ಅಣ್ಣಯ್ಯ: ಸೊಸೆ ಮೇಲೆ ಕೆಂಡ ಕಾರುತ್ತಿದ್ದ ಲೀಲಾ ಗುಟ್ಟು ಮಾದಪ್ಪಣ್ಣನ ಮುಂದೆ ರಟ್ಟು; ರತ್ನ ಒಬ್ಬಳೇ ಇರುವ ಸಮಯ ನೋಡಿ ಮನೆಗೆ ಬಂದ ಪರಶು
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ: ಸೊಸೆ ಮೇಲೆ ಕೆಂಡ ಕಾರುತ್ತಿದ್ದ ಲೀಲಾ ಗುಟ್ಟು ಮಾದಪ್ಪಣ್ಣನ ಮುಂದೆ ರಟ್ಟು; ರತ್ನ ಒಬ್ಬಳೇ ಇರುವ ಸಮಯ ನೋಡಿ ಮನೆಗೆ ಬಂದ ಪರಶು

ಅಣ್ಣಯ್ಯ: ಸೊಸೆ ಮೇಲೆ ಕೆಂಡ ಕಾರುತ್ತಿದ್ದ ಲೀಲಾ ಗುಟ್ಟು ಮಾದಪ್ಪಣ್ಣನ ಮುಂದೆ ರಟ್ಟು; ರತ್ನ ಒಬ್ಬಳೇ ಇರುವ ಸಮಯ ನೋಡಿ ಮನೆಗೆ ಬಂದ ಪರಶು

ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 205ನೇ ಎಪಿಸೋಡ್‌ನಲ್ಲಿ ರತ್ನ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡ ಪರಶು ಮನೆಗೆ ಬಂದು ಗೋಡಂಬಿಯನ್ನು ಕೊಲ್ಲುವ ಪ್ರಯತ್ನ ಮಾಡುತ್ತಾನೆ. (ಬರಹ: ರಕ್ಷಿತಾ)

ಅಣ್ಣಯ್ಯ: ಸೊಸೆ ಮೇಲೆ ಕೆಂಡ ಕಾರುತ್ತಿದ್ದ ಲೀಲಾ ಗುಟ್ಟು ಮಾದಪ್ಪಣ್ಣನ ಮುಂದೆ ರಟ್ಟು
ಅಣ್ಣಯ್ಯ: ಸೊಸೆ ಮೇಲೆ ಕೆಂಡ ಕಾರುತ್ತಿದ್ದ ಲೀಲಾ ಗುಟ್ಟು ಮಾದಪ್ಪಣ್ಣನ ಮುಂದೆ ರಟ್ಟು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 205ನೇ ಎಪಿಸೋಡ್‌ ಕಥೆ ಹೀಗಿದೆ. ಲೈಸನ್ಸ್‌ ವಿಚಾರಕ್ಕೆ ಬೇಸರಗೊಂಡಿದ್ದ ಪಾರ್ವತಿಯನ್ನು ಶಿವು ಸಮಾಧಾನ ಮಾಡುತ್ತಾನೆ. ತಾನು ಊಟ ಮಾಡದಿದ್ದಕ್ಕೆ ನಾದಿನಿಯರು ಕೂಡಾ ಉಪವಾಸ ಇದ್ದಾರೆ ಎಂದು ತಿಳಿದು ಪಾರ್ವತಿ ಬೇಸರ ಮರೆತು ಎಲ್ಲರೊಂದಿಗೆ ಊಟಕ್ಕೆ ಕೂರುತ್ತಾಳೆ. ಇತ್ತ ಮನೆಯಲ್ಲಿ ಮಾದಪ್ಪಣ್ಣ ಇಲ್ಲದ್ದಕ್ಕೆ ಸೀನ ಮಲಗಲು ತೋಟಕ್ಕೆ ಹೋಗುತ್ತಾನೆ. ತೋಟಕ್ಕೆ ಬೇಡ ಇಲ್ಲೇ ಹೊರಗೆ ಮಲಗು ಎಂದು ಲೀಲಾ ಹೇಳುತ್ತಾಳೆ. ಬೆಳಗ್ಗೆ ಎದ್ದು ನೋಡಿದಾಗ ರಶ್ಮಿ ಹಾಗೂ ಸೀನ ಒಟ್ಟಿಗೆ ಮಲಗಿರುವುದನ್ನು ನೋಡಿ ಲೀಲಾ ಸಿಟ್ಟಾಗುತ್ತಾಳೆ.

