ಅಣ್ಣಯ್ಯ ಧಾರಾವಾಹಿ: ಗೋಡಂಬಿ ಮುಂದೆ ಬಯಲಾಯ್ತು ಪರಶು ಅಸಲಿ ಮುಖ; ಶಿವು ಕಿವಿಗೂ ಮುಟ್ಟಲಿದ್ಯಾ ಆಘಾತಕಾರಿ ವಿಚಾರ?
Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ 182ನೇ ಎಪಿಸೋಡ್‌ನಲ್ಲಿ ಮನೆಕೆಲಸ ಮಾಡುವ ಜಯರಾಮನ ತಂಗಿ ಜೀವನ ಹಾಳು ಮಾಡುವ ಪರಶು, ಅವಳನ್ನು ಕೊಲೆ ಮಾಡುತ್ತಾನೆ, ವಿಚಾರ ತಿಳಿದ ಜಯರಾಮನನ್ನೂ ಸಾಯಿಸುತ್ತಾನೆ. ಇದನ್ನೆಲ್ಲಾ ಗೋಡಂಬಿ ನೋಡಿಬಿಡುತ್ತಾನೆ. (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 182ನೇ ಎಪಿಸೋಡ್ ಕಥೆ ಹೀಗಿದೆ. ಶಿವು ಮೈ ಮೇಲೆ ಬರುವ ಮಾಕಾಳವ್ವ ಊರಿಗೆ ಒಳ್ಳೆ ಮಳೆ, ಬೆಳೆ ಆಗುತ್ತದೆ ಎಂದು ಹೇಳುತ್ತಾಳೆ. ಮಾಕಾಳವ್ವನ ಬಳಿ ಪಾರ್ವತಿ ತನ್ನ ಗಂಡ ಶಿವು ತಾಯಿಯ ಬಗ್ಗೆ ರಶ್ಮಿ ಮೂಲಕ ಪ್ರಶ್ನೆಗಳನ್ನು ಕೇಳಿಸುತ್ತಾಳೆ. ನಿನ್ನ ತಾಯಿ ಮುಂದೆಯೇ ನಿನ್ನ ಮದುವೆ ಆಯ್ತು ಎಂದು ತಾಯಿ ಹೇಳುತ್ತಾಳೆ. ಮತ್ತೊಂದು ಪ್ರಶ್ನೆ ಕೇಳಲು ಮುಂದಾದಾಗ ಪಾರು ಬಳಿ ಬರುವ ದೇವಿ, ಪ್ರಶ್ನೆಯೇ ಜೀವನವಲ್ಲ, ಹುಡುಕು ಉತ್ತರ ಸಿಗುತ್ತದೆ ಎಂದು ಒಗಟಾಗಿ ರಹಸ್ಯ ಹೇಳಿ ಶಿವುನನ್ನು ಬಿಟ್ಟು ಹೋಗುತ್ತಾಳೆ.
ಪಾರ್ವತಿ ಪ್ರಶ್ನೆಗೆ ಶಿವು ಬಳಿ ಉತ್ತರವೇ ಇಲ್ಲ
ಬೆಳಗ್ಗೆ ಪಾರು ಹಾಗೂ ತಂಗಿಯರು ಎಂದಿನಂತೆ ನಿದ್ರೆಯಿಂದ ಎಚ್ಚರವಾಗುತ್ತಾರೆ. ಇಷ್ಟು ಹೊತ್ತಾದರೂ ಶಿವು ಮಾವ ಎದ್ದಿಲ್ಲ, ಎಬ್ಬಿಸುತ್ತೇನೆ ಎಂದು ಪಾರು ರೂಮ್ ಬಳಿ ಹೋಗುತ್ತಾಳೆ. ಅವಳನ್ನು ತಡೆಯುವ ಶಿವು ತಂಗಿಯರು, ನಿನ್ನೆ ರಾತ್ರಿ ಮಾಕಾಳವ್ವ ಅಣ್ಣನ ಮೈ ಮೇಲೆ ಬಂದಿದ್ದಳಲ್ಲ ಅದರ ಮರುದಿನ ಅಣ್ಣ ಹೀಗೇ ತಡವಾಗಿ ಏಳುತ್ತಾನೆ. ಪ್ರತಿ ದಿನ ಮುಂಜಾನೆಯೇ ಎಚ್ಚರವಾಗುವ ನಮ್ಮಣ್ಣ ವರ್ಷಕ್ಕೆ ಒಂದು ಬಾರಿ ಮಾತ್ರ ಈ ರೀತಿ ಬಹಳ ಹೊತ್ತು ಮಲಗುತ್ತಾನೆ ಎಂದು ರಾಣಿ ಹೇಳುತ್ತಾಳೆ. ಹಾಗಾದರೆ ನಿಮಗೆ ಇದೆಲ್ಲಾ ಅಭ್ಯಾಸವಾಗಿಬಿಟ್ಟಿದೆ ಎಂದು ಪಾರು ಆಶ್ಚರ್ಯಗೊಳ್ಳುತ್ತಾಳೆ. ಶಿವು ಎದ್ದ ಕೂಡಲೇ ಅವರ ಬಳಿ ಒಂದು ಪ್ರಶ್ನೆ ಕೇಳಬೇಕು ಎಂದು ಪಾರು ಕಾಯುತ್ತಿರುತ್ತಾಳೆ.
