದಿಂದ ಮಗಳನ್ನು ತಳ್ಳಿ ಅಲ್ಲಿಂದ ಹೋಗುತ್ತಾನೆ.
ಈಗಲಾದರೂ ವೀರಭದ್ರ ಅಹಂಕಾರ ತೊರೆಯುತ್ತಾನಾ ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಅಣ್ಯಯ್ಯ ಧಾರಾವಾಹಿ ಪ್ರಸಾರವಾಗುತ್ತಿದೆ. ಅಣ್ಣ ತಂಗಿಯರ ಬಾಂಧವ್ಯದ ಕಥೆ ಇರುವ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ಮಾರಿಗುಡಿ ಶಿವು, ತಾನು ಇಷ್ಟ ಪಟ್ಟ ಪಾರುವನ್ನು ಮದುವೆಯಾಗಿದ್ಧಾನೆ, ಪಾರು ಕೂಡಾ ಅವನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಆದರೆ ಅವರಿಬ್ಬರನ್ನೂ ದೂರ ಮಾಡಲು ಪಾರು ತಂದೆ ವೀರಭದ್ರ ಕಾಯುತ್ತಿದ್ದಾನೆ. (ಬರಹ: ರಕ್ಷಿತಾ ಸೌಮ್ಯ)
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್

ವಿಭಾಗ