ಅಣ್ಣಯ್ಯ: ರತ್ನ ಸ್ಕೂಲ್‌ ಹುಡುಗನ ಹುಟ್ಟುಹಬ್ಬ ಆಚರಿಸಿದ ಪರಶು; ರಶ್ಮಿಗೆ ತನ್ನ ಅಮ್ಮ ಊಟ ತಿನ್ನಿಸುವುದನ್ನು ನೋಡಿ ಜಿಮ್‌ ಸೀನ ಸುಸ್ತು
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ: ರತ್ನ ಸ್ಕೂಲ್‌ ಹುಡುಗನ ಹುಟ್ಟುಹಬ್ಬ ಆಚರಿಸಿದ ಪರಶು; ರಶ್ಮಿಗೆ ತನ್ನ ಅಮ್ಮ ಊಟ ತಿನ್ನಿಸುವುದನ್ನು ನೋಡಿ ಜಿಮ್‌ ಸೀನ ಸುಸ್ತು

ಅಣ್ಣಯ್ಯ: ರತ್ನ ಸ್ಕೂಲ್‌ ಹುಡುಗನ ಹುಟ್ಟುಹಬ್ಬ ಆಚರಿಸಿದ ಪರಶು; ರಶ್ಮಿಗೆ ತನ್ನ ಅಮ್ಮ ಊಟ ತಿನ್ನಿಸುವುದನ್ನು ನೋಡಿ ಜಿಮ್‌ ಸೀನ ಸುಸ್ತು

ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 202ನೇ ಎಪಿಸೋಡ್‌ನಲ್ಲಿ ರತ್ನಳ ಗಮನ ಸೆಳೆಯಲು ಪರಶು, ಅವಳ ಸ್ಕೂಲ್‌ ಹುಡುಗನ ಹುಟ್ಟುಹಬ್ಬ ಆಚರಿಸಿ, ಮಕ್ಕಳಿಗೆ ಗಿಫ್ಟ್‌, ಪುಸ್ತಕಗಳನ್ನು ಕೊಡುತ್ತಾನೆ. (ಬರಹ: ರಕ್ಷಿತಾ)

ಅಣ್ಣಯ್ಯ ರತ್ನ ಸ್ಕೂಲ್‌ ಹುಡುಗನ ಹುಟ್ಟುಹಬ್ಬ ಆಚರಿಸಿದ ಪರಶು
ಅಣ್ಣಯ್ಯ ರತ್ನ ಸ್ಕೂಲ್‌ ಹುಡುಗನ ಹುಟ್ಟುಹಬ್ಬ ಆಚರಿಸಿದ ಪರಶು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 202ನೇ ಎಪಿಸೋಡ್‌ ಕಥೆ ಹೀಗಿದೆ. ಪೋಸ್ಟ್‌ಮ್ಯಾನ್‌ ಜೊತೆ ಮಾತನಾಡಿದ ನಂತರ ಶಿವು ಮತ್ತೆ ಮಾವನ ಮನೆಗೆ ಹೋಗಿ ಪಾರು ಮೆಡಿಕಲ್‌ ಲೈಸನ್ಸ್‌ ಕೇಳುತ್ತಾನೆ. ಆದರೆ ಅದನ್ನು ಛತ್ರಿ ಹರಿದ ವಿಚಾರ ತಿಳಿದು ಶಿವು ಬೇಸರಗೊಳ್ಳುತ್ತಾನೆ. ಮತ್ತೊಂದೆಡೆ ಪೇಪರ್‌ನಲ್ಲಿ ಇಂದ್ರಿ ಬೇಕಂತಲೇ ಮನು ಬಗ್ಗೆ ಸುಳ್ಳು ಜಾಹೀರಾತು ಹಾಕಿಸಿ ಅದನ್ನು ಶಿವು ಮನೆಗೆ ಹಾಕಿಸುತ್ತಾಳೆ. ಅದನ್ನು ನೋಡಿದ ಶಿವು ಮನೆಯವರು ಮನು ನಿಜವಾಗಲೂ ವಿದೇಶದಲ್ಲಿ ಓದಿ ವಾಪಸ್‌ ಬರುತ್ತಿದ್ದಾನೆ ಎಂದು ನಂಬುತ್ತಾರೆ.