ಶಿವು ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಸಮಯ 9 ಗಂಟೆ ಆಗಿದ್ದನ್ನು ನೋಡಿ ಗಾಬರಿಯಾಗುತ್ತಾನೆ. ನನ್ನ ತಂಗಿಯರ ಮದುವೆ ಮಾಡಬೇಕು, ಚಿಕ್ಕ ತಂಗಿಯನ್ನು ಓದಿಸಬೇಕು, ಇಷ್ಟು ಸಮಯ ನಿದ್ರೆ ಮಾಡಿದರೆ ಆಗುವುದಿಲ್ಲ ಎಂದು ಹೊರಗೆ ಬರುತ್ತಾನೆ. ಶಿವು ಬಂದ ಕೂಡಲೇ ಪಾರು ನಿನ್ನೆ ರಾತ್ರಿ ನೀನು ನನ್ನ ಕಿವಿ ಬಳಿ ಹೇಳಿದ್ದು ನನಗೆ ಅರ್ಥ ಆಗಲಿಲ್ಲ, ಅದನ್ನು ಮತ್ತೊಮ್ಮೆ ಸರಿಯಾಗಿ ಹೇಳು ಎನ್ನುತ್ತಾಳೆ. ನಾನು ನಿನ್ನ ಬಳಿ ಏನೂ ಹೇಳಲಿಲ್ಲವಲ್ಲ ಎಂದು ಶಿವು ಹೇಳುತ್ತಾನೆ. ನಾನು ಅಂಗಡಿಗೆ ಹೋಗಬೇಕು ಎಂದು ರೆಡಿ ಆಗಲು ಹೋಗುತ್ತಾನೆ. ದೇವಿ ಮೈ ಮೇಲೆ ಬರುವುದಷ್ಟೇ ಅಣ್ಣನಿಗೆ ಗೊತ್ತಾಗುತ್ತದೆ, ಆದರೆ ನಂತರ ಏನು ನಡೆಯುತ್ತದೆ ಅನ್ನೋದು ಅವನಿಗೆ ಗೊತ್ತಾಗುವುದಿಲ್ಲ ಎಂದು ರಾಣಿ ಹೇಳುತ್ತಾಳೆ. ಹಾಗಾದರೆ ದೇವಿ ಹೇಳಿದ ಒಗಟು ಮಾತುಗಳನ್ನು ನಾನೇ ಬಿಡಿಸಬೇಕು ಎಂದು ಪಾರು ಮನಸ್ಸಿನಲ್ಲೇ ಅದರ ಬಗ್ಗೆ ಯೋಚಿಸುತ್ತಾಳೆ.
ರಕ್ತ ವಾಂತಿ ಮಾಡಿ ಪ್ರಾಣ ಬಿಟ್ಟ ಮಾಂತ್ರಿಕ
ಮತ್ತೊಂದೆಡೆ ಶಿವು ಮೈಮೇಲೆ ದೇವಿ ಬಂದಾಗ ಪಾರ್ವತಿ ಕಿವಿಯಲ್ಲಿ ಏನು ಹೇಳಿರಬಹುದು ಎಂಬ ಯೋಚನೆಯಲ್ಲೇ ವೀರಭದ್ರ ಮುಳುಗುತ್ತಾನೆ. ಅಪ್ಪನ ಯೋಚನೆ ಕಂಡು ಪರಶು ಏನೆಂದು ಕೇಳುತ್ತಾನೆ. ಆ ರಹಸ್ಯ ಏನೆಂದು ತಿಳಿಯುವವರೆಗೂ ನನಗೆ ಸಮಾಧಾನವಾಗುವುದಿಲ್ಲ ಎನ್ನುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಛತ್ರಿ, ಕೇರಳದಿಂದ ಫೋನ್ ಬಂದಿತ್ತು. ದೇವಿಗೆ ದಿಗ್ಬಂಧನ ಹಾಕಿದ್ದ ಮಾಂತ್ರಿಕ ರಕ್ತ ವಾಂತಿ ಮಾಡಿಕೊಂಡು ಸತ್ತನಂತೆ ಎನ್ನುತ್ತಾನೆ, ಅದನ್ನು ಕೇಳಿ ವೀರಭದ್ರ ಹಾಗೂ ಪರಶು ಗಾಬರಿಯಾಗುತ್ತಾರೆ. ಹಾಗಾದರೆ ಕಪಟ ಗೊತ್ತಾಗುತ್ತದೆ, ಮುಖವಾಡ ಕಳಚಿ ಬೀಳುತ್ತದೆ ಎಂದು ದೇವಿ ಹೇಳಿದ ಮಾತು ನಿಜವಾಗುತ್ತಾ ಎಂದು ಪರಶು ಕೇಳುತ್ತಾನೆ. ಅವನ ಮಾತು ಕೇಳಿ ವೀರಭದ್ರ ಕುಸಿದು ಬೀಳುತ್ತಾನೆ. ನಮ್ಮ ಬಗ್ಗೆ ಎಲ್ಲರಿಗೂ ಗೊತ್ತಾಗುವ ಮುನ್ನ ಪಾರ್ವತಿ ಬಳಿ ಆ ಮಾಕಾಳವ್ವ ಹೇಳಿದ್ದನ್ನು ಹೇಗಾದರೂ ತಿಳಿದುಕೊಳ್ಳಲೇಬೇಕು ಎನ್ನುತ್ತಾನೆ. ವೀರಭದ್ರನನ್ನು ಪರಶು ಸಮಾಧಾನ ಮಾಡುತ್ತಾನೆ.