ಅಂಗಡಿ ಕೆಲಸದ ಮೇಲೆ ಶಿವು ಹಾಗೂ ಗೊರಕೆ ಸಿಟಿಗೆ ಹೋಗುತ್ತಾರೆ. ಪಾರ್ವತಿ ಹಾಗೂ ರಾಣಿ ಇಬ್ಬರೇ ಅಂಗಡಿಗೆ ಹೊರಡುತ್ತಾರೆ. ಅವರಿಬ್ಬರಿಗೂ ರತ್ನ ನೀರಿನ ಬಾಟಲ್‌, ಸ್ನಾಕ್ಸ್‌ ರೆಡಿ ಮಾಡಿಕೊಡುತ್ತಾಳೆ. ಅಂಗಡಿಗೆ ಹೋಗುವ ಪಾರ್ವತಿ, ಇಂದು ಚೆನ್ನಾಗಿ ವ್ಯಾಪಾರ ಆಗುವಂತೆ ಮಾಡು, ಮಾವ ಬಂದು ಈ ದಿನ ಎಷ್ಟು ಕಲೆಕ್ಷನ್‌ ಆಯ್ತು ಎಂದು ಕೇಳಿದಾಗ ನಾವು ಹೇಳುವ ಉತ್ತರ ಕೇಳಿ ಅವರು ಖುಷಿಯಾಗಬೇಕು, ಅಷ್ಟು ಹಣ ಕಲೆಕ್ಷನ್‌ ಆಗುವಂತೆ ಆಶೀರ್ವಾದ ಮಾಡು ಎಂದು ಪಾರ್ವತಿ ಮಾಕಾಳವ್ವನಿಗೆ ಪೂಜೆ ಮಾಡಿ ಪ್ರಾರ್ಥಿಸುತ್ತಾಳೆ. ಅತ್ತಿಗೆ ಎಂಬಿಬಿಎಸ್‌ ಓದಿದ್ದರೂ, ಶ್ರೀಮಂತರ ಮನೆಯಿಂದ ಬಂದಿದ್ದರೂ ಸ್ವಲ್ಪವೂ ಗರ್ವ ಇಲ್ಲದೆ ಸಿಂಪಲ್‌ ಆಗಿರುವುದನ್ನು ನೋಡಿ ರಾಣಿ ಖುಷಿಯಾಗುತ್ತಾಳೆ. ಇದೆಲ್ಲಾ ಹೇಗೆ ಸಾಧ್ಯ ಅತ್ತಿಗೆ ಎಂದು ಕೇಳುತ್ತಾಳೆ. ನಮ್ಮ ಬಳಿ ಎಷ್ಟು ದುಡ್ಡಿದ್ದರೂ ಅದನ್ನು ಹೇಗೆ ಸಂಪಾದನೆ ಮಾಡಿದ್ದೀವಿ ಅನ್ನೊದು ಮುಖ್ಯವಾಗಿರುತ್ತದೆ, ನಾವು ಎಷ್ಟು ಚೆನ್ನಾಗಿದ್ದೀವಿ ಎನ್ನುವುದಕ್ಕಿಂತ ಮತ್ತೊಬ್ಬರನ್ನು ಹೇಗೆ ನೋಡಿಕೊಳ್ಳುತ್ತೇವೆ ಅನ್ನೋದು ಮುಖ್ಯ ಎಂದು ಹೇಳುತ್ತಾಳೆ.

ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಲು ಪರಶು ಪ್ರಯತ್ನ

ಶಿವು ಮನೆಯಲ್ಲಿ ಎಲ್ಲರೂ ಹೊರ ಹೋಗುವುದು ಮೊದಲೇ ಗೊತ್ತುಮಾಡಿಕೊಂಡಿದ್ದ ಪರಶು ಇದೇ ಸರಿಯಾದ ಸಮಯ ಎಂದು ರತ್ನ ಒಬ್ಬಳೇ ಇರುವಾಗ ಮನೆಗೆ ಬರುತ್ತಾನೆ. ಅವನನ್ನು ನೋಡಿ ರತ್ನ ಗಾಬರಿಯಾಗುತ್ತಾಳೆ. ಮನೆಯಲ್ಲಿ ಯಾರಾದರೂ ಇದ್ದೀರ ಎಂದು ಪರಶು ನಾಟಕ ಮಾಡುತ್ತಾನೆ, ಇವನನ್ನು ಒಳಗೆ ಕರೆಯುವುದೋ ಬೇಡವೋ ಎಂದು ರತ್ನ ಯೋಚಿಸುತ್ತಾಳೆ. ನಮ್ಮ ಶತ್ರುಗಳು ಮನೆಗೆ ಬಂದರೂ ಅವರನ್ನು ಒಳಗೆ ಕರೆದು ನೀರು ಕೊಡಬೇಕು ಎಂದು ಶಿವು ಹೇಳಿದ್ದ ಮಾತು ನೆನಪಾಗುತ್ತದೆ. ಮನೆಯಲ್ಲಿ ಯಾರೂ ಇಲ್ಲ ಎಂದಾದರೆ ನಾನು ನಂತರ ಬರುತ್ತೇನೆ ಎಂದು ಪರಶು ವಾಪಸ್‌ ಹೋಗುವಂತೆ ನಾಟಕವಾಡುತ್ತಾನೆ. ಅಷ್ಟರಲ್ಲಿ ರತ್ನ ಅವನ ಹೆಸರು ಕರೆಯುತ್ತಾಳೆ. ಅದನ್ನೇ ಬಯಸಿದ್ದ ಪರಶು, ನಾನು ಗೋಡಂಬಿಯನ್ನು ನೋಡಲು ಬಂದೆ, ಈ ಹಣ್ಣುಗಳನ್ನು ಅವನಿಗೆ ಕೊಡು ನಾನು ಹೋಗುತ್ತೇನೆ ಎಂದು ನಾಟಕ ಮಾಡುತ್ತಾನೆ.