ಮಾವನ ಮನೆಯಿಂದ ಬಂದ ಶಿವು ಅಂಗಡಿ ಬಳಿ ಯೋಚನೆ ಮಾಡುತ್ತಾ ಕೂರುತ್ತಾನೆ. ಛತ್ರಿ ಅಣ್ಣ ಲೈಸನ್ಸ್‌ ಹರಿದ ವಿಚಾರವನ್ನು ಪಾರ್ವತಿಗೆ ಹೇಗೆ ಹೇಳುವುದು? ನಿನಗೆ ಆಸ್ಪತ್ರೆ ಹಾಕಿಕೊಡಲು ಆಗುವುದಿಲ್ಲ ಎಂದು ಬೇಕಾದರೆ ಧೈರ್ಯದಿಂದ ಹೇಳಿಬಿಡುತ್ತೇನೆ, ಆದರೆ ನೀನು ಇನ್ಮುಂದೆ ಡಾಕ್ಟರ್‌ ಆಗಲು ಸಾಧ್ಯವೇ ಇಲ್ಲ ಅನ್ನೋದನ್ನು ಹೇಗೆ ಹೇಳಲಿ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಆ ಛತ್ರಿ ಅಣ್ಣನಿಗೆ ಮನೆಗೆ ಬಂದಿರುವುದು ಯಾವ ಪತ್ರ ಎಂದು ಅಷ್ಟೂ ತಿಳಿಯುವುದಿಲ್ಲವೇ , ಬುದ್ಧಿ ಬೇಡವೇ, ನೀನು ಎಲ್ಲರನ್ನೂ ಹೀಗೆ ಕ್ಷಮಿಸಿಕೊಂಡು ಬಂದಿರುವುದಕ್ಕೆ ಎಲ್ಲರೂ ನಿನ್ನ ವಿಚಾರದಲ್ಲಿ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಎಂದು ಗೊರಕೆ ಹೇಳುತ್ತಾನೆ. ಹೋಗಲಿ ಬಿಡು, ನನ್ನ ಮಾವನ ಮನೆಯವರ ಬಗ್ಗೆ ಹೀಗೆಲ್ಲಾ ಮಾತನಾಡಬೇಡ, ಅದು ಮನೆ ಕೆಲಸದವರಾದರೂ ಆಗಿರಲಿ, ಕಾಯುವವರೇ ಆಗಿರಲಿ ಎಂದು ಶಿವು ಹೇಳುತ್ತಾನೆ. ಎಲ್ಲರ ಬಗ್ಗೆ ಶಿವು ಇಟ್ಟಿರುವ ಪ್ರೀತಿ ಕಂಡು ಗೊರಕೆ ಸರಿ ಅಣ್ಣ ಹೀಗೆ ಮಾತನಾಡುವುದಿಲ್ಲ, ತಪ್ಪಾಯ್ತು ಎನ್ನುತ್ತಾನೆ. ಶಿವು ಬೇಸರದಿಂದಲೇ ಮನೆಗೆ ವಾಪಸ್‌ ಬರುತ್ತಾನೆ.