ಜಯರಾಮನನ್ನು ಪರಶು ಕೊಲೆ ಮಾಡಿದ್ದನ್ನು ಕಣ್ಣಾರೆ ಕಂಡ ಗೋಡಂಬಿ
ಮನೆ ಕೆಲಸದ ಆಳು ಜಯರಾಮನ ತಂಗಿ ನಿಂಗಿ ಜೀವನವನ್ನು ಪರಶು ಹಾಳು ಮಾಡಿರುತ್ತಾನೆ. ರಾತ್ರಿ ತೋಟದಲ್ಲಿ ತನ್ನ ಸಹಚರರೊಂದಿಗೆ ಸೇರಿ ನಿಂಗಿ ಹೆಣವನ್ನು ಹೂಳುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಜಯರಾಮ ಬರುತ್ತಾನೆ. ನನ್ನ ತಂಗಿ ಎಲ್ಲೂ ಕಾಣಿಸುತ್ತಿಲ್ಲ, ಅವಳು ನಿಮ್ಮನ್ನು ಪ್ರೀತಿಸುತ್ತಿದ್ದಳು, ನಿಮ್ಮನ್ನೇ ಮದುವೆ ಆಗಬೇಕು ಎಂದುಕೊಂಡಿದ್ದಳು ಎಂದು ಗಾಬರಿಯಿಂದ ಹೇಳುತ್ತಾನೆ. ಪರಶು ವರ್ತನೆಯಿಂದ ಜಯರಾಮನಿಗೆ ಅನುಮಾನ ಉಂಟಾಗುತ್ತದೆ. ನನ್ನ ತಂಗಿ ಎಲ್ಲಿ ಹೇಳಿ ಎಂದು ಅರಚುತ್ತಾನೆ, ನಿನ್ನ ತಂಗಿ ಚೆನ್ನಾಗಿದ್ದಳು ಎಂದು ಆಸೆ ಪಟ್ಟೆ, ಹಾಗಂತ ಅವಳನ್ನು ಮದುವೆ ಆಗೋಕೆ ಆಗುತ್ತಾ, ಆ ರೀತಿ ನೋಡಿದರೆ ಎಲ್ಲಾ ಹುಡುಗಿಯರಿಗೂ ತಾಳಿ ಕಟ್ಟಿ ನನ್ನ ಬೆರಳು ಸವೆಯಬೇಕಿತ್ತು, ನಿನ್ನನ್ನೂ ನಿನ್ನ ತಂಗಿಯ ಜಾಗಕ್ಕೆ ಕಳಿಸುತ್ತೇನೆ ಎಂದು ಅವನನ್ನು ಗುದ್ದಲಿಯಿಂದ ಹೊಡೆದು ಸಾಯಿಸುತ್ತಾನೆ. ಈ ಎಲ್ಲಾ ಘಟನೆಯನ್ನೂ ಗೋಡಂಬಿ ನೋಡಿಬಿಡುತ್ತಾನೆ. ಪರಶು ಅಸಲಿ ಮುಖ ಗೊತ್ತಾಗಿ ಭಯಗೊಳ್ಳುತ್ತಾನೆ.
ಗೋಡಂಬಿಗೂ ಪರಶುನಿಂದ ಅಪಾಯ ಕಾದಿದೆಯಾ? ಈ ವಿಚಾರ ಶಿವುಗೆ ಕೂಡಾ ಗೊತ್ತಾಗಲಿದೆಯಾ? ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಅಣ್ಯಯ್ಯ ಧಾರಾವಾಹಿ ಪ್ರಸಾರವಾಗುತ್ತಿದೆ. ಅಣ್ಣ ತಂಗಿಯರ ಬಾಂಧವ್ಯದ ಕಥೆ ಇರುವ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ಮಾರಿಗುಡಿ ಶಿವು, ತಾನು ಇಷ್ಟ ಪಟ್ಟ ಪಾರುವನ್ನು ಮದುವೆಯಾಗಿದ್ಧಾನೆ, ಪಾರು ಕೂಡಾ ಅವನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಆದರೆ ಅವರಿಬ್ಬರನ್ನೂ ದೂರ ಮಾಡಲು ಪಾರು ತಂದೆ ವೀರಭದ್ರ ಕಾಯುತ್ತಿದ್ದಾನೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಶ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್