ಒಳಗೆ ಬಾ ಪರಶು ಎಂದು ರತ್ನ ಅವನನ್ನು ಒಳಗೆ ಕರೆದು ಕೂರಿಸುತ್ತಾಳೆ. ಇವಳು ಇಲ್ಲಿಂದ ಹೋದರೆ ಗೋಡಂಬಿಯನ್ನು ಕೊಲ್ಲಬಹುದು ಎಂದು ಜೋರಾಗಿ ಕೆಮ್ಮು ಬಂದಂತೆ ನಾಟಕ ಮಾಡುತ್ತಾನೆ. ರತ್ನ ನೀರು ತರಲು ಒಳಗೆ ಹೋಗುತ್ತಾಳೆ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಪರಶು, ಗೋಡಂಬಿ ಕತ್ತು ಹಿಸುಕಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ರತ್ನ ವಾಪಸ್‌ ಬರುತ್ತಾಳೆ. ಕಾಫಿ ಮಾಡಿ ತರುತ್ತೇನೆ ಎಂದು ಮತ್ತೆ ಅಡುಗೆ ಮನೆಗೆ ಹೋಗುತ್ತಾಳೆ. ಇವತ್ತು ಹೇಗಾದರೂ ಮಾಡಿ ಗೋಡಂಬಿಯನ್ನು ಕೊಲ್ಲಲೇಬೇಕೆಂದು ಪರಶು ಮತ್ತೆ ಅವನ ಕತ್ತು ಹಿಡಿಯುತ್ತಾನೆ. ಅಷ್ಟರಲ್ಲಿ ರಮ್ಯಾ ಬರುತ್ತಾಳೆ. ರತ್ನ ಕೂಡಾ ಕಾಫಿ ಮಾಡಿ ತರುತ್ತಾಳೆ. ಪರಶುವನ್ನು ನೋಡಿ ಗಾಬರಿಯಾಗುತ್ತಾರೆ. ಆದರೆ ಪರಶು ಎಚ್ಚೆತ್ತುಕೊಂಡು, ಗೋಡಂಬಿಗೆ ಕುಂಕುಮ ಇಡುತ್ತಿರುವಂತೆ ನಾಟಕ ಮಾಡುತ್ತಾನೆ. ಗೋಡಂಬಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ.

ಹೆಂಡತಿ ನಾಟಕ ಮಿಲ್ಟ್ರಿ ಮಾದಪ್ಪನ ಮುಂದೆ ಬಯಲು

ಇತ್ತ ಮಾದಪ್ಪಣ್ಣ, ಜಿಮ್‌ ಸೀನ ಮನೆಯಲ್ಲಿ ಇಲ್ಲದ ಸಮಯದಲ್ಲಿ ರಶ್ಮಿ ತನ್ನ ಅತ್ತೆ ಬಳಿ ಬಂದು, ನಾನು ನಿಮ್ಮ ಮಗನ ಪಕ್ಕ ಮಲಗಿದರೆ ನಿಮಗೆ ಏನು ಸಮಸ್ಯೆ ಎಂದು ಕೇಳುತ್ತಾಳೆ. ಇಷ್ಟು ದಿನ ಇಲಿಮರಿಯಂತೆ ಇದ್ದೆ, ಈಗ ಪ್ರಶ್ನೆ ಕೇಳುವಷ್ಟು ಬೆಳೆದಿದ್ದೀಯ. ಇದುವರೆಗೂ ಮುಚ್ಚಿಟ್ಟಿದ್ದ ವಿಚಾರ ಹೇಳುತ್ತೀನಿ ಕೇಳು. ನನಗೆ ನಿನ್ನನ್ನು ಕಂಡರೆ ಆಗುವುದಿಲ್ಲ. ತೆಳ್ಳಗೆ, ಬೆಳ್ಳಗೆ ಇರುವವಳು ನನ್ನ ಮನೆ ಸೊಸೆ ಆಗಬೇಕು ಎಂದುಕೊಂಡಿದ್ದೆ, ಆದರೆ ನನ್ನ ಗಂಡ ನಿನ್ನಂಥ ಡುಮ್ಮಿಯನ್ನು ನನ್ನ ಮಗನಿಗೆ ಗಂಟು ಹಾಕಿಸಿದ. ಕಾಲಿಗೆ ಹಾಕುವ ಚಪ್ಪಲಿ ವಿಚಾರದಲ್ಲೂ ಒಳ್ಳೆ ಜೋಡಿಯನ್ನು ನೋಡುತ್ತೇವೆ. ಆದರೆ ನೀನು ಸೀನ ಜೊತೆಯಲ್ಲಿ ನಿಂತರೆ ನೋಡಲಾಗುವುದಿಲ್ಲ ಎನ್ನುತ್ತಾಳೆ. ಅತ್ತೆಯ ಮಾತು ಕೇಳಿ ರಶ್ಮಿ ಶಾಕ್‌ ಆಗುತ್ತಾಳೆ.