ಪಾರ್ವತಿಗೆ ಸಮಧಾನ ಹೇಳಿದ ನಾದಿನಿಯರು

ಶಿವು ಬರುವುದನ್ನೇ ಕಾಯುತ್ತಿದ್ದ ಅವನ ತಂಗಿಯರು ಅತ್ತಿಗೆ ಲೈಸನ್ಸ್‌ ಸಿಕ್ತಾ ಎಂದು ಕೇಳುತ್ತಾರೆ. ಶಿವು ಇಲ್ಲ ಎನ್ನುತ್ತಾನೆ, ಅಲ್ಲಿಗೆ ಬಂದಿಲ್ಲ ಎಂದರೆ ಅದು ಮತ್ತೆ ಪೋಸ್ಟ್‌ ಆಫೀಸಿಗೆ ಹೋಗಿರಬಹುದು ಅಲ್ಲಿ ಹೋಗಿ ವಿಚಾರಿಸು ಎಂದು ರತ್ನ ಹೇಳುತ್ತಾಳೆ. ಇನ್ನು ವಿಷಯವನ್ನು ಮುಚ್ಚಿಡುವುದು ಸರಿ ಇಲ್ಲ, ನಿಜ ಹೇಳಿಬಿಡುತ್ತೇನೆ, ಲೈಸನ್ಸ್‌ ಮಾವನ ಮನೆಗೆ ಹೋಗಿದೆ, ಆದರೆ ಬೇರೆ ಯಾವುದೋ ಪತ್ರ ಎಂದು ತಪ್ಪು ತಿಳಿದು ಛತ್ರಿ ಅಣ್ಣ ಲೈಸನ್ಸ್‌ ಹರಿದಿದ್ದಾನೆ ಎಂದು ಶಿವು ನಡೆದ ವಿಚಾರವನ್ನು ಎಲ್ಲರಿಗೂ ತಿಳಿಸುತ್ತಾನೆ. ಅದನ್ನು ಕೇಳಿ ಪಾರ್ವತಿ ಶಾಕ್‌ ಆಗುತ್ತಾಳೆ. ದೇವರು ಒಂದಲ್ಲ, ಹತ್ತು ದಾರಿ ತೋರಿಸುತ್ತಾನೆ. ನೀವು ತಿಳಿದವರು ಹೆಚ್ಚು ಹೊತ್ತು ಈ ನೋವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ ಎಂದು ರತ್ನ ಹಾಗೂ ರಾಣಿ ಅತ್ತಿಗೆಗೆ ಸಮಾಧಾನ ಮಾಡುತ್ತಾರೆ. ನೀವೆಲ್ಲಾ ಟೆನ್ಷನ್‌ ಆಗಬೇಡಿ. ಕಳೆದುಕೊಂಡಿರುವುದು ನನ್ನ ಲೈಸನ್ಸ್‌ ಅಷ್ಟೇ, ನನ್ನ ವಿದ್ಯೆಯನ್ನಲ್ಲ. ಮಾವ ಹೇಳಿದ್ದಕ್ಕೆ ನನ್ನ ಮನಸ್ಸಿನಲ್ಲೂ ಸಣ್ಣ ಆಸೆ ಇತ್ತು ಅಷ್ಟೇ, ಯಾರೂ ಬೇಸರಗೊಳ್ಳಬೇಡಿ ಎಂದು ಪಾರ್ವತಿ ಎಲ್ಲರನ್ನೂ ಸಮಾಧಾನ ಮಾಡುತ್ತಾಳೆ.

ಇಷ್ಟು ದಿನ ಅತ್ತೆಯ ದಬ್ಬಾಳಿಕೆಯನ್ನು ಸಹಿಸಿಕೊಂಡು ಬಂದಿದ್ದ ರಶ್ಮಿ ಈಗ ಅವಳ ವಿರುದ್ಧ ತಿರುಗಿಬಿದ್ದಿದ್ದಾಳೆ. ಮನೆಯಲ್ಲಿ ಮಾವ ಹಾಗೂ ಸೀನ ಇಲ್ಲದಿರುವಾಗಿ ಅತ್ತೆಗೆ ಪಾಠ ಕಲಿಸಲು ರಶ್ಮಿ ಮುಂದಾಗುತ್ತಾಳೆ. ತಿಂಡಿಯನ್ನು ನೀವೇ ತಿನ್ನಿಸಿ ಎಂದು ರಶ್ಮಿ ತನ್ನ ಅತ್ತೆಗೆ ತಾಕೀತು ಮಾಡುತ್ತಾಳೆ. ಸೊಸೆ ಬಗ್ಗೆ ಸ್ವಲ್ಪವೂ ಪ್ರೀತಿ ಕನಿಕರ ಇಲ್ಲದ ಲೀಲಾ ಅವಳ ಮೇಲಿನ ಭಯಕ್ಕೆ ತಾನೇ ತುತ್ತು ತಿನ್ನಿಸುತ್ತಾಳೆ. ಅದನ್ನು ನೋಡಿ ಜಿಮ್‌ ಸೀನ ಶಾಕ್‌ ಆಗುತ್ತಾನೆ. ಮದುವೆ ಆದಾಗಿನಿಂದ ಒಮ್ಮೆಯಾದರೂ ನೀನು ನನಗೆ ಊಟ ತಿನ್ನಿಸಿಲ್ಲ, ಇದೇನು ಇವತ್ತು ನಿನ್ನ ಸೊಸೆಗೆ ತಿನ್ನಿಸುತ್ತಿದ್ದೀಯ ಎಂದು ಕೇಳುತ್ತಾನೆ. ನನಗೆ ಮಾತ್ರವಲ್ಲ ನಿಮಗೂ ತಿನ್ನಿಸುತ್ತಾರೆ, ಬೇಕಿದ್ದರೆ ಕೇಳಿ ಎಂದು ರಶ್ಮಿ ತಟ್ಟೆ ತೆಗೆದುಕೊಂಡು ಡೈನಿಂಗ್‌ ಟೇಬಲ್‌ ಬಳಿ ಹೋಗುತ್ತಾಳೆ. ಇಷ್ಟು ದಿನ ನೀನು ನನ್ನ ಬಗ್ಗೆ ಪಿಂಕಿಗೆ ಚಾಡಿ ಹೇಳುತ್ತಿದ್ದೆಯಲ್ಲ, ಇವತ್ತು ನಿನ್ನ ಬಗ್ಗೆ ಪಿಂಕಿಗೆ ಹೇಳುತ್ತೇನೆ ಎನ್ನುತ್ತಾನೆ. ವಿಷಯ ಗೊತ್ತಾದರೆ ಪಿಂಕಿ ನನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಲೀಲಾ ಗಾಬರಿಯಾಗುತ್ತಾಳೆ.