ಇಬ್ಬರೂ ಮಾತನಾಡುವಾಗ ಮಾದಪ್ಪಣ್ಣ ಮನೆಗೆ ವಾಪಸ್‌ ಬರುತ್ತಾನೆ. ಇಂದು ನಡೆದಿದ್ದನ್ನು ನಿನ್ನ ಮಾವನ ಬಳಿ ಹೇಳಿದರೆ ಪರಿಸ್ಥಿತಿ ಸರಿ ಇರುವುದಿಲ್ಲ. ಇನ್ಮುಂದೆ ನಿನ್ನ ಮಾವ ಮನೆಯಲ್ಲಿ ಇದ್ದಾಗ ಮಾತ್ರ ಊಟ, ಇಲ್ಲದಿದ್ದರೆ ಮೊದಲಿನಂತೆ ನಿನಗೆ ಊಟ ಕೊಡುವುದನ್ನು ನಿಲ್ಲಿಸುತ್ತೇನೆ ಎನ್ನುತ್ತಾಳೆ. ಅತ್ತೆ ಮಾತು ಕೇಳಿ ರಶ್ಮಿ ಕಣ್ಣೀರಿಡುತ್ತಾಳೆ. ಹೆಂಡತಿ ಲೀಲಾ ಗುಟ್ಟು ಮಾದಪ್ಪಣ್ಣನ ಮುಂದೆ ಬಯಲಾಗಿದೆ. ಇಂದು ಲೀಲಾಳನ್ನು ಕೊಲೆ ಮಾಡಿ ಜೈಲಿಗೆ ಹೋಗುತ್ತೇನೆ ಎಂದು ಸಿಟ್ಟಿನಿಂದ ಕೋವಿ ಹಿಡಿದು ನಿಲ್ಲುತ್ತಾನೆ. ಅಷ್ಟರಲ್ಲಿ ಸ್ವಾಮೀಜಿಯೊಬ್ಬರು ಮನೆಗೆ ಬರುತ್ತಾರೆ. ಅವರನ್ನು ಲೀಲಾ ಬೈದು, ಮುಂದಕ್ಕೆ ಹೋಗು ಎನ್ನುತ್ತಾಳೆ. ಆದರೆ ಮಾದಪ್ಪ ಮಾತ್ರ ಅವರ ಬಳಿ ಕ್ಷಮೆ ಕೇಳುತ್ತಾನೆ. ನಿನ್ನ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇಂದು ನಿನಗೆ ಗೊತ್ತಾಗಿದ್ದು ಸ್ವಲ್ಪ ಮಾತ್ರ. ಎಲ್ಲವನ್ನೂ ತಿಳಿದುಕೊಂಡು ತಾಳ್ಮೆಯಿಂದ ಸಮಸ್ಯೆಯನ್ನು ಬಗೆಹರಿಸು ಎಂದು ಹೇಳುತ್ತಾರೆ. ಈ ವಿಚಾರ ನನಗೆ ಗೊತ್ತಾಗಿದೆ ಎಂದು ಯಾರಿಗೂ ತಿಳಿಯಬಾರದು. ಏನೂ ಗೊತ್ತಿಲ್ಲದಂತೆ ಎಲ್ಲವನ್ನೂ ಸರಿ ಮಾಡಬೇಕು ಎಂದು ಮಾದಪ್ಪಣ್ಣ ನಿರ್ಧರಿಸುತ್ತಾನೆ.

ಪರಶು ಮನೆಗೆ ಬಂದಿದ್ದನ್ನು ರತ್ನ ಅತ್ತಿಗೆಗೆ ಹೇಳುತ್ತಾಳಾ? ಪಿಂಕಿ ವಿಚಾರ ಕೂಡಾ ಮಾದಪ್ಪಣ್ಣನ ಮುಂದೆ ಬಯಲಾಗುವುದಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in