ಮತ್ತೆ ಪರಶು ನಾಟಕಕ್ಕೆ ಮರುಳಾದ ರತ್ನ

ರತ್ನ ಸ್ಕೂಲ್‌ನಿಂದ ಮನೆಗೆ ವಾಪಸ್‌ ಬರುವಾಗ ದಾರಿಯಲ್ಲಿ ತನ್ನ ಸ್ಕೂಲ್‌ನಲ್ಲಿ ಓದುತ್ತಿರುವ ಹುಡುಗನೊಬ್ಬ ಅಳುವುದನ್ನು ನೋಡುತ್ತಾಳೆ. ಏನೆಂದು ವಿಚಾರಿಸುತ್ತಾಳೆ. ಇಂದು ನನ್ನ ಬರ್ತ್‌ಡೇ, ಯಾರೂ ನನ್ನ ಹುಟ್ಟುಹಬ್ಬ ಆಚರಿಸುವುದಿಲ್ಲ, ನನಗೆ ತಾಯಿ ಇಲ್ಲ, ಚಿಕ್ಕಮ್ಮ ಇದ್ದಾಳೆ. ಅವರನ್ನು ಹೊಸ ಬಟ್ಟೆ, ಕೇಕ್‌ ಕೇಳಿದರೆ ಹೊಡೆಯುತ್ತಾರೆ ಎಂದು ದುಃಖ ತೋಡಿಕೊಳ್ಳುತ್ತಾನೆ. ಅಷ್ಟೇ ತಾನೇ ಇದಕ್ಕೆಲ್ಲಾ ಅಳಬಾರದು. ಈ ಸಮಸ್ಯೆಗೆ ನೀನು ಚೆನ್ನಾಗಿ ಓದುವುದೇ ಪರಿಹಾರ. ಈಗ ನಾನು ನಿನಗೆ ಕೇಕ್‌ ತಂದುಕೊಡುತ್ತೇನೆ ಇರು ಎಂದು ಕೇಕ್‌ ತರಲು ಹೋಗುತ್ತಾಳೆ. ಅವಳು ವಾಪಸ್‌ ಬರುವಷ್ಟರಲ್ಲಿ ಪರಶು, ಆ ಹುಡುಗನಿಗಾಗಿ ಕೇಕ್‌ ತಂದು ಕಟ್‌ ಮಾಡಿಸುತ್ತಾನೆ. ಅದನ್ನು ನೋಡಿ ರತ್ನ ಶಾಕ್‌ ಆಗುತ್ತಾಳೆ. ಹುಟ್ಟುಹಬ್ಬ ಆಚರಿಸಿದ್ದೂ ಅಲ್ಲದೆ ಮಕ್ಕಳಿಗೆ ಗಿಫ್ಟ್‌, ಪುಸ್ತಕಗಳನ್ನು ಕೊಡುತ್ತಾನೆ. ಪರಶು ನಿಜಕ್ಕೂ ಇಷ್ಟು ಬದಲಾಗಿದ್ದಾನಾ ಎಂದು ರತ್ನ ಮತ್ತೆ ಅವನ ವಿಚಾರವಾಗಿ ಯೋಚಿಸಲು ಆರಂಭಿಸುತ್ತಾಳೆ.

ರತ್ನ ನಿಧಾನವಾಗಿ ಪರಶು ಮೋಸದ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳಾ? ರಶ್ಮಿಗೆ ತನ್ನ ಅಮ್ಮ ಊಟ ತಿನ್ನಿಸಿದ್ದು ಪಿಂಕಿಗೆ ಗೊತ್ತಾಗುವುದಾ? ಅಣ್ಣಯ್ಯ ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in